Baby Indira: 35 ವರ್ಷಗಳ ನಂತರ ಚಿತ್ರರಂಗ ಬಗ್ಗೆ ಬೇಬಿ ಇಂದಿರಾ ಮಾತು; ಈ ನಟಿ ಈಗ ಎಲ್ಲಿದ್ದಾರೆ?
ನಮ್ಮ ಕನ್ನಡ ಚಿತ್ರರಂಗದಲ್ಲಿ ಎಂಬತ್ತರ ದಶಕದಲ್ಲಿ ಅದೆಷ್ಟು ತಾರೆಯರು ಮಿಂಚಿ ಸದ್ಯ ತೆರೆ ಮರೆಗೆ ಸರಿದಿದ್ದಾರೆ. ತಮ್ಮ ಖಾಸಗಿ ಜೀವನಗಳತ್ತ ಮುಖ ಮಾಡಿ ನಟನೆಯಿಂದ ಹಿಂದೆ ಸರಿದ ನಟಿಯರು ಅನೇಕರು. ಅವರಲ್ಲಿ ಕೆಲವರು ಈಗ ಮತ್ತೆ ಚಿತ್ರರಂಗಕ್ಕೆ ಹಾಗೂ ಕಿರುತೆರೆ ಕಂಬ್ಯಾಕ್ ಮಾಡುತ್ತಿದ್ದರೆ, ಇನ್ನೂ ಕೆಲವರು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುವ ಮೂಲಕ ಮತ್ತೆ ಜನರಿಗೆ ಪರಿಚಯ ಮಾಡಿಕೊಳ್ಳುತ್ತಿದ್ದಾರೆ.
ಇದೀಗ ಅದೇ ರೀತಿ 1980ರ ದಶಕದಲ್ಲಿ ಬಾಲ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ, ಜನರ ಅಚ್ಚುಮೆಚ್ಚಿನ ಬೇಬಿ ಅನಿಸಿಕೊಂಡಿದ್ದ ಬೇಬಿ ಇಂದಿರಾ ಅವರು ಬರೋಬ್ಬರಿ ಮೂವತೈದು ವರ್ಷಗಳ ಬಳಿಕ ಮತ್ತೆ ಜನರ ಎದುರು ಕಾಣಿಸಿಕೊಂಡಿದ್ದಾರೆ. ಚಿನ್ನಾ ನಿನ್ನ ಮುದ್ದಾಡುವೆ, ಮಕ್ಕಳ ಭಾಗ್ಯ, ಸಿಂಹದ ಮರಿ ಸೈನ್ಯ, ರಾಮ ಲಕ್ಷ್ಮಣ, ಪುಟಾಣಿ ಏಜೆಂಟ್ 123 ಅಂತಹ ಎವರ್ ಗ್ರೀನ್ ಚಿತ್ರಗಳಲ್ಲಿ ನಟಿಸಿದ್ದ ಬೇಬಿ ಇಂದಿರಾ ಅವರು ಈಗ ಹೇಗಿದ್ದಾರೆ..? ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅನೇಕರಲ್ಲಿತ್ತು.

ಚಿಕ್ಕ ವಯಸ್ಸಿನಲ್ಲೇ ಅದ್ಭುತವಾಗಿ ನಟಿಸಿ ಸಿನಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಬೇಬಿ ಇಂದಿರಾ ಅವರ ಪ್ರಸ್ತುತ ವಿಚಾರಗಳ ಬಗ್ಗೆ ಇಂದಿಷ್ಟು ಮಾಹಿತಿಯನ್ನು ಅವರು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ರಘುರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಬರುವ ನೂರೊಂದು ನೆನಪು ವಿಶೇಷ ಕಾರ್ಯಕ್ರಮಕ್ಕೆ ಸಂದರ್ಶನ ನೀಡಿರುವ ಬೇಬಿ ಇಂದಿರಾ ಅವರು, ಕನ್ನಡ ಚಿತ್ರರಂಗದಲ್ಲಿ ನಟನೆಯ ನೆನಪು ಹಾಗೂ ಜನರ ಅಭಿಮಾನದ ಬಗ್ಗೆ ನೆನೆದು ಭಾವುಕರಾಗಿದ್ದಾರೆ.
'ಯುಗಾದಿ ಹಬ್ಬದ ದಿನವೇ ಮೂವತೈದು ವರ್ಷಗಳ ಬಳಿಕ ಮತ್ತೆ ಜನರ ಮುಂದೆ ಕಾಣಿಸಿಕೊಳ್ಳುತ್ತಿದ್ದೇನೆ. ನಿಮ್ಮ ಪ್ರೀತಿ, ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ. ಕನ್ನಡಿಗರಿಗೆ ಸಹಸ್ರ ಕೋಟಿ ಅನಂತ ಧನ್ಯವಾದಗಳು' ಎಂದು ತಮ್ಮ ನಟನೆಯ ಹಾಗೂ ಜೀವನದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಅವರ ಸಂಪೂರ್ಣ ಸಂದರ್ಶನವನ್ನು ರಘುರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.
ಕನ್ನಡ, ತಮಿಳು, ತೆಲುಗು ಸೇರಿದಂತೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬೇಬಿ ಇಂದಿರಾ, ಬಾಲ ನಟಿಯಷ್ಟೇ ಅಲ್ಲದೇ, ನಾಯಕಿಯಾಗಿ ಕೂಡಾ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದರು. ಅರ್ಜುನ್ ಸರ್ಜಾ ಜೊತೆ ನಾಯಕಿಯಾಗಿ ಮಳೆ ಬಂತು ಮಳೆ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ಅಂಜದ ಗಂಡು ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕೂಡಾ ನಟಿಸಿದ್ದರು. ಆದರೆ ಕೆಲ ವರ್ಷಗಳ ನಂತರ ಅವರು ನಟನೆಯಿಂದ ಸಂಪೂರ್ಣವಾಗಿ ದೂರಾದರು.
ಇಂದಿರಾ, ತಮಿಳಿನ ನಟ ಶ್ರೀಧರ್ ಅವರನ್ನು ಮದುವೆಯಾಗಿ ಚೆನ್ನೈನಲ್ಲಿ ವಾಸವಿದ್ದರು. ಶ್ರೀಧರ್ ಅವರು ಕೂಡ ತಮಿಳು ಚಿತ್ರರಂಗದಲ್ಲಿ ಬಾಲ ಕಲಾವಿದರಾಗಿ ಪ್ರಖ್ಯಾತಿ ಗಳಿಸಿದ್ದರು. ದುರದೃಷ್ಟವಷಾತ್ ಶ್ರೀಧರ್ ಅವರು ಹೃದಯಾಘಾತದಿಂದ ನಿಧನರಾದರು. ಈ ದಂಪತಿಗೆ ಪ್ರಶಾಂತ್ ಹಾಗೂ ರಕ್ಷಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಪತಿ ನಿಧನರಾದ ನಂತರ ಬೇಬಿ ಇಂದಿರಾ ಬಹಳ ಸಮಸ್ಯೆಗಳನ್ನು ಎದುರಿಸಿದರು. ಇದಾದ ಬಳಿಕ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಸದ್ಯಕ್ಕೆ ಇಂದಿರಾ ತಮಿಳುನಾಡಿನ ಚೆನ್ನೈನ ಕೊಟ್ಟಿವಾಕಮ್ ಕರ್ಪಗಂಬಲ್ ನಗರದಲ್ಲಿ ಮಕ್ಕಳೊಂದಿಗೆ ವಾಸವಿದ್ದಾರೆ. ಇಂದಿರಾ ಅವರು ಓರ್ವ ಮಗ ಸದ್ಯ ಡೈರೆಕ್ಟರ್ ಆಗಿದ್ದಾರೆ. ಇದೀಗ ಬೇಬಿ ಇಂದಿರಾ ಅವರ ಸಂದರ್ಶನ ನೋಡಿದ ಅಭಿಮಾನಿಗಳು ಅವರು ಮತ್ತೆ ನಟನೆಗೆ ಬರಬೇಕು ಎಂದಿದ್ದಾರೆ. ಅನೇಕ ಹಿರಿಯ ನಟಿಯರು ಈಗ ಮತ್ತೆ ನಟನೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಹೀಗಾಗಿ ಮತ್ತೆ ನೀವು ಕೂಡ ನಟನೆಗೆ ಬನ್ನಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.












Click it and Unblock the Notifications