ಮೂಡಿಗೆರೆ: ವೈವಿಧ್ಯಮಯ ಅಸೆಂಬ್ಲಿ ಕ್ಷೇತ್ರ ಪರಿಚಯ
ಮಲೆನಾಡಿನ ಸುಂದರ ಪರಿಸರದಷ್ಟೇ ವೈವಿಧ್ಯಮಯ ಜಾತಿ, ಮತ, ಪಂಥಗಳನ್ನು ಹೊಂದಿರುವ ಮೂಡಿಗೆರೆ ಕ್ಷೇತ್ರಕ್ಕೆ ಯಾವ ಸರ್ಕಾರ ಬಂದರೂ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಕೊರಗಿದೆ. ಭಾರತೀಯ ಜನತಾ ಪಕ್ಷ, ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದ್ದರೂ, ಈ ಬಾರಿ ಕಾಂಗ್ರೆಸ್ ಅಲೆ ಬಲವಾಗಿ ಕಂಡು ಬಂದಿದೆ.
2004, 2008ರಲ್ಲಿ ಗೆದ್ದ ಬಿಜೆಪಿಯ ಎಂ.ಪಿ ಕುಮಾರಸ್ವಾಮಿ ಅವರು ಕೌಟುಂಬಿಕ ಕಲಹವು ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಸಿಕ್ಕು, ತಲೆ ತಗ್ಗಿಸುವಂತಾಗಿದ್ದು, ಕ್ಷೇತ್ರದ ಜನತೆ ಮರೆತಿಲ್ಲ. ಹೀಗಾಗಿ, ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿ ಬಿಜೆಪಿ ತೊಡಗಿದೆ ಎಂಬ ಸುದ್ದಿಯಿದೆ.

ಸಿದ್ದರಾಮಯ್ಯ ಅವರು ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡಿ, ದಲಿತರಿಗೆ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ಇನ್ನೂ ಈಡೇರಿಲ್ಲ. ಕ್ಷೇತ್ರದಲ್ಲಿರುವ ಪರಿಸರ, ಪಾರಂಪರಿಕ ದೇಗುಲಗಳಿಗೆ ಸೂಕ್ತ ರಕ್ಷಣೆ ಸಿಕ್ಕಿಲ್ಲ. ಬಸ್ ಸೌಲಭ್ಯವೂ ಹೇಳಿಕೊಳ್ಳುವಂತಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯರದ್ದೇ ವಿರೋಧ ಹೆಚ್ಚಾಗಿದೆ ಎಂಬ ಕೂಗಿದೆ.
ಮೀಸಲು ಕ್ಷೇತ್ರವಾದ ಮೂಡಿಗೆರೆಯಲ್ಲಿ 2013 ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ ನ ಬಿ.ಬಿ ನಿಂಗಯ್ಯ ಅವರು 32,417 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ಸಿನ ಬಿ.ಎನ್ ಚಂದ್ರಪ್ಪ ಅವರು 31,782 ಮತಗಳಿಸಿದರು. ಹೀಗಾಗಿ ಈ ಬಾರಿ ಸ್ಪರ್ಧೆ ಕುತೂಹಲಕಾರಿಯಾಗಿದೆ.
ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಹೇಮಾವತಿ ನದಿ ತಟ, ಅತ್ತ ಕಡೆ ಕುದುರೆ ಮುಖದ ಅಂಚು, ಇತ್ತ ಕಡೆ ಕಳಸ, ಹೊರನಾಡಿನ ಧಾರ್ಮಿಕ ಭಾವನೆ ಕೇಂದ್ರಗಳನ್ನು ಹೊಂದಿದ್ದರೂ ಮೂಡಿಗೆರೆ ಪಟ್ಟಣ ಪ್ರವಾಸಿಗರ ಪಾಲಿಗೆ ಇನ್ನೂ ಆಪ್ತವಾಗಿಲ್ಲ.











Click it and Unblock the Notifications