Actor Darshan: ದರ್ಶನ್ ಐಷಾರಾಮಿ ಜೈಲು ಜೀವನಕ್ಕೆ ಬ್ರೇಕ್! ಬೇರೆ ಜೈಲಿಗೆ ಸ್ಥಳಾಂತರ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುನ ನಟ ದರ್ಶನ್ ಕಳೆದ ಎರಡು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಭಾನುವಾರ ಅವರು ಜೈಲಿನಲ್ಲಿ ಸಿಗರೇಟ್ ಸೇದುತ್ತಾ, ಟೀ ಕುಡಿಯುತ್ತಾ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಹರಟೆ ಹೊಡೆಯುತ್ತಿರುವ ಫೊಟೊ ವೈರಲ್ ಆಗಿದ್ದು, ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಅದಾದ ಬೆನ್ನಲ್ಲೇ ದರ್ಶನ್ ಜೈಲಿನಿಂದಲೇ ವಿಡಿಯೋ ಕಾಲ್ ಮಾಡುತ್ತಿರುವ ದೃಶ್ಯಗಳು ಕೂಡ ವೈರಲ್ ಆಗಿದೆ.
ದರ್ಶನ್ ಪರಪ್ಪನ ಅಗ್ರಹಾರ ವಿಡಿಯೋ ಮತ್ತು ಫೋಟೊ ವೈರಲ್ ಆಗುತ್ತಿದ್ದಂತೆ ಪರಪ್ಪನ ಅಗ್ರಹಾರದ ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಗೃಹ ಸಚಿವ ಜಿ. ಪರಮೇಶ್ವರ ಕೂಡ ಘಟನೆ ಬಗ್ಗೆ ಗರಂ ಆಗಿದ್ದು ಇನ್ನೂ ಯಾರಾದರೂ ಮೇಲಿನ ಅಧಿಕಾರಿಗಳು ಶಾಮೀಲಾಗಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

ಫೋಟೊ ಮತ್ತು ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಇದೀಗ ದರ್ಶನ್ ಮತ್ತು ಸಹಚರರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ಕೂಡ ಯೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ದರ್ಶನ್ ಮತ್ತು ಗ್ಯಾಂಗ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗದಂತೆ ತಪ್ಪಿಸಲು ಇದೀಗ ಅಧಿಕಾರಿಗಳು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಪರಪ್ಪನ ಅಗ್ರಹಾರದಲ್ಲಿ ಪ್ರಭಾವ ಹೊಂದಿದ್ದು, ಇದನ್ನು ಬಳಸಿಕೊಂಡು ದರ್ಶನ್‌ಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ದರ್ಶನ್‌ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡದೇ ಇದ್ದರೂ, ವಿಲ್ಸನ್ ಗಾರ್ಡನ್ ನಾಗನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದು ಸಂಜೆ (ಆಗಸ್ಟ್ 26) ವೇಳೆಗೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಧಿಕಾರಿಗಳ ವಿರುದ್ಧ ಭಾರಿ ಆಕ್ರೋಶ
ದರ್ಶನ್‌ಗೆ ಜೈಲಿನಲ್ಲಿ ಸಿಗುತ್ತಿರುವ ರಾಜಾತಿಥ್ಯ ನೋಡಿ ಜನ ಶಾಕ್ ಆಗಿದ್ದಾರೆ. ಕೊಲೆ ಆರೋಪಿಯೊಬ್ಬನಿಗೆ ಜೈಲಿನಲ್ಲಿ ಈ ರೀತಿ ಸವಲತ್ತು ಸಿಗುವುದಾದರೆ ಆತ ಪಶ್ಚಾತಾಪ ಹೇಗೆ ಪಡುತ್ತಾನೆ ಎಂದು ಪ್ರಶ್ನೆ ಮಾಡಲಾಗಿದೆ. ಹಣ, ಪ್ರಭಾವ ಇದ್ದವರಿಗೆ ಜೈಲಿನಲ್ಲೂ ಎಲ್ಲಾ ಸವಲತ್ತು ಸಿಗುತ್ತದೆ, ಆದರೆ ದುಡ್ಡಿಲ್ಲದ ಬಡವನಿಗೆ ಮಾತ್ರ ದೇಶದ ಎಲ್ಲಾ ಕಾನೂನುಗಳು ಅನ್ವಯಿಸುತ್ತವೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications