ವೈರಲ್ ಆಡಿಯೋ : ತನ್ನದೇ ಅಭ್ಯರ್ಥಿಯನ್ನು ಸೋಲಿಸಲು ಎಚ್‌ಡಿಕೆ ಪ್ಲಾನ್?
ಚಿಕ್ಕಬಳ್ಳಾಪುರ, ಮೇ 07: ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವಂತೆ ಕುಮಾರಸ್ವಾಮಿ ಅವರು ಹೇಳಿದ್ದಾರೆನ್ನಲಾಗಿರುವ ಆಡಿಯೋ ವೈರಲ್ ಆಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಅವರನ್ನು ಸೋಲಿಸುವಂತೆ ಹೇಳಿರುವ ಆಡಿಯೋ ಇದಾಗಿದ್ದು ಇದರಲ್ಲಿನ ಧ್ವನಿ ಕುಮಾರಸ್ವಾಮಿ ಅವರದ್ದೇ ಎನ್ನಲಾಗಿದೆ. ಆಡಿಯೋ ಕ್ಲಿಪ್‌ನಲ್ಲಿನ ಧ್ವನಿ ಕುಮಾರಸ್ವಾಮಿ ಅವರ ಧ್ವನಿಯನ್ನೇ ಹೋಲುತ್ತಿದೆ.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ವಿಷಯಕ್ಕೆ ಭಾರಿ ಪೈಪೋಟಿ ನಡೆದಿತ್ತು, ಅಲ್ಲಿ ಜೆಡಿಎಸ್ ಶಾಸಕ ರಾಜಣ್ಣ ಹಾಗೂ ಮುಖಂಡ ರವಿಕುಮಾರ್ ನಡುವೆ ಜೆಡಿಎಸ್ ಟಿಕೆಟ್‌ಗಾಗಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಸಿದ್ದರು. ನಾಮಪತ್ರ ಸಲ್ಲಿಕೆಯ ವೇಳೆ ಕೂಡಾ ಭಾರಿ ಹೈಡ್ರಾಮಾ ನಡೆದಿತ್ತು.
ಇದೀಗ ವೈರಲ್ ಆಗಿರುವ ಆಡಿಯೋ ಕ್ಲಿಪ್‌ನಲ್ಲಿ ಕುಮಾರಸ್ವಾಮಿ ಅವರದ್ದು ಎನ್ನಲಾಗುವ ಧ್ವನಿ, 'ಬೇಕಾದರೆ 10 ಕೋಟಿ ಖರ್ಚು ಮಾಡಲು ತಯಾರಿದ್ದೇವೆ ರವಿ ಸೋಲಬೇಕಷ್ಟೆ, ನನಗೆ ನೋವು ಮಾಡಿ ಟಿಕೆಟ್ ತಂದಿದ್ದಾನೆ ಆತ' ಎಂದು ಅಬ್ಬರಿಸಿದೆ.

'ನೋವು ಕೊಟ್ಟು ಟಿಕೆಟ್ ಪಡೆದಿದ್ದಾನೆ'
'ರಾಜಣ್ಣ ನನ್ನು ಪಕ್ಷೇತರವಾಗಿ ನಿಲ್ಲಿಸಿ, ಆತನೇ ಕುಮಾರಸ್ವಾಮಿ ಅಭ್ಯರ್ಥಿ ಎಂದು ಜನರಲ್ಲಿ ಮನವಿ ಮಾಡಿಕೊಳ್ಳಿ, ಕುಮಾರಸ್ವಾಮಿ ರಾಜ್ಯದಲ್ಲಿ ಇರಬೇಕೆಂದರೆ ರಾಜಣ್ಣನಿಗೆ ಮತ ಹಾಕಿ ಎಂದು ಮನವಿ ಮಾಡಿಕೊಳ್ಳಿ ರವಿಕುಮಾರ್‌ನನ್ನು ಸೋಲಿಸಿ' ಎಂದು ಕುಮಾರಸ್ವಾಮಿ ಅವರದ್ದು ಎನ್ನಲಾದ ಧ್ವನಿ ಹೇಳುತ್ತದೆ.

ಕೊನೆ ಕ್ಷಣದಲ್ಲಿ ಘೋಷಣೆಯಾದ ಅಧಿಕೃತ ಅಭ್ಯರ್ಥಿ
ಶಿಡ್ಲಘಟ್ಟದಲ್ಲಿ ಜೆಡಿಎಸ್ ಟಿಕೆಟ್‌ಗೆ ಭಾರಿ ಜಟಾಪಟಿ ನಡೆದಿತ್ತು. ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಾಜಣ್ಣ ಅವರ ಹೆಸರು ನಮೂದಾಗಿತ್ತು, ಮೊದಲಿಗೆ ಅವರಿಗೆ ಬಿ-ಫಾರಂ ನೀಡಲಾಗಿತ್ತು ಆದರೆ ನಂತರ ರವಿಕುಮಾರ್ ಅವರು ದೇವೇಗೌಡರಿಂದ ಸಿ-ಫಾರಂ ತಂದರು. ನಂತರ ಮತ್ತೆ ರಾಜಣ್ಣ ಕುಮಾರಸ್ವಾಮಿ ಅವರಿಂದ ಸಿ-ಫಾರಂ ತಂದರು, ಮತ್ತೆ ಕೊನೆ ಗಳಿಗೆಯಲ್ಲಿ ರಾಜಣ್ಣ ಅವರ ಸಿ-ಫಾರಂ ರದ್ದು ಮಾಡಿ, ರವಿಕುಮಾರ್ ಅವರನ್ನೇ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಯಿತು.

ರವಿಕುಮಾರ್ ದೇವೇಗೌಡರಿಗೆ ಆಪ್ತರು
ಶಿಡ್ಲಘಟ್ಟ ಶಾಸಕ ರಾಜಣ್ಣ ಕುಮಾರಸ್ವಾಮಿಗೆ ಆಪ್ತರಾಗಿದ್ದರೆ, ಬಿಎನ್ ರವಿಕುಮಾರ್ ಅವರು ದೇವೇಗೌಡರಿಗೆ ಆಪ್ತರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ರವಿಕುಮಾರ್ ಅವರೇ ಉಸ್ತುವಾರಿ ವಹಿಸಿ ರಾಜಣ್ಣ ಅವರನ್ನು ಗೆಲ್ಲಿಸಿದ್ದರು. ಆದರೆ ಈ ಬಾರಿ ಇಬ್ಬರೂ ವೈಯಕ್ತಿಕ ಕಾರಣಗಳಿಗಾಗಿ ಬೇರೆ ಬೇರೆ ಆಗಿ ಒಬ್ಬರ ವಿರುದ್ಧ ಒಬ್ಬರು ಅಖಾಡಕ್ಕಿಳಿದಿದ್ದಾರೆ.

ಇವೆರಡರಲ್ಲಿ ನಿಜ ಯಾವುದು?
ವೈರಲ್ ಆಗಿರುವ ವಿಡಿಯೋ ಬಗ್ಗೆ ರಾಜಣ್ಣ ಹಾಗೂ ರವಿಕುಮಾರ್ ಅವರ ಬಣಗಳು ಬೇರೆ ಬೇರೆ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದು, ರಾಜಣ್ಣ ಅವರ ಬಣದವರು ಕುಮಾರಸ್ವಾಮಿಗೆ ನೋವು ಮಾಡಿ ಟಿಕೆಟ್ ಪಡೆದಿರುವ ಕಾರಣ ಕುಮಾರಸ್ವಾಮಿ ಹಾಗೆ ಹೇಳಿದ್ದಾರೆ ಎಂದರೆ. ರವಿಕುಮಾರ್ ಬಣದವರು ರವಿಕುಮಾರ್ ಅವರು ಅಧಿಕೃತ ಅಭ್ಯರ್ಥಿ ಆಗುವ ಮುಂಚೆ ಮಾತನಾಡಿರುವ ಆಡಿಯೋ ಅದು. ರಾಜಣ್ಣ ಅವರು ಬಿಜೆಪಿಯ ಬಚ್ಚೇಗೌಡ ಅವರನ್ನು ಭೇಟಿ ಆದ ನಂತರ ಕುಮಾರಸ್ವಾಮಿ ಅವರೇ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಜೆಡಿಎಸ್‌ಗೆ ಹಿನ್ನಡೆ ಸಾಧ್ಯತೆ
ಇಷ್ಟು ದಿನ ಅಧಿಕೃತ ಅಭ್ಯರ್ಥಿ ಯಾರು ಎಂಬ ಗೊಂದಲದಲ್ಲಿದ್ದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಈಗ ಈ ಆಡಿಯೋ ಕ್ಷೇತ್ರದೆಲ್ಲೆಡೆ ವೈರಲ್ ಆಗಿರುವುದರಿಂದ ಮತ್ತೆ ಗೊಂದಲಕ್ಕೆ ಬಿದ್ದಿದ್ದಾರೆ. ಕುಮಾರಸ್ವಾಮಿ ಹೇಳಿದ್ದಾರೆಂದು ರಾಜಣ್ಣ ಅವರನ್ನು ಬೆಂಬಲಿಸಬೇಕೊ ಅಥವಾ ಪಕ್ಷದ ಚಿಹ್ನೆಯ ಅಡಿ ನಿಂತಿರುವ ರವಿಕುಮಾರ್ ಅವರನ್ನೋ ಎಂಬ ಗೊಂದಲ ಕಾರ್ಯಕರ್ತರಲ್ಲಿದೆ. ಚುನಾವಣೆ ಸಮೀಪ ಇರುವಾಗ ಈ ಆಡಿಯೋ ವೈರಲ್ ಮಾಡಿ ಜೆಡಿಎಸ್‌ಗೆ ದ್ರೋಹ ಬಗೆಯುವ ಪ್ರಯತ್ನವನ್ನು ರಾಜಣ್ಣ ಬಣ ಮಾಡಿದೆ ಎಂದು ರವಿಕುಮಾರ್ ಬೆಂಬಲಿಗರ ಆಕ್ರೋಶ.












Click it and Unblock the Notifications