Actor Yash: 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ' ಘೋಷಣೆ ಬಳಿಕ ರಿಶಬ್ ಶೆಟ್ಟಿ, ಪ್ರಶಾಂತ್ ನೀಲ್ ಬಗ್ಗೆ ಯಶ್ ಪ್ರತಿಕ್ರಿಯೆ
ಬೆಂಗಳೂರು, ಆಗಸ್ಟ್ 16: ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು 2022ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಘೋಷಿಸಿದೆ. ಇದರಲ್ಲಿ ಕನ್ನಡದ ನಟ ಯಶ್ ನಟನೆಯ ಕೆಜಿಎಫ್ 2 ಸಿನಿಮಾಗೆ ಹಾಗೂ ನಟ ರಿಶೆಬ್ ಶೆಟ್ಟಿ ಅವರ 'ಕಾಂತಾರ' ಸಿನಿಮಾಗೆ ತಲಾ ಎರಡು ಪ್ರಶಸ್ತಿಗಳು ಬಂದಿವೆ. ಇದರಿಂದ ಇಡೀ ಕನ್ನಡ ಚಿತ್ರರಂಗವೇ ಹೆಮ್ಮ ಪಡುವಂತಾಗಿದೆ. ಇದೀಗ ಈ ಕುರಿತು ಗಣ್ಯರು, ಸ್ವತಃ ನಟ ಯಶ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ಚಲನಚಿತ್ರ ಪ್ರಶಸ್ತಿ ಘೋಷಣೆ ಬಳಿಕ ನಟ ಯಶ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಎಲ್ಲ ಪುರಸ್ಕೃತರಿಗೆ ಶುಭಾಶಯ ಕೋರಿದ್ದಾರೆ.

ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡದ ಕಾಂತಾರ ನಟ, ನಿರ್ದೇಶಕ ರಿಶೆಬ್ ಶೆಟ್ಟಿಯವರಿಗೆ, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆ ತಂಡದವರಿಗೆ ಯಶ್ ಅವರು ಶುಭ ಹಾರೈಸಿದ್ದಾರೆ.
ಈ ಪ್ರಶಸ್ತಿ ಪಡೆಯಲು 'ಕಾಂತಾರ ಮತ್ತು ಕೆಜಿಎಫ್ 2' ಅರ್ಹವಾಗಿವೆ. ಈ ಪ್ರಶಸ್ತಿಗಳು ನಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿವೆ. ಜವಾಬ್ದಾರಿಯನ್ನು ಸಹ ಹೆಚ್ಚಿಸಿವೆ.
ಕೇಂದ್ರ ಸರ್ಕಾರ ಕನ್ನಡದ ಸದಭಿರುಚಿಯ ಸಿನಿಮಾಗಳನ್ನು ಗುರುತಿಸಿ ಸೂಕ್ತ ಪ್ರಶಸ್ತಿಯನ್ನು ನೀಡಿದೆ. ಇದರಿಂದ ಕನ್ನಡ ಚಲನಚಿತ್ರಗಳು ರಾಷ್ಟ್ರಮಟ್ಟದಲ್ಲಿ ಹೊಳೆಯುವಂತಾಗಿವೆ. ರಾಷ್ಟ್ರಮಟ್ಟದಲ್ಲಿ ಕನ್ನಡ ಸಿನಿಮಾಗಳು ತಲುಪಿವೆ ಎಂದು ಅವರು ಬರೆದುಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.

ಸಂದರ್ಶನದಲ್ಲೂ 'ಕಾಂತಾರ' ಹೊಗಳಿದ್ದ ಯಶ್
ಕೆಜಿಎಫ್ 2 ಸಿನಿಮಾ ಯಶಸ್ಸಿನ ಬಳಿಕ ನಟ ಯಶ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುವಾಗ 'ಕಾಂತರ' ಸಹ ನನ್ನ ಸಿನಿಮಾ, ನಮ್ಮ ಕನ್ನಡ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿದ್ದರು. ಎಲ್ಲರು ನಮ್ಮವರು, ನನ್ನವರು ಎಂದು ಜೊತೆಗೆ ಕರೆದುಕೊಂಡು ಹೋಗುವ ಗುಣ, ಪ್ರೋತ್ಸಾಹಿಸುವ ಗುಣದ ಯಶ್ ಅವರ ಮಾತುಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಂತೆ ಇಂದು ಸಹ ವಿಶೇಷವಾಗಿ ರಿಶೆಬ್ ಶೆಟ್ಟಿ, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಅವರಿಗೆ ಶುಭಕೋರಿದ್ದಾರೆ.
ಘೋಷಣೆ ಆದ ಪ್ರಶಸ್ತಿಗಳು ಯಾವುವು?
ರಿಶಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ 'ಕಾಂತಾರ' ಗೆ ಅತ್ಯುತ್ತಮ ಕನ್ನಡ ಮನರಂಜನಾ ಚಿತ್ರ ಹಾಗೂ ರಿಶಬ್ ಶೆಟ್ಟಿಗೆ ಅತ್ಯುತ್ತಮ ನಟ ಎಂದು ಎರಡು ವಿಭಾಗದಲ್ಲಿ ಪ್ರಶಸ್ತಿಗೆ ಬಂದಿವೆ. ಇದರೊಂದಿಗೆ ನಟ ಯಶ್ ನಟನೆಯ ಕೆಜಿಎಫ್ 2ಸಿನಿಮಾವು ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಮಾಜಿ ಮುಖ್ಯಮಂತ್ರಿಗಳಿಂದ ಶುಭಾಶಯ
ಕನ್ನಡದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಕಾಂತಾರ ಚಿತ್ರದ ನಟನೆಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬಂದಿರುವುದು ಅತ್ಯಂತ ಖುಷಿಯ ಮತ್ತು ಹೆಮ್ಮೆಯ ಸಂಗತಿಯಾಗಿದೆ. ಹೀಗೆಂದು ನಟ ಯಶ್ ಮತ್ತು ರಿಶಬ್ ಶೆಟ್ಟಿ ಇಬ್ಬರಿಗೂ ಮಾಜಿ ಸಿಎಂ ಮತ್ತು ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ರಿಶಬ್ ಶೆಟ್ಟಿ ಅವರು ತಮ್ಮದೇ ಆದ ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತ, ನಟನೆ ಮತ್ತು ನಿರ್ದೆಶನದ ಮೂಲಕ ಜನ ಮನ್ನಣೆ ಗಳಿಸಿದ್ದು, ಅವರಿಗೆ ತುಂಬು ಹೃದಯದ ಅಭಿನಂದನೆಗಳು. ಕಾಂತಾರ ಚಿತ್ರದ ಜೊತೆಗೆ ಇಡೀ ಭಾರತದ ಚಿತ್ರರಂಗವೇ ಸ್ಯಾಂಡಲ್ ವುಡ್ ಕಡೆಗೆ ನೋಡುವಂತೆ ಮಾಡಿದ್ದ ಕೆಜಿಎಫ್ 2 ಚಿತ್ರಕ್ಕೂ ಎರಡು ಪ್ರಶಸ್ತಿಗಳು ಲಭಿಸಿದ್ದು, ಕನ್ನಡದ ರಂಗವಿಭೋಗ, ಮಧ್ಯಂತರ ಚಿತ್ರಗಳಿಗೂ ಪ್ರಶಸ್ತಿ ಲಭಿಸಿರುವುದು ಕನ್ನಡ ಚಿತ್ರರಂಗ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಚಿತ್ರರಂಗದ ಬಗ್ಗೆ ಆಶಾಭಾವನೆ ಮೂಡುವಂತೆ ಮಾಡಿದೆ ಎಂದು ಅವರು ಹಾರೈಸಿದ್ದಾರೆ.












Click it and Unblock the Notifications