ಮೆಟ್ರೋಗೆ ಧ್ವನಿ ಆಗಿದ್ದ ಅಪರ್ಣಾ ಇನ್ನಿಲ್ಲ: ನಿರೂಪಣೆಯಲ್ಲೇ ದಾಖಲೆ ಬರೆದಿದ್ದ ಕನ್ನಡದ ಕಂಚಿನ ಕಂಠ
ಬೆಂಗಳೂರು, ಜುಲೈ 12: ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ, ನಟಿ ಅಪರ್ಣಾ ವಿಧಿವಶರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರಾದೃವಶಾತ್ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಜುಲೈ 11ರಂದು ನಿಧನರಾಗಿದ್ದಾರೆ.
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಅಪರ್ಣಾ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 1989ರಲ್ಲಿ ನಿರೂಪಕಿಯಾಗಿ ಟೆಲಿವಿಷನ್ ಸೇರಿದ ಅಪರ್ಣಾ, 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಳಿಕ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

90ರ ದಶಕದಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದರು ಅಪರ್ಣಾ, ನಂತರ ಭಾರತ ಸರ್ಕಾರದ 'ವಿವಿಧ ಭಾರತಿ' ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಅಪರ್ಣಾ ತಮ್ಮ ಧ್ವನಿ ಮೂಲಕವೇ ದಾಖಲೆಯೊಂದನ್ನು ಬರೆದಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಸತತ ಎಂಟು ಗಂಟೆಗಳ ನಿರೂಪಣೆ ಮಾಡಿ ಅಪರ್ಣಾ ನಿರೂಪಣಾ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದ್ದರು.
'ನನಗೆ ಇವತ್ತಿಗೂ ಹೆಮ್ಮೆ ಏನೆಂದರೆ ಕರ್ನಾಟಕದಲ್ಲಿ ದೂರದರ್ಶನ ಆರಂಭವಾದಗಿನಿಂದಲೂ ಇವತ್ತಿನವರೆಗೂ ದೂರದರ್ಶನ ಜೊತೆಗಿನ ನನ್ನ ನಂಟು ಬಿಗಿಯಾಗಿದೆ. ಹಾಗಾಗಿ ಟೆಲಿವಿಷನ್ ಅಂದರೆ ನನಗೆ ತುಂಬಾ ಅಭಿಮಾನ' ಎಂದು ಅಪರ್ಣಾ ಆಗಾಗ ತಮ್ಮ ಸಂದರ್ಶನಗಳಲ್ಲಿ ಹೇಳಿಕೊಳ್ಳುತ್ತಿದ್ದರು
ಇನ್ನು ನಟಿಯಾಗಿಯೂ ಅಪರ್ಣಾ ಜನರಿಗೆ ಚಿರಪರಿಚಿತ. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆ ಸಮಯದಲ್ಲೇ ಕನ್ನಡದ ಮಟ್ಟಿಗೆ ತುಂಬಾನೇ ಬೋಲ್ಡ್ ಅನಿಸುವ ದೃಶ್ಯದಲ್ಲಿ ಅಪರ್ಣಾ ಕಾಣಿಸಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಪ್ರಬುದ್ಧವಾದ ಪಾತ್ರವೊಂದನ್ನು ಮಾಡಿದ್ದ ಅಪರ್ಣಾ ಅವರನ್ನು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ವೇಶ್ಯಾವಾಟಿಗೆಗೆ ದೂಡಲ್ಪಟ್ಟ ಬಾಲೆಯಾಗಿ ತೆರೆ ಮೇಲೆ ತಂದಿದ್ದರು. ಅಂದಿನಿಂದ ಅಪರ್ಣಾ ಅವರ ನಟನೆಯ ಪ್ರಯಾಣ ಆರಂಭವಾಗಿತ್ತು.
ಬಳಿಕ ಕಿರುತೆರೆಯಲ್ಲಿ 'ಮೂಡಲಮನೆ', 'ಮುಕ್ತ' ಮುಂತಾದ ಧಾರಾವಾಹಿಗಳಲ್ಲಿ ಅಪರ್ಣಾ ನಟಿಸಿದ್ದರು. 2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ನಲ್ಲಿ ಅವರು ಭಾಗವಹಿಸಿದ್ದರು. 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಎಂಬ ಪಾತ್ರವನ್ನು ಮಾಡುವ ಮೂಲಕ ಅಪರ್ಣಾ ಮತ್ತಷ್ಟು ಜನರಿಗೆ ಹತ್ತಿರವಾದರು. ಕೇವಲ ನಿರೂಪಕಿಯಾಗಿ ಮಾತ್ರವಲ್ಲ ಜನರನ್ನು ನಗಿಸುವಲ್ಲಿಯೂ ಅಪರ್ಣಾ ಯಾಶಸ್ವಿಯಾದರು.












Click it and Unblock the Notifications