ಅಮೃತಧಾರೆ ನಟಿ ಬಾಳಲ್ಲಿ ಬರಸಿಡಿಲು: 3 ವರ್ಷದ ಮಗನಿಗೆ 3ನೇ ಸ್ಟೇಜ್ ಕ್ಯಾನ್ಸರ್
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶಾಂಭವಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಿಗೂಢರಾತ್ರಿ, ಪಾರು, ಲಕ್ಷ್ಮಿ, ಗೀತಾಂಜಲಿ ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ಇತ್ತೀಚಿಗೆ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಗೌತಮ್ ದಿವಾನ್ ಮಾಜಿ ಪ್ರೇಯಸಿ ಮಾನ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹುತೇಕ ನೆಗೆಟಿವ್ ಶೇಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಾ ಬಿಡುವುಲ್ಲದೇ ನಟಿಸುತ್ತಿದ್ದ ಶಾಂಭವಿ ಕಳೆದ ಕೆಲವು ವರ್ಷಗಳಿಂದ ನಟನೆಗೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು.
ನಟಿ ಶಾಂಭವಿಗೆ ಅವಳಿ ಮಕ್ಕಳಾಗಿದ್ದು, ಇಬ್ಬರ ಆರೈಕೆಗಾಗಿ ಶಾಂಭವಿ ತಮ್ಮೆಲ್ಲಾ ಸಮಯವನ್ನು ಮೀಸಲಿಟ್ಟಿದ್ದರು. ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಶಾಂಭವಿ ಇಬ್ಬರು ಟ್ವಿನ್ಸ್ ಮಕ್ಕಳ ಕ್ಯೂಟ್ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಅದೇ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಬದುಕಿಗೆ ಬಡಿದಿರುವ ಬರ ಸಿಡಿಲಿನ ಬಗ್ಗೆ ನಟಿ ಶಾಂಭವಿ ಹಂಚಿಕೊಂಡಿದ್ದಾರೆ.

ನಟಿ ಶಾಂಭವಿಗೆ ಮೂರು ವರ್ಷದ ದುರ್ಗಾ ಮತ್ತು ದುಶ್ಯಂತ್ ಎನ್ನುವ ಮಕ್ಕಳಿದ್ದು, ಈ ಪೈಕಿ ಗಂಡು ಮಗು ದುಶ್ಯಂತ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ದುಶ್ಯಂತ್‌ನ ಕೂದಲು ಉದುರುವ ಹಾಗೂ ಆತನ ತಲೆ ಬೋಳಿಸುವ ಸಮಯ ಬಂದಿದೆ ಎಂದು ವಿಡಿಯೋ ಮೂಲಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಕೆಲವು ಮಗುವಿನ ಆರೋಗ್ಯದ ಸಮಸ್ಯೆ ಬಗ್ಗೆ ಗೆಸ್ ಮಾಡಿದ್ದರೂ ಕೂಡ ಬಹುತೇಕರಿಗೆ ಯಾಕೆ ಎನ್ನುವುದು ಅರ್ಥವಾಗಿರಲಿಲ್ಲ.
ಹೀಗಾಗಿ ಅನೇಕ ಪ್ರಶ್ನೆಗಳನ್ನು ಅಭಿಮಾನಿಗಳು ಕಮೆಂಟ್ ಮೂಲಕ ನಟಿ ಶಾಂಭವಿಗೆ ಕೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಾಂಭವಿ ಸುಧೀರ್ಘ ಪೋಸ್ಟ್‌ನೊಂದಿಗೆ ಹಾಗೂ ದುಶ್ಯಂತ್‌ನ ಫೋಟೋದೊಂದಿಗೆ ಇರುವ ಅಸಲಿ ವಿಚಾರವನ್ನು ಹಂಚಿಕೊಂಡಿದ್ದಾರೆ.

'ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆಪ್ಟೆಂಬರ್ 23ರಂದು 3 ವರುಷದ ಪುಟಾಣಿ ಕಂದ ದುಷ್ಯುಗೆ ಮೂರನೇ ಸ್ಟೇಜ್ ಬ್ಲಡ್ ಕ್ಯಾನ್ಸರ್ ಇರೋದು ಪತ್ತೆ ಆಯ್ತು. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋ ವರೆಗೆ ಪ್ರತಿ ಕ್ಷಣವೂ ಇದು ಕ್ಯಾನ್ಸರ್ ಆಗಿರದೆ ಇರಲಿ ಅಂತಾ ಪ್ರಾರ್ಥಿಸಿದೆವು. ಆದರೆ ಹಣೆಯಲಿ ಬರೆದಿರೋದನ್ನು ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರಕೆಗಳೆಲ್ಲ ಯಾಕೆ ಅನಿಸುತ್ತದೆ.
ಎನಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದ್ದೇವೆ ಇವಾಗ. ಬೇರೆ ಆಯ್ಕೆ ಆದರೂ ಏನಿದೆ..? ಇದು 95% ಗುಣ ಮುಖವಾಗುತ್ತದೆ ಅಂತಾ ವೈದ್ಯರು ಭರವಸೆ ಕೊಟ್ಟಿದ್ದಾರೆ. ಆದರೆ ಪಾಪಾ ದುಷ್ಯೂಗೆ ತನ್ನ ಜೊತೆ ಏನಾಗ್ತಾ ಇದೆ? ಯಾಕ್ ಆಗ್ತಾ ಇದೆ ಅನ್ನೋ ಅರಿವೇ ಇಲ್ಲ. ಎಷ್ಟೆಲ್ಲ ನೋವು ಅನುಭವಿಸಬೇಕಲ್ಲ ಈ ಕಂದ ಅನ್ನೋದೇ ಸಂಕಟ. 'ನಿನಗ ಹುಷಾರಿಲ್ಲ ಮಗನೇ, ತುಂಬಾ ದೊಡ್ಡ ಟ್ರೀಟ್ಮೆಂಟ್ ತಗೋಬೇಕಿದೆ' ಅಂತಾ ಅರ್ಥ ಮಾಡಿಸೋಕೆ ಪ್ರಯತ್ನ ಪಡುತ್ತಾ ಇರುತ್ತೇನೆ. ಕಿಮಿಯೋ ಥೆರಪಿ ಮೊದಲ ಹಂತ ಮುಗಿದು ಎರಡನೇ ಹಂತ ಶುರುವಾಗಿದೆ. ಸುಮಾರು 40 ದಿನಗಳ ಹಿಂದೆ ಥೆರಪಿಯ ಮೊದಲ ದಿನದಂದು ಕ್ಲಿಕ್ಕಿಸಿದ ಫೋಟೋ ಇದು' ಎಂದು ದುಶ್ಯಂತ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ಶಾಂಭವಿ ಪೋಸ್ಟ್ ಹಾಗೂ ದುಶ್ಯಂತ್ ಫೋಟೋ ಎಂತವರ ಕರಳುಹಿಂಡುವಂತಿದೆ. ನಟಿಯ ಪೋಸ್ಟ್ ನೋಡಿದ ಪ್ರತಿಯೊಬ್ಬರು ಕೂಡ ಮಗುವಿನ ಆರೋಗ್ಯ ಚೇತರಿಕೆಗಾಗಿ ಹಾರೈಸಿದ್ದಾರೆ. ಅಲ್ಲದೇ ಶಾಂಭವಿ ಅವರಿಗೆ ನಿಮ್ಮ ಮಗನಿಗೆ ಏನೂ ಆಗುವುದಿಲ್ಲ ಅವನು ಹುಷಾರಾಗುತ್ತಾನೆ ಎಂದು ಧೈರ್ಯ ತುಂಬುತ್ತಿದ್ದಾರೆ. ಅದೇನೆ ಇರಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ದಿನವು ನೋಡಿ ನಮ್ಮ ಮನೆ ಕಂದನಂತೆ ಆಪ್ತವಾಗಿದ್ದ ಪುಟಾಣಿ ದುಷ್ಯೂ ಆದಷ್ಟು ಬೇಗ ಹುಷಾರಾಗಲಿ ಆ ನಗು ಮತ್ತೆ ನಟಿ ಶಾಂಭವಿ ಮನೆಯಷ್ಟೇ ಅಲ್ಲದೇ ನಮ್ಮೆಲ್ಲರ ಮನಸ್ಸು ತುಂಬಲಿ ಎನ್ನುವುದೇ ಎಲ್ಲರ ಹಾರೈಕೆ.












Click it and Unblock the Notifications