ನಯನಾ ನಾಗರಾಜ್ ಕಿರುತೆರೆಯಿಂದ ಬ್ಯಾನ್ ಆಗಿರೋದು ಯಾರಿಗೂ ಗೊತ್ತಿಲ್ವಾ?
ಒಬ್ಬ ಪ್ರತಿಭಾನ್ವಿತ ನಟಿ ಒಮ್ಮೆ ಕಿರುತೆರೆಗೆ ಪ್ರವೇಶಿಸಿದರೆ ಸಾಕು ಸಾಲು ಸಾಲು ಅವಕಾಶಗಳು ಅವರೆದುರು ತೆರೆದುಕೊಳ್ಳುತ್ತದೆ. ಒಂದು ಧಾರಾವಾಹಿ ಮುಗಿಯುತ್ತಿದ್ದಂತೆ ಮತ್ತೊಂದು ಧಾರಾವಾಹಿಯ ನಟನೆ ಅವರಿಗಾಗಿ ಕಾಯುತ್ತಿರುತ್ತದೆ. ಕೆಲವರಿಗೆ ಇಂತಹ ಸುವರ್ಣಾವಕಾಶಗಳು ಸಿಗುತ್ತದೆ. ಇನ್ನೂ ಕೆಲವರು ಪ್ರತಿಭೆ ಇದ್ದರೂ ಸಹ ದಿಢೀರ್ ತೆರೆಮರೆಗೆ ಸರಿದು ಬಿಡುತ್ತಾರೆ. ಈ ಸಾಲಿಗೆ ಈಗ ನಟಿ ನಯನಾ ನಾಗರಾಜ್ ಕೂಡ ಸೇರಿದ್ದಾರೆ.
ಪಾಪ ಪಾಂಡು ಹಾಗೂ ಗಿಣಿರಾಮದಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದ ನಯನಾ ನಾಗರಾಜ್ ಇತ್ತೀಚಿಗೆ ಯಾವುದೇ ಕಿರುತೆರೆ ಧಾರಾವಾಹಿ ಹಾಗೂ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಗಿಣಿರಾಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ನಯನಾ ನಾಗರಾಜ್ ಯಾಕೆ ಏಕಾಏಕಿ ಕಿರುತೆರೆಯಿಂದ ಕಣ್ಮರೆಯಾದರು ಎನ್ನುವ ಪ್ರಶ್ನೆಗೆ ಇತ್ತೀಚಿಗಷ್ಟೆ ಉತ್ತರ ಸಿಕ್ಕಿತ್ತು.

ತಮಗಾದ ಅನ್ಯಾಯ ವಿರುದ್ಧ ಧ್ವನಿ ಎತ್ತಿದ ಕಾರಣ ನಯನಾ ನಾಗರಾಜ್ ಅವರನ್ನು ಕಳೆದ ವರ್ಷ ಧಾರಾವಾಹಿಗಳಿಂದ ಬ್ಯಾನ್ ಮಾಡಲಾಗಿದೆಯಂತೆ. ಈ ವಿಚಾರವನ್ನು ಸ್ವತಃ ನಯನಾ ನಾಗರಾಜ್ ಇತ್ತೀಚಿಗೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಕನ್ನಡದ ಒಬ್ಬ ಪ್ರತಿಭಾನ್ವಿತ ನಟಿಯನ್ನು ಕಿರುತೆರೆಯಿಂದ ಬ್ಯಾನ್ ಮಾಡಿರುವ ವಿಚಾರ ಅನೇಕರಿಗೆ ತಿಳಿದೇ ಇಲ್ಲ.
ಚಿತ್ರೀಕರಣದ ಸೆಟ್‌ನಲ್ಲಿ ವ್ಯಕ್ತಿಯೊಬ್ಬನ ಕಿರುಕುಳದ ವಿರುದ್ಧ ಮಾತಾಡಿದ್ದಕ್ಕೆ ಧಾರಾವಾಹಿಯಿಂದ ನಯನಾ ನಾಗರಾಜ್ ಅವರನ್ನು ಬ್ಯಾನ್ ಮಾಡಿರುವ ಬಗ್ಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟಿ ಅಕ್ಷತಾ ಪಾಂಡವಪುರ ಪ್ರತಿಕ್ರಿಯಿಸಿದ್ದಾರೆ. ಇಟ್ಸ್ ಮಜಾ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು 'ಈ ವಿಚಾರಕ್ಕೆ ಏನು ಹೇಳಬೇಕು ಎನ್ನುವುದು ಅರ್ಥವಾಗುತ್ತಿಲ್ಲ. ಇದು ನಮ್ಮ ಗಮನಕ್ಕೆ ಬಂದಿಲ್ಲ. ಕವಿತಾ ಲಂಕೇಶ್, ವಿಜಯಮ್ಮ ಎಲ್ಲರೂ ಸೇರಿ ಒಂದು ಸಮಿತಿ ಮಾಡಿದ್ದಾರೆ. ಇಂಡಸ್ಟ್ರಿಯಲ್ಲಿ ಹೆಣ್ಣು ಮಕ್ಕಳಿಗೆ ಈ ರೀತಿಯ ಸಮಸ್ಯೆ ಏನಾದರೂ ಆಗ್ತಾ ಇರೋದು ಗಮನಕ್ಕೆ ಬಂದರೆ ಅವರ ಪರ ಸ್ಟ್ಯಾಂಡ್ ತೆಗೆದುಕೊಳ್ಳಬೇಕು ಎಂಬ ಉದ್ದೇಶದಿಂದ ಸಮಿತಿ ಮಾಡಲಾಗಿದೆ. ಅದು ಕಿರುತೆರೆ ಆದರೂ ಸರಿ ಹಿರಿತೆರೆ ಆದರೂ ಸರಿ. ಆದರೆ ಇದು ಅವರ ಗಮನಕ್ಕೆ ಬಂದಿಲ್ಲ ಅನಿಸುತ್ತದೆ' ಎಂದಿದ್ದಾರೆ.

'ನಯನಾ ತುಂಬಾ ಸುಂದರವಾದ ಹುಡುಗಿ. ನಂಗೆ ತುಂಬಾ ಇಷ್ಟ ಅವರು. ಎರಡು ಸೀರಿಯಲ್‌ನಲ್ಲಿ ಅವರನ್ನು ನೋಡಿದ್ದೀನಿ. ಅವರಿಗೆ ಪ್ರತಿಭೆ ಇದೆ. ಹಾಡುತ್ತಾರೆ, ಡಾನ್ಸ್ ಮಾಡುತ್ತಾರೆ. ಏನೇ ಇದ್ದರೂ ನನ್ನ ಪ್ರತಿಭೆ ನೋಡಿ ಅವಕಾಶ ಕೊಡಲಿ ಎನ್ನುವುದು ಅವರ ಉದ್ದೇಶ. ಹೀಗಿದ್ದಾಗ ಈ ಯಮ್ಮನಿಗೆ ಭಲೇ ಆಟ್ಯಿಟ್ಯೂಡ್ ಅಂತ ಅಂದುಕೊಂಡರೆ. ನಾವು ಕರೆಯದೇ ಇದ್ದರೆ ಇನ್ನು ಯಾರು ಕರೆಯುತ್ತಿದ್ದರು ಅಂತೆಲ್ಲಾ ಅಂದುಕೊಂಡು ಬ್ಯಾನ್ ಮಾಡಿದ್ರೆ. ಬ್ಯಾನ್ ಮಾಡಿರೋದೆಲ್ಲಾ ನಿಜ ನನಗೆ ಗೊತ್ತಿಲ್ಲ. ಇದು ಶುದ್ಧ ತಪ್ಪು. ನಾನು ಇದನ್ನು ಖಂಡಿಸುತ್ತೇನೆ' ಎಂದು ಹೇಳಿದ್ದಾರೆ.
ಇನ್ನು ನಟನೆಗಾಗಿ ಕೆಲವೊಂದು ವಿಚಾರಕ್ಕೆ ರಾಜಿ ಮಾಡಿಕೊಳ್ಳಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಅವರು, 'ನಂಗೆ ಈ ಬಗ್ಗೆ ಅನುಭವ ಆಗಿಲ್ಲ. ನನ್ನ ಯಾರೂ ಕೇಳಿಲ್ಲ. ಬೇಜಾನ್ ಜನ ಈ ಬಗ್ಗೆ ಹೇಳುತ್ತಾರೆ. ಚರ್ಚೆನೂ ಮಾಡುತ್ತಾರೆ. ನಾನು ಹೇಳೋದು ಏನು ಗೊತ್ತಾ, ಅಂಥವೆಲ್ಲ ಚರ್ಚೆ ತನಕ ತರೋದೆ ಅಲ್ಲ. ನಿಮಗೆ ಅವಕಾಶ ಇಲ್ವಾ ಬೇಡ. ಸಮಾಜ ತುಂಬಾ ದೊಡ್ಡದು. ನೀವ್ಯಾಕೆ ರಾಜಿ ಮಾಡಿಕೊಳ್ಳುತ್ತೀರಿ. ನಿಮ್ಮ ಧ್ವನಿ ನೀವೇ ಆಗಬೇಕು. ನಿಮಗೆ ಇಷ್ಟ ಇದ್ದರೆ ಹೋಗಿ. ಇಷ್ಟ ಇದ್ದು ಹೋಗೋದು ತಪ್ಪಲ್ಲ. ಆದರೆ ಬಂದು ನಂಗೆ ಹೀಂಗಾಯ್ತು ಹಂಗಾಯ್ತು, ಅವಕಾಶ ತಗೆದುಕೊಂಡು ಮೇಲೆ ಹೋಗಿ ಆಮೇಲೆ ಮಾತಾಡಿದರೆ ನಾನು ಒಪ್ಪಲ್ಲ. ಸಮಯ ಬಂದಾಗ ರಿವೇಂಜ್ ತಗೆದುಕೊಳ್ಳುತ್ತೇನೆ ಎನ್ನುವುದು ತಪ್ಪು. ನಿಮಗೆ ಏನಾದರೂ ಆಗುತ್ತೀದ್ದೀಯಾ ಅಲ್ಲೇ ಖಂಡಿಸಿ ಬನ್ನಿ' ಎಂದು ಸಲಹೆ ನೀಡಿದ್ದಾರೆ.

'ನಿಮ್ಮ ಧ್ವನಿ ನೀವೇ ಆಗಬೇಕು. ನಿಮಗೆ ಏನು ಸರಿ ಅನಿಸುತ್ತದೆ ಅದನ್ನು ನೀವು ಮಾಡಬೇಕು. ಯಾಂಕೆಂದರೆ ಒಬ್ಬ ಹೆಣ್ಣು ಮಗಳು ಕಾಣಿಸುವಂತೆ ಕೆಲಸ ಮಾಡುತ್ತಿದ್ದರೂ ಕೂಡ ಹಿಂದೆ ಗಂಡಸರೇ ಕೆಲಸ ಮಾಡಿಸುತ್ತಿರುತ್ತಾರೆ. ಹೀಗಿರುವಾಗ ಕೆಲವೊಮ್ಮೆ ಅವರು ಹೇಳಿದ್ದನ್ನು ಕೇಳಬೇಕಾದ ಪರಿಸ್ಥಿತಿಗೂ ಸಿಲುಕಿ ಹಾಕಿಕೊಂಡು ಬಿಡುತ್ತಾರೆ. ಆ ರೀತಿನೂ ಇರುತ್ತದೆ. ಯಾರು ಅವರ ಪ್ರತಿಭೆಯನ್ನೇ ನಂಬಿಕೊಂಡು ಬಂದಿರುತ್ತಾರಲ್ಲ ಅವರು ಖಂಡಿತಾ ಮಾತನಾಡುತ್ತಾರೆ' ಎಂದರು.
ಕಿರುತೆರೆಯಿಂದ ಬ್ಯಾನ್ ಆದ ಬಗ್ಗೆ ನಯನಾ ನಾಗರಾಜ್ ಹೇಳಿದ್ದೇನು?
ಪಾಪ ಪಾಂಡು ಬಳಿಕ ನಯನಾ ನಾಗರಾಜ್ ಗಿಣಿರಾಮ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ತಾವು ನಟಿಸುತ್ತಿದ್ದ ಧಾರಾವಾಹಿ ತಂಡದಲ್ಲಿ ವ್ಯಕ್ತಿಯೊಬ್ಬನಿ೦ದ ಮಾನಸಿಕ ಹಿಂಸೆಯಾಗುತ್ತಿತ್ತು. ಆತನ ಕಮೆಂಟ್‌ಗೆ ಎದುರೇಟು ಕೊಟ್ಟಿದ್ದಕ್ಕೆ ಆತ ಒಂದು ವರ್ಷ ನನ್ನ ಬದುಕನ್ನು ನರಕ ಮಾಡಿದ. ಹೀಗಾಗಿ ಆತನ ಮೇಲೆ ವಾಹಿನಿಗೆ ದೂರು ನೀಡಿದೆ. ಇದರಿಂದ ಹಿಂಸೆ ಇನ್ನಷ್ಟು ಜಾಸ್ತಿ ಆಯ್ತು. ಬಳಿಕ ಧಾರಾವಾಹಿ ಬಿಡುವ ನಿರ್ಧಾರ ಮಾಡಿದೆ. ಕೊನೆಗೆ ಧಾರಾವಾಹಿ ಕಥೆ ಅಂತ್ಯಗೊಳಿಸಲಾಯಿತು. ಇದರಿಂದ ತಮ್ಮ ಧಾರಾವಾಹಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತು ಎಂದು ಆರೋಪಿಸಿ ನನ್ನ ವಿರುದ್ಧ ದೂರು ನೀಡಿದರು. ಇದೇ ಕಾರಣದಿಂದ ನಾನು ಧಾರಾವಾಹಿ ಮಾಡದಂತೆ ನಿಷೇಧ ವಿಧಿಸಲಾಯಿತು ಎಂದು ನಟಿ ನಯನಾ ಹೇಳಿಕೊಂಡಿದ್ದರು.
ಇನ್ನು ಕೊರೊನಾ ಸಮಯದಲ್ಲಿಯೂ ನಟಿ ನಯನಾ ನಾಗರಾಜ್ ಗಿಣಿರಾಮ ಧಾರಾವಾಹಿ ತಂಡದ ಒಬ್ಬ ವ್ಯಕ್ತಿಯಿಂದ ಕಿರುಕುಳ ಅನುಭವಿಸಿದ್ದು, ನಟಿ ಡಿಪ್ರೆಷನ್‌ಗೆ ಹೋಗಿದ್ದಂತೆ. ಇನ್ನು ಧಾರಾವಾಹಿ ಶೂಟಿಂಗ್ ಇದೆ ಅಂತಾ ಕರೆ ಬಂದಾಗ ಪ್ರತಿ ದಿನ ಅಳುವ ಪರಿಸ್ಥಿತಿಯನ್ನು ಎದುರಿಸಿದ ನಯನಾ ಕೊನೆಗೆ ಧಾರಾವಾಹಿ ಬಿಡುವ ನಿರ್ಧಾರಕ್ಕೆ ಬಂದು ಕೊನೆಗೆ ತನ್ನ ಪಾತ್ರವನ್ನು ಸಂಪೂರ್ಣವಾಗಿ ಮುಗಿಸಿ ಧಾರಾವಾಹಿಯಿಂದ ಹೊರಬಂದರು. ಇನ್ನು ನಯನಾ ನಾಗರಾಜ್ ಧಾರಾವಾಹಿಯಿಂದ ಹೊರ ಬರುತ್ತಿದ್ದಂತೆ ಗಿಣಿರಾಮ ಕೂಡ ಅಂತ್ಯವಾಗಿತ್ತು. ಪ್ರೇಕ್ಷಕರ ಮೆಚ್ಚಿನ ಧಾರಾವಾಹಿ ವೇಗವಾಗಿ ಕಥೆ ಮುಗಿಸಿ ಅಂತ್ಯಗೊಂಡಿದ್ದೇಕೆ ಎನ್ನುವುದಕ್ಕೆ ವರ್ಷಗಳು ಕಳೆದ ಮೇಲೆ ಕೊನೆಗೂ ಉತ್ತರ ಸಿಕ್ಕಿದೆ.












Click it and Unblock the Notifications