ಸಂಗಾತಿ ಬೇಕು, ಆದ್ರೆ ಮಕ್ಕಳು ಹೆರೋಕೆ ಮದುವೆ ಆಗಬೇಕಿಲ್ಲ: ನಟಿ ಭಾವನಾ ಸಮರ್ಥನೆ
Bhavana Ramanna: ಚಂದ್ರಮುಖಿ ಪ್ರಾಣಸಖಿ ಸಿನಿಮಾ ಖ್ಯಾತಿಯ ಕನ್ನಡದ ನಟಿ ಭಾವನಾ ರಾಮಣ್ಣ ಅವರು ಮದುವೆಯಾಗದೆ ಗರ್ಭಿಣಿಯಾಗುವ ಮೂಲಕ ಅಚ್ಚರಿ ನಡೆ ಪ್ರದರ್ಶಿಸಿದ್ದಾರೆ. ಐಪಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದು, ಆರು ತಿಂಗಳ ಗರ್ಭಿಣಿಯಾಗಿದ್ದೇನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಅಲ್ಲದೆ ತಂದೆಯಿಲ್ಲದೆ ಮಕ್ಕಳನ್ನು ಬೆಳೆಸುತ್ತೇನೆ ಎಂದೂ ಅವರು ಹೇಳಿಕೊಂಡಿದ್ದರು. ಮಕ್ಕಳ ವಿಚಾರದಲ್ಲಿ ತಮ್ಮ ನಿರ್ಧಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ಮದುವೆಯಾಗಿಯೇ ಮಗು ಪಡೆಯಬೇಕು ಎಂದು ಎಲ್ಲಿಯೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
40 ವರ್ಷವಾದರೂ ನಟಿ ಭಾವನಾ ಅವರು ಮದುವೆಯಾಗಿರಲಿಲ್ಲ. ಅವರ ಅಭಿಮಾನಿಗಳು ಕೂಡ ಭಾವನಾ ಯಾಕೆ ಇಷ್ಟು ವಯಸ್ಸಾದರೂ ಮದುವೆಯಾಗಿಲ್ಲ ಎಂದು ತಲೆಕೆಡಿಸಿಕೊಂಡಿದ್ದರು. ಆದರೆ ನಟಿ ಭಾವನಾ ಅವರು ಮದುವೆ ಹಾಗೂ ಗಂಡನಿಲ್ಲದೆ ಮಕ್ಕಳಿಗೆ ತಾಯಿಯಾಗುವ ಇನ್ ವಿಟ್ರೊ ಫರ್ಟಿಲೈಸರ್ (ಐವಿಎಫ್) ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಐವಿಎಫ್ ಚಿಕಿತ್ಸೆ ಯಶಸ್ವಿಯಾಗಿದ್ದು, ಅವಳಿ ಮಕ್ಕಳಿಗೆ ತಾಯಿಯಾಗಲು ಭಾವನಾ ಸಜ್ಜಾಗಿದ್ದಾರೆ.

ಒಂದು ಹೆಣ್ಣಿಗೆ ಮಕ್ಕಳು ಪಡೆಯಲು ಮದುವೆಯೇ ಆಗಬೇಕು ಎಂದೇನಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಜೀವನಕ್ಕೆ ಸಂಗಾತಿ ಬೇಕು ನಿಜ, ಆದರೆ ಮಕ್ಕಳು ಹೊಂದಬೇಕು ಎಂಬ ಕಾರಣಕ್ಕೇ ಮದುವೆ ಆಗಬಾರದು ಎಂದು ಭಾವನಾ ಹೇಳಿದ್ದಾರೆ. ದೇವರು ನನಗೆ ತಾಯ್ತನ ಅನುಭವಿಸುವ ಶಕ್ತಿ ನೀಡಿದ್ದಾನೆ. ಸಹಜವಾಗಿ ಇದು ನನಗೆ ಸಿಕ್ಕಿದೆ. ಜಗತ್ತಿನಲ್ಲಿ ಪ್ರತಿ ಪ್ರಾಣಿಗೂ ಮಗು ಪಡೆಯುವ ಹಕ್ಕಿದೆ. ಐವಿಎಫ್ ಮೂಲಕ ಹಸುಗಳಿಗೂ ಗರ್ಭ ಧರಿಸಿ, ಕರುವಿಗೆ ಜನ್ಮ ಕೊಡಿಸಲಾಗುತ್ತಿದೆ. ಇನ್ನು ಗುಬ್ಬಚ್ಚಿ, ಹುಲಿ, ಸಿಂಹದ ಬಳಿ ನಿಮಗೆ ಮದುವೆ ಆಗಿದೆಯಾ? ಎಂದು ಕೇಳೋದಿಲ್ಲ ಎಂದಿದ್ದಾರೆ.
ಒಬ್ಬ ಗಂಡಸು ಬಂದ ನಂತರ ಹೆಣ್ಣು ನಿಜವಾಗಿ ಹೆಣ್ಣಾಗುವುದಿಲ್ಲ. ಹೆಣ್ಣು ಯಾವತ್ತಿಗೂ ಹೆಣ್ಣಾಗಿಯೇ ಇರುತ್ತಾಳೆ. ಹಾಗಾಗಿ ಮದುವೆ ಆಗದೆ ಮಗು ಪಡೆಯುವುದು ತಪ್ಪಲ್ಲ ಎಂದು ಭಾವನಾ ಹೇಳಿದ್ದಾರೆ. ಈಗ ನಾನು 40ನೇ ವಯಸ್ಸಿಗೆ ಬಂದಿದ್ದೇನೆ ಅಂದ್ರೆ ನನ್ನದೇ ಲೈಫ್ ನನಗೆ ಚೆನ್ನಾಗಿ ಅಭ್ಯಾಸವಾಗಿಬಿಟ್ಟಿರುತ್ತೆ. ಈ ಸಮಯದಲ್ಲಿ ನಮ್ಮ ಜೀವನದಲ್ಲಿ ಮತ್ತೊಬ್ಬರು ಬರುವುದು ಕಷ್ಟ. ಅದು ಅವರಿಗೂ ಹಿಂಸೆಯಾಗುತ್ತೆ. ಮದುವೆ ಆದ ಮೇಲೆ ಒಂದಷ್ಟು ಕಾಂಪ್ಲಿಕೇಷನ್ಸ್ ಇದ್ದೇ ಇರುತ್ತೆ ಎಂದು ಹೇಳಿದ್ದಾರೆ.

ಐವಿಎಫ್ ಚಿಕಿತ್ಸೆಗಾಗಿ ಕೆಲವರು ನನ್ನನ್ನು ದೆಹಲಿಗೆ ಹೋಗುವಂತೆ ಸೂಚಿಸಿದ್ರು, ಈ ವಿಚಾರವನ್ನ ಜನರಿಂದ ಮುಚ್ಚಿಡುವಂತೆ ಹೇಳಿದ್ದರು. ಆದರೆ ನಾನು ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆದಿದ್ದೇನೆ. ಅಭಿಮಾನಿಗಳು ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ನಾನು ಏನಾಗುತ್ತಿದೆ ಎಂದು ಮಾಹಿತಿ ಕೊಡಲೇಬೇಕು. ಅವರ ಅಭಿಮಾನವನ್ನು ನಾನು ಉಳಿಸಿಕೊಳ್ಳಬೇಕು. ಕೆಲವರು ನಾನು ಹೇಳಿದಂತೆ ಈ ವಿಚಾರವನ್ನು ನಾನು ಮುಚ್ಚಿಡಬಹುದಿತ್ತು. ಆದರೆ ಯಾರಿಗೂ ಹೆದರಿ ಬದುಕುವ ಅವಶ್ಯಕತೆ ನನಗಿಲ್ಲ. ನಮ್ಮ ಸಮಾಜ ಆರಂಭವಾಗುವುದೇ ಮನೆಯಿಂದ, ಹಾಗಾಗಿ ನನ್ನ ನಿರ್ಧಾರಕ್ಕೆ ತಂದೆಯೇ ಒಪ್ಪಿರುವಾಗ ಬೇರೆ ಇನ್ಯಾರ ಭಯ ಏಕೆ? ಎಂದು ಭಾವನಾ ಪ್ರಶ್ನಿಸಿದ್ದಾರೆ.












Click it and Unblock the Notifications