ಚಿತ್ರರಂಗದಲ್ಲಿ ಶಿವಣ್ಣ-ಗೀತಕ್ಕ ನನ್ನ ತಾಯಿ-ತಂದೆ- ದುನಿಯಾ ವಿಜಯ್ ಭಾವುಕ
ಶಿವಣ್ಣ ತುಂಬಾ ಹೊಗಳಿದರೆ ಬೈಯುತ್ತಾರೆ. ನನಗೆ ಚಿತ್ರರಂಗದಲ್ಲಿ ತಾಯಿ-ತಂದೆ ಅಂತಾ ಇದ್ದರೆ ಅದು ಗೀತಕ್ಕ ಮತ್ತೆ ಶಿವಣ್ಣ. ಇವತ್ತು ನಾನು ಈ ಮಟ್ಟಕ್ಕೆ ಬಂದು ನಿಲ್ಲಬೇಕು ಎಂದರೆ ಅವರ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿರುವ ಋಣ ನನ್ನ ತಲೆ ಮೇಲಿದೆ. ಹೀಗಾಗಿ ಈ ಜನ್ಮ ಇರುವವರೆಗೂ ಶಿವಣ್ಣ ಅವರ ಮನೆಯ ಋಣವನ್ನು ನಾವು ಮರೆಯಲು ಆಗುವುದಿಲ್ಲ ಎಂದು ನಟ ದುನಿಯಾ ವಿಜಯ್ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅವರ ಧರ್ಮ ಪತ್ನಿ ಗೀತಕ್ಕ ಅವರ ಸಹಾಯವನ್ನು ನೆನಪಿಸಿಕೊಂಡರು.
ಬೈರತಿ ರಣಗಲ್ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಲೇ ಇರುತ್ತೇನೆ. ನನಗೆ ಅವತ್ತು ಸಿನಿಮಾದಲ್ಲಿ ತಾಯಿ-ತಂದೆ ಇರಲಿಲ್ಲ. ಆ ಸ್ಥಾನವನ್ನು ತುಂಬಿ. ಅದಕ್ಕೆ ಜೀವಕೊಟ್ಟವರು ಶಿವಣ್ಣ. ಅವಾಗಲೇ ಅವರು ಕಣ್ಣು ಮಾತನಾಡುವುದು ನನಗೆ ಗೊತ್ತಿತ್ತು. ಆ ಕಣ್ಣಲ್ಲಿ ಆಶೀರ್ವಾದನೂ ಇರುತ್ತಿತ್ತು. ಆ ಕಣ್ಣಲ್ಲಿ ಫೈರ್ ಕೂಡ ಇರುತ್ತಿತ್ತು. ಆ ಕಣ್ಣಲ್ಲಿ ಕೋಪನೂ ಇದೆ..ಆ ಕಣ್ಣಲ್ಲಿ ಶಾಪನೂ ಇದೆ.

ಅವರು ಬಾಯಲ್ಲಿ ಹೇಳುವುದಿಲ್ಲ. ಕಣ್ಣಲ್ಲಿ ಹೇಳುವುದು ನಡೆಯುತ್ತದೆ. ಆ ವಿಚಾರದಲ್ಲಿ ನನಗೆ ಅನುಭವ ಇದೆ. ಶಿವಣ್ಣ ಇನ್ನೊಂದು ಜನ್ಮ ಅಂತಾ ಇದ್ದರೆ ನಾನು ನಿಮಗೆ ತಮ್ಮನಾಗಿ ಹುಟ್ಟುತ್ತೇನೆ. ನೀವು ನನಗೆ ಅಣ್ಣನಾಗಿ ಹುಟ್ಟಿ. ನಾವೆಲ್ಲಾ ಒಟ್ಟಿಗೆ ಒಂದು ಮನೆಯಾಗಿ ಇರೋಣ. ಯಾವತ್ತೂ ಗೀತಕ್ಕನೇ ನಮ್ಮ ಮನೆಯಲ್ಲಿ ಅಕ್ಕನಾಗಿರಲಿ. ಇಷ್ಟು ಬಿಟ್ಟು ಬೇರೆ ಏನೂ ಹೇಳಲು ಸಾಧ್ಯವಿಲ್ಲ ಎಂದರು.

ಶಿವಣ್ಣ ಅವರ ಮನೆಯ ಟ್ಯೂಷನ್ ಟೀಚರ್‌ಗೆ ಸಿಗಬೇಕಾದ ಅವಕಾಶ ನನಗೆ ಸಿಕ್ಕಿತ್ತು.. ಸಿನಿಮಾ ಮುಗಿದ ಕೂಡಲೇ ಶಿವಣ್ಣನೇ ಮುಟ್ಟುತ್ತೀಯಾ ಅಂತಾ ಜನ ನನಗೆ ಬೈದರು. ಅದೇನೆ ಇರಲಿ ಅಂದು ಅವರು ಕೊಟ್ಟ ಅವಕಾಶ ಇಂದು ನಾನಿಲ್ಲಿದ್ದೇನೆ. ಈ ಗೀತಾ ಆಟ್ಸ್‌ನಲ್ಲಿ ಸದಾ ಸಿನಿಮಾ ನಡೆಯುತ್ತಲೇ ಇರಲಿದೆ. ಈ ಮನೆ ಒಂದು ದಾಸೋಹ ಇದ್ದ ಹಾಗೆ. ಹೀಗಾಗಿ ಪ್ರತಿ ದಿನ ಅನ್ನದಾನ ನಡೆಯುತ್ತಿರಲಿ, ಪ್ರತಿ ಸಿನಿಮಾಗಳು ಇಲ್ಲಿ ನಡೆಯುತ್ತಿರಲಿ. ಎಲ್ಲಾ ಕಲಾವಿದರಿಗೂ ಇಲ್ಲಿ ಅವಕಾಶ ಸಿಗಲಿ. ಇದನ್ನು ಚಿತ್ರರಂಗ ಹಾಗೂ ಕನ್ನಡಿಗರು ಮರೆಯುವುದಿಲ್ಲ ಎಂದು ಹೇಳಿದರು.












Click it and Unblock the Notifications