ರೇಣುಕಾಸ್ವಾಮಿ ಮೇಲೆ ದರ್ಶನ್ ವಕೀಲರಿಂದ ದೊಡ್ಡ ಆರೋಪ!
ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ನಟ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ. ನಿನ್ನೆ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರು ರೇಣುಕಾಸ್ವಾಮಿ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.
ಹೆಣ್ಣುಮಕ್ಕಳಿಗೆ ಗೌರವ ಕೊಡದ ರೇಣುಕಾಸ್ವಾಮಿಯನ್ನು ಹೀರೋ ಮಾಡಿದ್ದಾರೆ. ಆದರೆ ನನ್ನ ಕಕ್ಷಿದಾರ ಹಾಗೂ ಹೀರೋ ಆಗಿರುವ ದರ್ಶನ್ ಅವರಿಗೆ ವಿಲನ್ ಪಟ್ಟ ಕೊಡಲಾಗಿದೆ ಎಂದು ವಕೀಲರು ದೂರಿದ್ದಾರೆ ಎನ್ನಲಾಗಿದೆ. ಮೃತ ರೇಣುಕಾಸ್ವಾಮಿ ಸಮಾಜಕ್ಕೆ ಅಪಾಯಕಾರಿ ಎಂದೂ ಅವರು ವಾದಿಸಿದ್ದಾರೆ.

ದರ್ಶನ್ ಪರ ವಕೀಲ ನಾಗೇಶ್ ಅವರ ಪ್ರಕಾರ ರೇಣುಕಾಸ್ವಾಮಿ ಅವರು ಮಹಿಳೆಯರ ಅಶ್ಲೀಲ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಅವರಿಗೆ ಮಹಿಳೆಯರ ಬಗ್ಗೆ ಗೌರವ ಇರಲಿಲ್ಲ. ಅವರ ವರ್ತನೆ ಖಂಡನೀಯ ಎಂದು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ಆದರೆ, ಸಿನಿಮಾರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡಿರುವ ನನ್ನ ಕಕ್ಷಿದಾರ ದರ್ಶನ್ ಅವರನ್ನು ವಿಲನ್ ಆಗಿ ಬಿಂಬಿಸಲಾಗುತ್ತಿದೆ. ಮತ್ತೊಂದೆಡೆ ಹೆಣ್ಣಿನ ಬಗ್ಗೆ ಗೌರವವಿಲ್ಲದ ರೇಣುಕಾಸ್ವಾಮಿ ಅವರನ್ನು ನ್ಯಾಷನಲ್ ಹೀರೋ ಎಂದು ತೋರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದರ್ಶನ್ ಕೊಲೆಯೇ ಮಾಡಿಲ್ಲ, ಮೃತ ರೇಣುಕಾಸ್ವಾಮಿಯ ಕಿಡ್ನ್ಯಾಪ್ ಆಗಿಲ್ಲ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ. ದರ್ಶನ್ ಅವರನ್ನು ಸಿಲುಕಿಸಲು ಶತಪ್ರಯತ್ನ ನಡೆದಿದೆ. ತನಿಖಾಧಿಕಾರಿಗಳ ಮಾಹಿತಿಯಂತೆ ರೇಣುಕಾಸ್ವಾಮಿ ಅವರನ್ನು ಕಿಡ್ಯ್ನಾಪ್ ಮಾಡಲಾಗಿದೆ. ಆದ್ರೆ ಚಿತ್ರದುರ್ಗದಿಂದ ಬರುತ್ತಿದ್ದಾಗ ರೇಣುಕಾಸ್ವಾಮಿಯಿಂದಲೇ ಆರೋಪಿಗಳು ಹಣ ಪಾವತಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಕಿಡ್ನ್ಯಾಪ್ ಮಾಡಿರೋ ವ್ಯಕ್ತಿ ಹಣ ಪಾವತಿ ಮಾಡಲು ಹೇಗೆ ಸಾಧ್ಯ? ಎಂದು ವಾದಿಸಿದ್ದಾರೆ.

ನಟ ದರ್ಶನ್ ಅವರಿಂದ ಪೊಲೀಸರು ವಶಕ್ಕೆ ಪಡೆದಿರೋ ಬಟ್ಟೆ ಹಾಗೂ ಶೂ ಮೇಲೆ ರಕ್ತದ ಕಲೆ ಇದೆ ಎಂದು ದಾಖಲಿಸಿದ್ದಾರೆ. ಆದರೆ ದರ್ಶನ್ ಬಟ್ಟೆಗಳನ್ನು ಮೊದಲೇ ಒಗೆಯಲಾಗಿದ್ದು, ಅದರಲ್ಲಿ ರಕ್ತ ಇರಲು ಹೇಗೆ ಸಾಧ್ಯ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ದರ್ಶನ್ ಅವರನ್ನು ಈ ಕೇಸ್‌ನಲ್ಲಿ ಸಿಲುಕಿಸಲು ಪೊಲೀಸರು ಯತ್ನಿಸಿದ್ದಾರೆ. ಇನ್ನು ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡೇ ಇಲ್ಲ. ರೇಣುಕಾಸ್ವಾಮಿ ಆ ದಿನ ಎಂದಿನಂತೆಯೇ ಕೆಲಸಕ್ಕೆ ಹೋಗಿದ್ದಾನೆ, ಮಧ್ಯಾಹ್ನ ಊಟಕ್ಕೆ ಬರೋದಿಲ್ಲ, ಸ್ನೇಹಿತರ ಜೊತೆಗೆ ಹೋಗುತ್ತೇನೆ ಎಂದು ಮನೆಯವರಿಗೆ ತಿಳಿಸಿ ಹೋಗಿದ್ದಾನೆ ಎಂದು ಹೇಳಿಕೆ ದಾಖಲಾಗಿದೆ.

ಹೀಗಿದ್ದಾಗ ರೇಣುಕಾಸ್ವಾಮಿಯದ್ದು ಕಿಡ್ನ್ಯಾಪ್ ಎನ್ನಲು ಹೇಗೆ ಸಾಧ್ಯ? ಎಂದು ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ ಎಂದು ವರದಿಯಾಗಿದೆ. ನಾಳೆ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ಭವಿಷ್ಯ ನಿರ್ಧಾರವಾಗಲಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ತೂಗುದೀಪ ಅವರು ಜಾಮೀನು ಪಡೆದು ಚಿಕಿತ್ಸೆಗಾಗಿ ಹೊರಬಂದಿದ್ದಾರೆ. ಬಳಿಕ ಜಾಮೀನು ಅವಧಿ ವಿಸ್ತರಿಸುವಂತೆ ದರ್ಶನ್ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ನಿನ್ನೆ ವಿಚಾರಣೆ ನಡೆಸಿದ ಹೈಕೋರ್ಟ್, ನವೆಂಬರ್ 28ಕ್ಕೆ (ನಾಳೆ) ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದೆ.












Click it and Unblock the Notifications