Bigg Boss Kannada 13: ಈ ಬಾರಿಯಾದರೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಮೇಘಾ ಶೆಟ್ಟಿ? ಕೊನೆಗೂ ಕೊಟ್ರು ಕ್ಲಾರಿಟಿ
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ'ದ ಹೊಸ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆಯೇ, ಸೋಷಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಪಟ್ಟಿ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗುತ್ತವೆ. ಈ ಚರ್ಚೆಗಳಲ್ಲಿ ಪ್ರತಿ ವರ್ಷವೂ ಕೇಳಿಬರುವ ಪ್ರಮುಖ ಹೆಸರುಗಳಲ್ಲಿ ನಟಿ ಮೇಘಾ ಶೆಟ್ಟಿ ಅವರದ್ದು ಮೊದಲ ಸಾಲಿನಲ್ಲಿರುತ್ತದೆ. ಆದರೆ, ಪ್ರತಿ ಸೀಸನ್‌ನಲ್ಲೂ ಇವರ ಹೆಸರು ಮುಂಚೂಣಿಯಲ್ಲಿದ್ದರೂ, ಮೇಘಾ ಮಾತ್ರ ಇದುವರೆಗೂ ಬಿಗ್ ಬಾಸ್ ಮನೆಗೆ ಹೆಜ್ಜೆ ಇಟ್ಟಿಲ್ಲ. ಹಾಗಾದರೆ ಈ ಬಾರಿಯ 'ಬಿಗ್ ಬಾಸ್ ಕನ್ನಡ ಸೀಸನ್ 13' ರೇಸ್‌ನಲ್ಲಿ ಮೇಘಾ ಶೆಟ್ಟಿ ಇದ್ದಾರಾ? ಅವರಿಗೆ ಈ ವರ್ಷ ಆಫರ್ ಬಂದಿದೆಯಾ? ಈ ಎಲ್ಲ ಕುತೂಹಲಗಳಿಗೆ ಸ್ವತಃ ಮೇಘಾ ಶೆಟ್ಟಿ ಅವರೇ ಇತ್ತೀಚಿನ ಸಂದರ್ಶನದಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ.
ಮೇಘಾ ಶೆಟ್ಟಿ ಏನಂದ್ರು?
ಪ್ರತಿ ಸೀಸನ್‌ನಂತೆ ಈ ಬಾರಿಯೂ ಬಿಗ್ ಬಾಸ್‌ಗೆ ಮೇಘಾ ಹೋಗಲಿದ್ದಾರೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, "ಈ ಸಲ ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್‌ನಲ್ಲಿ ನನ್ನ ಹೆಸರು ಇರುವುದು ನನಗಿನ್ನೂ ಗೊತ್ತಿಲ್ಲ, ನಾನು ನೋಡಿಯೂ ಇಲ್ಲ. ಆದರೆ ಪ್ರತಿ ವರ್ಷವೂ ನನ್ನ ಹೆಸರು ಕೇಳಿಬರುವುದು ಕಾಮನ್ ಆಗಿಬಿಟ್ಟಿದೆ. ಸದ್ಯಕ್ಕೆ ನಾನು ಸಿನಿಮಾಗಳಲ್ಲಿ ಸಕ್ರಿಯವಾಗಿರುವುದರಿಂದ ಬಿಗ್ ಬಾಸ್ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೋ ನೋಡೋಣ" ಎಂದು ಹೇಳುವ ಮೂಲಕ ಈ ಬಾರಿಯೂ ತಾವು ಶೋಗೆ ಹೋಗುತ್ತಿಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

ಆಫರ್ ಬಂದರೂ ಬಿಗ್ ಬಾಸ್ ಯಾಕೆ ಹೋಗಿಲ್ಲ?
ಧಾರಾವಾಹಿಗಳ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ ಮೇಘಾ ಶೆಟ್ಟಿ, ಆನಂತರ ಬೆಳ್ಳಿಪರದೆಗೆ ಕಾಲಿಟ್ಟು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರತಿ ಬಾರಿ ಬಿಗ್ ಬಾಸ್‌ನಿಂದ ದೊಡ್ಡ ಆಫರ್ ಬಂದರೂ ಅವರು ಅದನ್ನು ಒಪ್ಪಿಕೊಳ್ಳದೇ ಇರಲು ಇರುವ ಮುಖ್ಯ ಕಾರಣ 'ಡೇಟ್ಸ್ ಸಮಸ್ಯೆ' ಎಂದಿದ್ದಾರೆ. ಈ ಕುರಿತು ಅವರೇ ಕಾರಣ ಬಿಚ್ಚಿಟ್ಟಿದ್ದು, "ಕಳೆದ ಬಾರಿ ಬಿಗ್ ಬಾಸ್ ಆಫರ್ ಬಂದಾಗ ನನ್ನ 'ಕೈವ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಅದಕ್ಕೂ ಮುನ್ನ ಧಾರಾವಾಹಿಗಳ ಶೂಟಿಂಗ್ ಇತ್ತು. ಇನ್ನು ಈ ಬಾರಿ ನನ್ನ ನಟನೆಯ 'ಗ್ರಾಮಾಯಣ' ಸಿನಿಮಾ ರಿಲೀಸ್ ಆಗಬೇಕಿದೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಕೆಲಸಗಳು ಇರುವಾಗ ಬಿಗ್ ಬಾಸ್‌ಗಾಗಿ ಸತತ ಮೂರು ತಿಂಗಳುಗಳ ಕಾಲ ಡೇಟ್ಸ್ ಹೊಂದಿಸುವುದು ತುಂಬಾ ಕಷ್ಟವಾಗುತ್ತದೆ" ಎಂದು ಮೇಘಾ ಶೆಟ್ಟಿ ಅಸಲಿ ಕಾರಣ ರಿವೀಲ್ ಮಾಡಿದ್ದಾರೆ. ಅಭಿಮಾನಿಗಳು ಮೇಘಾ ಶೆಟ್ಟಿ ಅವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಲು ಕಾತರರಾಗಿದ್ದರೂ, ಸದ್ಯಕ್ಕಂತೂ ಅವರು ಸಿನಿಮಾಗಳ ಪ್ರಚಾರ ಹಾಗೂ ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿರುವುದರಿಂದ ಈ ಬಾರಿಯೂ ಬಿಗ್ ಬಾಸ್ ಅಂಗಳಕ್ಕೆ ಬರುವುದು ಡೌಟ್ ಎಂದೇ ಹೇಳಬಹುದು.
ಮೇಘಾ ಜರ್ನಿ
ಮೇಘಾ ಶೆಟ್ಟಿ ಅವರು ಜೀ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿ 'ಜೊತೆ ಜೊತೆಯಲಿ' ಮೂಲಕ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು. 'ಅನು ಸಿರಿಮನೆ' ಎಂಬ ಮುಗ್ಧ ಹುಡುಗಿಯ ಪಾತ್ರದ ಮೂಲಕ ಕರ್ನಾಟಕದ ಮನೆಮಾತಾದ ಅವರು, ಕಿರುತೆರೆಯ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಧಾರಾವಾಹಿ ಸೂಪರ್ ಹಿಟ್ ಆದ ಬೆನ್ನಲ್ಲೇ ಅವರಿಗೆ ಸ್ಯಾಂಡಲ್‌ವುಡ್‌ನಿಂದ ಸಾಲು ಸಾಲು ಆಫರ್‌ಗಳು ಬರಲಾರಂಭಿಸಿದವು. ಧಾರಾವಾಹಿಯಿಂದ ಹೊರಬಂದ ನಂತರ ಮೇಘಾ ಸಂಪೂರ್ಣವಾಗಿ ಸಿನಿಮಾಗಳತ್ತ ಗಮನ ಹರಿಸಿದರು.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್' ಚಿತ್ರದ ಮೂಲಕ ಬೆಳ್ಳಿಪರದೆಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ತದನಂತರ ಡಾರ್ಲಿಂಗ್ ಕೃಷ್ಣ ಜೊತೆ 'ದಿಲ್ ಪಸಂದ್' ಚಿತ್ರದಲ್ಲಿ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ಧನ್ವೀರ್ ಜೊತೆ ನಟಿಸಿದ ಆಕ್ಷನ್ ಡ್ರಾಮಾ ಸಿನಿಮಾ 'ಕೈವ' ಚಿತ್ರದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಸದ್ಯ ಮೇಘಾ ಶೆಟ್ಟಿ ಅವರ ಕೈಯಲ್ಲಿರುವ ಅತಿ ದೊಡ್ಡ ಪ್ರಾಜೆಕ್ಟ್ ಎಂದರೆ ಅದು 'ಗ್ರಾಮಾಯಣ'. ಸ್ಯಾಂಡಲ್‌ವುಡ್‌ನ ಭರವಸೆಯ ನಟ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿದ್ದಾರೆ. ಹಳ್ಳಿ ಸೊಗಡಿನ ಕಥೆಯುಳ್ಳ ಈ ಸಿನಿಮಾ ಈಗಾಗಲೇ ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಮೇಘಾ ಬ್ಯುಸಿಯಾಗಿರಲಿದ್ದಾರೆ.
ಬಿಗ್ ಬಾಸ್‌ಗೆ ಹೋಗದಿದ್ದರೂ ಮೇಘಾ ಶೆಟ್ಟಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ಅವರ ರೀಲ್ಸ್, ಗ್ಲಾಮರಸ್ ಫೋಟೋಶೂಟ್‌ಗಳು ಮತ್ತು ಟ್ರಾವೆಲ್ ವ್ಲಾಗ್‌ಗಳು ಸದಾ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುತ್ತವೆ. ಇದೇ ಕಾರಣಕ್ಕೆ ಬಿಗ್ ಬಾಸ್ ಟೀಮ್ ಪ್ರತಿ ವರ್ಷವೂ ಇವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತದೆ ಎನ್ನಲಾಗಿದೆ.













Click it and Unblock the Notifications