ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರವಿಶಂಕರ್ ಪುತ್ರ: ಸಿನಿಮಾ ಯಾವುದು? ಕಥೆಯೇನು?
ಕೆಂಪೇಗೌಡ ಸಿನಿಮಾದ ಆರುಮುಗಂ ಪಾತ್ರ ಮೂಲಕ ಘರ್ಜಿಸಿ ಕನ್ನಡಿಗರ ಮನಗೆದ್ದ ನಟ ರವಿಶಂಕರ್, ಇದೀಗ ದಕ್ಷಿಣ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟರಾಗಿದ್ದಾರೆ. ಸದ್ಯ ರವಿಶಂಕರ್ ನಟನೆಯ ಜೊತೆಗೆ ಮತ್ತೆ ನಿರ್ದೇಶನಕ್ಕೆ ಮರಳಿರುವುದು ಗೊತ್ತೇ ಇದೆ. ಹೀಗಾಗಿ ಹೊಸ ಸಿನಿಮಾಕ್ಕೆ ಸಜ್ಜಾಗುತ್ತಿರುವ ರವಿಶಂಕರ್ ಈ ಬಾರಿ ಆ್ಯಕ್ಷನ್ ಕಟ್ ಹೇಳುತ್ತಿರುವುದು ಮತ್ಯಾರಿಗೂ ಅಲ್ಲ, ತಮ್ಮ ಪುತ್ರನಿಗೆ ಎನ್ನುವುದೇ ವಿಶೇಷವಾಗಿದೆ.
ಇತ್ತೀಚಿಗೆ ಸ್ಟಾರ್ ನಟರ ಮಕ್ಕಳು ಸಿನಿಮಾ ರಂಗಕ್ಕೆ ಕಾಲಿಡುವುದು ಸರ್ವೇ ಸಾಮಾನ್ಯವಾಗಿದೆ. ರಾಮು- ಮಾಲಾಶ್ರೀ ಪುತ್ರಿ ಆರಾಧನಾ ಕಾಟೇರ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರೆ, ಲವ್ಲೀ ಸ್ಟಾರ್ ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಟಗರು ಪಲ್ಯ ಸಿನಿಮಾ ಮೂಲಕ ನಟನೆ ಆರಂಭಿಸಿದ್ದಾರೆ. ಸದ್ಯ ಹೊಸ ಚಿತ್ರದಲ್ಲಿ ಅಮೃತ ಬ್ಯೂಸಿಯಾಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ತೆರೆಕಂಡ ಗೌರಿ ಚಿತ್ರದ ಮೂಲ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇದೀಗ ಇವರ ಸಾಲಿಗೆ ನಟ ರವಿಶಂಕರ್ ಪುತ್ರ ಕೂಡ ಸೇರ್ಪಡೆಯಾಗಿದ್ದಾರೆ.

ಈ ಹಿಂದೆ ನಟಿ ಮಾಲಾಶ್ರೀ ಅಭಿನಯದ ದುರ್ಗಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ರವಿಶಂಕರ್, 20 ವರ್ಷಗಳ ನಂತರ ಪುತ್ರ ಅದ್ವಯ್‌ಗೆ ಸಿನಿಮಾ ಮಾಡುತ್ತಿದ್ದಾರೆ. ಹೊಸ ಸಿನಿಮಾ ಸುಬ್ರಹ್ಮಣ್ಯ ಮೂಲಕ ಅದ್ವಯ್‌ರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಕಳೆದ ವರ್ಷ ಆಯುಧ ಪೂಜೆಗೆ ಈ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿವರೆಗೂ ಸುಬ್ರಹ್ಮಣ್ಯ ಸಿನಿಮಾದ ಯಾವುದೇ ಅಪ್ಡೇಟ್ ಇರಲಿಲ್ಲ.
ಇದೀಗ ಚಿತ್ರದ ಹೊಸ ಅಪ್ಡೇಟ್ ಎಂದರೆ ಸುಬ್ರಹ್ಮಣ್ಯ ಸಿನಿಮಾದ ಶೇಕಡಾ ಅರವತ್ತರಷ್ಟು ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್-ಪ್ರೊಡಕ್ಷನ್ ಕೆಲಸ ಮುಂಬೈನ ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಹಲವಾರು ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ವಿಎಫ್‌ಎಕ್ಸ್ ಮತ್ತು ಸಿಜಿಐ ಕೆಲಸಗಳು ನಡೆಯುತ್ತಿವೆ.
ಇನ್ನು ಸುಬ್ರಹ್ಮಣ್ಯ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಆದ್ರೆ ಅದಕ್ಕೂ ಮುನ್ನ ಪ್ರೀ ಲುಕ್ ಅನಾವರಣ ಮಾಡಲಾಗಿದೆ. ಪಾಳು ಬಿದ್ದಿರುವ ದೇಗುಲದ ಮುಂದೆ ನಾಯಕ, ಕೈಯಲ್ಲಿ ಪಂಜು ಹಿಡಿದು ಬ್ಯಾಕ್ ಪೋಸ್ ಕೊಟ್ಟಿರುವ ಲುಕ್ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.

ಸಲಾರ್ ಮತ್ತು ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸುಬ್ರಹ್ಮಣ್ಯ ಸಿನಿಮಾ ತೆರೆ ಕಾಣಲು ಸಜ್ಜಾಗುತ್ತಿದೆ. ಇದೊಂದು ಫ್ಯಾಂಟಸಿ ಅಡ್ವೆಂಚರ್ಸ್ ಸಿನಿಮಾ ಆಗಿದ್ದು, ಎಸ್ ಜಿ ಮೂವೀ ಮೇಕರ್ಸ್ ಬ್ಯಾನರ್‌ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ದುರ್ಗಿಯಂತಹ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ರವಿಶಂಕರ್ ತಮ್ಮ ಪುತ್ರನ ಸಿನಿಮಾವನ್ನು ಹೇಗೆ ನಿರ್ದೇಶಿಸಿದ್ದಾರೆ ಎನ್ನುವ ಕುತೂಹಲ ಸಿನಿ ಪ್ರೇಕ್ಷಕರಲ್ಲಿದೆ.












Click it and Unblock the Notifications