ಸಾವಯವವೋ, ಕುಲಾಂತರಿಯೋ?: ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಯಡವಟ್ಟು
ಬೆಂಗಳೂರು, ಏಪ್ರಿಲ್ 30: ಒಂದೆಡೆ ಸಾವಯವ ಕೃಷಿಗೆ ಒತ್ತು ನೀಡುವುದಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಕಾಂಗ್ರೆಸ್, ಅದರ ಜತೆಯಲ್ಲೇ ಕುಲಾಂತರಿ ತಳಿಯ ಪ್ರಯೋಗಗಳಿಗೂ ಉತ್ತೇಜನ ನೀಡುವುದಾಗಿ ಹೇಳಿಕೊಂಡಿದೆ. ಇದು ಸಾವಯವ ಕೃಷಿಯನ್ನು ಉಳಿಸುವ ಹೋರಾಟದಲ್ಲಿ ತೊಡಗಿರುವ ಕೃಷಿಕರು ಮತ್ತು ತಜ್ಞರ ಟೀಕೆಗೆ ಗುರಿಯಾಗಿದೆ.
ಕರ್ನಾಟಕದಲ್ಲಿ ಕೃಷಿ ಕಾರಿಡಾರ್ ನಿರ್ಮಿಸುವ ಉದ್ದೇಶವನ್ನು ಕಾಂಗ್ರೆಸ್ ಪ್ರಣಾಳಿಕೆ ತಿಳಿಸಿದೆ. ಅದರಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ, ವೆಚ್ಚ ತಗ್ಗಿಸುವಿಕೆ, ಬೆಲೆ ಸ್ಥಿರತೆ ಮುಂತಾದ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಸಾವಯವ ಕೃಷಿಗೆ ಆದ್ಯತೆ ನೀಡುವುದಾಗಿ ಹೇಳಿರುವ ಕಾಂಗ್ರೆಸ್, ಇದೇ ಪಟ್ಟಿಯಲ್ಲಿ ಅತ್ಯಾಧುನಿಕ ಕೃಷಿ ತಂತ್ರಜ್ಞಾನದ ಬಳಕೆ ಹಾಗೂ ಕುಲಾಂತರಿ ತಳಿಗಳನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ.
ಈ ಅಂಶವನ್ನು ಸಾವಯವ ಕೃಷಿಯನ್ನು ಉತ್ತೇಜಿಸುವ ಹಾಗೂ ಕುಲಾಂತರಿ ತಳಿ ವಿರೋಧಿ ಹೋರಾಟ ನಡೆಸುತ್ತಿರುವ ಪ್ರಗತಿಪರ ಕೃಷಿಕರು, ವಿಜ್ಞಾನಿಗಳು ಮತ್ತು ಪರಿಸರಪ್ರೇಮಿಗಳು ವಿರೋಧಿಸಿದ್ದಾರೆ.

ಸಾವಯವ ಕೃಷಿ ಕುರಿತು ಪುಟಗಟ್ಟಲೆ ಜಾಹೀರಾತುಗಳನ್ನು ನೀಡುವ ಕಾಂಗ್ರೆಸ್, ಕುಲಾಂತರಿಗೆ ಮಣೆ ಹಾಕುವ ಮೂಲಕ ಇಬ್ಬಂದಿನೀತಿ ಪ್ರದರ್ಶಿಸುತ್ತಿದೆ ಎಂದು ದೂರಿದ್ದಾರೆ.
ಕುಲಾಂತರಿ ಹಾಗೂ ಬಿಟಿ ತಳಿಗಳ (ಜೆನೆಟಿಕಲಿ ಮಾಡಿಫೈಡ್) ಸಾಧಕ-ಬಾಧಕಗಳ ಕುರಿತು ಚರ್ಚೆಗಳಾಗುತ್ತಿವೆ. ಬಿಟಿ ಬದನೆಯನ್ನು ಹೊಲಗಳಿಗೆ ತರುವುದಕ್ಕೆ ಯುಪಿಎ ಸರ್ಕಾರದ ಅವಧಿಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪರಿಸರ ಸಚಿವರಾಗಿದ್ದ ಜೈರಾಂ ರಮೇಶ್ ಸಹ ಬ್ಯಾಕ್ಟೀರಿಯಾ ವಂಶವಾಹಿಯನ್ನು ಅಳವಡಿಸುವ ಬದನೆಗೆ ಸಹಮತ ವ್ಯಕ್ತಪಡಿಸಿರಲಿಲ್ಲ.
ಮನುಷ್ಯನ ಆರೋಗ್ಯದ ಹಿತದೃಷ್ಟಿಯಿಂದ ಸಹಜ ಮತ್ತು ನಿಸರ್ಗಕ್ಕೆ ಪೂರಕವಾದ ಸಾವಯವ ಕೃಷಿಗೆ ಒತ್ತು ನೀಡುವ ಸಂಬಂಧ ಹೆಚ್ಚಿನ ಹೋರಾಟಗಳು ಹೆಚ್ಚುತ್ತಿರುವಾಗ, ಲಾಭಕೋರ ಖಾಸಗಿ ಸಂಸ್ಥೆಗಳ ಲಾಭಕ್ಕಾಗಿ ರಾಜಕಾರಣಿಗಳು ಮತ್ತು ಕೆಲವು ವಿಜ್ಞಾನಿಗಳು ಕುಲಾಂತರಿ ತಳಿಗಳನ್ನು ಬೆಳೆಸಲೇಬೇಕೆಂಬ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.

ರಾಜ್ಯ ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ಕುಲಾಂತರಿ ತಳಿಗಳ ಬಗ್ಗೆ ನಾವು ಇನ್ನಷ್ಟು ಮುಕ್ತವಾಗಬೇಕು ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಾವಯವ ಕೃಷಿ ಪರ ಹೋರಾಟಗಾರರು, ಕುಲಾಂತರಿ ತಳಿಯ ಅಪಾಯಗಳ ಕುರಿತು ಅವರಿಗೆ ಪತ್ರ ಬರೆದು ವಿವರಿಸಿದ್ದರು.
ಮೊಯಿಲಿ ವಿರುದ್ಧ ಆರೋಪ:
ಕಾಂಗ್ರೆಸ್ ಕೃಷಿ ಪ್ರಣಾಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿರುವ ಕುಲಾಂತರಿ ವಿರೋಧಿಗಳು, ಇದು ವೀರಪ್ಪ ಮೊಯಿಲಿ ಅವರ ಕೆಲಸ ಎಂದು ಆರೋಪಿಸಿದ್ದಾರೆ.
ಮೊಯಲಿ ಅವರು ಆರಂಭದಿಂದಲೂ ಪರಿಸರ ವಿರೋಧಿ ಧೋರಣೆ ಪ್ರದರ್ಶಿಸುತ್ತಾ ಬಂದಿದ್ದಾರೆ. ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಕುಲಾಂತರಿ ತಳಿಗಳ ಕುರಿತು ಪ್ರಸ್ತಾಪಿಸುವ ವಿಚಾರಗಳ ಹಿಂದೆ ಭಾರತದ ಕೃಷಿ ನೆಲವನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳಲು ಹವಣಿಸುತ್ತಿರುವ ವಿದೇಶಿ ಕಂಪೆನಿಗಳ ಲಾಬಿಯಿದೆ. ಇದಕ್ಕೆ ರಾಜಕಾರಣಿಗಳು ಕೂಡ ವಿವೇಚನೆಯಿಲ್ಲದೆ ಬೆಂಬಲ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಕುಲಾಂತರಿ ವಿರುದ್ಧ ಪಕ್ಷಾತೀತ ಹೋರಾಟ ನಡೆಯಬೇಕು. ಕುಲಾಂತರಿ ಮುಕ್ತ ಕರ್ನಾಟಕ ನಮ್ಮದಾಗಬೇಕು. ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿನ ಈ ಅಂಶವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications