ಕ್ಷೇತ್ರ ಪರಿಚಯ: ಕನಕಪುರದಲ್ಲಿ ಡಿಕೆಶಿ ಅಶ್ವಮೇಧಕ್ಕೆ ಲಗಾಮು ಸಾಧ್ಯವೇ?

ಬೆಂಗಳೂರಿನಿಂದ ಕೇವಲ 55 ಕಿಲೋಮೀಟರ್ ದೂರದಲ್ಲಿರುವ ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಆಡಳಿತ ಕೇಂದ್ರ.

ಇಲ್ಲಿ ಶ್ರೀ ಶಿವನಂಕಾರೇಶ್ವರ ದೇವಸ್ಥಾನ, ಶಿಥಿಲಗೊಂಡ ರಂಗನಾಥ ದೇವಾಲಯ, ಕಬ್ಬಾಳು ಶಕ್ತಿ ದೇವತೆ ಕ್ಷೇತ್ರಗಳಿವೆ. ಅರ್ಕಾವತಿ ನದಿ, ವೃಷಭಾವತಿ ನದಿ ಕನಕಪುರದ ಮೂಲಕ ಹಾದುಹೋಗುತ್ತವೆ. ರೇಷ್ಮೆಗೂಡಿನಿಂದ ನೂಲು ಸುತ್ತುವ ಕಾರ್ಖಾನೆಯೂ (ಫಿಲೇಚರ್ಸ್‌) ಕೂಡ ಇಲ್ಲುಂಟು.

ಕನಕಪುರದಲ್ಲಿ ಹಲವು ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಈ ಕಾಡುಗಳಲ್ಲಿ ತೇಗ, ಹೊನ್ನೆ, ಬೀಟೆ, ಕಮ್ಮಾರ ಮುಂತಾದ ಮರಗಳುಂಟು. ಶ್ರೀಗಂಧದ ಮರಗಳೂ ತಕ್ಕಮಟ್ಟಿಗೆ ಇಲ್ಲಿವೆ.

ಭತ್ತ, ರಾಗಿ, ಹಿಪ್ಪು ನೇರಳೆ, ಅವರೆ, ತೆಂಗು, ಹರಳು, ಹುಣಸೆ, ಕುಂಬಳಕಾಯಿ ಮುಂತಾದ ಬೆಳೆಗಳನ್ನು ಇಲ್ಲಿ ಬೆಳೆಯುತ್ತಾರೆ. ಕನಕಪುರದಲ್ಲಿ ನೂರಕ್ಕೂ ಹೆಚ್ಚು ಕೆರೆಗಳಿದ್ದು, ಅವೇ ಕೃಷಿಗೆ ಆಧಾರವಾಗಿವೆ. ಒಂದೊಮ್ಮೆ ಇನ್ನೂ ಹೆಚ್ಚಿನ ನೀರಾವರಿ ದೊರೆತರೆ ಇಲ್ಲಿ ಮತ್ತಷ್ಟು ಬೆಳೆ ಬೆಳೆಯಬಹುದಾಗಿದೆ.

ಹಾರೋಹಳ್ಳಿ, ಕನಕಪುರ, ಮರಳವಾಡಿ, ಕೋಡಿಹಳ್ಳಿ, ಸಾತನೂರು, ಉಯ್ಯಂಬಳ್ಳಿ ಇಲ್ಲಿನ ಹೋಬಳಿಗಳಾಗಿವೆ.

Karnataka Assembly Election 2018: Kanakapura Constituency Profile

ಸದ್ಯ ಕನಕಪುರದಲ್ಲಿ ತಮ್ಮದೇ ಕೋಟೆ ಕಟ್ಟಿಕೊಂಡಿರುವವರು ಇಂಧನ ಸಚಿವ ಕಾಂಗ್ರೆಸಿನ ಡಿ.ಕೆ. ಶಿವಕುಮಾರ್. ಹಾಗೆ ನೋಡಿದರೆ 2008ಕ್ಕೂ ಮೊದಲು ಶಿವಕುಮಾರ್ ಇಲ್ಲಿನ ಪಕ್ಕದ ಸಾತನೂರು ಕ್ಷೇತ್ರದಿಂದ ಆರಿಸಿ ಬರುತ್ತಿದ್ದವರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಾತನೂರು ಮರೆಯಾಗುತ್ತಿದ್ದಂತೆ ಶಿವಕುಮಾರ್ ಕನಕಪುರ ಕ್ಷೇತ್ರಕ್ಕೆ ವಲಸೆ ಬಂದರು.

ಕನಕಪುರಕ್ಕೆ ಬರುವ ಮೊದಲು ಸಾತನೂರಿನಿಂದ ಡಿಕೆ ಶಿವಕುಮಾರ್ ಸತತ 4 ಬಾರಿ ಗೆದ್ದಿದ್ದರು. ಅವರ ರಾಜಕೀಯ ಹಿನ್ನಲೆ ಬಗ್ಗೆ ನೋಡುವುದಾದರೆ 1985ರಲ್ಲಿ ಸಾತನೂರಿನಲ್ಲಿ ಎದುರಿಸಿದ ಮೊದಲ ಚುನಾವಣೆಯಲ್ಲಿ ಡಿಕೆಶಿ 16 ಸಾವಿರ ಮತಗಳಿಂದ ದೇವೇಗೌಡರ ವಿರುದ್ಧ ಸೋಲುಂಡರು. ಆ ನಂತರ ತಿರುಗಿ ನೋಡದ ಡಿಕೆಶಿ 1989, 1994, 1999, 2004ರಲ್ಲಿ ಸಾತನೂರಿನಿಂದ ಸತತ ನಾಲ್ಕು ಚುನಾವಣೆ ಗೆದ್ದಿದ್ದರು. ಅದರಲ್ಲೂ 1994ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದಾಗ ಸ್ವತಂತ್ರವಾಗಿ ಕಣಕ್ಕಿಳಿದು 1 ಸಾವಿರ ಮತಗಳಿಂದ ಜನತಾದಳದ ಯುಕೆ ಸ್ವಾಮಿ ಎಂಬವರನ್ನು ಸೋಲಿಸಿ ಅಗ್ನಿ ಪರೀಕ್ಷೆಯಲ್ಲಿ ಗೆದ್ದಿದ್ದರು. 1999ರಲ್ಲಂತೂ ಎಚ್.ಡಿ. ಕುಮಾರಸ್ವಾಮಿಗೇ ಶಿವಕುಮಾರ್ ಮಣ್ಣುಮುಕ್ಕಿಸಿದ್ದರು.

2004ರಲ್ಲಿ ತೇಜಸ್ವಿನಿ ಗೌಡರನ್ನು (ಸದ್ಯ ಬಿಜೆಪಿಯಲ್ಲಿದ್ದಾರೆ) ದೇವೇಗೌಡರ ವಿರುದ್ಧ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದವರು ಇದೇ ಡಿ.ಕೆ. ಶಿವಕುಮಾರ್.

2008ರಲ್ಲಿ ಡಿ.ಕೆ. ಶಿವಕುಮಾರ್ ಕನಕಪುರಕ್ಕೆ ಆಗಮಿಸುವ ಮುನ್ನ ಕನಕಪುರ ಜೆಡಿಎಸ್ ನ ಭದ್ರಕೋಟೆಯಾಗಿತ್ತು. ಇಲ್ಲಿ ಪಿಜಿಆರ್ ಸಿಂಧ್ಯಾ 1983, 85, 89, 94, 99, 2004 ಹೀಗೆ ಸತತ ಆರು ಚುನಾವಣೆಗಳನ್ನು ಗೆದಿದ್ದರು.

ಆದರೆ ಯಾವಾಗ ಡಿಕೆ ಶಿವಕುಮಾರ್ ಎಂಟ್ರಿ ಕೊಟ್ಟರೋ ಸಿಂಧ್ಯಾ ಭದ್ರ ಕೋಟೆ ಪುಡಿ ಪುಡಿಯಾಯಿತು. ಅಲ್ಲಿಂದ ಕ್ಷೇತ್ರದ ಮೇಲೆ ತನ್ನ ಕಬಂಧ ಬಾಹುಗಳನ್ನು ಚಾಚಿದರು ಡಿಕೆ ಶಿವಕುಮಾರ್. 2008ರಲ್ಲಿ 8 ಸಾವಿರ ಮತಗಳಿಂದ ಗೆಲುವು ಸಾಧಿಸಿದ ಶಿವಕುಮಾರ್, 2013ರಲ್ಲಿ ಸ್ವತಃ ಕ್ಷೇತ್ರದಲ್ಲಿ ಆರು ಬಾರಿ ಜಯಗಳಿಸಿದ ಪಿಜಿಆರ್ ಸಿಂಧ್ಯಾರನ್ನೇ 32 ಸಾವಿರ ಮತಗಳಿಂದ ಸೋಲಿಸಿ ತಮ್ಮ ಶಕ್ತಿ ಸಾಮರ್ಥ್ಯವನ್ನು ಪ್ರಚುರಪಡಿಸಿದ್ದಾರೆ.

2009ರಲ್ಲಿ ಖಾಲಿಯಾಗಿದ್ದ ಬೆಂಗಳೂರು ಗ್ರಾಮಾಂತರದಲ್ಲೂ ತಮ್ಮ ಡಿಕೆ ಸುರೇಶ್ ರನ್ನು ನಿಲ್ಲಿಸಿ ಅನಿತಾ ಕುಮಾರಸ್ವಾಮಿಗೆ ಸೋಲುಣಿಸಿ, ರಾಮನಗರ ಸುತ್ತ ಮುತ್ತ ಅವರು ತಮ್ಮ ಕೋಟೆಯನ್ನು ಭದ್ರಗೊಳಿಸಿಕೊಂಡಿದ್ದಾರೆ.

ಹಾಲಿ ಇಂಧನ ಸಚಿವರಾಗಿ ಕಾಂಗ್ರೆಸ್ ಪಕ್ಷದೊಳಗೆ ಹಾಗೂ ಸಾರ್ವಜನಿಕವಾಗಿ ತಮ್ಮ ವರ್ಚಸ್ಸನ್ನು ಭಾರೀ ಪ್ರಮಾಣದಲ್ಲಿ ವೃದ್ಧಿಸಿಕೊಂಡಿರುವ ಡಿಕೆ ಶಿವಕುಮಾರ್ ಈ ಬಾರಿಯೂ ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂಬ ಮಾತುಗಳು ಕನಕಪುರದಲ್ಲಿವೆ. ಶಿವಕುಮಾರ್ ಅಶ್ವಮೇಧದ ಕುದುರೆಗೆ ಯಾರಾದರೂ ತಡೆ ಹಾಕುತ್ತಾರಾ ಕಾದು ನೋಡಬೇಕು. ಕ್ಷೇತ್ರದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲ.ಒಂದೊಮ್ಮೆ ಲಗಾಮು ಹಾಕುವುದಾದರೂ ಅದು ಜೆಡಿಎಸ್ ನಿಂದ ಮಾತ್ರ ಸಾಧ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+