Actor Darshan: ಮಾಧ್ಯಮಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್; ಕಾರಣವೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಅವರ ನ್ಯಾಯಾಂಗ ಬಂಧನ ಅವಧಿ ಇಂದು ಮುಕ್ತಾಯವಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿರುವ ಕಾರಣ, ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ನಟ ದರ್ಶನ್ ಹೈಕೋರ್ಟ್‌ಗೆ ವಿಶೇಷ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.
ಚಾರ್ಜ್‌ಶೀಟ್‌ನಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸದಂತೆ ಆದೇಶ ನೀಡಲು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಹಲವು ಆಘಾತಕಾರಿ ಅಂಶಗಳು ಇರುವ ಸಾಧ್ಯತೆ ಇದ್ದು, ಈಗಾಗಲೇ ಹಲವು ವಿಚಾರಗಳು ಬಹಿರಂಗವಾಗಿವೆ. ರೇಣುಕಾಸ್ವಾಮಿಯ ಫೋಟೊಗಳು ಕೂಡ ಬಹಿರಂಗವಾಗಿದ್ದವು, ಫೋಟೊ ನೋಡಿದವರು ದರ್ಶನ್ ಮಾಡಿದ ಕೃತ್ಯವನ್ನು ಟೀಕಿಸಿದ್ದರು.

ಚಾರ್ಜ್‌ಶೀಟ್‌ನಲ್ಲಿರುವ ಮಾಹಿತಿಗಳು ಬಹಿರಂಗವಾದರೆ ತಮ್ಮ ಮೇಲೆ ಇನ್ನಷ್ಟು ಕೆಟ್ಟ ಅಭಿಪ್ರಾಯ ಮೂಡಬಹುದು ಎನ್ನುವ ಕಾರಣಕ್ಕೆ ಚಾರ್ಜ್‌ಶೀಟ್‌ನಲ್ಲಿರುವ ವಿಚಾರಗಳನ್ನು ಬಹಿರಂಗಪಡಿಸದಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.
ದರ್ಶನ್ ಬಂಧನವಾಗಿ ಮೂರು ತಿಂಗಳು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ರನ್ನು ಬಂಧಿಸಿ ಮೂರು ತಿಂಗಳಾಗಿದೆ. ಎರಡು ತಿಂಗಳು ಪರಪ್ಪನ ಅಗ್ರಹಾರದಲ್ಲಿದ್ದ ಅವರನ್ನು ಇದೀಗ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇದೀಗ ಬಳ್ಳಾರಿ ಜೈಲಿನಿಂದ ಬೇರೆ ಜೈಲಿಗೆ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡುವ ಸಾಧ್ಯತೆ ಇದೆ.
ಜಾಮೀನು ಅರ್ಜಿ ವಿಚಾರಣೆ
ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಆರೋಪಿಗಳು ರಾಜ್ಯದ ವಿವಿಧ ಜೈಲುಗಳಲ್ಲಿರುವ ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಿದೆ. ಆರೋಪಿಗಳ ಪರ ವಾದ ಮಾಡುವ ವಕೀಲರಿಗೆ ಇಂದು ಚಾರ್ಜ್‌ಶೀಟ್‌ನ ಪ್ರತಿ ಸಿಗಲಿದೆ. ವಕೀಲರಿಗೆ ಚಾರ್ಜ್‌ಶೀಟ್ ಸಿಕ್ಕರೆ ಅನೇಕ ವಿಚಾರಗಳು ಬಹಿರಂಗವಾಗಲಿದೆ.
ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿನ ವಿವರಗಳು ಬಹಿರಂಗವಾಗಿವೆ. ದರ್ಶನ್ ಪೊಲೀಸರ ಮುಂದೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಆದರೆ ರೇಣುಕಾಸ್ವಾಮಿಯನ್ನು ತಾನು ಕೊಲೆ ಮಾಡಿಲ್ಲ, ಆತನ ಮೇಲೆ ಹಲ್ಲೆ ಮಾಡಿ ಅಲ್ಲಿಂದ ಬಂದೆ ಎಂದು ಹೇಳಿದ್ದಾರೆ. ಪವಿತ್ರಾ ಗೌಡ ಸೇರಿದಂತೆ ಎಲ್ಲಾ 17 ಆರೋಪಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇಂದು ಆರೋಪಿಗಳ ಪರ ವಕೀಲರಿಗೆ ಚಾರ್ಜ್‌ಶೀಟ್ ಪ್ರತಿಗಳು ಸಿಕ್ಕಿದ್ದು, ಸೆಪ್ಟೆಂಬರ್ 12ರಂದು ಜಾಮೀನು ಅರ್ಜಿ ಸಲ್ಲಿಸುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.












Click it and Unblock the Notifications