Vinod Raj: ಮೊದಲ ಬಾರಿಗೆ ಪತ್ನಿಯ ಮಹಾತ್ಯಾಗ ನೆನೆದ ವಿನೋದ್ ರಾಜ್
ವರನಟಿ ಲೀಲಾವತಿ ಅವರು ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದಿದ್ದು, ಪುತ್ರ ವಿನೋದ್ ರಾಜ್ ತಾಯಿಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ತಾಯಿಯ ಸವಿ ನೆನಪಿಗಾಗಿ ವಿನೋದ್ ರಾಜ್ ದೇವಾಲಯದಂತಹ ಅದ್ಭುತವಾದ ಮಂದಿರ ಕಟ್ಟಿಸಿ ತಮ್ಮ ಇಪ್ಪತೈದನೇ ವರ್ಷದ ಮದುವೆ ವಾರ್ಷಿಕೋತ್ಸವದ ದಿನ (ಡಿಸೆಂಬರ್ 05)ರಂದು ಈ ಸ್ಮಾರಕದ ಉದ್ಘಾಟನೆ ಮಾಡಿದ್ದಾರೆ.
ಅಮ್ಮನ ಮಂದಿರ ಉದ್ಘಾಟನೆಯಾಗಿರುವ ಖುಷಿಯಲ್ಲಿರುವ ವಿನೋದ್ ರಾಜ್ ಅವರು, ಮೊದಲ ಬಾರಿಗೆ ತಮ್ಮ ಪತ್ನಿ ಅನು ಅವರ ತ್ಯಾಗದ ಬಗ್ಗೆ ಮಾತನಾಡಿದ್ದಾರೆ. ಪವರ್ ಟಿವಿ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ ಅವರು, ಮಗ ಮತ್ತು ಪತ್ನಿ ತಮಿಳುನಾಡಿನಲ್ಲಿ ಇರುವುದು ಯಾಕೆ ಎನ್ನುವುದರ ಕುರಿತು ಕೂಡ ಮಾತನಾಡಿದ್ದಾರೆ.

'ನಾನು ಇಲ್ಲಿರುತ್ತೇನೆ. ನನ್ನ ಪತ್ನಿ ಅಲ್ಲಿರುವುದಕ್ಕೆ ಅವರು ತುಂಬಾ ಬೇಜಾರು ಮಾಡಿಕೊಳ್ಳುತ್ತಾರೆ. ಆಗ ನಾನೇ ಸಮಾಧಾನ ಹೇಳುತ್ತೇನೆ. ಅದರಲ್ಲೂ ನಾನು ನನ್ನ ಮಗನಿಗೆ ಹೇಳುತ್ತೇನೆ. ನಾನು ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ. ನೀನು ನಿನ್ನ ಅಮ್ಮನನ್ನು ನೋಡಿಕೋ. ಅವಳಿಗಿನ್ನೂ ಚಿಕ್ಕ ವಯಸ್ಸು ಎಂದು. ನಮ್ಮ ಅಮ್ಮ ಅಳುತ್ತಾರೆ ಅಂತಾ ಹೇಳುತ್ತಾನೆ ಅದಕ್ಕೆ ನಾನು ಸಮಾಧಾನ ಮಾಡು ಅಂತಾ ಹೇಳುತ್ತೇನೆ'.
'ನಮ್ಮ ಅಮ್ಮ ಅತ್ತಾಗ ನಾನು ಸಮಾಧಾನ ಮಾಡಿದ್ದೇನೆ. ಈಗ ನೀನು ಮಾಡು ಅಂತಾ ಮಗನಿಗೆ ಬುದ್ಧಿ ಹೇಳುತ್ತೇನೆ. ನನ್ನ ಮಗ ಒಳ್ಳೆ ಹುಡುಗ ಅಮ್ಮನಿಗೆ ಸಮಾಧಾನ ಮಾಡುತ್ತಾನೆ. ಅವನು ನನಗೆ ಏನು ಎದುರು ಮಾತನಾಡುವುದಿಲ್ಲ. ಅವನು ನನಗೆ ಒಳ್ಳೆಯವನಾಗುವುದು ಬೇಕಾಗಿಲ್ಲ. ಅವರ ಅಮ್ಮನಿಗೆ ಒಳ್ಳೆಯವನಾದರೆ ಸಾಕು' ಎಂದರು.

'ಅವನು ಓದಿಕೊಂಡು ಕೆಲಸ ಮಾಡುತ್ತಿದ್ದಾನೆ. ಹೀಗೆ ಕೆಲಸ ಮಾಡಿಕೊಂಡು ಸಂಸಾರ ಮಾಡಿಕೊಂಡು ಸಾಧ್ಯವಾದರೆ ಇಲ್ಲಿನವುಗಳನ್ನು ನೋಡಿಕೊಂಡರೆ ಸಾಕು. ಆದರೆ ಅದಕ್ಕೆಲ್ಲಾ ಅನುಭವ ಬೇಕು. ಜನ ಸಾಮಾನ್ಯರ ಖುಷಿ ನೋಡಿ ತಮ್ಮ ಜೀವನವನದಲ್ಲಿ ತೃಪ್ತಿ ಹೊಂದುವಂತಹ ಅನುಭವ ಬರಬೇಕು. ಅಂತಹ ಸಮಯ ಬಂದಾಗ ಅವನಿಗೂ ಆ ಅನುಭವ ಬರುತ್ತದೆ' ಎಂದು ಹೇಳಿದರು.
ಇನ್ನು 'ನಮ್ಮ ಅಮ್ಮ ಮತ್ತು ನನ್ನ ಪತ್ನಿ ನಡುವೆ ಬಾಂಧವ್ಯ ಚೆನ್ನಾಗಿತ್ತು. ಚಿತ್ರರಂಗದಲ್ಲಿ ನನಗೆ ಅಷ್ಟೊಂದು ಅವಕಾಶ ಬರಲಿಲ್ಲ. ಬಂದಿರುವ ಅವಕಾಶದಲ್ಲಿ ನಾನು ಐವತ್ತು ಸಾವಿರ, ಇಲ್ಲ ಒಂದು ಲಕ್ಷ ಹೆಚ್ಚೆಂದರೆ ಎರಡು ಲಕ್ಷ ಸಂಬಳ ತೆಗೆದುಕೊಂಡಿರಬಹುದು ಅಷ್ಟೆ. ನಾನು ಸಂಪಾದನೆ ಮಾಡಿದ್ದು ಕಡಿಮೆ. ಈ ಪರಿಸ್ಥಿತಿಯಲ್ಲಿ ತಮಿಳುನಾಡಿನ ಜಾಗ ಬಿಕೋ ಅಂತಾ ಇತ್ತು. ಹೀಗಾಗಿ ಅಲ್ಲಿ ಮನೆ ಮಾಡಿ ನೀನು ಅಲ್ಲಿ ಇರು, ಮಗಗನ್ನು ಓದಿಸು, ನನ್ನ ಮೊಮ್ಮಗ ಚೆನ್ನಾಗಿ ಓದಬೇಕು ಅಂತಾ ಅಮ್ಮ ಅವರಿಗಾಗಿ ಎಲ್ಲಾ ಮಾಡಿದರು'.
'ಇಲ್ಲಿ ಇದ್ದರೆ ಅವನು ಅಜ್ಜಿಯ ಮುಂದೆ ಅಜ್ಜಿ ಸಾಕಿದ ಮೊಮ್ಮಗನ ರೀತಿ ಆಗಬಾರದು ಎಂದು, ಅವನು ಓದಬೇಕು ಎಂದು ಅವರನ್ನು ಅಲ್ಲಿಗೆ ಕಳುಹಿಸಲಾಯಿತು. ಅಲ್ಲಿನ ಆಸ್ತಿಗಳನ್ನು ಅವರು ನೋಡಿಕೊಂಡರು. ನನ್ನ ಪತ್ನಿಯೂ ಮಹಾತ್ಯಾಗ ಮಾಡಿದ್ದಾರೆ. ಇಲ್ಲಿ ನಮ್ಮ ಜೊತೆಗಿದ್ದರವರು ನನ್ನ ತಾಯಿಯನ್ನು ನೋಡಿಕೊಂಡರು. ನನ್ನ ಪತ್ನಿ ಇಲ್ಲಿ ಇರಬೇಕು ಎಂದರೂ ಆಗುವುದಿಲ್ಲ. ಅಲ್ಲಿ ಮಗನನ್ನು ನೋಡಿಕೊಳ್ಳಬೇಕು. ನನ್ನ ಹೆಂಡತಿ ನನಗೆ ದೊಡ್ಡ ಬೆಂಬಲ. ಅವರು ಅಲ್ಲಿದ್ದು, ಜೀವನವನ್ನು ಸಹಿಸಿಕೊಂಡು ಮಗನನ್ನು ಬೆಳೆಸಿದರು' ಎಂದು ನಟ ವಿನೋದ್ ರಾಜ್ ತಮ್ಮ ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.












Click it and Unblock the Notifications