ಸಿನಿಮಾ ಕೆರಿಯರ್ ಬಗ್ಗೆ ನಟಿ ರಾಧಿಕಾ ಶಾಕಿಂಗ್ ಹೇಳಿಕೆ
ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಅವರು ನಟಿಸಿರುವ ಭೈರಾದೇವಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ನಡುವೆಯೇ ಅವರು ತಮ್ಮ ಸಿನಿಮಾ ಕೆರಿಯರ್ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಡುವ ಮೂಲಕ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದ್ದಾರೆ. ಈ ಸಿನಿಮಾ ಪ್ರಮೋಷನ್ ವೇಳೆಯೇ ನಟಿ ರಾಧಿಕಾ ಸಿನಿಮಾ ರಂಗ ತೊರೆಯುವ ಬಗ್ಗೆ ಮಾತನಾಡಿದ್ದಾರೆ.
ನಿನ್ನೆ ಭೈರಾದೇವಿ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಅವರು ಸಿನಿಮಾದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ದೀಢೀರನೆ ಚಿತ್ರರಂಗ ತೊರೆಯುವ ಮಾತನ್ನಾಡಿದರು. ಇದಕ್ಕೆ ಅಲ್ಲಿದ್ದವರೆಲ್ಲ ಒಂದು ಕ್ಷಣ ಶಾಕ್ ಕೂಡ ಆದರು. ಇದಕ್ಕೆ ಅಸಲಿ ಕಾರಣವನ್ನು ರಾಧಿಕಾ ಅವರೇ ಹೇಳಿದ್ದು, ಭೈರಾದೇವಿ ಸಿನಿಮಾದ ಸಕ್ಸಸ್ ಮೇಲೆ ನನ್ನ ಭವಿಷ್ಯ ನಿಂತಿದೆ ಎಂದಿದ್ದಾರೆ.

ನನ್ನ ಕೆರಿಯರ್‌ನಲ್ಲಿ ಈ ಭೈರಾದೇವಿ ದೊಡ್ಡ ಸಿನಿಮಾ. ಈ ಸಿನಿಮಾ ಯಶಸ್ವಿಯಾದರೆ ಮಾತ್ರ ನಾನು ಬೇರೆ ಸಿನಿಮಾಗಳನ್ನು ಮಾಡುತ್ತೇನೆ. ಒಂದು ವೇಳೆ ಸಕ್ಸಸ್ ಆಗದಿದ್ದರೆ ಇದೇ ನನ್ನ ಕೊನೆಯ ಸಿನಿಮಾ ಆಗಲಿದೆ. ಪ್ರೇಕ್ಷಕರಿಗೆ ನಾನು ಇಷ್ಟವಾಗದಿದ್ದರೆ ಸಿನಿಮಾರಂಗದಿಂದಲೇ ದೂರ ಹೋಗಲು ನಿರ್ಧರಿಸಿದ್ದೆ. ಈ ಬಗ್ಗೆ ನಾನು ನಿರ್ದೇಶಕರಿಗೂ ಹೇಳಿದ್ದೆ ಎಂದು ನಟಿ ರಾಧಿಕಾ ಕುಮಾರಸ್ವಾಮಿ ವೇದಿಕೆಯಲ್ಲಿ ಭಾವುಕರಾದರು.
ನನ್ನ ಮೇಲೆ ನಂಬಿಕೆ ಇಟ್ಟು ಇಂತಹ ಪಾತ್ರ ಮಾಡಿಸಿದ್ದಾರೆ. ಇದು ನನ್ನ ಕೆರಿಯರ್‌ನಲ್ಲೇ ಹಿಟ್ ಸಿನಿಮಾ ಆಗುತ್ತೆ ಅನ್ನೋ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಈ ಸಿನಿಮಾಗಾಗಿ ತುಂಬಾ ಕಷ್ಟಪಟ್ಟಿದ್ದೇನೆ. ತುಂಬಾ ಸಮಸ್ಯೆಗಳನ್ನು ಎದುರಿಸಿದ್ದೇನೆ. ಇದೆಲ್ಲ ನೋಡಿದಾಗ ಕಲಾವಿದರು ಯಾಕೆ ಇಷ್ಟೊಂದು ಕಷ್ಟ ಪಡುತ್ತಾರೆ? ಎಂದು ನನಗೆ ಅನಿಸುತ್ತೆ. ಸ್ಮಶಾನದಲ್ಲೆಲ್ಲ ಅದೆಷ್ಟೋ ದಿನ ಬಹಳ ಸವಾಲುಗಳಿಂದ ಶೂಟಿಂಗ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಈ ಭೈರಾದೇವಿ ಸಿನಿಮಾದ ಟ್ರೈಲರ್ ನಿನ್ನೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ನಟಿ ರಾಧಿಕಾ ಅವರು ಕಾಳಿಯ ಅವತಾರ ತಾಳಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಧಿಕಾ, ನಾನು ಕಾಳಿ ವೇಷ ಧರಿಸಿದಾಗ ನನ್ನಲ್ಲಿ ಕೆಲವು ಬದಲಾವಣೆ ಆಗುತ್ತಿತ್ತು ಎಂದಿದ್ದಾರೆ. ಮೊದಲ ದಿನ ನಾನು ಕಾಳಿ ವೇಷ ಧರಿಸಿದಾಗ ತಲೆ ಎತ್ತಲು ನನಗೆ ಕಷ್ಟವಾಗುತ್ತಿತ್ತು ಎಂದು ಶೂಟಿಂಗ್ ವೇಳೆ ಎದುರಾದ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ.
ಈ ಘಟನೆ ನಂತರ ನಮ್ಮ ಕೋರಿಯೋಗ್ರಫರ್ ಹಾಗೂ ಡೈರೆಕ್ಟರ್ ನನ್ನನ್ನು ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿ ದೃಷ್ಟಿ ತೆಗೆಸಿದರು. ಆನಂತರವೇ ನನಗೆ ಈ ಪಾತ್ರದಲ್ಲಿ ನಟಿಸುವುದು ಸುಲಭವಾಯಿತು ಎಂದು ರಾಧಿಕಾ ಹೇಳಿಕೊಂಡಿದ್ದಾರೆ.

ಜೆ.ಎಸ್.ವಾಲಿ ಈ ಸಿನಿಮಾದ ಛಾಯಾಗ್ರಾಹಕರು, ರವಿವರ್ಮಾ ಸಾಹಸ ಸಂಯೋಜನೆ, ಮೋಹನ್ ಬಿ ಕೆರೆ ಆರ್ಟ್ ವರ್ಕ್, ಕೆ.ಕೆ.ಸೆಂಥಿಲ್ ಪ್ರಕಾಶ್ ಸಂಗೀತ ಈ ಭೈರಾದೇವಿ ಚಿತ್ರಕ್ಕಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ.
ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಿಸಿ, ನಟಿಸುತ್ತಿರುವ ಬಹುನಿರೀಕ್ಷಿತ ಭೈರಾದೇವಿ ಸಿನಿಮಾ ಇದೇ ಅಕ್ಟೋಬರ್ 3ರಂದು ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಶ್ರೀಜೈ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಹಲವು ದಿನಗಳ ನಂತರ ಬರುತ್ತಿರುವ ಕನ್ನಡದ ಹಾರರ್ ಸಿನಿಮಾ ನೋಡಲು ಪ್ರೇಕ್ಷಕರು ಕಾತರದಿಂದ ಕಾದಿದ್ದಾರೆ.












Click it and Unblock the Notifications