Vishnuvardhan: ನಟ ವಿಷ್ಣುವರ್ಧನ್ ಅಭಿಮಾನಿಗಳಿಗೆ ಹೈಕೋರ್ಟ್‌ನಿಂದ ಬಿಗ್ ಶಾಕ್
ನಟ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ರಾಜ್ಯ ಸರ್ಕಾರವು ದಶಕಗಳ ಬಳಿಕ ಮರಣೋತ್ತರವಾಗಿ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ. ಮತ್ತೊಂದೆಡೆ ವಿಷ್ಣುವರ್ಧನ್ ಅವರ ಮೂಲ ಸ್ಮಾರಕದ ಜಾಗವನ್ನು ತೆರವು ಮಾಡಿದ್ದ ಕೆಂಗೇರಿ ಬಳಿಯ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋ ಜಾಗವನ್ನು ರಾಜ್ಯ ಸರ್ಕಾರ ಮತ್ತೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇನ್ನೇನು ಎಲ್ಲ ವಿವಾದ ಸರಿ ಹೋಯ್ತು ಎಂದು ಈ ಬಾರಿ ವಿಷ್ಣುದಾದಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿರುವ ಅಭಿಮಾನಿಗಳಿಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನೆರವೇರಿದ್ದರಿಂದ ಅದೇ ಜಾಗವನ್ನು ಅಭಿಮಾನಿಗಳು ವಿಷ್ಣುದಾದಾ ಸಮಾಧಿ ಎಂದು ಪೂಜಿಸುತ್ತಾ ಬಂದಿದ್ದರು. ಅಲ್ಲಿ ಪುಟ್ಟ ಸ್ಮಾರಕವೂ ಇತ್ತು. ಪ್ರತಿ ವರ್ಷ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆಯಂದು ಅಲ್ಲಿಗೆ ಹೋಗಿ ವಿಷ್ಣುದಾದಾ ಅವರನ್ನು ಸ್ಮರಿಸುತ್ತಿದ್ದರು. ಆದರೆ ನಟ ಬಾಲಣ್ಣ ಅವರ ಕುಟುಂಬಸ್ಥರು ಕೆಲ ವರ್ಷಗಳಿಂದ ಸ್ಮಾರಕದ ಜಾಗಕ್ಕೆ ಪ್ರವೇಶ ನಿರ್ಬಂಧಿಸಿದ್ದರು. ಇತ್ತೀಚೆಗೆ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕೂಡ ನೆಲಸಮ ಮಾಡಲಾಗಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಆದರೆ ಅಭಿಮಾನ್ ಸ್ಟುಡಿಯೋ ಜಾಗವನ್ನು ಸರ್ಕಾರವೇ ನೀಡಿದ್ದರಿಂದ ಇದರ ಪರಿಶೀಲನೆ ವೇಳೆ ನಿಯಮ ಉಲ್ಲಂಘನೆ ಮಾಡಿರುವುದು ತಿಳಿದಿತ್ತು. ಹೀಗಾಗಿ ಅರಣ್ಯ ಇಲಾಖೆಯು ಈ ಜಾಗವನ್ನು ಮತ್ತೆ ಸ್ವಾಧೀನ ಪಡಿಸಿಕೊಳ್ಳುವುದಾಗಿ ಹೇಳಿತ್ತು. ಭಾರತಿ ವಿಷ್ಣುವರ್ಧನ್ ಅವರು ಕೂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸ್ಮಾರಕಕ್ಕಾಗಿ ಭೂಮಿ ನೀಡುವಂತೆ ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು. ಸರ್ಕಾರ ಇತ್ತೀಚೆಗೆ ಪ್ರಶಸ್ತಿ ಘೋಷಣೆ ಮಾಡಿ ಒಂದು ಬೇಡಿಕೆ ಈಡೇರಿಸಿದೆ. ಸ್ಮಾರಕದ ಭೂಮಿ ನೀಡುವ ಸಂಬಂಧವೂ ತಯಾರಿ ನಡೆದಿದೆ. ಈ ಹೊತ್ತಲ್ಲೇ ಅಭಿಮಾನಿಗಳ ಕನಸಿಗೆ ತಣ್ಣೀರೆರಚುವ ಬೆಳವಣಿಗೆ ನಡೆದಿದೆ.
ಅಲ್ಲಿ ಹುಟ್ಟುಹಬ್ಬ ಆಚರಣೆ ಬೇಡ
ಸೆಪ್ಟೆಂಬರ್ 19ರಂದು ನಟ ವಿಷ್ಣುವರ್ಧನ್ ಅವರ ಜನ್ಮದಿನ ಆಚರಿಸಲು ಅವರ ಅಭಿಮಾನಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಈ ಬಾರಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸ್ಮಾರಕದ ಜಾಗದಲ್ಲೇ ಅದ್ಧೂರಿಯಾಗಿ ಈ ಆಚರಣೆ ನಡೆಸಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ. ಹುಟ್ಟುಹಬ್ಬ ಆಚರಿಸುವ ಸಂಬಂಧ ವಿಷ್ಣು ಅವರ ಅಭಿಮಾನಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿದ ಕೋರ್ಟ್ ಅಭಿಮಾನಿಗಳಿಗೆ ಅನುಮತಿ ನಿರಾಕರಿಸಿದೆ. ಸ್ಮಾರಕದ ಜಾಗದ ವಿವಾದ ಇನ್ನೂ ಇತ್ಯರ್ಥವಾಗದ ಕಾರಣ ಯಾವುದೇ ಸಂಭ್ರಮಾಚರಣೆ ಬೇಡ ಎಂದು ಖಡಕ್ ಆಗಿ ಹೇಳಿದೆ.
ಅಭಿಮಾನ್ ಸ್ಟುಡಿಯೋದ ವಿವಾದ ಇನ್ನೂ ಬಗೆಹರಿದಿಲ್ಲ. ಇದರ ವಿಚಾರಣೆ ಕೂಡ ನಡೆಯುತ್ತಿರುವ ಕಾರಣ ಈ ಬಾರಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಅಲ್ಲಿ ಬೇಡ ಎಂದು ಕೋರ್ಟ್ ಸೂಚನೆ ನೀಡಿದೆ. ವಿಷ್ಣುದಾದಾ ಅವರ ಅಭಿಮಾನಿಗಳಿಗೆ ಹಿನ್ನಡೆಯಾಗಿದ್ದು, ಇನ್ನೇನು ಹುಟ್ಟುಹಬ್ಬಕ್ಕೆ ಒಂದೇ ದಿನ ಬಾಕಿ ಇರುವಾಗಲೇ ಈ ಕಹಿಸುದ್ದಿ ಹೊರಬಿದ್ದಿದೆ. ಹಿಂದಿನ ವರ್ಷಗಳಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿ ಹುಟ್ಟುಹಬ್ಬದ ಆಚರಣೆಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಈ ಬಾರಿ ಅಲ್ಲೇ ಸಂಭ್ರಮಾಚರಣೆ ನಡೆಸೋಣ ಎಂದು ಸಿದ್ಧತೆ ನಡೆಸಿದ್ದರು.












Click it and Unblock the Notifications