ಈ 'ಬಿಗ್‌ಬಾಸ್ ಸೀಸನ್-11'ಗೆ ನಿರೂಪಕ ಯಾರು ಗೊತ್ತಾ?
ಕನ್ನಡಿಗರ ನೆಚ್ಚಿನ ʼಕನ್ನಡ ಬಿಗ್‌ಬಾಸ್ʼ ಸೀಸನ್-11ಗೆ ಕೌಂಟ್‌ಡೌನ್ ಶುರುವಾಗಿದೆ. ಪ್ರತಿ ಬಾರಿ ಈ ಸೀಸನ್ ಶುರುವಾಗುವ ಮುನ್ನ ಸ್ಪರ್ಧಿಗಳು ಯಾರು? ಎನ್ನುವ ಕುತೂಹಲ ಇದ್ದೇ ಇರುತ್ತದೆ. ಆದರೆ, ಈ ಸೀಸನ್‌ಗೆ ಸ್ಪರ್ಧಿಗಳಿಗಿಂತ ಮುಖ್ಯವಾಗಿ ಅದನ್ನು ನಡೆಸಿಕೊಡುವ ನಿರೂಪಕ (anchor) ಯಾರು? ಎನ್ನುವ ಕುತೂಹಲವೇ ಹೆಚ್ಚಾಗಿದೆ.
ಪ್ರತಿ ಸೀಸನ್‌ನಲ್ಲೂ ನಟ ಕಿಚ್ಚ ಸುದೀಪ್ ಈ ರಿಯಾಲಿಟಿ ಶೋ ಅನ್ನು ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದರು. ಈ ಒಂದು ಕಾರಣಕ್ಕೂ ಈ ರಿಯಾಲಿಟಿ ಶೋಗೆ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ. ಆದರೆ, ಈ ಸೀಸನ್ ಅನ್ನು ಕಿಚ್ಚ ನಡೆಸಿಕೊಡುವುದಿಲ್ಲವಾ ಅನ್ನೋ ಪ್ರಶ್ನೆ ಇದೀಗ ಎಲ್ಲರ ಮುಂದಿದೆ.

ಇದಕ್ಕೆ ಕಾರಣವಾಗಿರುವುದು ಖಾಸಗಿ ವಾಹಿನಿ ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೋಮೋ. ಹೌದು, ಈ ಪ್ರೋಮೋದಲ್ಲಿ ರಿಯಾಲಿಟಿ ಶೋನ ನಿರೂಪಣೆ ಯಾರು ಮಾಡಲಿದ್ದಾರೆ? ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಅಲ್ಲದೆ, ʼಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯʼ ಎಂದು ಪ್ರೋಮೋದಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಪ್ರೇಕ್ಷಕರು ಆಂಕರ್ ಕೂಡ ಹೊಸಬರಾ? ಎನ್ನುವ ಪ್ರಶ್ನೆ ಮುಂದಿಟ್ಟಿದ್ದಾರೆ. ಇದಕ್ಕೆ ಬಿಗ್‌ಬಾಸ್ ಮುಗುಳ್ನಗುತ್ತಾ ಸುಮ್ಮನಾಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ; ಬಿಗ್ ಬಾಸ್ ಕನ್ನಡ ಸೀಸನ್ 11#BiggBossKannada11 #BBK11 #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory pic.twitter.com/c4l0e2jrdG
— Colors Kannada (@ColorsKannada) September 10, 2024
ಇತ್ತೀಚೆಗೆ ಈ ರಿಯಾಲಿಟಿ ಶೋಗೆ ನಟ ಕಿಚ್ಚ ಸುದೀಪ್ ಬರುತ್ತಿಲ್ಲ, ಬದಲಿಗೆ ಹೊಸ ನಿರೂಪಕರು ಬರಲಿದ್ದಾರೆ ಎನ್ನುವ ರೂಮರ್ ಎಲ್ಲೆಡೆ ಹರಿದಾಡಿತ್ತು. ಈಗ ಪ್ರೋಮೋ ಕೂಡ ಈ ಮಾತಿಗೆ ಹತ್ತಿರವಾದಂತೆ ಇದೆ. ಪ್ರತಿ ಬಾರಿಯೂ ಪ್ರೋಮೋದಲ್ಲಿ ನಟ ಸುದೀಪ್ ಅವರು ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈ ಪ್ರೋಮೋದಲ್ಲಿ ಅವರ ಕಾಣಿಸಿಕೊಂಡಿಲ್ಲ. ಧ್ವನಿ ಕೂಡ ಬದಲಾದಂತಿದ್ದು, ಬಹುಶಃ ಹೊಸ ನಿರೂಪಕರೇ ಬರಲಿದ್ದಾರೆ ಎಂದು ಜನ ಮಾತನಾಡಲಾರಂಭಿಸಿದ್ದಾರೆ.
ಮತ್ತೊಂದೆಡೆ ಕಿಚ್ಚ ಸುದೀಪ್ ಇಲ್ಲದಿದ್ದರೆ ಬಿಗ್‌ಬಾಸ್ ಮಜಾನೇ ಇರೋಲ್ಲ ಎಂತಲೂ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಈ ಬಾರಿ ಸ್ಪರ್ಧಿಗಳಿಗಿಂತ ಇದರ ನಿರೂಪಕರು ಯಾರು? ಎನ್ನುವುದೇ ಎಲ್ಲರ ತಲೆಯಲ್ಲಿ ಹುಳಬಿಟ್ಟಂತಾಗಿದೆ. ಈ ವಿಚಾರಗಳಿಂದ ಈ ಬಾರಿಯ ಬಿಗ್‌ಬಾಸ್ ಸೀಸನ್ ಸಖತ್ ಕ್ರೇಜ್ ಹುಟ್ಟಿಸಿದೆ.

ಬಿಗ್‌ಬಾಸ್ ಕನ್ನಡ 10ನೇ ಸೀಸನ್ ಇನ್ನೂ ಮೊನ್ನೆ ಮುಗಿದ ಹಾಗಿದೆ. ಆಗಲೇ ಬಿಗ್‌ಬಾಸ್ ಕನ್ನಡ 11ನೇ ಸೀಸನ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಬಿಗ್‌ಬಾಸ್ ಕನ್ನಡ 11 ಅಕ್ಟೋಬರ್ ಎರಡನೇ ವಾರದಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಬಿಗ್‌ಬಾಸ್ ಕನ್ನಡದ ಇತಿಹಾಸದಲ್ಲಿ ಈವರೆಗೂ ಹತ್ತು ಸೀಸನ್ ಪ್ರಸಾರ ಕಂಡಿದೆ. ಒಂದು ಸೀಸನ್ ಓಟಿಟಿಯಲ್ಲಿ ನಡೆದಿದೆ. ಬಿಗ್‌ಬಾಸ್ ಲೋಗೋದಲ್ಲಿ ಒಂದೊಂದು ಸೀಸನ್‌ನಲ್ಲೂ ಒಂದು ವಿಶೇಷತೆ ಇತ್ತು. ಅದರಂತೆ ಈ ಬಾರಿಯ ಬಿಗ್‌ಬಾಸ್ ಲೋಗೋದಲ್ಲಿ ಬೆಂಕಿ ಇದೆ. ಅದರ ಜೊತೆಗೆ ನೀರು ಕೂಡ ಇರುವುದು ವಿಶೇಷ.
ಕಳೆದ ಬಾರಿಯ ಸೀಸನ್‌ನಲ್ಲಿ ಕಾರ್ತಿಕ್ ಬಿಗ್‌ಬಾಸ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಈ ಬಾರಿಯ ಸ್ಪರ್ಧಿಗಳ ಬಗ್ಗೆಯೂ ಭಾರೀ ಕುತೂಹಲ ಮೂಡಿದೆ. ಆದರೆ ಈ ಬಗ್ಗೆ ಇಲ್ಲಿವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಾರಿ ಯಾರಾಗಲಿದ್ದಾರೆ ಬಿಗ್‌ಬಾಸ್ ವಿನ್ನರ್? ಹಾಗೆ ಸ್ಪರ್ಧೆಗಳು ಯಾರು? ಈ ಎಲ್ಲದರ ಬಗ್ಗೆ ಮುಂದಿನ ದಿನಗಳಲ್ಲಿ ಅಪ್ಡೇಟ್ ಸಿಗಲಿದೆ.











Click it and Unblock the Notifications