ಬೆಂಗಳೂರಿನಲ್ಲಿ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬ: ಯಾವಾಗ? ಎಲ್ಲಿ? ಹೆಚ್ಚಿನ ವಿವರ ಇಲ್ಲಿದೆ
ಬೆಂಗಳೂರು, ಏಪ್ರಿಲ್ 12: ಬೆಂಗಳೂರಿನ ಸಿನಿಮಾ ಹಾಗೂ ಸಂಗೀತ ಪ್ರಿಯರೇ ನಿಮಗೆ ಇಲ್ಲಿದೆ ಸಿಹಿ ಸುದ್ದಿ. ಸಿನಿಮಾ ಹಾಡುಗಳ ಜೊತೆ ಸಂಗೀತ ಲೋಕದಲ್ಲಿ ತೇಲಬೇಕು ಎಂದುಕೊಂಡವರಿಗಾಗಿ ಇಲ್ಲಿದೆ ಮುಖ್ಯವಾದ ಮಾಹಿತಿ. ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಸ್ತುತಪಡಿಸುತ್ತಿರುವ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬ ಬೆಂಗಳೂರಿನಲ್ಲಿ ಇದೇ ಮೇ 31ರಂದು ನಡೆಯಲಿದೆ.
ದುಬೈ, ಆಸ್ಟ್ರೇಲಿಯಾ, ಅಮೆರಿಕ, ಪ್ಯಾರಿಸ್ ಹಾಗೂ ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಇದೇ ಹುಕುಂ ಟೂರ್ ಮೊತ್ತ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದೆ. ಅದೂ ಕೂಡ ನಮ್ಮ ಬೆಂಗಳೂರಿಗೆ. ಅನಿರುದ್ಧ್ ರವಿಚಂದರ್ ಮೊದಲ ಬಾರಿಗೆ ಕರ್ನಾಟಕದಲ್ಲಿ ಅದರಲ್ಲೂ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮ್ಯೂಸಿಕ್ ಜಾತ್ರೆ ಮಾಡಲು ರೆಡಿಯಾಗಿದ್ದಾರೆ.

ಮೇ 31ರಂದು ಟೆರಾಫಾರ್ಮ್ ಅರೇನಾದಲ್ಲಿ ನಡೆಯಲಿರುವ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬ ಕನ್ಸರ್ಟ್ ಈಗಾಗಲೇ ಬೃಹತ್ ದಾಖಲೆ ಸೃಷ್ಟಿ ಮಾಡಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕನ್ಸರ್ಟ್ ನ್ನು ಕೆವಿಎನ್ ಸಂಸ್ಥೆ ಪ್ರಸ್ತುಪಡಿಸಿದೆ. ವಿಶೇಷ ಅಂದರೆ ಅನಿರುದ್ಧ್ ರವಿಚಂದರ್ ಅವರ ಹುಕುಂ ಟೂರ್ ಬೆಂಗಳೂರು ಅವತರಣಿಕೆಯ 16 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಕೇವಲ 60 ನಿಮಿಷದಲ್ಲೇ ಅಂದರೆ ಕೇವಲ ಒಂದೇ ಗಂಟೆಯಲ್ಲೇ ಮಾರಾಟವಾಗಿದೆ. ಈ ಬಗ್ಗೆ ಕೆವಿಎನ್ ಸಂಸ್ಥೆ ನಿರ್ಮಾತೃ ವೆಂಕಟ ಕೆ ನಾರಾಯಣ ಅಧೀಕೃತವಾಗಿ ಖಚಿತ ಪಡಿಸಿದ್ದಾರೆ.
ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಜೆಗೆ ಕಾದಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಜನ, ವೇಗವಾಗಿ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಅಲ್ಲದೇ ಈ ಕಾರ್ಯಕ್ರಮದ ಟಿಕೆಟ್‌ಗೆ ಇನ್ನೂ ಹೆಚ್ಚಿನ ಬೇಡಿಕೆ ಇದ್ದು, ಬೀಸ್ಟ್ ಮ್ಯೂಸಿಕ್ ಮೂಡ್‌ಗೆ ಸಿಲಿಕಾನ್ ಸಿಟಿ ಮಂದಿ ಯಾವ ರೀತಿ ಕುತೂಹಲಕಾರಿಯಾಗಿ ಕಾಯುತ್ತಿದ್ದಾರೆ ಎಂಬುವುದು ಗೊತ್ತಾಗುತ್ತಿದೆ.
ಮನೋರಂಜನೆ ವಿಷಯವಾಗಿ ಮತ್ತೊಂದಿಷ್ಟು ಅಚ್ಚರಿಗಳನ್ನು ಕೆವಿಎನ್ ಸಂಸ್ಥೆಯ ಕಡೆಯಿಂದ ಬರುವ ನಿರೀಕ್ಷೆಗಳಿವೆ. ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ಕೆವಿಎನ್ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಿ ಎಂದು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ತಿಳಿಸಿದ್ದು, ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬದಲ್ಲಿ ಇನ್ನೂ ಹೆಚ್ಚಿನ ಜನರು ಭಾಗವಹಿಸಲು ಅವಕಾಶ ನೀಡುವ ಸಾಧ್ಯತೆ ಇದೆ. ಹೀಗಾಗಿ ಅನಿರುದ್ಧ್ ರವಿಚಂದರ್ ಅವರ ಹಾಡಿನ ಅಭಿಮಾನಿಗಳು ಕಾತುರರಾಗಿದ್ದಾರೆ.












Click it and Unblock the Notifications