Anupama Gowda: ಪಾತ್ರಕ್ಕಾಗಿ ಪಲ್ಲಂಗ: ನನಗೂ ಕರೆ ಬಂದಿದೆ ಎಂದ ಖ್ಯಾತ ನಟಿ
ಚಿತ್ರರಂಗದಲ್ಲಿ ನಟಿಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ನಿರ್ದೇಶನದ ಮೇರೆಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಪಾಶ್ ಆಂತರಿಕ ಸಮಿತಿಯನ್ನು ರಚಿಸಿದೆ. ಅನೇಕ ದಿನಗಳ ಹೋರಾಟದ ಮೇಲೆ ಈ ಸಮಿತಿ ರಚನೆ ಆಗಿದ್ದು, ಸಮಿತಿ ಉಪಯೋಗ ಎಷ್ಟರ ಮಟ್ಟಿಗೆ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಚಿತ್ರರಂಗದಲ್ಲಿ ಪಾಶ್ ಆಂತರಿಕ ಸಮಿತಿ ರಚನೆ ಆಗಿರುವ ಬಗ್ಗೆ ಅನೇಕ ನಟ-ನಟಿಯರು ಸಂತಸ ವ್ಯಕ್ತಪಡಿಸಿದ್ದು, ಇದೀಗ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತೆ ನಟಿ ಅನುಪಮಾ ಗೌಡ ಮಾತನಾಡಿದ್ದಾರೆ.
ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ ಅವರು, ಪಾಶ್ ಸಮಿತಿ ಖಂಡಿತಾ ಬೇಕೆ ಬೇಕಾಗುತ್ತದೆ. ನಮಗೆ ಏನಾದರೂ ತೊಂದರೆಯಾದರೆ ಹೇಳಿಕೊಳ್ಳಲು ಒಬ್ಬರು ಬೇಕೇ ಬೇಕಲ್ಲ. ಕಾಸ್ಟಿಂಗ್ ಕೌಚ್ ಮಾತ್ರವಲ್ಲ. ಸಿನಿಮಾ ಸೆಟ್‌ನಲ್ಲೇ ಎಷ್ಟು ತೊಂದರೆಗಳಾಗುತ್ತಿರುತ್ತದೆ. ನಮಗೆ ಎಷ್ಟೋ ಸಿನಿಮಾಗಳಲ್ಲಿ ಪೇಮೆಂಟ್ ಆಗಿರಲ್ಲ. ನನಗೆ ಇನ್ನೂ ಎರಡು ಸಿನಿಮಾದ ಪೇಮೆಂಟ್ ಆಗಬೇಕಿದೆ. ಸಿನಿಮಾ ಮಾಡಿ ನಾಲ್ಕು ವರ್ಷ ಆಗಿದೆ. ಇಂತಹ ವಿಚಾರಗಳಿಗೆ ಯಾರ ಹತ್ತಿರ ಹೋಗಿ ಹೇಳಲಿ ಎಂದು ಪ್ರಶ್ನಿಸಿದ್ದಾರೆ.

ನಿರ್ಮಾಪಕರು ಫೋನ್ ಎತ್ತಲ್ಲ. ಹಣ ಬೇಡ ಸಿನಿಮಾ ಯಾವತ್ತು ರಿಲೀಸ್ ಅಂತಾನೂ ಹೇಳಲ್ಲ. ಇದೆಲ್ಲಾ ಸಣ್ಣ ಪುಟ್ಟ ವಿಚಾರಗಳನ್ನು ನಾನು ಹೇಳುತ್ತಿರುವುದು. ಇಂತಹ ವಿಚಾರಗಳನ್ನು ಹೇಳಿಕೊಳ್ಳಲಾದರೂ ಸಮಿತಿ ಬೇಕು. ಈ ವಿಚಾರ ಎರಡು ಮೂರು ದಿನ ತುಂಬಾ ಸದ್ದು ಮಾಡಿತು. ಹೀಗಾಗಿ ಇದು ಬೇಕು ಎನ್ನುವವರು ಬಿಟ್ಟುಬಿಡದೇ ಅದರ ಕಡೆಗೆ ಕೆಲಸ ಮಾಡಬೇಕು.
ಕನ್ನಡ ಚಿತ್ರರಂಗದಲ್ಲಿ ಆ ರೀತಿಯ ಸಮಿತಿ ಮಾಡಿದರೆ ಏನೂ ತಪ್ಪಾಗುವುದಿಲ್ಲ. ದೊಡ್ಡ ದೊಡ್ಡವರಿಗೆ ಎಷ್ಟೋ ವಿಚಾರಗಳು ತಲುಪುವುದೇ ಇಲ್ಲ. ಈ ವಿಚಾರ ತಲುಪಿದಾಗ ಅವರಿಗೂ ಚಿತ್ರರಂಗದಲ್ಲಿ ಏನಾಗುತ್ತದೆ ಎಂದು ಗೊತ್ತಾಗುತ್ತದೆ. ಅವರು ಅದನ್ನು ಸರಿ ಮಾಡಿದರೇ ತಾನೇ ಅದರಿಂದ ನಮ್ಮ ಚಿತ್ರರಂಗವೇ ಬಲಿಷ್ಠವಾಗುದುವು ಬೆಳೆಯುವುದು ಎಂದು ಅನುಪಮಾ ಗೌಡ ಹೇಳಿದ್ದಾರೆ.

ಕಾಸ್ಟಿಂಗ್ ಕೌಚ್ ವಿಚಾರವಾಗಿ ಮಾತನಾಡಿದ ಅವರು, ನನಗೂ ಕರೆ ಬಂದಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವರಿಗೆ ಬಿಟ್ಟಿದ್ದು. ಚಿತ್ರರಂಗದಲ್ಲಿ ಬೆಳೆಯಬೇಕು ಅಂದರೆ ನಾನು ಏನೂ ಬೇಕಾದರೂ ಮಾಡುತ್ತೇನೆ ಎನ್ನುವುದು ಅದು ನನ್ನ ತಪ್ಪು. ಆಯ್ಕೆಗಳು ನಮ್ಮದು. ನನಗೆ ಆ ರೀತಿಯಾಗಿ ಬೆಳೆಯಬೇಕಾಗಿಲ್ಲ. ಜನಪ್ರಿಯತೆ ಎನ್ನುವುದನ್ನು ನಾನು ನಂಬಲ್ಲ. ಅದು ಇದ್ದರೆ ಎಷ್ಟು ದಿನ ಇರಬಹುದು. ಆಮೇಲೆ ಬೇರೆ ಬದುಕು ಕಟ್ಟಿಕೊಳ್ಳಲೇಬೇಕು. ನೈಜತೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.












Click it and Unblock the Notifications