Bhavya Gowda: ಬಿಗ್ ಬಾಸ್ ವಿರುದ್ಧ ಭವ್ಯ ಗೌಡ ನೇರ ಆಕ್ರೋಶ: ಅಂತಹದ್ದೇನಾಯ್ತು?
ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನು ಕೇವಲ ಹನ್ನೊಂದು ದಿನಗಳಷ್ಟೇ ಪ್ರಸಾರಗೊಳ್ಳಲಿದ್ದು, ಗಣರಾಜೋತ್ಸವದ ದಿನ ಅಂದರೆ ಜನವರಿ 26 ಭಾನುವಾರ ಈ ಸೀಸನ್ನ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಬಿಗ್ ಬಾಸ್ ಕನ್ನಡ ಸೀಜನ್ 11 ಈಗ ಅಂತಿಮ ದಿನಗಳ ಲೆಕ್ಕಾಚಾರದಲ್ಲಿದ್ದು, ಸ್ಪರ್ಧಿಗಳು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಆಟ ಕೂಡ ಇಂಟ್ರಸ್ಟಿಂಗ್ ಆಗಿದೆ.
ಕಳೆದ ಎಲ್ಲಾ ಸೀಸನ್‌ಗಳಿಗಿಂತ ಈ ಬಾರಿ ವಿನ್ನರ್ ಯಾರಾಗಬಹುದು ಎಂದು ಊಹಿಸುವುದು ಕೂಡ ಕಷ್ಟವಾಗಿದೆ. ಕಾರ್ಯಕ್ರಮದ ಆರಂಭದಲ್ಲಿ ಇಂತವರೇ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದವರಿಗೆ ವಲ್ಡ್ ಕಾರ್ಡ್ ಎಂಟ್ರಿಯ ಸ್ಪರ್ಧಿಗಳು ಶಾಕ್ ಕೊಟ್ಟಿದ್ದು, ಹೀಗಾಗಿ ಈ ಬಾರಿ ಗೆಲುವು ಯಾರ ಪಾಲಾಗಲಿದೆ ಎನ್ನುವ ಸುಳಿವು ಈ ಬಾರಿ ಇಲ್ಲದಂತಾಗಿದೆ.

ಸದ್ಯ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡಲು ಸ್ಪರ್ಧಿಗಳು ಹೋರಾಡುತ್ತಿದ್ದು, ಬಿಗ್ ಬಾಸ್ ಮನೆಯೊಳಗೆ ಟಾಸ್ಕ್ ಕಾವು ಹೆಚ್ಚಾಗಿದೆ. ಅಲ್ಲದೇ ಈ ವಾರ ಎರಡು ಎಲಿಮಿನೇಷನ್‌ಗಳಿರುವ ಕಾರಣ ಸ್ಪರ್ಧಿಗಳು ಟಾಸ್ಕ್‌ನಲ್ಲಿ ಗೆಲ್ಲಲ್ಲು ಹೋರಾಡಿದ್ದಾರೆ. ನಾಮಿನೇಷನ್ನಿಂದ ಪಾರಾಗಲು ಬಿಗ್ಬಾಸ್ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡಿದ್ದು, ಈ ಟಾಸ್ಕ್ಗಳಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ನಿಂದ ಪಾರಾಗಲಿದ್ದಾರೆ ಎಂದು ಘೋಷಿಸಿದ್ದರು.
ವಾರದ ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಆಚಾರ್ಯ ಗೆದ್ದು ನಾಮಿನೇಷನ್ನಿಂದ ಪಾರಾದರು. ಈ ವೇಳೆ ಧನರಾಜ್‌ಗೆ ವಿಶೇಷ ಅಧಿಕಾರ ನೀಡಲಾಗಿದ್ದು, ಉಳಿದ ಸ್ಪರ್ಧಿಗಳು ಅಂದರೆ ಗೌತಮಿ ಜಾದವ್, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಭವ್ಯ ಗೌಡ ಹಾಗೂ ರಜತ್ ಅವರ ಶೇಕಡಾ ಐವತ್ತರಷ್ಟು ಅಂಕ ಪಡೆದುಕೊಳ್ಳುವಂತೆ ಬಿಗ್ ಬಾಸ್ ಘೋಷಿಸುತ್ತಾರೆ. ಧನರಾಜ್ ಈ ವೇಳೆ ಭವ್ಯ ಗೌಡ ಅವರ ಶೇಕಡಾ ಐವತ್ತರಷ್ಟು ಅಂಕವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಸಿಟ್ಟಿಗೆದ್ದ ಭವ್ಯ ನೇರವಾಗಿ ಬಿಗ್ ಬಾಸ್ ವಿರುದ್ಧವೇ ಅಸಮಾಧಾನ ಹೊರಹಾಕುತ್ತಾರೆ.

'ಇವರು ವಾರವಿಡಿ ಆಡಿಸೋದು ಯಾಕೆ? ಕೊನೆಗೆ ಈ ರೀತಿ ಮಾಡಿಸೋದು ಯಾಕೆ? ಅರ್ಥನೇ ಆಗುತ್ತಿಲ್ಲ. ಎಲ್ಲಾ ಇವರೇ ಹೇಳುತ್ತಾರೆ. ನನಗೆ ಎಂತಾ ಗೊತ್ತಾ ಇವರ ಫರ್ಮಾಟ್ ಇಷ್ಟ ಆಗಲಿಲ್ಲ. ನಮ್ಮ ಅಂಕಗಳನ್ನು ತೆಗೆದು ಯಾಕೆ ಕೊಡಬೇಕಿತ್ತು. ನನಗೆ ಅದು ಇಷ್ಟ ಆಗಲಿಲ್ಲ.
ಮೈ-ಕೈ ಹರಿದುಕೊಂಡು ಆಡಿರೋದು ನಾವು. ಇಲ್ಲಿ ಯಾರಿಗೋ ಅಂಕಗಳು ಹೋಯ್ತು. ಆಮೇಲೆ ಒಂದು ಹೇಳಿಕೆ ಕೂಡ ಕೊಡುತ್ತಾರೆ. ಮತ್ಯಾಕೆ ನನ್ನ ಅಂಕಗಳನ್ನು ಅವರಿಗೆ ಕೊಟ್ಟಿದ್ದೀರಿ. ವಾಪಸ್ ನನಗೆ ಕೊಡಿ' ಎಂದು ತ್ರಿವಿಕ್ರಮ್ ಬಳಿ ಭವ್ಯ ಗೌಡ ಬಿಗ್ ಬಾಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.












Click it and Unblock the Notifications