18 ವರ್ಷದ ಮಡದಿ, 6 ತಿಂಗಳ ಮಗು,500 ರೂ ಬಾಡಿಗೆ: ಜಗ್ಗೇಶ್ ಮತ್ತೆ ನೆನಪಿಸಿಕೊಂಡಿದ್ದೇನು?
ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಅವರ ಬದುಕು ಇಂದು ಎಷ್ಟೋ ಜನರಿಗೆ ಸ್ಫೂರ್ತಿ. ಇಂದು ಜಗ್ಗೇಶ್ ಕನ್ನಡ ಚಿತ್ರರಂಗದ ನಟರಲ್ಲಿ ಅಗ್ರಗಣ್ಯರು. ಜೊತೆಗೆ ರಾಜಕೀಯದಲ್ಲೂ ಕೇಂದ್ರಮಟ್ಟದ ನಾಯಕ. ಆದರೆ ಆ ದಿನಗಳಲ್ಲಿ ಈ ವ್ಯಕ್ತಿ ಕಂಡ ಕಷ್ಟ ಎಂತಹದ್ದು ಎನ್ನುವುದನ್ನು ನೀವು ಈಗಾಗಲೇ ಅವರ ಕೆಲವು ಸಂದರ್ಶನಗಳಲ್ಲಿ ಕೇಳಿರಬಹುದು.
ಸದ್ಯ ಮತ್ತೊಬ್ಬರಿಗೆ ಸ್ಫೂರ್ತಿ ಎನ್ನುವಷ್ಟರ ಮಟ್ಟಿಗೆ ಜೀವನವನ್ನು ರೂಪಿಸಿಕೊಂಡಿರುವ ನಟ ಜಗ್ಗೇಶ್, ಇದೀಗ ಮತ್ತೆ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಹಳೆಯ ಫೋಟೋವೊಂದನ್ನು ಹಂಚಿಕೊಂಡಿರುವ ಜಗ್ಗೇಶ್ ಜೀವನದ ಒಂದು ಘಟ್ಟದ ಬಗ್ಗೆ ಸುಧೀರ್ಘವೊಂದನ್ನು ಪೋಸ್ಟ್ ಹಂಚಿಕೊಂಡಿದ್ದಾರೆ.

'1987 ಆಗ 24 ವರ್ಷ ಪ್ರಾಯ. 18 ವರ್ಷದ ಮಡದಿ ಪರಿಮಳ. 6 ತಿಂಗಳ ಮಗು ಗುರುರಾಜ. 15×10 ಮನೆ 500 ರೂಪಾಯಿ ಬಾಡಿಗೆ. 250 ರೂಪಾಯಿ ಮನೆ ಖರ್ಚು..2 ಜೀನ್ಸ್ ಪ್ಯಾಂಟ್..4 ಶರ್ಟ್ ಧರಿಸಲು..ಇಂಥ ಸ್ಥಿತಿಯಲ್ಲಿ ಗೆದ್ದೆ ಗೆಲ್ಲುವೆ ಒಂದು ದಿನ ಎಂಬ ಛಲ..
ಮನಸ್ಸನ್ನು ರೇಸ್ ಕುದುರೆಯಂತೆ ತಯಾರು ಮಾಡಿ ಕೆಲಸಕ್ಕೆ ಬರದ ಯಾವ ಚಿಂತೆಯು ಮಾಡದೆ ಸ್ನಾನ ಪೂಜೆ ಇದ್ದದ್ದು ತಿಂದು ಕೆಲಸ ಹುಡುಕಿ ಗಾಂಧಿನಗರ ಅಲೆಯುವ ಕಾಯಕ. ಅಂದಿನ ಕೆಲ ನಿರ್ದೇಶಕ ನಿರ್ಮಾಪಕರಿಗೆ ನನ್ನ ಮೇಲೆ ಕರುಣೆ ತೋರಿ ಅನ್ನ ಹಾಕಿ ಉತ್ಸಾಹ ತುಂಬಿದರೆ, ಅನೇಕರು ಅಪಮಾನ ಮಾಡಿ ಸಿನಿಮ ಬಿಟ್ಟು ಕೂಲಿ ಮಾಡು ಎಂದು ಅಟ್ಟುತ್ತಿದ್ದರು.
ಆಗ ನನಗೆ ಒಬ್ಬ ಗುರು ಸಿಕ್ಕ ಅವರೇ ಕಲಿಯುಗ ಕಲ್ಪತರು ರಾಯರು. ಅವರ ಹಾರೈಕೆಯಿಂದ ನಾನು ಹೇಗೆ ಬೆಳೆದೆ ಅರಿವಿಲ್ಲ. ಮನಸ್ಸಿನ ಬೇಡಿಕೆ ಹೇಗೆ ಈಡೇರಿತು ಅರಿವಿಲ್ಲ. ಅಂದಿನ 24 ವರ್ಷದವ ಇಂದು 62 ವರ್ಷವಾಗಿದೆ ಅರಿವಿಲ್ಲ. ಶ್ರೀ ಕೃಷ್ಣ ಎಲ್ಲ ಮನುಕುಲಕ್ಕೆ ಒಂದು ಮಾತು ಕೊಟ್ಟಿದ್ದಾನೆ. 'ಶ್ರದ್ಧಾವಾನ್ ಲಭತೆ ಜ್ಞಾನಂ' ಅರ್ಥಾತ್ ಸುಂದರವಾಗಿ ಚಿಂತಿಸಿ ಬಾಳು ಮಿಕ್ಕದ್ದು ನನಗೆ ಬಿಡು ಎಂಬ ಅರ್ಥ.

ಜ್ಞಾನ ಕಲಿಸಿದ ಅಮ್ಮ, ಬದುಕು ಕಲಿಸಿದ ಅಪ್ಪ, ಅನ್ನ ನೀಡಿದ ಚಿತ್ರರಂಗಕ್ಕೆ ಶರಣು. ಮಿತ್ರರೇ ಶುದ್ಧರಾಗಿ ಶ್ರಮಿಸಿ ಗೆದ್ದ ಮನುಷ್ಯರಾಗಿ.
ನನ್ನ ಬದುಕಿನ ನೆನಪಿನ ಅಂಗಳ. ದೆಹಲಿಯ ಮನೆಯಲ್ಲಿ ಒಬ್ಬನೇ. ಕೂತಾಗ ನೋಡಿ ಮರೆತ ಚಿತ್ರದಂತೆ ನೆನಪಾಯಿತು ನನ್ನ ಬದುಕು' ಎಂದು ನಟ ಹಾಗೂ ರಾಜಕಾರಣಿ ಜಗ್ಗೇಶ್ ತಮ್ಮ ಬದುಕಿನ ಬಗ್ಗೆ ಬಹಳ ಅರ್ಥಪೂರ್ಣ ವಾದ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿ ಚಿತ್ರರಂಗ ಕಷ್ಟ, ಇಲ್ಲಿ ಕಲೆಗೆ ಬೆಲೆ ಇಲ್ಲ, ಅವಕಾಶ ಇಲ್ಲ, ಎಂದೆಲ್ಲಾ ಹೇಳಿಕೊಂಡು ನಟನಾ ಕ್ಷೇತ್ರವನ್ನು ಅರ್ಧಕ್ಕೆ ಬಿಡಬೇಕು ಎಂದುಕೊಂಡವರು, ಒಮ್ಮೆ ನಟ ಜಗ್ಗೇಶ್ ಕ್ರಮಿಸಿ ಬಂದ ದಾರಿಯನ್ನು ನೋಡಬೇಕು.












Click it and Unblock the Notifications