ಕ್ಷೇತ್ರ ಪರಿಚಯ: ಬೈಂದೂರಲ್ಲಿ ಗೋಪಾಲ ಪೂಜಾರಿಗೆ ಸಿಗುವುದೇ 5ನೇ ಗೆಲುವು?
ಉಡುಪಪಿ ಜಿಲ್ಲೆಯ ಬೈಂದೂರು ಐತಿಹಾಸಿಕವಾಗಿ ಬಂದರು ನಗರ. ಬೈಂದೂರು ಕುಂದಾಪುರದಿಂದ 30 ಕಿಲೋಮೀಟರ್ ದೂರದಲ್ಲಿದೆ. ಮತ್ತು ಉಡುಪಿಯಿಂದ 70 ಕಿಲೋಮೀಟರ್ ಅಂತರ ಕಾಯ್ದುಕೊಂಡಿದೆ.
ಸೋಮೇಶ್ವರ ಬೀಚ್, ಕೋಸಳ್ಳಿ ಜಲಪಾತ, ಸೇನೇಶ್ವರ ದೇವಸ್ಥಾನ, ಒತ್ತಿನೆಣೆ ಬೀಚ್, ಒಂದಷ್ಟು ರೆಸಾರ್ಟ್ ಗಳು ಬೈಂದೂರನ್ನು ಪ್ರವಾಸಿ ತಾಣಗಳ ಸಾಲಿನಲ್ಲಿ ಸೇರಿಸಿದೆ. ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಉಡುಪಿಯ ಏಕೈಕ ವಿಧಾನಸಭಾ ಕ್ಷೇತ್ರವಾಗಿದೆ.
ಬೈಂದೂರಿನಲ್ಲಿ 1985 ಮತ್ತು 1989ರಲ್ಲಿ ಕಾಂಗ್ರೆಸಿನ ಜಿಎಸ್ ಆಚಾರ್ ಗೆಲುವು ಸಾಧಿಸಿದ್ದರು. 1994ರಲ್ಲಿ ಇಲ್ಲಿ ಬಿಜೆಪಿಯ ಐಎಂ ಜಯರಾಮ್ ಶೆಟ್ಟಿ ಗೆಲುವು ಸಾಧಿಸಿದ್ದರು. ಆದರೆ 1998ರಲ್ಲಿ ಅವರು ಉಡುಪಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರಿಂದ ಅದೇ ವರ್ಷ ನಡೆದ ಚುನಾವಣೆಯಲ್ಲಿ 'ಎಜಿಪಿ'ಯಿಂದ ಕಣಕ್ಕಿಳಿದಿದ್ದ ಕೆ. ಗೋಪಾಲ ಪೂಜಾರಿ ಇಲ್ಲಿ ಜಯಗಳಿಸಿದರು. 1999 ಮತ್ತು 2004ರಲ್ಲಿಯೂ ಇಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದು ಗೋಪಾಲ ಪೂಜಾರಿ ಗೆಲುವು ಸಾಧಿಸಿದ್ದರು.

2008 ರಲ್ಲಿ ಮಾತ್ರ ಇಲ್ಲಿ ಗೋಪಾಲ ಪೂಜಾರಿ ಸೋಲನುಭವಿಸಿದ್ದಾರೆ. ಆ ಚುನಾವಣೆಯಲ್ಲಿ ಬಿಜೆಪಿಯ ಕೆ. ಲಕ್ಷ್ಮೀನಾರಾಯಣ ವಿರುದ್ಧ ಅವರು ಸೋಲು ಕಂಡಿದ್ದರು.
ಆದರೆ, 2013ರ ಚುನಾವಣೆಯಲ್ಲಿ ಮತ್ತೆ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಬಂತು. ಗೋಪಾಲ ಪೂಜಾರಿ 82,277 ಮತಗಳನ್ನು ಪಡೆದು 51,128 ಮತಗಳನ್ನು ಪಡೆದ ಬಿಜೆಪಿಯ ಸುಕುಮಾರ ಶೆಟ್ಟಿ ವಿರುದ್ಧ 30ಸಾವಿರಕ್ಕೂ ಅಧಿಕ ಮತಗಳಿಂದ ಭರ್ಜರಿ ಜಯ ಸಾಧಿಸಿದ್ದರು.
ಈ ಬಾರಿ ಗೆಲುವು ಸಾಧಿಸಬೇಕಾದರೆ ಬಿಜೆಪಿ ಈ ಅಂತರವನ್ನು ಮೆಟ್ಟಿ ನಿಲ್ಲಬೇಕಾಗಿದೆ. ನಾಲ್ಕು ಬಾರಿಯ ಶಾಸಕ ಗೋಪಾಲ ಪೂಜಾರಿಯಂತ ಅನುಭವಿ ರಾಜಕಾರಣಿ ಮುಂದೆ ಇದು ಸ್ವಲ್ಪ ಮಟ್ಟಿಗೆ ಕಷ್ಟ ಸಾಧ್ಯ. ಇನ್ನು ಕ್ಷೇತ್ರದಲ್ಲಿ ಜೆಡಿಎಸ್ ಗೆ ಯಾವುದೇ ನೆಲೆಯಿಲ್ಲ. ಹಾಗಾಗಿ ಹೋರಾಟವೇನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ.











Click it and Unblock the Notifications