ಕುತೂಹಲ ಫಲಿತಾಂಶ, ಮತದಾರನ ಚಿತ್ತ ಎತ್ತ?

ಸುಮಾರು 35 ವರ್ಷಗಳ ನಂತರ ಮತದಾನ ಪ್ರಮಾಣ ಹೆಚ್ಚಳ ಕಂಡಿರುವುದು ರಾಜ್ಯ ಚುನಾವಣಾ ಆಯೋಗಕ್ಕೆ ಸಂತಸ ತಂದಿದೆ. ಈ ಬಾರಿ ಚುನಾವಣೆ ಸಂದರ್ಭದಲ್ಲಿ ಹಲವಾರು ಕೋಟಿ ಅಕ್ರಮ ಹಣ ರವಾನೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಚುನಾವಣಾ ಅಧಿಕಾರಿಗಳನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಹೊಗಳಿದ್ದಾರೆ.
ಚುನಾವಣಾ ಕಣದಲ್ಲಿದ್ದ 2,940 ಅಭ್ಯರ್ಥಿಗಳ ಭವಿಷ್ಯ ನಾಳೆ ಬಹಿರಂಗವಾಗಲಿದೆ. ಇದರಲ್ಲಿ 2,770 ಪುರುಷ ಹಾಗೂ 170 ಮಹಿಳಾ ಅಭ್ಯರ್ಥಿಗಳಿದ್ದರು. ಈ ಬಾರಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದ್ದು, ರಾಜ್ಯದಲ್ಲಿ ಶೇ.71.29 ರಷ್ಟು ಮತದಾನ ನಡೆದಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ. ಹೀಗಾಗಿ ಚನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆ ಅಭ್ಯರ್ಥಿಗಳ ಎದೆ ಢವ ಢವ ಎನ್ನುತ್ತಿದೆ. ಕಾಂಗ್ರೆಸ್ ನಿಂದ 223, ಬಿಜೆಪಿಯಿಂದ 222, ಜೆಡಿಎಸ್ ನಿಂದ 221, ಕೆಜೆಪಿಯಿಂದ 208 ಹಾಗೂ 2,066 ಪಕ್ಷೇತರ ಅಭ್ಯರ್ಥಿಗಳು ಪ್ರಸಕ್ತ ಚುನಾವಣಾ ಕಣದಲ್ಲಿದ್ದಾರೆ.
ಬುಧವಾರ ಬೆಳಗ್ಗೆ ಆರಂಭದಲ್ಲಿ ಅಂಚೆ ಮತಗಳ ಎಣಿಕೆ ಮಾಡಲಿರುವ ಚುನಾವಣಾ ಸಿಬ್ಬಂದಿ ಆ ನಂತರ ವಿದ್ಯುನ್ಮಾನ ಮತ ಯಂತ್ರಗಳ ಮೂಲಕ ಮತ ಎಣಿಕೆ ಮಾಡಲಿದ್ದಾರೆ. ಪ್ರತಿ ಸುತ್ತಿನ ಫಲಿತಾಂಶವು ಅಂತರ್ಜಾಲದಲ್ಲಿ ಮತ್ತು ಎಣಿಕೆ ಕೇಂದ್ರಗಳಲ್ಲೂ ಪ್ರಕಟವಾಗಲಿದೆ. ಒನ್ ಇಂಡಿಯಾ ಕನ್ನಡ ತ್ವರಿತ ಗತಿಯಲ್ಲಿ ಚುನಾವಣಾ ಫಲಿತಾಂಶವನ್ನು ನಿಮಗೆ ನೀಡುತ್ತಿದೆ. ಗೆದ್ದವರು ಸೋತವರ ವಿವರ, ಮತಎಣಿಕೆ ಟ್ರೆಂಡ್, ಜಿಲ್ಲಾವರು ಫಲಿತಾಂಶ ಎಲ್ಲವೂ ಓದುಗರಿಗೆ ಲಭ್ಯವಾಗಲಿದೆ.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಂತೆ ಸಾರ್ವಜನಿಕರು ಕೂಡಾ ಫಲಿತಾಂಶವನ್ನು ತುದಿಗಾಲಲ್ಲಿ ಎದುರು ನೋಡುತ್ತಿದ್ದಾರೆ. ಕೆಲವು ಅಭ್ಯರ್ಥಿಗಳು ಯಂತ್ರ, ಮಂತ್ರದ ಜಪ ಮಾಡುತ್ತಿದ್ದಾರೆ. ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸಿ ಗೆಲುವಿನ ಕನಸು ಕಾಣುತ್ತಿದ್ದಾರೆ. ಇನ್ನೊಂದೆಡೆ ರಾಜಕೀಯ ಪಕ್ಷಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ನಡುವೆ ಸೋಲು-ಗೆಲುವಿನ ಲೆಕ್ಕಾಚಾರ ನಡೆದಿತ್ತು. ರಾಜ್ಯದೆಲ್ಲೆಡೆ ಬೆಟ್ಟಿಂಗ್ ಭರಾಟೆ ಕೂಡಾ ನಡೆದಿದೆ. ಎಲ್ಲವೂ ಉತ್ತರ ಬುಧವಾರ ಸಿಗಲಿದೆ.












Click it and Unblock the Notifications