Pushpa 2 Movie: 'ಪುಷ್ಪ-2' ಮಿಡ್ ನೈಟ್ ಶೋಗಳೆಲ್ಲ ಕ್ಯಾನ್ಸಲ್ ಮಾಡಿ, ಜಿಲ್ಲಾಧಿಕಾರಿ ಆದೇಶ
ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಸಿನಿಮಾವನ್ನು ಇನ್ನೇನು ಕೆಲವೇ ಗಂಟೆಗಳಲ್ಲಿ ವೀಕ್ಷಿಸಿ ಜಾಲಿ ಮಾಡೋಣ ಎಂದುಕೊಂಡಿದ್ದ ಪ್ರೇಕ್ಷಕರಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಶಾಕ್ ನೀಡಿದೆ. ಬೆಂಗಳೂರಿನ ಹಲವು ಥಿಯೇಟರ್‌ಗಳಲ್ಲಿ ನಿಗದಿಯಾಗಿದ್ದ ಮಿಡ್ ನೈಟ್ ಶೋಗಳೆಲ್ಲ ಕೂಡಲೇ ರದ್ದು ಮಾಡುವಂತೆ ಬೆಂಗಳೂರು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಸಮಯಪಾಲನೆ ಮಾಡದೆ ಅನಧಿಕೃತವಾಗಿ ಪುಷ್ಪ-2 ಸಿನಿಮಾ ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಯಾ ವ್ಯಾಪ್ತಿಯ ಪೊಲೀಸರಿಗೂ ಸೂಚನೆ ನೀಡಿದೆ. ಬೆಂಗಳೂರಿನಲ್ಲಿರುವ ಥಿಯೇಟರ್‌ಗಳು ಹಾಗೂ ಚಿತ್ರಮಂದಿರಗಳಲ್ಲಿ ನಿಗದಿತ ಸಮಯಕ್ಕೂ ಮುನ್ನವೇ ಪುಷ್ಪ-2 ಸಿನಿಮಾ ಪ್ರದರ್ಶನ ಮಾಡುತ್ತಿರುವ ಬಗ್ಗೆ ನಿರ್ಮಾಪಕರ ಸಂಘವು ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು. ಅದರನ್ವಯ ಈ ಆದೇಶ ಹೊರಡಿಸಿರುವುದಾಗಿ ತಿಳಿದುಬಂದಿದೆ.

ಬುಕ್ ಮೈ ಶೋನಲ್ಲೂ ನಿಗದಿತ ಸಮಯಕ್ಕೂ ಮುನ್ನವೇ ಸಿನಿಮಾ ಪ್ರದರ್ಶನ ನಿಗದಿಯಾಗಿರುವುದು ಗೊತ್ತಾಗಿದೆ. ಕರ್ನಾಟಕ ಸಿನಿಮಾ ರೆಗ್ಯೂಲೇಷನ್ ಕಾಯ್ದೆಯ ಪ್ರಕಾರ ಬೆಳಿಗ್ಗೆ 6.30ರ ನಂತರ ಪ್ರದರ್ಶನ ಮಾಡಬೇಕು. ಆದರೆ ಹಲವು ಥಿಯೇಟರ್ ಹಾಗು ಮಲ್ಟಿಪ್ಲೆಕ್ಸ್‌ಗಳಲ್ಲಿ ಅನಧಿಕೃತವಾಗಿ ಬೆಳಿಗ್ಗೆ 3 ಗಂಟೆಯಿಂದಲೇ ಪ್ರದರ್ಶನಗಳು ನಿಗದಿಯಾಗಿವೆ. ಇದಕ್ಕೆ ಟಿಕೆಟ್ ಮಾರಾಟ ಮಾಡುತ್ತಿರುವುದು ಕೂಡ ಗಮನಕ್ಕೆ ಬಂದಿದ್ದು, ಕೂಡಲೇ ಈ ಅವಧಿ ಪೂರ್ವ ಪ್ರದರ್ಶನಗಳನ್ನು ನಿಲ್ಲಿಸುವಂತೆ ಖಡಕ್ ಆಗಿ ಸೂಚಿಸಿದೆ.
ಅಲ್ಲದೆ ಯಾವ ಯಾವ ಥಿಯೇಟರ್‌ಗಳಲ್ಲಿ ಮಿಡ್ ನೈಟ್ ಶೋಗಳು ಪ್ರದರ್ಶನಗೊಳ್ಳುತ್ತಿವೆ ಎಂಬುದನ್ನೂ ಜಿಲ್ಲಾಧಿಕಾರಿ ಕಚೇರಿ ಪಟ್ಟಿ ಮಾಡಿ, ಆದೇಶದಲ್ಲಿ ಉಲ್ಲೇಖಿಸಿದೆ. ಸುಮಾರು 40ಕ್ಕೂ ಹೆಚ್ಚು ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಿಡ್‌ನೈಟ್ ಶೋಗಳು ಪ್ರದರ್ಶನಗೊಳ್ಳುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಪತ್ತೆ ಹಚ್ಚಿದ್ದು, ಕೂಡಲೇ ಶೋಗಳನ್ನು ರದ್ದು ಮಾಡುವಂತೆ, ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದರಿಂದ ಮುಂಜಾನೆಯೇ ಪುಷ್ಪ ಸಿನಿಮಾ ನೋಡಬೇಕು ಎಂದು ಸಜ್ಜಾಗಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ನಿರ್ಮಾಪಕರ ಸಂಘದಿಂದ ದೂರು!
ಪುಷ್ಪ-2 ಸಿನಿಮಾವನ್ನು ಅವಧಿಗೂ ಮುನ್ನ ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು. ಈ ದೂರಿನ ಪ್ರತಿ ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದೆ.

ಸಿನಿಮಾ ಪ್ರದರ್ಶನದ ನಿಯಮಗಳ ಪ್ರಕಾರ ಕರ್ನಾಟಕದ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 6 ಗಂಟೆಗೂ ಮುನ್ನ ಯಾವ ಸಿನಿಮಾಗಳನ್ನು ಪ್ರದರ್ಶಿಸುವಂತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರದ ಆದೇಶವಿದ್ದರೂ ಸಹ ಕರ್ನಾಟಕದ ಕೆಲವು ಥಿಯೇಟರ್‌ಗಳಲ್ಲಿ ಅವಧಿಗೂ ಮುನ್ನ ಪ್ರದರ್ಶನ ಮಾಡಲಾಗುತ್ತಿದೆ ಎಂದು ನಿರ್ಮಾಪಕರು ಆರೋಪ ಮಾಡಿದ್ದರು. ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ ಥಿಯೇಟರ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ ಪುಷ್ಪ ಸಿನಿಮಾದ ಟಿಕೆಟ್ ದರವನ್ನು 500 ರೂಪಾಯಿಯಿಂದ 1500 ರೂಪಾಯಿವರೆಗೆ ಮನಬಂದಂತೆ ಏರಿಸಿ, ಪ್ರೇಕ್ಷಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿರುವ ಥಿಯೇಟರ್‌ಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದರು.












Click it and Unblock the Notifications