'ಡಿವೋರ್ಸ್ ಆದವರ ಜೊತೆ ನನ್ನ ಎರಡನೇ ಮದುವೆ..' ನಟಿ ಮೀನಾ ಶಾಕಿಂಗ್ ಹೇಳಿಕೆ
ಕನ್ನಡದ 'ಪುಟ್ನಂಜ', 'ಸಿಂಹಾದ್ರಿಯ ಸಿಂಹ' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಮೀನಾ ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದಾರೆ. 90ರ ದಶಕದಿಂದಲೂ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯ ನಟಿ ಎನಿಸಿಕೊಂಡಿದ್ದಾರೆ. ಮೀನಾ 2009ರಲ್ಲಿ ಸಾಫ್ಟ್‌ವೇರ್ ಡೆವಲಪರ್ ವಿದ್ಯಾಸಾಗರ್ ಎಂಬುವರನ್ನು ವಿವಾಹವಾದರು. 2022ರಲ್ಲಿ ಪತಿ ಅನಾರೋಗ್ಯದಿಂದ ನಿಧನರಾದರು. ಬಳಿಕ ಮೀನಾ ಎರಡನೇ ಮದುವೆಯಾಗ್ತಾರೆ ಎಂದು ಸುದ್ದಿ ಹರಿದಾಡಿತ್ತು. ಎರಡನೇ ಮದುವೆ ಬಗ್ಗೆ ಮೀನಾ ಅವರು ಇತ್ತೀಚಿನ ಸಂದರ್ಶನದಲ್ಲಿ ಅಚ್ಚರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಮೀನಾ ಅವರು ಇತ್ತೀಚೆಗೆ ನಟ ಜಗಪತಿ ಬಾಬು ನಡೆಸಿಕೊಡುವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಈ ವೇಳೆ ತಮ್ಮ ವೃತ್ತಿ ಬದುಕು ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಮೀನಾ ಮಾತನಾಡಿದ್ದಾರೆ. ನಾನು ರಜನಿಕಾಂತ್, ಬಾಲಕೃಷ್ಣ, ವೆಂಕಟೇಶ್, ಸೂಪರ್ ಸ್ಟಾರ್ ಕೃಷ್ಣ ಸೇರಿದಂತೆ ಮುಂತಾದ ಸ್ಟಾರ್ ನಾಯಕರೊಂದಿಗೆ ನಟರೊಂದಿಗೆ ಮಗಳಾಗಿ ಮತ್ತು ಅವರ ಎದುರು ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು ಎಂದು ನೆನೆದಿದ್ದಾರೆ. ಇದೇ ವೇಳೆ ತಮ್ಮ ಎರಡನೇ ಮದುವೆ ವಿಚಾರವಾಗಿ ಹಬ್ಬಿದ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ.

'ಕೈತುಂಬಾ ಅವಕಾಶ ಇದ್ದಾಗಲೇ ಮದುವೆ'
'ಅನೇಕ ನಿರ್ಮಾಪಕರು ತಮ್ಮನ್ನು ಸಂಪರ್ಕಿಸಿ ಕಡಿಮೆ ಹಣದಲ್ಲಿ ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ನಾನು ಅದಕ್ಕೆ ಒಪ್ಪುತ್ತಿದ್ದೆ. ಚಿತ್ರಗಳು ಸೂಪರ್ ಹಿಟ್ ಆದ ನಂತರ ಅವರು ನನ್ನನ್ನು ಮರೆತರು. ಅದು ಯಾವಾಗಲೂ ಹೀಗೆಯೇ ನಡೆಯುತ್ತಿತ್ತು. ನನ್ನ ವೃತ್ತಿಜೀವನದಲ್ಲಿ ಅವಕಾಶಗಳು ಹೆಚ್ಚಾಗಿ ಬರುತ್ತಿದ್ದಾಗಲೇ ನಾನು ಮದುವೆಯಾದೆ. ನಂತರ ನನಗೆ ಮಗು ಜನಿಸಿದ ಎರಡು ವರ್ಷಗಳ ನಂತರ ಮಲಯಾಳಂ ದೃಶ್ಯ ಸಿನಿಮಾ ಆಫರ್ ಬಂತು. ಆದರೆ ಮಗು ಇದ್ದ ಕಾರಣಕ್ಕೆ ನಾನು ಒಪ್ಪಿಕೊಳ್ಳಲಿಲ್ಲ. ಅವರು ನನ್ನನ್ನು ಕಲ್ಪಿಸಿಕೊಂಡು ಕಥೆ ಬರೆದಿದ್ದು, ಈ ಪಾತ್ರ ಬೇರೆ ಯಾರೊಂದಿಗೂ ಮಾಡಲು ಸಾಧ್ಯವಿಲ್ಲ ಎಂದರು. ಆ ಕಾರಣಕ್ಕೆ ಒಪ್ಪಿಕೊಂಡೆ' ಎಂದಿದ್ದಾರೆ.
'ಪತಿ ಹೋದ ವಾರಕ್ಕೆ ಎರಡನೇ ಮದುವೆ ಅಂದ್ರು'
ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡುತ್ತಾ, 'ನನ್ನ ಪತಿ ನಿಧನರಾದ ಕೇವಲ ಒಂದು ವಾರದ ನಂತರ ಎರಡನೇ ಮದುವೆಗೆ ಸಿದ್ಧಳಾಗಿದ್ದೇನೆ, ಮದುವೆ ಆಗೋಗಿದೆ ಎಂದು ವದಂತಿ ಹಬ್ಬಿಸಿದ್ದರು. ಆದರೆ ಯಾಕೆ ಈ ರೀತಿ ಬರೆಯುತ್ತಿದ್ದಾರೆ ಎಂದು ತಿಳಿದು ನನಗೆ ತುಂಬಾ ಬೇಸರವಾಯಿತು. ಚಿತ್ರರಂಗದಲ್ಲಿ ಯಾರಿಗೇ ಡಿವೋರ್ಸ್ ಆದರೂ ಅವರೊಂದಿಗೆ ನನ್ನ ಎರಡನೇ ಮದುವೆ ಆಗುತ್ತಿದ್ದೇನೆ ಎಂದು ಸುದ್ದಿ ಹಬ್ಬಿತ್ತು. ಅಂತಹ ಸುದ್ದಿ ಕೇಳಿ ತನಗೆ ಅಸಹ್ಯವಾಗುತ್ತಿತ್ತು. ಈ ರೀತಿಯ ಸುಳ್ಳು ಸುದ್ದಿ ಬರೆಯುವವರಿಗೆ ನಿಜವಾಗಿ ಕುಟುಂಬಗಳಿವೆಯೇ?' ಮೀನಾ ಗಂಭೀರವಾಗಿ ಪ್ರಶ್ನಿಸಿದ್ದಾರೆ.

'ಸೌಂದರ್ಯ ಜೊತೆ ನನ್ನ ಪ್ರಾಣ ಹೋಗಬೇಕಿತ್ತು'
ಇದೇ ಕಾರ್ಯಕ್ರಮದಲ್ಲಿ ದಿವಂಗತ ನಟಿ ಸೌಂದರ್ಯ ಅವರೊಂದಿಗಿನ ಒಡನಾಟವನ್ನು ಮೀನಾ ನೆನೆದಿದ್ದಾರೆ. 'ಆ ವಿಮಾನ ಅಪಘಾತಕ್ಕೂ ಮುನ್ನ ನಾನು ಸೌಂದರ್ಯ ಅವರನ್ನು ಭೇಟಿಯಾಗಲು ಬಯಸಿದ್ದೆ. ಆದರೆ ಅವರ ಬಿಡುವಿಲ್ಲದ ಶೂಟಿಂಗ್ ವೇಳಾಪಟ್ಟಿಯಿಂದಾಗಿ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಅದರ ನಡುವೆಯೇ ಆ ಭಯಾನಕ ಘಟನೆ ಸಂಭವಿಸಿತು. ಅವರ ಸಾವಿನ ಸುದ್ದಿ ಕೇಳಿ ನನಗೆ ಶಾಕ್ ಆಯ್ತು. ಅದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಚ್ಚರಿ ವಿಚಾರ ಅಂದ್ರೆ ಆ ದಿನ ಕ್ಯಾಂಪೇನಿಂಗ್‌ಗೆ ಸೌಂದರ್ಯ ಜೊತೆ ನಾನೂ ಹೋಗಬೇಕಿತ್ತು. ಅವರು ನನ್ನನ್ನೂ ಕರೆದಿದ್ದರು. ಆದರೆ ನನಗೆ ರಾಜಕೀಯ ಪ್ರಚಾರ ಇದೆಲ್ಲ ಇಷ್ಟವಿರಲಿಲ್ಲ. ಹೀಗಾಗಿ ಶೂಟಿಂಗ್ ಇದೆ ಅಂತ ತಪ್ಪಿಸಿಕೊಂಡೆ. ಇಲ್ಲದಿದ್ದರೆ ನನ್ನ ಪ್ರಾಣವೂ ಹೋಗಬೇಕಿತ್ತು' ಎಂದು ಆ ಘಟನೆಯನ್ನು ಮೀನಾ ನೆನೆದಿದ್ದಾರೆ.












Click it and Unblock the Notifications