60ನೇ ಹುಟ್ಟುಹಬ್ಬಕ್ಕೆ 3ನೇ ಗರ್ಲ್ ಫ್ರೆಂಡ್ ಪರಿಚಯಿಸಿದ ನಟ ಆಮಿರ್ ಖಾನ್
ಬಾಲಿವುಡ್ ನಟ ಆಮಿರ್ ಖಾನ್ ಇಂದು ತಮ್ಮ 60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈಗಾಗಲೇ ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳು ಹಾಗೂ ಆಪ್ತರ ಜೊತೆ ಆರಂಭಿಸಿರುವ ಆಮಿರ್ ಖಾನ್, ಈ ವಿಶೇಷ ದಿನದಂದೇ ಒಬ್ಬ ವಿಶೇಷ ವ್ಯಕ್ತಿಯನ್ನು ಜನರಿಗೆ ಪರಿಚಯಿಸಿದ್ದಾರೆ.
60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಆಮಿರ್ ಖಾನ್ ತಮ್ಮ ಮೂರನೇ ಗರ್ಲ್ ಫ್ರೆಂಡ್ ಗೌರಿ ಎನ್ನುವವರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದು, ತಮ್ಮ ಪ್ರೀತಿ ಬಗ್ಗೆ ಒಪ್ಪಿಕೊಂಡಿದ್ದಾರೆ. ನಿನ್ನೆ ಆಮಿರ್ ಖಾನ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿದ್ದು, ಈ ವೇಳೆ ತಮ್ಮ ಜೊತೆಯಲ್ಲಿದ್ದ ಗೌರಿ ಅವರನ್ನು ಪರಿಚಯಿಸಿ ಇವರೇ ತಮ್ಮ ಪ್ರೀತಿ ಎಂದು ಹೇಳಿಕೊಂಡಿದ್ದಾರೆ.

ಆಮಿರ್ ಖಾನ್ 1986ರಲ್ಲಿ ರೀನಾ ದತ್ತ ಅವರನ್ನು ಮದುವೆಯಾಗಿದ್ದರು, ಬಳಿಕ ಅವರಿಂದ ದೂರಾಗಿ 2005ರಲ್ಲಿ ಕಿರಣ್ ರಾವ್ ಎನ್ನುವವರನ್ನು ಮದುವೆಯಾದರು. 2021ರಲ್ಲಿ ಕಿರಣ್ ರಾವ್ ಜೊತೆಗಿನ ಸಂಬಂಧಕ್ಕೆ ಅಂತ್ಯ ಹಾಡಿ ವಿಚ್ಛೇದನ ಪಡೆದಿದ್ದರು. ಈಗಾಗಲೇ ಎರಡು ಮದುವೆಯಾಗಿ ವಿಚ್ಛೇದನ ಪಡೆದುಕೊಂಡು ಒಂಟಿಯಾಗಿದ್ದ ಆಮಿರ್ ಖಾನ್ ಇದೀಗ ಮೂರನೇ ಮದುವೆಗೆ ಸಜ್ಜಾಗಿದ್ದಾರೆ.
ತಮ್ಮ ಪ್ರೋಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುವ ಗೌರಿ ಎನ್ನುವ ಮಹಿಳೆಯನ್ನೇ ಆಮಿರ್ ಖಾನ್ ಪ್ರೀತಿಸುತ್ತಿದ್ದಾರೆ. 25 ವರ್ಷಗಳಿಂದ ಆಮಿರ್ ಖಾನ್ ಹಾಗೂ ಗೌರಿ ಪರಿಚಯಸ್ಥರಾಗಿದ್ದು, ಕಳೆದ 18 ತಿಂಗಳುಗಳಿಂದ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈ ಬಗ್ಗೆ ಸ್ವತಃ ಹೇಳಿಕೊಂಡಿರುವ ಆಮಿರ್ ಖಾನ್, ಗೌರಿ ಅವರ ಫೋಟೋವನ್ನು ಎಲ್ಲಿಯೂ ವೈರಲ್ ಮಾಡದಂತೆ ಹುಟ್ಟುಹಬ್ಬದ ಆಚರಣೆಗೆ ಬಂದವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಮೂಲದ ಗೌರಿ ಪರಿಚಯ
ಕಳೆದ 25 ವರ್ಷಗಳಿಂದ ಆಮಿರ್ ಖಾನ್ ಪ್ರೋಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿರುವ ಗೌರಿ ಕರ್ನಾಟಕ ರಾಜ್ಯದ ಬೆಂಗಳೂರು ಮೂಲದವರು. ಹಲವು ವರ್ಷಗಳಿಂದ ಮುಂಬೈನಲ್ಲಿ ವಾಸವಿದ್ದು, ಬಾಲಿವುಡ್ ಚಿತ್ರರಂಗದ ತೆರೆ ಹಿಂದಿನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಗೌರಿ ಅವರಿಗೆ ಕೂಡ ಈಗಾಗಲೇ ಮದುವೆಯಾಗಿದ್ದು, ಆರು ವರ್ಷದ ಮಗನಿದ್ದಾನೆ ಎನ್ನಲಾಗಿದೆ. ಆಮಿರ್ ಖಾನ್ ಹುಟ್ಟುಹಬ್ಬದಲ್ಲಿ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದು ಗೌರಿ ಫೋಟೋ ಎನ್ನಲಾಗುತ್ತಿದೆ.












Click it and Unblock the Notifications