ಅವರ ತಂಟೆಗೆ ಹೋಗಬೇಡಿ..! ದರ್ಶನ್ ಪೇಜ್‌ನಿಂದ ಫ್ಯಾನ್ಸ್‌ಗೆ ಮನವಿ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ತೂಗುದೀಪ ಅವರಿಗೆ ಇಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಎಲ್ಲೆಡೆ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಇದೇ ವೇಳೆ ದರ್ಶನ್ ಅವರ ಅಫೀಶಿಯಲ್ ಪೇಜ್‌ನಿಂದ ಅಭಿಮಾನಿಗಳಿಗೊಂದು ಸಂದೇಶ ರವಾನೆಯಾಗಿದೆ.
ದರ್ಶನ್ ಅವರ ಕೆಲ ಅಭಿಮಾನಿಗಳು ನಮ್ ಬಾಸ್ ಈಚೆ ಬರ್ಲಿ, ನಿಮ್ಮನ್ನೆಲ್ಲ ಒಂದು ಕೈ ನೋಡ್ಕೋತೀವಿ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕುತ್ತಿದ್ದರು. ಅಲ್ಲದೆ ದರ್ಶನ್ ಅವರ ವಿಚಾರವಾಗಿ ಕೆಲವು ನಟರು ವ್ಯಕ್ತಪಡಿಸಿದ್ದ ಅಭಿಪ್ರಾಯಗಳಿಂದಲೂ ಅಭಿಮಾನಿಗಳು ಕೋಪಗೊಂಡಿದ್ದರು.

ಇದು ಸೋಶಿಯಲ್ ಮೀಡಿಯಾಗಳಲ್ಲಿ ನಟರ ಅಭಿಮಾನಿಗಳ ನಡುವೆ ದೊಡ್ಡಮಟ್ಟದಲ್ಲೇ ಕಿಡಿ ಹೊತ್ತಿಕೊಂಡಿತ್ತು. ಈಗಾಗಲೇ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಕೆಣಕುವಂತಹ ಸಾಲುಗಳು, ಅವಾಚ್ಯವಾಗಿ ನಿಂದಿಸುವಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಇದಕ್ಕೆ ಖುದ್ದು ದರ್ಶನ್ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.
ಡಿಬಾಸ್ ಅಫೀಶಿಯಲ್ ಎನ್ನುವ ಪೇಜ್ ದರ್ಶನ್ ಅವರದ್ದೇ ಎನ್ನಲಾಗಿದೆ. ಇದು ದರ್ಶನ್ ಅಭಿಮಾನಿಗಳ ದೊಡ್ಡ ಫ್ಯಾನ್ ಪೇಜ್ ಕೂಡ ಹೌದು. ಈ ಪೇಜ್‌ನಿಂದ ಅಭಿಮಾನಿಗಳಿಗೆ ವಿಶೇಷವಾಗಿ ಸಂದೇಶವೊಂದನ್ನು ಅಭಿಮಾನಿಗಳಿಗೆ ನೀಡಲಾಗಿದೆ.

ಏನದು ಸಂದೇಶ?: ಎಲ್ಲ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಈ ಮೂಲಕ ತಿಳಿಸುವುದು ಏನೆಂದರೆ... ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಜಾಮೀನು ದೊರಕಿದೆ. ಈ ಸಂತೋಷದ ಸಂಭ್ರಮದಲ್ಲಿ ಅಭಿಮಾನಿಗಳು ಯಾವುದೇ ಕಾರಣಕ್ಕೂ ಮಾಧ್ಯಮದವರು, ರಾಜಕಾರಣಿಗಳು, ಬೇರೆ ನಟರು ಹಾಗೂ ಕಾನೂನಿನ ಬಗ್ಗೆ ಯಾರೂ ಸಹ ಏನನ್ನೂ ನಿಂದಿಸಬೇಡಿ ಎಂದು ಮನವಿ ಮಾಡಿದೆ.
ಈ ಹಿಂದೆ ದರ್ಶನ್ ಅವರ ಪರ ಸುದ್ದಿ ಪ್ರಸಾರ ಮಾಡಿದ್ದ ಕಾರಣಕ್ಕೆ ಮಾಧ್ಯಮಗಳ ವಿರುದ್ಧ ಅವರು ಸಿಡಿದಿದ್ದರು. ಈ ವೇಳೆ ದರ್ಶನ್ ಅವರೇ ಹೇಳಿದ್ದಾರೆ ಎನ್ನಲಾದ ಆಡಿಯೋದಲ್ಲಿ ಮಾಧ್ಯಮಗಳನ್ನು ಏಕವಚನದಲ್ಲಿ ನಿಂದಿಸಿ, ಅವಾಚ್ಯವಾಗಿ ಮಾತನಾಡಿದ್ದರು. ಬಳಿಕ ಮಾಧ್ಯಮಗಳು ಕೆಲ ವರ್ಷಗಳ ಕಾಲ ದರ್ಶನ್ ಅವರ ಯಾವುದೇ ಸುದ್ದಿ ಪ್ರಸಾರ ಮಾಡುವುದಿಲ್ಲ ಎಂದು ಬ್ಯಾನ್ ಕೂಡ ಮಾಡಿತ್ತು. ಕೊನೆಗೆ ಇದೊಂದು ತಾರ್ಕಿಕ ಅಂತ್ಯ ಕಂಡು ಎಲ್ಲವೂ ಸಹಜ ಸ್ಥಿತಿಗೆ ಬಂದಿತ್ತು.

ಆದರೆ, ದರ್ಶನ್ ಅವರು ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದಕ್ಕೆ ಅವರ ಅಭಿಮಾನಿಗಳು ಕೆರಳಿದ್ದರು. ಇದರಿಂದ ಮಾಧ್ಯಮಗಳ ವಿರುದ್ಧವೂ ದರ್ಶನ್ ಸಾಕಷ್ಟು ಬಾರಿ ಅವಾಚ್ಯವಾಗಿ ಮಾತನಾಡಿದ್ದರು. ಮಾಧ್ಯಮಗಳು ನಿರ್ವಹಿಸಿದ್ದ ತಮ್ಮ ಕರ್ತವ್ಯವನ್ನು ಅಂಧಾಭಿಮಾನಿಗಳು ಒಪ್ಪಿರಲಿಲ್ಲ. ಹಾಗಾಗಿ ಒಂದು ರೀತಿ ಮಾಧ್ಯಮಗಳ ಮೇಲೂ ಅಭಿಮಾನಿಗಳಿಗೆ ದ್ವೇಷವಿದೆ.
ಇನ್ನು ನಟರಾದ ಧ್ರುವ ಸರ್ಜಾ, ಕಿಚ್ಚ ಸುದೀಪ್, ದುನಿಯಾ ವಿಜಯ್, ಡಾಲಿ ಧನಂಜಯ್, ಪ್ರಥಮ್ ಸೇರಿದಂತೆ ಹಲವರು ನಟರು ದರ್ಶನ್ ಅವರ ಕೇಸ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದರು. ಇದರ ಬಗ್ಗೆಯೂ ದರ್ಶನ್ ಅಭಿಮಾನಿಗಳು ಕೋಪಗೊಂಡಿದ್ದರು. ಈ ಕಾರಣದಿಂದ ಸೋಶಿಯಲ್ ಮೀಡಿಯಾಗಳಲ್ಲಿ ನಟರು ಹಾಗೂ ಅವರ ಅಭಿಮಾನಿಗಳ ನಡುವೆ ವಾರ್ ಕೂಡ ನಡೆದಿದ್ದು, ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ.
ಈ ಉದ್ದೇಶದಿಂದ ಅಭಿಮಾನಿಗಳು ಅಂಧಾಭಿಮಾನ ತೋರಬಾರದು ಎಂದು ದರ್ಶನ್ ಅವರ ಪೇಜ್‌ನಿಂದ ಮನವಿ ಮಾಡಿಕೊಳ್ಳಲಾಗಿದೆ. ಅದರಂತೆ ಯಾವುದೇ ಕಾರಣಕ್ಕೂ ಮಾಧ್ಯಮದವರು, ರಾಜಕಾರಣಿಗಳು, ಬೇರೆ ನಟರು ಹಾಗೂ ಕಾನೂನಿನ ಬಗ್ಗೆ ಯಾರೂ ಏನನ್ನೂ ನಿಂದಿಸಿ ಮಾತನಾಡಬಾರದು ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಲಾಗಿದೆ.












Click it and Unblock the Notifications