ಕನ್ನಡ ಚಿತ್ರರಂಗದಿಂದ ಸಪೋರ್ಟ್ ಸಿಗಲಿಲ್ಲ, ಕಷ್ಟದಲ್ಲಿ ಯಾರೂ ಬರಲಿಲ್ಲ: ಕಣ್ಣೀರಿಟ್ಟ ರಾಗಿಣಿ ದ್ವಿವೇದಿ
ನಟಿ ರಾಗಿಣಿ ದ್ವಿವೇದಿ ಕನ್ನಡದ ತುಪ್ಪದ ಬೆಡಗಿ ಎಂದೇ ಹೆಸರುವಾಸಿ. ಇವರು ಮೂಲತಃ ಕನ್ನಡದವರಲ್ಲ, ಆದರೂ ಕನ್ನಡವನ್ನು ಸೊಗಸಾಗಿ ಕಲಿತು ಕನ್ನಡತಿಯಾಗಿ, ಸ್ಯಾಂಡಲ್‌ವುಡ್‌ನ ನಟಿಯರ ಸಾಲಿನಲ್ಲಿ ಗಟ್ಟಿಯಾಗಿ ನಿಂತರು. ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಾಗಿಣಿ, ಇಂದಿಗೂ ಬೇಡಿಕೆಯಲ್ಲಿರುವ ನಟಿ. ಇಂದಿಗೆ ರಾಗಿಣಿ ಸಿನಿಮಾರಂಗದಲ್ಲಿ 15 ವರ್ಷಗಳನ್ನು ಪೂರೈಸಿರುವ ಸಂಭ್ರಮದಲ್ಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಮಾತನಾಡುವಾಗ, 'ಕನ್ನಡ ಚಿತ್ರರಂಗದ ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ, ನನ್ನ ಕಷ್ಟದ ಸಮಯದಲ್ಲಿ ಯಾರೂ ಬರಲಿಲ್ಲ' ಎಂದು ವೇದಿಕೆಯಲ್ಲೇ ರಾಗಿಣಿ ಗಳಗಳನೆ ಅತ್ತಿದ್ದಾರೆ.
'ನಿಜವಾಗಿಯೂ ಸುಲಭ ಇರಲಿಲ್ಲ, ಇಲ್ಲಿ ಒಳ್ಳೆಯ ದಿನಗಳಿತ್ತು, ಕೆಟ್ಟ ದಿನಗಳಿತ್ತು. ಆ ಕಷ್ಟದ ಸಮಯದಲ್ಲಿ ನನಗೆ ಯಾರೂ ಇರಲಿಲ್ಲ. ಎಲ್ಲರಿಗೂ ಗೊತ್ತಿರುವಂತೆ ನಾನು ತುಂಬಾ ಕಷ್ಟದ ಸಮಯ ನೋಡಿಕೊಂಡು ಬಂದೆ. ಹೀಗಾಗಿ ನಾನು ಹೆಚ್ಚಾಗಿ ನೆಗೆಟಿವ್‌ಗಿಂತ ಪಾಸಿಟಿವ್ ವಿಚಾರಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತೇನೆ. ನಮ್ಮ ಜೀವನದಲ್ಲಿ ನೆಗೆಟಿವ್‌ಗಳನ್ನ ಒಪ್ಪಿಕೊಂಡು ಹೋದಷ್ಟು ಮುಖ್ಯವಾಗುತ್ತೆ. ನಿಜ ಹೇಳಬೇಕು ಅಂದ್ರೆ ಆ ಕಷ್ಟದ ಸಮಯದಲ್ಲಿ ಯಾರೂ ಇರಲಿಲ್ಲ. ಒಳ್ಳೆಯ ಸಮಯದಲ್ಲಿ ಎಲ್ಲರೂ ಇರ್ತಾರೆ' ಎಂದು ಬೇಸರ ಹೊರಹಾಕಿದ್ದಾರೆ.

'ನನ್ನ ಈ ಪಯಣದಿಂದ ನಾನು ಹೇಳಬಹುದು ಅಂದ್ರೆ, ನಾನು ಕಷ್ಟದ ಸಮಯದಲ್ಲಿ ಎಲ್ಲರಿಗೂ ಆಗ್ತಿದ್ದೆ. ಆದರೆ ನನಗೆ ಅಂತ ಯಾರೂ ಇರಲಿಲ್ಲ. ಆದರೆ ನನಗೆ ಜನರೇ ಶಕ್ತಿ ನೀಡಿ ಮುಂದೆ ನಡೆಸಿದರು ಎಂದು ರಾಗಿಣಿ ದ್ವಿವೇದಿ ವೇದಿಕೆಯಲ್ಲೇ ಕಣ್ಣೀರಿಟ್ಟಿದ್ದಾರೆ. ನನಗೆ ಯಾಕೆ ಇಷ್ಟು ಅಳು ಬಂತು ಅಂದ್ರೆ, ಜೀವನದಲ್ಲಿ ನಮ್ಮ ಶಕ್ತಿ ತೋರಿಸುವುದು ಎಷ್ಟು ಮುಖ್ಯವೋ? ಬಲಹೀನತೆ ತೋರಿಸುವುದು ಕೂಡ ಅಷ್ಟೇ ಮುಖ್ಯವಾಗುತ್ತೆ. ನಾವು ಎರಡನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ದುರ್ಬಲರಾದರೂ, ಒಳ್ಳೆಯ ಹಾಗೂ ಕೆಟ್ಟ ದಿನವಾದರೂ ಒಪ್ಪಿಕೊಳ್ಳಬೇಕು' ಎಂದಿದ್ದಾರೆ.
'ಬೇರೆ ಚಿತ್ರರಂಗದಲ್ಲಿ ಸಿಕ್ಕ ಪ್ರೀತಿ ಇಲ್ಲಿಲ್ಲ'
'ಜೀವನದಲ್ಲಿ ನೀವು ಏನಾದರೂ ಮಾಡಬೇಕು ಅಂದುಕೊಂಡಿದ್ದರೆ, ಒಳ್ಳೆಯ ದಿನವೂ ಇರುತ್ತೆ, ಕಷ್ಟಗಳೂ ಇರುತ್ತೆ, ಎಲ್ಲವನ್ನೂ ದಾಟಿಕೊಂಡು ಮುಂದೆ ಹೋಗಬೇಕಾಗುತ್ತೆ. ಯಾವ ಕಾರಣಕ್ಕೂ ಬಿಟ್ಟುಕೊಡಬಾರದು. ಕನ್ನಡ ಇಂಡಸ್ಟ್ರಿ ನನ್ನ ಪ್ರಾಣ ಹಾಗೂ ಮನೆ ಇದ್ದಂತೆ, ಆದರೆ ಬೇರೆ ಚಿತ್ರರಂಗಗಳಿಂದ ಸಿಕ್ಕ ಪ್ರೀತಿ ಹಾಗೂ ಬೆಂಬಲ ಕನ್ನಡ ಚಿತ್ರರಂಗದಿಂದ ಸಿಗಲಿಲ್ಲ. ಇವತ್ತಿಗೂ ನಾನು ಬೇರೆ ಚಿತ್ರರಂಗಗಳಿಗೆ ಹೋದರೆ ನನ್ನನ್ನು ಸ್ಯಾಂಡಲ್‌ವುಡ್ ನಟಿಯಾಗಿ, ಕನ್ನಡತಿಯಾಗಿ ಚಿತ್ರರಂಗವನ್ನು ಪ್ರತಿನಿಧಿಸುತ್ತೇನೆ. ಬೇರೆಯವರು ನನಗೆ ಹೆಚ್ಚು ಪ್ರೀತಿ ಕೊಡ್ತಾರೆ, ಸಪೋರ್ಟ್ ಮಾಡ್ತಾರೆ. ಇಲ್ಲಿಯವರು ನನಗೆ ಆ ಸಪೋರ್ಟ್ ಕೊಡಲಿಲ್ಲ' ಎಂದು ವೇದಿಕೆಯಲ್ಲೇ ಬಿಕ್ಕಳಿಸಿ ಅತ್ತಿದ್ದಾರೆ ರಾಗಿಣಿ.

'ಏನೇ ಆಗಲಿ, ಈ ಚಿತ್ರರಂಗ ನನ್ನ ಮನೆ. ನಾನು ನಿರಂತರವಾಗಿ ಕನ್ನಡ ಸಿನಿಮಾಗಳನ್ನೇ ಪ್ರೀತಿಸಿ, ಪ್ರಮೋಟ್ ಮಾಡ್ತೀನಿ. ಅದನ್ನ ನಾನು ಎಂದಿಗೂ ಬಿಡೋದಿಲ್ಲ. ಇಲ್ಲಿ ಯಾರೇ ಬಂದರೂ, ಬರಲಿಲ್ಲ ಅಂದ್ರೂ ನಮಗಾಗಿ ನಾವೇ ನಿಲ್ಲಬೇಕಾಗುತ್ತೆ. ಇದು ನನ್ನ ಹಠ' ಎಂದು ರಾಗಿಣಿ ಹೇಳಿದ್ದಾರೆ.
ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿದ್ದ ರಾಗಿಣಿ
ಸ್ಯಾಂಡಲ್‌ವುಡ್‌ನ ಡ್ರಗ್ಸ್ ಕೇಸ್ ಆರೋಪದಲ್ಲಿ ನಟಿ ರಾಗಿಣಿ ಜೈಲು ಸೇರಿದ್ದರು. ಬಳಿಕ ಜಾಮೀನು ಮೇಲೆ ಹೊರಬಂದಿದ್ದರು. ಇತ್ತೀಚೆಗಷ್ಟೇ ಈ ಪ್ರಕರಣದಲ್ಲಿ ರಾಗಿಣಿ ನಿರ್ದೋಷಿ ಎಂಬ ತೀರ್ಪು ಬಂದಿತ್ತು. ಆದರೆ ಈ ಪ್ರಕರಣದಿಂದ ಅವರ ಸಿನಿಮಾ ವೃತ್ತಿಗೂ ತೊಡಕಾಗಿದ್ದು ಸುಳ್ಳಲ್ಲ. ಈ ಎಲ್ಲ ಏಳುಬೀಳುಗಳನ್ನು ಕಂಡಿರುವ ಅವರು, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಒಂದೂವರೆ ದಶಕ ಪೂರೈಸಿರುವ ಅವರು ಆ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.












Click it and Unblock the Notifications