Anushree: ಎಲ್ಲಾ ಕನಸುಗಳನ್ನು ಕಟ್ಟಿಟ್ಟು, ದುಡಿಮೆಯನ್ನೇ ಕನಸು ಮಾಡಿಕೊಂಡೆ: ನಿರೂಪಣೆಯಲ್ಲಿ ಎರಡು ದಶಕ ಪೂರೈಸಿದ ಅನುಶ್ರೀ ಮಾತು
Anchor Anushree: ಕನ್ನಡ ಟಿವಿ ಲೋಕದಲ್ಲಿ ನಿರಂತರ ಶ್ರಮ ಮತ್ತು ನಿಷ್ಠೆಯಿಂದ ಗುರುತಿಸಿಕೊಂಡಿರುವ ಅನುಶ್ರೀ ಅವರು ಆ್ಯಂಕರಿಂಗ್ ಕ್ಷೇತ್ರದಲ್ಲಿ 20 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ವಿಶೇಷ ಸಂದರ್ಭವನ್ನು ಜೀ ಕನ್ನಡ ವಾಹಿನಿ ತನ್ನ ವೇದಿಕೆಯಲ್ಲಿ ಸಂಭ್ರಮದಿಂದ ಆಚರಿಸಿತು.
ಕಾರ್ಯಕ್ರಮದ ವೇಳೆ ಅನುಶ್ರೀ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳನ್ನು ಸ್ಮರಿಸಿ ಭಾವುಕರಾದರು. ಅವಕಾಶಗಳಿಗಾಗಿ ಹೋರಾಡಬೇಕಾದ ದಿನಗಳು, ಎದುರಿಸಿದ ಸವಾಲುಗಳು ಹಾಗೂ ಆ ಹಂತಗಳನ್ನು ದಾಟಿ ಬಂದ ಅನುಭವಗಳು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಮೂಡಿಬಂದವು. ಅನೇಕ ಅಡಚಣೆಗಳ ನಡುವೆಯೂ ಹಿಂತಿರುಗಿ ನೋಡದೇ ಮುಂದುವರಿದ ಪ್ರಯಾಣವೇ ಇಂದು ಈ ಗೌರವ ತಂದುಕೊಟ್ಟಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅನುಶ್ರೀ, ವೈಯಕ್ತಿಕ ಜೀವನದ ಬದಲಾವಣೆಗಳ ನಡುವೆಯೂ ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಗಮನಸೆಳೆಯಿತು. ಮದುವೆಯಾದ ಕೆಲವೇ ದಿನಗಳಲ್ಲಿ ಮತ್ತೆ ಕೆಲಸಕ್ಕೆ ಹಾಜರಾಗಿ, ಕಾರ್ಯಕ್ರಮ ನಿರ್ವಹಣೆಯಲ್ಲಿ ತೊಡಗಿಸಿಕೊಂಡು ತಮ್ಮ ವೃತ್ತಿಪರತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಅನುಶ್ರೀ ಹೇಳಿದ್ದೇನು?: ಭಾವುಕರಾಗಿ ಮಾತನಾಡಿದ ಅವರು, ನೂರಾರು ಕನಸುಗಳಿತ್ತು. ಎಲ್ಲಾವನ್ನು ಕಟ್ಟಿಟ್ಟು, ದುಡಿಮೆಯನ್ನೇ ಕನಸು ಮಾಡಿಕೊಂಡು ಜೀವನ ಮಾಡಿದಂತಹ ಆ ಅನುಶ್ರೀಗೆ ಧನ್ಯವಾದಗಳು. ನನಗೆ ನಾನೇ ಇದನ್ನು ಹೇಳಿಕೊಳ್ಳಲು ಇಷ್ಟಪಡುತ್ತೇನೆ ಎಂದು ತಮಗೆ ತಾವೇ ಹೇಳಿಕೊಂಡರು. ಅಲ್ಲದೆ, ಸಾಯುವವರೆಗೂ ಜಿ ಕುಟುಂಬಕ್ಕೆ ಚಿರರುಣಿಯಾಗಿರುತ್ತೇನೆ ಎಂದು ಭಾವುಕರಾಗಿ ಹೇಳಿದರು.
ಶುಭಾಶಯಗಳ ಸುರಿಮಳೆ: ಎರಡು ದಶಕಗಳ ಕಾಲ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ಅನುಶ್ರೀ ಅವರ ಈ ಪಯಣ ಅನೇಕ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ. ಜೀ ಕನ್ನಡ ವೇದಿಕೆಯಲ್ಲಿ ನಡೆದ ಈ ಸಂಭ್ರಮವು ಅವರ ಶ್ರಮ, ಸಾಧನೆ ಮತ್ತು ಸಮರ್ಪಣೆಗೆ ಸಾರ್ಥಕ ಗೌರವವಾಗಿತ್ತು. ಇನ್ನೂ ಮಾತಿನ ಮೋಡಿ, ನಿರೂಪಣೆಯ ಚಾತುರ್ಯದಲ್ಲಿ 20 ವರ್ಷಗಳ ಸಾರ್ಥಕ ಜರ್ನಿ ಪೂರೈಸಿದ ಅನುಶ್ರೀಗೆ ಶುಭಾಶಯಗಳ ಸುರಿಮಳೆ ಹರಿದುಬಂದಿವೆ. ವಿವಿಧ ಭಾಷೆಗಳ ಖ್ಯಾತ ನಿರೂಪಕ, ನಿರೂಪಕಿಯರು, ನಟ, ನಟಿಯರು ಶುಭಾಶಯಗಳನ್ನು ತಿಳಿಸಿದ್ದಾರೆ.
ತಮಿಳಿನ ಖ್ಯಾತ ನಿರೂಪಕಿಯರಾದ ಪ್ರಿಯಾಂಕ ಹಾಗೂ ಅರ್ಚನ ಅವರು ಶುಭಹಾರೈಸಿದ್ದಾರೆ. ಈ ಬಗ್ಗೆ ಮಾತನಾಡಿ ನಿರೂಪಕಿ ಅನುಶ್ರಿ ಅವರು, ಅವರು ಕನ್ನಡ ಮಾತನಾಡಿ ನನಗೆ ಶುಭಾಶಯ ತಿಳಿಸಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳುವ ಮೂಲಕ ಅವರ ಭಾಷೆಯಲ್ಲೇ ಅವರಿಗೆ ಧನ್ಯವಾದ ತಿಳಿಸಿ ಗಮನ ಸೆಳೆದಿದ್ದಾರೆ.
ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದ ಅನುಶ್ರೀ: ಕನ್ನಡ ದೂರದರ್ಶನ ಲೋಕದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿಕೊಂಡಿರುವ ನಿರೂಪಕಿ ಅನುಶ್ರೀ, ಕಳೆದ ಎರಡು ದಶಕಗಳಿಂದ ನಿರಂತರವಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ಅನುಶ್ರೀ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ಇಂದು ಕನ್ನಡ ಮನರಂಜನಾ ಕ್ಷೇತ್ರದ ಪ್ರಮುಖ ಮುಖವಾಗಿದ್ದಾರೆ.
ರೇಡಿಯೋ ಜಾಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅನುಶ್ರೀ, ಬಳಿಕ ಟಿವಿ ನಿರೂಪಣೆಯತ್ತ ಮುಖ ಮಾಡಿದರು. ವಿಭಿನ್ನ ರಿಯಾಲಿಟಿ ಶೋಗಳು, ಸಂಗೀತ ಕಾರ್ಯಕ್ರಮಗಳು ಹಾಗೂ ಮನರಂಜನಾ ವೇದಿಕೆಗಳಲ್ಲಿ ತಮ್ಮ ಸಹಜ ಮಾತು ಮತ್ತು ಚುರುಕು ಶೈಲಿಯಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಕಾರ್ಯಕ್ರಮವನ್ನು ಜೀವಂತವಾಗಿ ನಿರ್ವಹಿಸುವ ಅವರ ಶೈಲಿ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದಿದೆ.
ವೃತ್ತಿ ಜೀವನದಲ್ಲಿ ಹಲವು ಏರುಪೇರನ್ನು ಕಂಡರೂ, ಅನುಶ್ರೀ ಎಂದಿಗೂ ಹಿಂಜರಿಯದೆ ಮುಂದುವರೆದರು. ಇತ್ತೀಚೆಗೆ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದರೂ, ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದು ಅನೇಕರಿಗೆ ಪ್ರೇರಣೆಯಾಗಿದೆ. ನಿರಂತರ ಶ್ರಮ, ಧೈರ್ಯ ಮತ್ತು ನಿಷ್ಠೆಯಿಂದ ಅನುಶ್ರೀ ಇಂದು ದೊಟ್ಟಮಟ್ಟದಲ್ಲಿ ಬೆಳೆದು ಪ್ರೇಕ್ಷಕನ ಮನಸು ಗೆದ್ದಿದ್ದಾರೆ ಎಂದು ಹೇಳಬಹುದು.












Click it and Unblock the Notifications