'ನನ್ನಂತವರಿಗೂ ಮೋಸ ಆಗುತ್ತದೆ ಅಂದುಕೊಂಡಿರಲಿಲ್ಲ'- ಚೈತ್ರಾ ವಾಸುದೇವನ್ ಕಣ್ಣೀರು
ಚೈತ್ರಾ ವಾಸುದೇವನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕೈಗೆ ಮೈಕ್ ಸಿಕ್ಕರೆ ಸಾಕು ಪಟ ಪಟ ಅಂತಾ ಮಾತನಾಡುವ ಚೈತ್ರಾ ವಾಸುದೇವನ್ ಕನ್ನಡದ ಜನಪ್ರಿಯ ನಿರೂಪಕಿ. ತಮ್ಮದೇ ಆದ ಇವೆಂಟ್ ಮ್ಯಾನೆಜ್‌ಮೆಂಟ್ ಕಂಪನಿ ಹೊಂದಿರುವ ಚೈತ್ರಾ ವಾಸುದೇವನ್ ಸದ್ಯ ಉದ್ಯಮಿಯಾಗಿ ಸಹ ಯಶಸ್ವಿಯಾಗಿದ್ದಾರೆ.
ಸದಾ ನಗುಮುಖ..ನೋಡಲು ಸಖತ್ ಸ್ಟೈಲಿಶ್..ಪಟ್ಟ ಪಟ ಅಂತಾ ಮಾತನಾಡುವ ಚೈತ್ರಾ ವಾಸುದೇವನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಜೊತೆಗೆ ತಮ್ಮ ಕೆಲಸದಲ್ಲಿಯೂ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಸದ್ಯ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ನಿರೂಪಕಿಯಾಗಿರುವ ಚೈತ್ರಾ ವಾಸುದೇವನ್ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ.

ಇದೇ ವಿಚಾರವಾಗಿ ಮಾತಾಡುತ್ತಾ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನ ನಿರೂಪಕಿಯಾದರೂ ಕೂಡ ಚೈತ್ರಾ ಜಡ್ಜ್‌ಸ್ ರೌಂಡಿನಲ್ಲಿ ನಟಿಸಿ ಎಲ್ಲರನ್ನೂ ನಕ್ಕು ನಗಿಸಿದ್ದಾರೆ. ಸ್ಕಿಟ್ ಬಳಿಕ ನಿರೂಪಕಿ ಅನುಶ್ರೀ, ಚೈತ್ರಾ ವಾಸುದೇವನ್ ಬಗ್ಗೆ ಮಾತನಾಡಿದ್ದು, ಹಲವಾರು ಅವಮಾನಗಳನ್ನು ದಾಟಿ ಈ ಹುಡುಗಿ ಈ ವೇದಿಕೆಗೆ ಬಂದು ನಿಂತಿದೆ ಎಂದಿದ್ದಾರೆ.
ಈ ಮಾತುಗಳನ್ನು ಕೇಳಿ ವೇದಿಕೆ ಮೇಲೆ ಕಣ್ಣೀರಿಟ್ಟ ಚೈತ್ರಾ, ತಮ್ಮ ಜೀವನದ ಬಗ್ಗೆ ಮಾತನಾಡುತ್ತಾ..'ನಾನು ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ ನನಗೆ ಮದುವೆ ಆಯಿತು. ನಾನು ಅಂದುಕೊಂಡಿದ್ದೇ ಒಂದು, ಅದು ಆಗಿದ್ದೇ ಇನ್ನೊಂದು. ನನ್ನಂತವರಿಗೂ ಮೋಸ ಆಗುತ್ತದೆ ಅಂತಾ ನಾನು ಅಂದುಕೊಂಡಿರಲಿಲ್ಲ' ಎಂದು ಜೋರಾಗಿ ಅತ್ತಿದ್ದಾರೆ.
ಈ ವೇಳೆ ಅನುಶ್ರೀ ಸೇರಿದಂತೆ ಕಾರ್ಯಕ್ರಮದಲ್ಲಿ ಇರುವವರೆಲ್ಲರೂ ಚೈತ್ರಾ ವಾಸುದೇವನ್ ಅವರಿಗೆ ಸಮಾಧಾನ ಮಾಡಿದ್ದು, ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನ ತೀರ್ಪುಗಾರಾಗಿರುವ ಹಿರಿಯ ನಟ ಜಗ್ಗೇಶ್ 'ಈ ವಿಶ್ವದಲ್ಲಿ ಯಾರೂ ನಮ್ಮ ಕೈಬಿಟ್ಟರೂ ನಾವು ನಂಬಿದ ದೇವರು ಕೈ ಬಿಡುವುದಿಲ್ಲ' ಎಂದು ಚೈತ್ರಾ ವಾಸುದೇವನ್ ಅವರಿಗೆ ಸಮಾಧಾನ ಮಾಡಿದ್ದಾರೆ.
ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದ ಚೈತ್ರಾ ವಾಸುದೇವನ್
ಚಿಕ್ಕ ವಯಸ್ಸಿಗೆ ದುಡಿಮೆ ಆರಂಭಿಸಿದ ಚೈತ್ರಾ ವಾಸುದೇವನ್ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿದ್ದರು. 2021ರಲ್ಲಿ ಚೈತ್ರಾ ವಾಸುದೇವನ್ ಅವರು ಸ್ವಂತ ಮನೆಯೊಂದನ್ನು ಖರೀದಿ ಮಾಡಿದ್ದರು. 2022ರಲ್ಲಿ ದುಬಾರಿ ಮೌಲ್ಯದ ರೇಂಜ್ ರೋವರ್ ಕಾರನ್ನು ಖರೀದಿಸಿದ್ದರು ಹೀಗೆ ತಮ್ಮ ದುಡಿಮೆಯಲ್ಲಿ ತನ್ನದೇ ಆದ ಕೆಲವು ಕನಸುಗಳನ್ನು ನನಸು ಮಾಡಿಕೊಂಡಿದ್ದರು. ಆದರೆ ವೈಯಕ್ತಿಕ ಜೀವನ ಅದರಲ್ಲೂ ವೈವಾಹಿಕ ಜೀವನದಲ್ಲಿ ಎಡವಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿಯಾಗಿ, ನಿರೂಪಕಿಯಾಗಿ ಪ್ರಖ್ಯಾತಿ ಪಡೆದಿದ್ದ ಚೈತ್ರಾ ವಾಸುದೇವನ್ ಕಳೆದ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದರು. 2017ರಲ್ಲಿ ಸತ್ಯ ಎನ್ನುವವರ ಜೊತೆಗೆ ಚೈತ್ರಾ ವಾಸುದೇವನ್ ವಿವಾಹ ನಡೆದಿತ್ತು. ಬಳಿಕ ಕಾರಣಾಂತರಗಳಿಂದ ಈ ಜೋಡಿ ದೂರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಚೈತ್ರಾ, ತಮ್ಮ ವಿಚ್ಛೇದನವನ್ನು ಘೋಷಿಸಿದ್ದರು.












Click it and Unblock the Notifications