Divya Uruduga: 'ನಿನಗಾಗಿ' ಎನ್ನುತ್ತಾ ಕಿರುತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ನಟಿ ದಿವ್ಯಾ ಉರುಡುಗ
ಬಿಗ್ ಬಾಸ್‌ನಿಂದ ಮನೆ ಮಾತಾದ ನಟಿ ದಿವ್ಯಾ ಉರುಡುಗ ಕಿರುತೆರೆ, ಹಿರಿತೆರೆ ಎರಡರಲ್ಲೂ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಚಿಟ್ಟೆ ಹೆಜ್ಜೆ, ಅಂಬಾರಿ, ಓಂ ಶಕ್ತಿ ಓಂ ಶಾಂತಿ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ಬಳಿಕ ಹಿರಿತೆರೆಗೆ ಕಾಲಿಟ್ಟಿದ್ದರು. ಅರವಿಂದ್ ಕೌಶಿಕ್ ನಿರ್ದೇಶನದ 'ಹುಲಿರಾಯ' ಮೂಲಕ ಸಿನಿಮಾಗಳಿಗೆ ಪಾದಾರ್ಪಣೆ ಮಾಡಿದ್ದರು.
ಬಿಗ್ ಬಾಸ್ ಕನ್ನಡದಲ್ಲಿಯೂ ದಿವ್ಯಾ ಉರುಡುಗ ಗಮನಸೆಳೆದಿದ್ದರು. ಇತ್ತೀಚೆಗೆ ದಿವ್ಯಾ ಉರುಡುಗ ನಟಿಸಿದ್ದ ಅರ್ಧಂಬರ್ಧ ಪ್ರೇಮಕತೆ ಸಿನಿಮಾ ಬಿಡುಗಡೆಗೊಂಡಿತ್ತು. ಈಗ ಮತ್ತೆ ಹೊಸ ಧಾರಾವಾಹಿ 'ನಿನಗಾಗಿ' ಮೂಲಕ ಕಿರುತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ.

ಮತ್ತೆ ಕಿರುತೆರೆಗೆ ಮರಳಿದ ದಿವ್ಯಾ ಉರುಡುಗ
ನಿನಗಾಗಿ ಧಾರಾವಾಹಿ ಮೇ 27ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಇದರಲ್ಲಿ ದಿವ್ಯಾ ಜೊತೆಗೆ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಶಿವರಾಮ್ ಪಾತ್ರಧಾರಿ ಋತ್ವಿಕ್ ಮಠದ್ ಕಾಣಿಸಿಕೊಳ್ಳಲಿದ್ದಾರೆ. ಬೇರೆ ಬೇರೆ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸಾಗುವ ಮನ ಮಿಡಿಯ ಧಾರಾವಾಹಿ ಇದು ಎನ್ನಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ನಿನಗಾಗಿ ಸೀರಿಯಲ್ ಪ್ರಸಾರವಾಗಲಿದೆ.
'ನಿನಗಾಗಿ'ಯಲ್ಲಿ ದಿವ್ಯಾ ಉರುಡುಗ ರಚನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ನಿನಗಾಗಿ' ಧಾರಾವಾಹಿಯ ಕಥೆ ಸೂಪರ್ ಸ್ಟಾರ್ ರಚನಾ ಸುತ್ತ ಸುತ್ತಲಿದೆ. ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ರಚನಾಗೆ ಕೋಟ್ಯಂತರ ಅಭಿಮಾನಿಗಳ ಪ್ರೀತಿ, ಆಶೀರ್ವಾದ ಇದೆ. ಆದರೆ, ಅದ್ಯಾಕೋ ರಚನಾಗೆ ಅಮ್ಮನ ಪ್ರೀತಿ ಇಲ್ಲ. ಸೂಪರ್ ಸ್ಟಾರ್ ಆಗಿದ್ದರೂ, ಅಮ್ಮನ ಪ್ರೀತಿ ಕಾಣದ ನಟಿಯ ಕಥೆಯನ್ನು 'ನಿನಗಾಗಿ' ಧಾರಾವಾಹಿಯಲ್ಲಿ ನೋಡಬಹುದು.
ತಮ್ಮ ಪಾತ್ರದ ಬಗ್ಗೆ ನಾಯಕಿ ದಿವ್ಯಾ ಉರುಡುಗ ಮಾತನಾಡಿ, " ಪ್ರತಿ ವಿಷಯದಲ್ಲಿಯೂ ಯೂನಿಕ್ ಆಗಿ ಮಾಡುತ್ತಿದ್ದೇವೆ. ರಚ್ಚು ಎಂಬ ಮುದ್ದಾದ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ರಚ್ಚು ಎಂಬ ಸೂಪರ್ ಸ್ಟಾರ್ ಸಿಂಪಲ್ ಆಗಿ ಲೈಫ್ ಲೀಡ್ ಮಾಡುವ ಕನಸು ಕಾಣುತ್ತಾ ಇರುತ್ತಾಳೆ. ಅಮ್ಮನ ಮಾತೇ ವೇದ ವಾಕ್ಯ. ಆ ರೀತಿ ಪಾತ್ರ ನನ್ನದು. ಅವಳ ವೈಯಕ್ತಿಕ ಜೀವನ, ಅವಳ ಆಸೆ ನೆರವೇರುತ್ತಾ? ಅನ್ನೋದನ್ನು ನೀವು ನೋಡ್ಬೇಕು. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವ ಖುಷಿ ಇದೆ. ಸಿನಿಮಾ ರೀತಿಯೇ ಸೀರಿಯಲ್ ಶೂಟ್ ಮಾಡಲಾಗುತ್ತಿದೆ" ಎಂದು ಖುಷಿ ಹಂಚಿಕೊಂಡಿದ್ದಾರೆ.

'ನಿನಗಾಗಿ' ನಾಯಕ ಋತ್ವಿಕ್ ಮಠದ್, ಜೀವನ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರದ ಬಗ್ಗೆ ಮಾತನಾಡಿ, 'ಗಿಣಿರಾಮ ಧಾರಾವಾಹಿಯಲ್ಲಿ ಶಿವರಾಮ್ ಮಾಸ್‌ನಲ್ಲಿ ನೋಡಿದ್ದೀರಿ. ಆದರೆ ಆ ಮಾಸ್ ಜೀವನ್‌ನಲ್ಲಿ ಇರುವುದಿಲ್ಲ. ತುಂಬಾ ಸರಳ ವ್ಯಕ್ತಿ. ಒಂದು ಮಗುವಿನ ತಂದೆ. ದುಡ್ಡಿನ ಹಿಂದೆ ಹೋಗುವ ಮನುಷ್ಯ ಅಲ್ಲ. ಆ ರೀತಿ ಪಾತ್ರ ಮಾಡುತ್ತಿದ್ದೇನೆ' ಎಂದಿದ್ದಾರೆ.
ಈ ಹಿಂದೆ ನಮ್ಮನೆ ಯುವರಾಣಿ ಸೀರಿಯಲ್ ಮಾಡಿದ್ದ ನಿರ್ದೇಕ ಸಂಪಥ್ವಿ ತಮ್ಮ ಧಾರಾವಾಹಿ ಬಗ್ಗೆ ಮಾತನಾಡಿದ್ದಾರೆ. ' ಹೆಮ್ಮೆಯಿಂದ ಹೇಳುತ್ತೇನೆ. ಒಂದೊಳ್ಳೆ ಪ್ರಾಜೆಕ್ಟ್ ತೆಗೆದುಕೊಂಡು ಬಂದಿದ್ದೇನೆ. ನಿನಗಾಗಿ ಬಂದ ಮೇಲೆ ತುಂಬಾ ಸ್ಕೋರ್ ಮಾಡುತ್ತದೆ. ಜೈ ಮಾತಾ ಕಂಬೈನ್ಸ್ ಮತ್ತು ಇಡೀ ಕಲರ್ಸ್ ತಂಡ ನನ್ನೊಂದಿಗೆ ನಿಂತಿದೆ. ಈ ಪ್ರಾಜೆಕ್ಟ್ ಕಲರ್ಸ್ ಗೆ ಗೆಲುವು ತಂದುಕೊಡುತ್ತದೆ. ಪ್ರೋವೋ ನೋಡಿ ಇಷ್ಟಪಟ್ಟಿದ್ದೀರಾ. ಈ ಬಾರಿ ಒಂದು ಹೊಸ ಕಥೆ ಹೇಳಲು ಬರುತ್ತಿದ್ದೇವೆ' ಎಂದಿದ್ದಾರೆ.
'ನಿನಗಾಗಿ' ತಾರಾಗಣದಲ್ಲಿ ಪ್ರಿಯಾಂಕ ಕಾಮತ್, ಕಿಶನ್ ಬೆಳಗಲಿ, ವಿಜಯ್ ಕೌಂಡಿನ್ಯ, ಸಿರಿ ಸಿಂಚನ ಮುಂತಾದವರಿದ್ದಾರೆ. ಭಾಗ್ಯಲಕ್ಷ್ಮಿ, ನಮ್ಮನೆ ಯುವರಾಣಿ, ಕನ್ನಡತಿಯಂಥ ಸುಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸಿದ ಜೈ ಮಾತಾ ಕಂಬೈನ್ಸ್ 'ನಿನಗಾಗಿ' ನಿರ್ಮಾಣ ಮಾಡುತ್ತಿದೆ.












Click it and Unblock the Notifications