Vasishta Simha: ಕನ್ನಡ ವೀರರ ಬಗ್ಗೆ ಪಠ್ಯಪುಸ್ತಕದಲ್ಲೇ ಹೆಚ್ಚಿನ ಪರಿಚಯ ಆಗಿಲ್ಲ: ನಟ ವಸಿಷ್ಠ ಸಿಂಹ
ನಟ ವಸಿಷ್ಠ ಸಿಂಹ ಅವರು ಕನ್ನಡ ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ ಗಂಭೀರವಾದ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ನಮಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಚಿಕ್ಕಂದಿನಿಂದಲೂ ಪುಸ್ತಕಗಳಲ್ಲಿ ಓದಿರುವ ಕಾರಣ ಅವರ ಮೇಲೆ ಅಭಿಮಾನ ಹುಟ್ಟಿಕೊಂಡಿದೆ. ಆದರೆ ಕನ್ನಡಕ್ಕಾಗಿ ಹೋರಾಡಿದ ಇಮ್ಮಡಿ ಪುಲಿಕೇಶಿ ಅವರಂತಹ ವೀರರ ಬಗ್ಗೆ ನಮ್ಮ ಪಠ್ಯಪುಸ್ತಕಗಳಲ್ಲಿ ಹೆಚ್ಚಿನ ಪರಿಚಯ ಇಲ್ಲ. ಕನ್ನಡವನ್ನು ಶ್ರೀಮಂತಗೊಳಿಸಿದವರ ಬಗ್ಗೆಯೂ ನಮ್ಮ ಮಕ್ಕಳು ತಿಳಿದುಕೊಳ್ಳಬೇಕು ಎಂದು ಧ್ವನಿ ಎತ್ತಿದ್ದಾರೆ.
ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು. ನಮ್ಮಲ್ಲಿ ಯಾವಾಗ ಶಾಲಾ ಶಿಕ್ಷಣ ವ್ಯವಸ್ಥೆ ಅಂತ ಬಂದಾಗಿನಿಂದಲೂ ಕೆಲವರ ಆಸಕ್ತಿ ಮೇರೆಗೆ, ಸಿದ್ಧಾಂತಗಳ ಓಲೈಕೆಗಾಗಿ ಅಥವಾ ಕೆಲವರನ್ನು ಮೆಚ್ಚಿಸಿಕೊಳ್ಳಲು ಆದಂತಹ ಹೇರಿಕೆ ಎಂದು ವಸಿಷ್ಠ ಸಿಂಹ ಖಂಡಿಸಿದ್ದಾರೆ. ನಾನು ಕನ್ನಡ ಮಾಧ್ಯಮದಲ್ಲೇ ಓದಿದ್ರೂ, ಕನ್ನಡ ಪಠ್ಯಪುಸ್ತಕ ಅಥವಾ ಚರಿತ್ರೆ ಪುಸ್ತಕದಲ್ಲೂ ಇಮ್ಮಡಿ ಪುಲಿಕೇಶಿ ಅವರಂತಹ ರಾಜರ ಬಗ್ಗೆ ನಾನು ಓದಿಲ್ಲ. ನನ್ನ ತಂದೆಯವರೂ ಓದಿಲ್ಲ ಎಂದಿದ್ದಾರೆ.

ಇಮ್ಮಡಿ ಪುಲಿಕೇಶಿ ಅವರಂತಹ ನಾಯಕರು ಕುರಿತು ಪಠ್ಯಪುಸ್ತಕದಲ್ಲಿ ಇಲ್ಲ. ಇದು ನನ್ನ ಪೀಳಿಗೆಯ ಪಠ್ಯದಲ್ಲೂ ಇರಲಿಲ್ಲ, ನನ್ನ ಹಿಂದಿನ ಜನರೇಷನ್ ಪುಸ್ತಕದಲ್ಲೂ ಇರಲಿಲ್ಲ. ಈಗ ಒಂದು ಸಿನಿಮಾ ನೋಡಬೇಕಾದರೆ ಒಂದು ಪಾತ್ರ ನೋಡಿದಾಗ ಅದರ ವೀರಾವೇಷಗಳು ನನಗೆ ಇಷ್ಟವಾಗುತ್ತೆ. ಆದರೆ ಸಿನಿಮಾನೇ ನೋಡಲ್ಲ ಅಂದ ಮೇಲೆ ಅವರ ಮೇಲೆ ಅಭಿಮಾನ ಅನ್ನೋದು ಹೇಗೆ ಹುಟ್ಟುತ್ತೆ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಇದಕ್ಕೇ ಅಭಿಮಾನ ಹುಟ್ಟಿಲ್ಲ
ಒಬ್ಬ ನಿಜವಾದ ನಾಯಕರ ಬಗ್ಗೆ ಓದಿದಾಗ ಅಭಿಮಾನ ಹುಟ್ಟುತ್ತೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆಲ್ಲ ಗೊತ್ತಿದೆ. ಯಾಕಂದ್ರೆ ನಾವೆಲ್ಲ ಅವರ ಬಗ್ಗೆ ಓದಿದ್ದೀವಿ. ಚಿಕ್ಕವಯಸ್ಸಲ್ಲೇ ಅವರ ವಿಚಾರಗಳು ನಮ್ಮ ತಲೆಗೆ ಹೋಗಿದೆ. ಹಾಗಾಗಿ ಅಭಿಮಾನ ಬೆಳೆದಿದೆ. ಆದರೆ ಕನ್ನಡ ಕಲಿಗಳ ಬಗ್ಗೆ ಯಾಕೆ ಗೌರವ, ಪ್ರೀತಿ, ಅಭಿಮಾನ ಬಂದಿಲ್ಲ? ಅಂದ್ರೆ, ಆ ವಿಚಾರಗಳೇ ನಮಗೆ ತಿಳಿಸಲಿಲ್ಲ. ನಮಗೆ ಯಾರೋ ತುಂಬಾ ಚೆನ್ನಾಗಿ ಕನ್ನಡ ಚರಿತ್ರೆ ಓದಿದವರಿಗೆ ಮಾತ್ರವೇ ಇಂತಹ ವಿಚಾರಗಳು ಗೊತ್ತಿದೆ. ಬಾಕಿ ಬೇರೆಯವರಿಗೆ ಅಷ್ಟಾಗಿ ಗೊತ್ತೇ ಇಲ್ಲ ಎಂದಿದ್ದಾರೆ.
ನಮ್ಮ ಕನ್ನಡದ ಕೆಲಸದಲ್ಲಿ ಮೊದಲು ಆಗಬೇಕಿರುವುದು ಕರ್ನಾಟಕದಲ್ಲಿ, ಕನ್ನಡ ಪುಸ್ತಕಗಳಲ್ಲಿ ಮಕ್ಕಳಿಗೆ ನಮ್ಮ ಕನ್ನಡ ಕಲಿಗಳ ಪರಿಚಯ ಆಗಬೇಕು. ಕನ್ನಡದ ವೀರರು, ಕನ್ನಡಕ್ಕೋಸ್ಕರ ಪ್ರಾಣ ತೆತ್ತವರು, ಕನ್ನಡವನ್ನು ಶ್ರೀಮಂತಗೊಳಿಸಿದವರ ಬಗ್ಗೆಯೂ ನಮ್ಮ ಮಕ್ಕಳು ತಿಳಿದುಕೊಳ್ಳಬೇಕು. ಇದು ನಮ್ಮೆಲ್ಲರ ಧ್ವನಿಯಾಗಬೇಕು ಎಂದು ವಸಿಷ್ಠ ಸಿಂಹ ಕರೆ ನೀಡಿದ್ದಾರೆ.












Click it and Unblock the Notifications