Drone Prathap: ಕೊಟ್ಟ ಮಾತಿನಂತೆ ನಡೆದ ಡ್ರೋನ್ ಪ್ರತಾಪ್, ಮನಸಾರೆ ಹಾರೈಸಿದ ಫ್ಯಾನ್ಸ್
ಬಿಗ್‌ಬಾಸ್ ಕನ್ನಡ ಸೀಜನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಪ್ರತಾಪ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಲ್ಲದೇ ಡ್ರೋನ್ ಪ್ರತಾಪ್ ಕಾರ್ಯ ಮೆಚ್ಚಿ ಮನಸಾರೆ ಹರಸಿ ನೀವು ಚೆನ್ನಾಗಿರಬೇಕು ಎಂದು ಹಾರೈಸಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಜನ್ 10ರ ಗ್ರಾಂಡ್ ಫಿನಾಲೆ ದಿನ ವೇದಿಕೆ ಮೇಲೆ ಮಾತನಾಡಿದ್ದ ಪ್ರತಾಪ್ ಈ ಬಿಗ್‌ಬಾಸ್‌ನಲ್ಲಿ ಗೆದ್ದ ಹಣದಲ್ಲಿ ಒಂದು ರೂಪಾಯಿ ಕೂಡ ನನಗೆ ಬೇಡ, ಗೆದ್ದರೆ ಬರುವ ಹಣ ಮತ್ತು ನೀಡುವ ವಸ್ತುಗಳನ್ನು ಅಗತ್ಯ ಇರುವವರಿಗೆ ನೀಡುವ ಭರವಸೆ ನೀಡಿದ್ದರು. ಬಿಗ್‌ಬಾಸ್ ನಂತಹ ಬೃಹತ್ ವೇದಿಕೆಯಲ್ಲಿ ಕೊಟ್ಟ ಮಾತಿನಂತೆ ಡ್ರೋನ್ ಪ್ರತಾಪ್ ನಡೆದುಕೊಂಡಿದ್ದಾರೆ.

ಈ ಬಾರಿಯ ಬಿಗ್‌ಬಾಸ್‌ನಲ್ಲಿ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಈ ವೇಳೆ ಅವರಿಗೆ 10 ಲಕ್ಷ ಬಹುಮಾನದ ಮೊತ್ತ ಹಾಗೂ ಒಂದು ಎಲೆಕ್ಟ್ರಿಕ್ ಬೈಕ್ ಉಡುಗೊರೆಯಾಗಿ ನೀಡಲಾಗಿತ್ತು. ಅದರಲ್ಲಿ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ. ಪ್ರತಾಪ್ ಬೈಕ್ ಯುವಕನಿಗೆ ನೀಡಿರುವ ಫೋಟೋ ವೈರಲ್ ಆಗುತ್ತಿದ್ದು, ಈ ಬಗ್ಗೆ ಸ್ವತಃ ಡ್ರೋನ್ ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಡ್ರೋನ್ ಪ್ರತಾಪ್, 'ಬಿಗ್‌ಬಾಸ್ ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಅನ್ನುವುದಕ್ಕೆ ಉತ್ತರ ಇಲ್ಲಿದೆ. ಇವರು ರಾಜು ಅಂತ ಮಧ್ಯಾಹ್ನದಿಂದ ಸಂಜೆ ವರೆಗೂ ಹೋಟಲ್‌ನಲ್ಲಿ ಕೆಲಸ ಮಾಡಿ ಹಾಗೂ ಸಂಜೆಯ ಮೇಲೆ ಫುಡ್ ಡೆಲಿವೆರಿ ಕೆಲಸ ಮಾಡುತ್ತಾರೆ
ಮತ್ತು ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು ಆದರೆ ಅವರ ಸ್ನೇಹಿತ ಮಾಡಿದ ಮೋಸದಿಂದ ತಮ್ಮ ಬೈಕನ್ನು ಬ್ಯಾಂಕ್‌ನವರು ಸೀಜ್ ಮಾಡಿದರು. ಹಾಗಾಗಿ ಇವರಿಗೆ ನನಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಗಾಡಿಯನ್ನು ಈ ಹುಡುಗನಿಗೆ ನೀಡಿರುವು ನನಗೆ ತುಂಬಾ ಖುಷಿ ತಂದಿದೆ' ಎಂದು ಬರೆದುಕೊಂಡಿದ್ದಾರೆ.
ಡ್ರೋನ್ ಪ್ರತಾಪ್ ಪೋಸ್ಟ್‌ಗೆ ಅಭಿಮಾನಿಗಳು ಮೆಚ್ಚುಗೆಯ ಪೂರವನ್ನೇ ಹರಿಸಿದ್ದು, ನಿಮಗೆ ವೋಟ್ ಹಾಕಿದ್ದಕ್ಕೂ ಸಾರ್ಥಕವಾಯ್ತು, ಪ್ರತಾಪ್ ಅವರೆ ನಿಮ್ಮ ಈ ಗುಣನೇ ಇಷ್ಟ ಆಗಿದ್ದು, ಏಷ್ಟು ಒಳ್ಳೆ ಮನಸ್ಸು ಪ್ರತಾಪ್, ತನಗೆ ಕಷ್ಟ ಇದ್ದರೂ ಕೂಡ ಆ ಕಷ್ಟದಲ್ಲೂ ಕೂಡ ಬೇರೆ ಅವರಿಗೆ ಸಹಾಯ ಮಾಡುವ ಮನಸ್ಸು ಇದೆ ಅಲ್ವಾ, ಅದೇ ಕಾರಣಕ್ಕೆ ಇಡೀ ಕರ್ನಾಟಕದ ಜನ ಪ್ರತಾಪ್‌ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.












Click it and Unblock the Notifications