ಮಣ್ಣಾದ್ರೂ ಪರವಾಗಿಲ್ಲ ಹತ್ತಪ್ಪಾ ಕಾರು: ಮರೆಯಲಾರದ ಗಿಫ್ಟ್ ಕೊಟ್ಟ ಡ್ರೋನ್ ಪ್ರತಾಪ್
ಬಿಗ್‌ಬಾಸ್ ಬಳಿಕ ಡ್ರೋನ್ ಪ್ರತಾಪ್ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಮಿಂಚುತ್ತಿದ್ದಾರೆ. ಪ್ರತಾಪ್ ಅವರು ತಮ್ಮ ಜೀವನದ ಅಂದುಕೊಂಡಿದ್ದ ದೊಡ್ಡ ಕನಸನ್ನು ನನಸು ಮಾಡಿದ್ದಾರೆ. ತಮ್ಮ ತಂದೆ ತಾಯಿಗೆ ದುಬಾರಿ ಖರೀದಿಸಿ ಗಿಫ್ಟ್ ಮಾಡಿದ್ದಾರೆ. ಮಗ ಹೊಸ ಕಾರು ಕೊಡಿಸಿದ್ದಕ್ಕೆ ಅವರ ಪೋಷಕರು ಇಬ್ಬರೂ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ತನ್ನ ತಾಯಿಯನ್ನು ಉಟ್ಟಬಟ್ಟೆಯಲ್ಲೇ ಸೀದಾ ಅವರ ಊರಿನಿಂದ ಕರೆಸಿಕೊಂಡು ಹೊಸ ಕಾರು ಡೆಲಿವರಿ ಪಡೆದಿದ್ದಾರೆ. ಬಳಿಕ ಅದನ್ನು ತಮ್ಮ ತೋಟದಲ್ಲಿ ಉಳುಮೆ ಮಾಡುತ್ತಿದ್ದ ಅಪ್ಪನಿಗೆ ಸರ್‌ಪ್ರೈಸ್ ಆಗಿ ತೋರಿಸಿದ್ದಾರೆ. ಈ ವಿಡಿಯೋಗಳನ್ನು ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್-10ರ ರನ್ನರ್ ಅಪ್ ಆಗಿದ್ದ ಡ್ರೋನ್ ಪ್ರತಾಪ್ ಅವರು ತಮ್ಮ ತಂದೆ ತಾಯಿಗಾಗಿ ಒಂದು ಹೊಸ ಕಾರನ್ನು ಖರೀದಿಸಿ ಗಿಫ್ಟ್ ಮಾಡಿದ್ದಾರೆ. ಈ ಕಾರು ಖರೀದಿ ಬಗ್ಗೆ ಪ್ರತಾಪ್ ತಾಯಿಗೆ ಕೂಡಾ ಮುಂಚಿತವಾಗಿ ತಿಳಿಸಿರಲಿಲ್ಲ. ಶೋರೂಂನಿಂದ ನೇರವಾಗಿ ಹೊಸ ಹ್ಯುಂಡೈ ಕ್ರೆಟಾ (Hyundai Creta) ಕಾರನ್ನು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮರಿಮಾದಯ್ಯ ಅವರಿಗೆ ಸರ್ಪ್ರೈಸ್ ಆಗಿ ತೋರಿಸಿದ್ದಾರೆ. ಇದನ್ನು ಕಂಡು ಮೂಕವಿಸ್ಮಿತರಾದ ಅವರು ನನ್ನ ಮಗ ಕೊಡಿಸಿದ್ದು ಎಂದು ಸಂತೋಷದಲ್ಲಿ ಕಣ್ಣೀರಿಟ್ಟಿದ್ದಾರೆ.

ತಂದೆ ಹೊಲದಲ್ಲಿ ಎತ್ತುಗಳೊಂದಿಗೆ ಉಳುವೆ ಮಾಡುತ್ತಿದ್ದರು. ಅವರಿಗೂ ಕೂಡ ಪ್ರತಾಪ್ ಕಾರು ತರುತ್ತಿರುವ ವಿಷಯ ತಿಳಿಸಿರಲಿಲ್ಲ. ಶೋರೂಂನಿಂದ ಕಾರು ತಂದು, ತೋಟದಲ್ಲಿ ನಿಲ್ಲಿಸಿದರು. ಹೊಸ ಕಾರು ತೋರಿಸುವ ಮೊದಲು "ಏನು ಗಿಫ್ಟ್ ಇರಬಹುದು?" ಎಂದು ಊಹಿಸಲು ಹೇಳಿದರು. ಆಗ ತಂದೆ "ನೀನು ಐದು ರೂಪಾಯಿ ಕೊಟ್ಟರೂ ನನಗೆ ಸಂತೋಷ" ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು. ಆಗ ಅಪ್ಪನ ಕಣ್ಣು ಮುಚ್ಚಿ ಕರೆತಂದು ಹೊಸ ಕಾರನ್ನು ತೋರಿಸಿದ್ದಾರೆ. ಇದನ್ನು ಕಂಡ ತಂದೆ ಖುಷಿಪಟ್ಟಿದ್ದಾರೆ.
ಸಾಮಾನ್ಯವಾಗಿ ಹೊಸ ಕಾರು ಖರೀದಿಸಿದಾಗ ಪತ್ನಿ ಅಥವಾ ಮನೆಯ ಹೆಣ್ಣುಮಕ್ಕಳ ಪಾದ ಅಥವಾ ಕೈಗಳನ್ನು ಮುದ್ರಿಸುವ ಟ್ರೆಂಡ್ ಈಗ ನಡೆಯುತ್ತಿದೆ. ಆದರೆ ಪ್ರತಾಪ್ ವಿಭಿನ್ನವಾಗಿ ಹೊಲದಲ್ಲಿ ತಂದೆಯ ಕೈ ಮಣ್ಣಿನಿಂದಲೇ ಹೊಸ ಕಾರಿನ ಮೇಲೆ ಮುದ್ರೆ ಒತ್ತಿಸಿದ್ದಾರೆ. "ನಮ್ಮ ಹೊಲದ ಮಣ್ಣು ನಮ್ಮ ಕಾರಿನ ಮೇಲಿರಲಿ ಅಪ್ಪ" ಎಂದು ಪ್ರತಾಪ್ ಹೇಳಿದ್ದಾರೆ. ಮಣ್ಣಾದ್ರೂ ಪರವಾಗಿಲ್ಲ ಹತ್ತಪ್ಪಾ ಎಂದು ಪ್ರತಾಪ್ ತಂದೆಗೆ ಕಾರು ಡೋರ್ ತೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡ್ರೋನ್ ಪ್ರತಾಪ್ ಕುಟುಂಬದ ಪ್ರೀತಿ ಮತ್ತು ಸಂಸ್ಕೃತಿಯ ಸ್ಫೂರ್ತಿ ಮೆಚ್ಚುಗೆ ಪಡೆದಿದೆ.
ಮೊದಲಿಗೆ ತಂದೆ-ತಾಯಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಅವರಿಗೆ ಸರ್ಪ್ರೈಸ್ ನೀಡಬೇಕೆಂಬುದು ಪ್ರತಾಪ್ ಪ್ಲ್ಯಾನ್ ಆಗಿತ್ತು. ಆದರೆ, ತಂದೆ ಊರಿನಲ್ಲಿ ಕೆಲಸದಲ್ಲಿ ನಿರತನಾಗಿದ್ದ ಕಾರಣ ಅವರು ಬರಲಾಗಲಿಲ್ಲ. ಆದ್ದರಿಂದ, ಮೊದಲಿಗೆ ತಾಯಿಗೆ ಕಾರು ಗಿಫ್ಟ್ ನೀಡಿದರು. ಕಾರು ಖರೀದಿ ಮಾಡುವ ವಿಚಾರವನ್ನು ತಾಯಿ ಶೋರೂಂಗೆ ಹೋಗುವವರೆಗೆ ಹೇಳಿರಲಿಲ್ಲ. ಶೋರೂಂನಲ್ಲಿ ಕಾರಿನ ಕೀ ನೀಡಿದಾಗ ತಾಯಿ ಭಾವುಕರಾದರು.












Click it and Unblock the Notifications