ಆ ತೃಪ್ತಿಗಾಗಿ ನಾನು ಮದುವೆ ಆಗಲೇಬೇಕು ಅಂತೇನಿಲ್ಲ: ನಟಿ ಶ್ರುತಿ ಹಾಸನ್ ಶಾಕಿಂಗ್ ನಿರ್ಧಾರ
ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಹಾಗೂ ನಟಿ ಶ್ರುತಿ ಹಾಸನ್ ಅವರು ಸಖತ್ ಬೋಲ್ಡ್ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಾರೆ. ತಮಿಳು, ತೆಲುಗು, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಅವರು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ʼಸಲಾರ್ʼ ಸಿನಿಮಾದಲ್ಲೂ ಮಿಂಚಿದ್ದಾರೆ. ಟಾಪ್ ನಟಿಯರ ಸಾಲಿನಲ್ಲಿರುವ ಶ್ರುತಿ ಹಾಸನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇತ್ತೀಚೆಗೆ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ತನ್ನ ದೀರ್ಘಕಾಲದ ಗೆಳೆಯನೊಂದಿಗೆ ಬ್ರೇಕಪ್ ಆಗಿದ್ದು, ಹಾಗೂ ಮುಂದೆ ಮದುವೆ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಶ್ರುತಿ ಅವರು ತನ್ನ ದೀರ್ಘಕಾಲದ ಗೆಳೆಯ ಶಾಂತನು ಜೊತೆಗಿನ ಸಂಬಂಧ ಮುರಿದುಬಿದ್ದಿರುವುದನ್ನು ದೃಢಪಡಿಸಿದ್ದರು. ಈಗ ಅವರು ಇನ್ನೂ ಒಂಟಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಶ್ರುತಿ ಹಾಸನ್ ವಿವಾಹದ ಹಂತದವರೆಗೆ ಹೋಗಿದ್ದರು ಎಂದಿದ್ದಾರೆ. ಆದರೆ ತಮ್ಮ ವೈಯಕ್ತಿಕ ನಿರ್ಧಾರಗಳು ಮತ್ತು ಇಲ್ಲಿವರೆಗೆ ಮದುವೆ ಆಗದಿರಲು ಕಾರಣಗಳನ್ನೂ ಅವರು ಬಿಚ್ಚಿಟ್ಟಿದ್ದಾರೆ. 'ನಾನು ಒಬ್ಬಳು ಸ್ವಂತ ವ್ಯಕ್ತಿಯಾಗಲು ನನ್ನ ಜೀವನದುದ್ದಕ್ಕೂ ಶ್ರಮಿಸಿದ್ದೇನೆ. ಆ ಗುರುತನ್ನು ಒಂದು ಕಾಗದದ ತುಂಡಿಗೆ ಕಟ್ಟುವ ಆಲೋಚನೆಯೇ ನನಗೆ ಭಯ ಹುಟ್ಟಿಸುತ್ತದೆ' ಎಂದಿದ್ದಾರೆ.

'ನಾನು ಎಂದಿಗೂ ಮದುವೆಯಾಗಬಾರದು ಎಂಬ ನಿರ್ಧಾರ ಮಾಡಿದ್ದೇನೆ. ವಿವಾಹದ ಕಲ್ಪನೆ ನನಗೆ ಭಯವನ್ನುಂಟುಮಾಡುತ್ತದೆ. ನಾನು ಅದರಲ್ಲಿ ಪ್ರವೇಶಿಸಲು ಎಂದಿಗೂ ಇಚ್ಛಿಸುವುದಿಲ್ಲ ಎಂದಿದ್ದಾರೆ ಶ್ರುತಿ. ಮದುವೆ ಉದ್ದೇಶಿಸಿರುವ ಮೌಲ್ಯಗಳನ್ನು ನಾನು ಸಂಪೂರ್ಣವಾಗಿ ಅಳವಡಿಸಿಕೊಳ್ಳುತ್ತೇನೆ. ಆದರೆ ಅವುಗಳನ್ನು ಮೌಲ್ಯೀಕರಿಸಲು ನನಗೆ ಕಾನೂನು ದಾಖಲೆಯ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
ಮದುವೆ ಅಂದ್ರೆ ಭಯ!
'ಶ್ರುತಿ ಹಾಸನ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಾವು ಮದುವೆ ಹಂತದವರೆಗೆ ಹೋಗಿದ್ದರೂ, ಅಂತಿಮವಾಗಿ ಆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ. ಪ್ರೀತಿ, ನಿಷ್ಠೆ ಮತ್ತು ಬದ್ಧತೆಯಲ್ಲಿ ನಂಬಿಕೆ ಇಡುತ್ತೇನೆ. ಮದುವೆ ಎನ್ನುವ ಕಲ್ಪನೆಯೇ ಇಷ್ಟವಾಗುತ್ತಿಲ್ಲ. ಮದುವೆ ಎಂಬ ಕಲ್ಪನೆಯ ಬಗ್ಗೆ ನನಗೆ ನಿಜಕ್ಕೂ ಭಯ ಇದೆ ಎಂದಿದ್ದಾರೆ. ಮದುವೆಯು ಪ್ರತಿನಿಧಿಸಬೇಕಾದ ಎಲ್ಲ ಸುಂದರವಾದ ವಿಷಯಗಳನ್ನು ನಾನು ನಂಬುತ್ತೇನೆ. ಅದನ್ನು ನಾನೇ ಮಾಡಬಹುದು. ನನಗೆ ಕಾಗದದ ತುಂಡಿನ ಅಗತ್ಯವಿಲ್ಲ' ಎಂದು ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ನಿರಾಕರಿಸಿದ್ದಾರೆ.

'ನನ್ನ ಜೀವನದಾದ್ಯಂತ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಬಹಳಷ್ಟು ಶ್ರಮಪಟ್ಟಿದ್ದೇನೆ. ಸ್ವಾತಂತ್ರ್ಯ ಮತ್ತು ವೈಯಕ್ತಿಕತೆ ತುಂಬಾ ಮುಖ್ಯ. ಈ ನಿರ್ಧಾರದಲ್ಲಿ ಪಶ್ಚಾತ್ತಾಪವಿಲ್ಲ. ನಾನು ನನಗೆ ಬೇಕಾದ ಜೀವನವನ್ನು ಕಟ್ಟಿಕೊಂಡಿರುವುದಕ್ಕೆ ಸಂತೋಷವಿದೆ. ಸಂಬಂಧಗಳಿಗೆ ಮಹತ್ವ ಕೊಡುತ್ತೇನೆ. ಆದರೆ ಸಂತೋಷ ಅಥವಾ ತೃಪ್ತಿಗೆ ವಿವಾಹ ಅವಶ್ಯಕವಿಲ್ಲ' ಎಂದು ಶ್ರುತಿ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
ಶ್ರುತಿ ಹಾಸನ್ ಅವರ ಪ್ರಾಮಾಣಿಕ ಅಭಿಪ್ರಾಯ ಅವರ ಅಭಿಮಾನಿಗಳಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಅವರು ತಮ್ಮ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು ವಿವಾಹವನ್ನು ದೂರವಿಟ್ಟಿದ್ದಾರೆ. ತಮ್ಮ ಜೀವನವನ್ನು ತಮ್ಮ ರೀತಿಯಲ್ಲಿ ನಡೆಸಿಕೊಳ್ಳಲು ಅವರು ಹೆಮ್ಮೆಪಡುತ್ತಾರೆ ಎಂದು ಅವರ ನಿರ್ಧಾರವನ್ನು ಮೆಚ್ಚಿದ್ದಾರೆ.











Click it and Unblock the Notifications