'ಕೆಲವೊಂದು ಸಲ ಎಲ್ಲಾ ನಮ್ಮ ಕಂಟ್ರೋಲ್ ತಪ್ಪಿ ಹೋಗುತ್ತಲ್ಲ': Metoo ಬಗ್ಗೆ ಮಾತನಾಡಿದ ಶ್ರುತಿ ಹರಿಹರನ್
ದಕ್ಷಿಣದ ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮೀಟೂ (Metoo) ಆರೋಪ ಮಾಡಿದ್ದರು. ಈ ಪ್ರಕರಣ ಕನ್ನಡ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಪ್ರಕರಣ ನಡೆದು ಹಲವು ವರ್ಷಗಳಾಗಿದ್ದು, ಇದೀಗ ನಟಿ ಶ್ರುತಿ ಹರಿಹರನ್ ಆ ಸಮಯದಲ್ಲಿ ಏನಾಯ್ತು..ಘಟನೆಯಿಂದ ಏನು ಬದಲಾಯಿತು ಎನ್ನುವುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ರ‍್ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಮಾತನಾಡಿರುವ ನಟಿ ಶ್ರುತಿ ಹರಿಹರನ್, ಮೀಟೂನಲ್ಲಿ ನನ್ನ ಕಥೆಯನ್ನು ಹೇಳೋದಕ್ಕೆ ನನಗೆ ಧೈರ್ಯ ಇತ್ತು ಎಂದು ಹೇಳಲು ನನಗೆ ಬಹಳ ಹೆಮ್ಮೆ ಇದೆ. ಗೌರವ ಇದೆ. ಅದನ್ನು ನಾನು ಯಾರಿಗೂ ಸಾಬೀತು ಪಡಿಸುವ ಅವಶ್ಯಕತೆ ಇಲ್ಲ. ಅದನ್ನು ಸಮರ್ಥನೆ ಮಾಡುವ ಅವಶ್ಯಕತೆ ಇಲ್ಲ. ಮೀಟೂ ನಮಗೆ ಏನು ಬೇಕೋ ಅದನ್ನು ಹೇಳಿಕೊಳ್ಳುವ ವೇದಿಕೆ. ನಮ್ಮ ನಿಜ, ನಮ್ಮ ಅನಿಸಿಕೆಗಳನ್ನು ನಾವು ಹೇಳಿಕೊಳ್ಳುತ್ತೇವೆ. ಇದು ಅದೇ ರೀತಿಯ ಅಭಿಯಾನವಾಗಿತ್ತು ಎಂದರು.

ನನ್ನ ಪ್ರಕಾರ ಈ ವೇದಿಕೆ ಮುಖ್ಯವಾಗಿದ್ದು ಕೂಡ. ಯಾಕೆಂದರೆ ಒಬ್ಬರಿಗೆ ತಪ್ಪು ಮಾಡಿದ್ದಾರೆ ಅಂತಾ ನಾವು ಹೇಳಲಿಲ್ಲ ಅಂದರೆ ಅದನ್ನು ಬದಿಗಿಡುತ್ತಾರೆ. ಆದರೆ ಅದನ್ನು ಸಾರ್ವಜನಿಕವಾಗಿ ಹೇಳುವುದು ಇದೆಯಲ್ಲಾ. ಅದರಲ್ಲೂ ಇಬ್ಬರೂ ಜನರಿಗೆ ಗೊತ್ತಿರುವವರಾದಾಗ ಎಲ್ಲಾ ಬದಲಾಗುತ್ತದೆ. ಚಿತ್ರರಂಗದಲ್ಲಿಯೂ ಅದೇ ಆಯ್ತು.
ಮೀಟೂ ಅಭಿಯಾನ ಚಿತ್ರರಂಗಕ್ಕೆ ಬಂದಾಗ ಚಿಕ್ಕ ಚಿಕ್ಕ ಸಣ್ಣ ಸಣ್ಣ ಕಥೆಗಳು ಕೂಡ ದೊಡ್ಡದಾಯಿತು. ನಾನು ಹಿಂತಿರುಗಿ ನೋಡಿದಾಗ ನನಗೆ ಅನಿಸೋದು ಇದನ್ನು ಸ್ವಲ್ಪ ಬೇರೆ ರೀತಿಯಾಗಿ ಹ್ಯಾಂಡಲ್ ಮಾಡಬಹುದಿತ್ತಾ ಅಂತಾ. ಯಾಕೆಂದರೆ ಕೆಲವೊಂದು ಸಲ ನಮ್ಮ ಕೈಯಿಂದ ಕಂಟ್ರೋಲ್ ತಪ್ಪಿ ಹೋಗುತ್ತಲ್ಲ. ಅಂದ್ರೆ ಏನು ಆಗುತ್ತಿದ್ದೆ ಅಂತಾನೂ ಗೊತ್ತಾಗಲ್ಲ ಹಾಗಾಗುತ್ತದೆ ಎಂದು ಹೇಳಿದರು.
ನಾನು ಹೇಳಿಕೊಂಡ ಸಮಯದಲ್ಲೂ ಕೂಡ ಕೆಲವರು ಕನ್ನಡ ಚಿತ್ರರಂಗ ಸೇಫ್ ಅಂದುಕೊಳ್ಳುತ್ತಿದ್ದರು. ಆದರೆ ಇದು ಚಿತ್ರರಂಗದ ವಿಚಾರ ಅಲ್ಲ..ವೈಯಕ್ತಿಕ ವಿಚಾರ. ಅದೊಂದು ದೊಡ್ಡ ಕಥೆ. ಆದರೆ ಕೊನೆಯಲ್ಲಿ ಹಿಂದೆ ತಿರುಗಿ ನೋಡಿದಾಗ ನನ್ನ ಮೇಲೆ ನನಗೆ ಹೆಮ್ಮೆ ಇದೆ. ನಾನು ಇದನ್ನು ಮಾಡಿರಲಿಲ್ಲ ಒಂದು ರೀತಿಯ ಬದಲಾವಣೆ ಆಗುತ್ತಿರಲಿಲ್ಲ. ಅಂದರೆ ಇವತ್ತು ನಮ್ಮ ಚಿತ್ರರಂಗದಲ್ಲಿ ಆದ ಬದಲಾವಣೆಯನ್ನು ಖಂಡಿತಾ ನಾನು ನೋಡುತ್ತಿದ್ದೇನೆ.

ತುಂಬಾ ಜನ ನಟಿಯರ ಜೊತೆ ಇದರ ಬಗ್ಗೆ ಮಾತನಾಡಿದ್ದೀನಿ. ಏನು ಬದಲಾವಣೆ ಆಗಿದೆ ಅಂದರೆ ಕೆಲವರು ಹೆಣ್ಣು ಮಕ್ಕಳ ಜೊತೆ ವರ್ತಿಸುವ ಮೊದಲು ಯೋಚನೆ ಮಾಡುತ್ತಾರೆ. ಮೀಟೂ ಅಂತಾ ತಮಾಷೆ ಮಾಡಿಕೊಂಡು ಹೋದರು ಸರಿ.. ಆದರೆ ಇದು ಸರಿನಾ ಎನ್ನುವ ಆ ಚಿಕ್ಕ ಹೆದರಿಕೆ ಇದೆಯಲ್ಲಾ ಅದು ಬಹಳ ಮುಖ್ಯ. ಇದು ಒಂದು ಬದಲಾವಣೆಯ ಆರಂಭ. ಈಗ ಯಾವುದೇ ಭಯ ಇಲ್ಲ. ಸತ್ಯ ಹೇಳಲು ಯಾಕೆ ಹೆದರಬೇಕು. ನಿನ್ನ ಸತ್ಯ ಹೇಳಿಕೊಳ್ಳಲು ನಿನಗೆ ಯಾಕೆ ಹೆದರಿಕೆ' ಎಂದು ಕೇಳಿದ್ದಾರೆ.












Click it and Unblock the Notifications