Ajay Rao: ಭಿಕ್ಷೆ ಬೇಡುವ ಸ್ಥಿತಿ ಬಂದಿದೆ: ನಟ ಅಜಯ್ ರಾವ್ ಹೀಗಂದಿದ್ದೇಕೆ?
ನಟ ಅಜಯ್ ರಾವ್ ನಟಿಸಿ, ನಿರ್ಮಾಣ ಮಾಡಿರುವ ಯುದ್ಧಕಾಂಡ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಅಜಯ್ ರಾವ್ ಅವರು ತುಂಬಾ ಕಷ್ಟಪಟ್ಟು ಈ ಸಿನಿಮಾಗೆ ಬಂಡವಾಳ ಹಾಕಿದ್ದು, ಕೋಟಿ ಕೋಟಿ ಸಾಲವೂ ಮಾಡಿಕೊಂಡಿದ್ದಾಗಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಈ ಸಿನಿಮಾಗೆ ಹಣ ಹೊಂದಿಸಲು ತಮ್ಮ ನೆಚ್ಚಿನ ಕಾರನ್ನು ಕೂಡ ಮಾರಾಟ ಮಾಡಿದ್ದ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈ ಸಿನಿಮಾಗೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ. ಆದರೆ ಇದೀಗ ನಟ ಅಜಯ್ ರಾವ್ ಅವರು ಭಿಕ್ಷೆ ಬೇಡುವ ಸ್ಥಿತಿ ಬಂದಿದೆ ಎನ್ನುವ ಮೂಲಕ ಬೇಸರದ ವಿಚಾರವನ್ನು ಹೇಳಿಕೊಂಡಿದ್ದಾರೆ.
ಈ ಸಿನಿಮಾಗೆ ತಾವೇ ನಿರ್ಮಾಪಕರೂ ಆಗಿರುವುದರಿಂದ ಅಜಯ್ ರಾವ್ ಅವರು ಬಹಳ ಸವಾಲುಗಳನ್ನು ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಕಳೆದ ವಾರವಷ್ಟೇ ಈ ಸಿನಿಮಾ ರಿಲೀಸ್ ಆಗಿ ಪ್ರದರ್ಶನ ಕಾಣುತ್ತಿದೆ. ಇದರ ಈ ಸಿನಿಮಾಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಈ ಬಗ್ಗೆ ಅಜಯ್ ರಾವ್ ವಿಡಿಯೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಯುದ್ಧಕಾಂಡ ಸಿನಿಮಾಗೆ ಮಲ್ಟಿಪ್ಲೆಕ್ಸ್‌ಗಳಿಂದ ದೊಡ್ಡ ಸಮಸ್ಯೆಯಾಗಿದ್ದು, ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ ಮುಂದೆ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ ಎಂದು ಸಂಕಟ ಹೊರಹಾಕಿದ್ದಾರೆ.

ಮಲ್ಟಿಪ್ಲೆಕ್ಸ್ಗಳ ಮುಂದೆ ಕನ್ನಡ ಸಿನಿಮಾಗಳು ಭಿಕ್ಷೆ ಬೇಡುವ ಪರಿಸ್ಥಿತಿ ಇದೆ. ಈ ಮಲ್ಟಿಪ್ಲೆಕ್ಸ್ಗಳು ನಮ್ಮ ಕನ್ನಡ ಸಿನಿಮಾಗಳಿಗೆ ಶೋ ಟೈಂಗಳನ್ನು ಸರಿಯಾಗಿ ನೀಡುತ್ತಿಲ್ಲ. ಕನ್ನಡ ಸಿನಿಮಾಗಳಿಗೆ ಒಳ್ಳೆಯ ಪ್ರದರ್ಶನದ ಸಮಯ ಕೊಡಿ ಎಂದು ನಾವು ಅವರ ಮುಂದೆ ಭಿಕ್ಷೆ ಬೇಡಬೇಕು. ನಮ್ಮ ಸಿನಿಮಾಗೆ ಈ ಹಿಂದೆಯೂ ಒಳ್ಳೆಯ ಪ್ರದರ್ಶನದ ಸಮಯ ನೀಡಿರಲಿಲ್ಲ. ಆದರೂ ಜನ ಮುಂದೆ ಬಂದು ನಮ್ಮ ಸಿನಿಮಾ ಗೆಲ್ಲಿಸಿದರು ಎಂದು ಅಜಯ್ ರಾವ್ ಹೇಳಿದ್ದಾರೆ.
ಮಲ್ಟಿಪ್ಲೆಕ್ಸ್ನವರು ನಮಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಈ ಗುರುವಾರದಂದು ಕೆಲ ಪರಭಾಷೆಯ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ನಮ್ಮ ಸಿನಿಮಾಗಳ ಪ್ರದರ್ಶನ ಕಡಿಮೆ ಮಾಡುತ್ತಿದ್ದಾರೆ. ಅಲ್ಲದೆ ಪ್ರದರ್ಶನದ ಸಮಯ ಕೂಡ ಬದಲಾವಣೆ ಮಾಡುತ್ತಿದ್ದಾರೆ. ನಾವು ನಮ್ಮ ಸಿನಿಮಾಗಳಿಗೆ ಒಳ್ಳೆಯ ಶೋ ಟೈಮ್ ಕೊಡಿ ಎಂದು ಬೇಡಿಕೊಳ್ಳುತ್ತಿದ್ದರೂ ನಮ್ಮ ಮನವಿ ತಿರಸ್ಕರಿಸುತ್ತಿದ್ದಾರೆ. ಬದಲಿಗೆ ಪರಭಾಷೆಯ ಸಿನಿಮಾಗಳಿಗೆ ಮಣೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಸಮಸ್ಯೆ ಬಗ್ಗೆ ಕರ್ನಾಟಕ ಫಿಲ್ಮ್ ಚೇಂಬರ್, ಕನ್ನಡಪರ ಸಂಘಟನೆಗಳು ಹಾಗೂ ಕಲಾವಿದರ ಸಂಘಗಳು ಕೂಡ ಪ್ರಶ್ನೆ ಮಾಡಬೇಕಾಗಿದೆ. ಈ ವಿಚಾರದಲ್ಲಿ ನಾನು ಮಲ್ಟಿಪ್ಲೆಕ್ಸ್‌ಗಳನ್ನು ಪ್ರಶ್ನಿಸುತ್ತಿದ್ದೇನೆ. ಅವರ ನಡೆಯನ್ನು ಖಂಡಿಸುತ್ತಿದ್ದೇನೆ, ನನ್ನ ಈ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಿ. ಇದು ಕನ್ನಡ ಸಿನಿಮಾಗಳು ಮಾತ್ರವಲ್ಲ, ಇಲ್ಲಿ ಸಂಸ್ಕೃತಿ ಹಾಗೂ ಭಾಷೆ ಉಳಿಸುವ ಪ್ರಯತ್ನವೂ ಇದಾಗಿದೆ ಎಂದು ಅಜಯ್ ರಾವ್ ಕೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಹಲವು ಕನ್ನಡಿಗರು ಅಜಯ್ ರಾವ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.












Click it and Unblock the Notifications