ಹೊಟ್ಟೆಪಾಡಿಗಾಗಿ ಗಾರೆ ಕೆಲಸಕ್ಕೆ ಹೋದ 'ಗಿಚ್ಚಿ-ಗಿಲಿಗಿಲಿ' ಖ್ಯಾತಿಯ ನಟ
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದವರಿಗೆ ಸರಿಯಾದ ಸಮಯದಲ್ಲಿ ಅವಕಾಶ ಸಿಗದಿದ್ದರೆ ಹೊಟ್ಟೆಪಾಡಿಗೂ ಅಲೆದಾಡಬೇಕು ಎನ್ನುವ ಮಾತುಗಳು ಕಲಾವಿದರ ಬಾಯಲ್ಲೇ ಹೆಚ್ಚಾಗಿ ಕೇಳಿಬರುತ್ತಿರುತ್ತವೆ. ಒಂದು ಸಮಯದಲ್ಲಿ ರಾಜ್ಯಾದ್ಯಂತ ಜನಪ್ರಿಯತೆ ಪಡೆದರೂ ಅವಕಾಶಗಳು ಸಿಗದೆ, ಬದುಕು ನಡೆಸಲು ಪರದಾಡುವ ಸ್ಥಿತಿಯೂ ಇದೆ. ಇದಕ್ಕೆ ಈಗ ಮತ್ತೊಂದು ತಾಜಾ ಉದಾಹರಣೆ ಎನ್ನುವಂತೆ ಖ್ಯಾತ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಖ್ಯಾತ ನಟರೊಬ್ಬರು ಅವಕಾಶಗಳಿಲ್ಲದೆ ಬದುಕಿಗಾಗಿ ಗಾರೆ ಕೆಲಸ ಮಾಡುತ್ತಿದ್ದಾರೆ. ಈ ವಿಡಿಯೋಗಳನ್ನು ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಾದ ಗಿಚ್ಚಿ ಗಿಲಿಗಿಲಿ ಹಾಗೂ ಮಜಾಭಾರತ ಕಾರ್ಯಕ್ರಮಗಳಲ್ಲಿ ಮಿಂಚಿದ್ದ ಹಾಸ್ಯ ಕಲಾವಿದರೊಬ್ಬರು ಈಗ ಗಾರೆ ಕೆಲಸ ಮಾಡುತ್ತಿದ್ದಾರೆ. ಅದು ಬೇರೆ ಯಾರೂ ಅಲ್ಲ, ಚಂದ್ರಪ್ರಭ. ಹೌದು ಇವರ ಹಾಸ್ಯಕ್ಕೆ ಇಡೀ ಕರ್ನಾಟಕವೇ ನಕ್ಕುನಲಿದಿತ್ತು. ಕಾಮಿಡಿ ನಟ ಚಂದ್ರಪ್ರಭ ಅವರು ವೇದಿಕೆಗೆ ಬಂದರೆ ಸಾಕು ನಗೆಗಡಲಲ್ಲಿ ತೇಲಿಸುತ್ತಿದ್ದರು. ಅಂತಹ ನಟನಿಗೆ ಇಂದು ಅವಕಾಶಗಳ ಕೊರತೆ ಎದುರಾಗಿದೆ. ದಿಕ್ಕುತೋಚದೆ ಕೊನೆಗೆ ಅವರು ಹೊಟ್ಟೆಪಾಡಿಗಾಗಿ ಗಾರೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಚಂದ್ರಪ್ರಭ ಅವರು ರಿಯಾಲಿಟಿ ಶೋಗಳಿಗೆ ಬರುವ ಮುನ್ನ ಗಾರೆ ಕೆಲಸವನ್ನೇ ನಂಬಿಕೊಂಡಿದ್ದರು. ಇಲ್ಲಿ ಅವರ ಪ್ರತಿಭೆಗೆ ಆರಂಭದಲ್ಲಿ ಒಳ್ಳೆಯ ವೇದಿಕೆ ಸಿಕ್ಕರೂ, ದಿನ ಕಳೆದಂತೆ ಅವಕಾಶಗಳು ಅರಸಿ ಬರುತ್ತಿಲ್ಲ. ಈ ಕಾರಣಕ್ಕೆ ತನಗೆ ಅನ್ನ ಹಾಕುತ್ತಿದ್ದ ಹಳೆಯ ಕಸುಬಿಗೆ ಮತ್ತೆ ಮರಳಿದ್ದಾರೆ. ಇಲ್ಲಿ ಸೆಲೆಬ್ರಿಟಿಯಾಗಿ ಮಿಂಚಿದ್ದ ಚಂದ್ರಪ್ರಭ ಅವರು ಅಲ್ಲಿ ಸಾಮಾನ್ಯ ಕೆಲಸಗಾರರಂತೆ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ.
ಇಟ್ಟಿಗೆಗಳನ್ನು ಹೊರುತ್ತಾ, ಸಿಮೆಂಟ್ ಕಲೆಸುತ್ತಾ, ಪ್ಲಾಸ್ಟಿಂಗ್ ಮಾಡುತ್ತಿರುವ ವಿಡಿಯೋಗಳನ್ನು ಚಂದ್ರಪ್ರಭ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಯಾವುದೇ ಬೇಸರವಿಲ್ಲದೆ ನಗು ನಗುತ್ತಲೇ ಗಾರೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ನಿಜವಾದ ಪ್ರತಿಭೆಗೆ ಸಿಗುವ ಬೆಲೆ ಇದೇನಾ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಈಗೆಲ್ಲ ಸ್ವಲ್ಪ ಹೆಸರು ಬಂದಾಕ್ಷಣ ತಾವು ನಡೆದು ಬಂದ ದಾರಿಯನ್ನೇ ಮರೆಯುತ್ತಾರೆ. ಆದರೆ ಚಂದ್ರಪ್ರಭ ಅವರು ಎಂದಿನಂತೆ ತಮ್ಮ ಹಳೆಯ ವೃತ್ತಿಯಲ್ಲಿ ಹೆಮ್ಮೆಯಿಂದ ತೊಡಗಿರುವುದು ಶ್ಲಾಘನೀಯ ಎನ್ನುತ್ತಿದ್ದಾರೆ.
ಎರಡು ತಿಂಗಳಿಂದ ಗಾರೆ ಕೆಲಸ!
'ನಾನು ಮೊದಲು ಗಾರೆ ಕೆಲಸ ಮಾಡುತ್ತಿದ್ದೆ. ಆ ನಂತರ ಸಿನಿಮಾಗಳಿಗೆ ಬಂದಿದ್ದು, ಈಗ ಮತ್ತೆ ಗಾರೆ ಕೆಲಸ ಮಾಡುತ್ತಿದ್ದೇನೆ. ಗಾರೆ ಕೆಲಸ ಮಾಡಿ 17 ವರ್ಷಗಳಾಗಿತ್ತು. ಈಗ ಮತ್ತೆ ಎರಡು ತಿಂಗಳಿನಿಂದ ಗಾರೆ ಕೆಲಸ ಮಾಡ್ತಿದ್ದೇನೆ. ಇಲ್ಲಿವರೆಗೆ ಯಾವುದೇ ಸೀರಿಯಲ್ ಅಥವಾ ಸಿನಿಮಾಗಳಲ್ಲಿ ಅವಕಾಶ ಸಿಗಲಿಲ್ಲ. 10 ವರ್ಷಗಳಲ್ಲಿ ಸುಮಾರು 80 ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಈ ವರ್ಷ ಒಂದೂ ಸಿನಿಮಾ, ಸೀರಿಯಲ್ ಅವಕಾಶ ಸಿಗಲಿಲ್ಲ' ಎಂದು ನಟ ಚಂದ್ರಪ್ರಭ ವಾಸ್ತವ ಬಿಚ್ಚಿಟ್ಟಿದ್ದಾರೆ.

'ಟಿವಿಯಲ್ಲಿ ಮಿಂಚುತ್ತಿದ್ದೆ. ಈಗ ನೋಡಿದ್ರೆ ಗಾರೆ ಕೆಲಸ ಮಾಡ್ತೀಯ ಅಂತ ಎಲ್ಲರೂ ಕೇಳ್ತಾರೆ. ಆದರೆ ನಾನು ಮೊದಲು ಊಟ ಮಾಡುತ್ತಿದ್ದೇ ಈ ಕೆಲಸದಿಂದ. ನಮ್ಮ ತಂದೆ ನನಗೆ ಮೊದಲು ಕಲಿಸಿ ಕೊಟ್ಟಿದ್ದೇ ಗಾರೆ ಕೆಲಸ. ಬಳಿಕ ನಾನು ಬೆಂಗಳೂರಿಗೆ ಬಂದು ಹತ್ತು ವರ್ಷ ಆಗಿರಬಹುದು. ಈಗ ಮದುವೆ ಕೂಡ ಆಗಿದೆ. ಅವಕಾಶಗಳಿಲ್ಲ, ದುಡಿಮೆಗೆ ಇದು ಅನಿವಾರ್ಯ' ಎಂದು ಚಂದ್ರಪ್ರಭ ಸಂಕಟ ಹೊರಹಾಕಿದ್ದಾರೆ. ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಅವಕಾಶಗಳ ಕೊರತೆ ಆದಾಗ ಬದುಕು ಹೇಗಿರುತ್ತೆ ಎಂಬುದಕ್ಕೆ ಚಂದ್ರಪ್ರಭ ಅವರ ಪರಿಸ್ಥಿತಿ ಉತ್ತಮ ಉದಾಹರಣೆಯಾಗಿದೆ.












Click it and Unblock the Notifications