keyboard_backspace

ಕ್ರಿಮಿನಲ್ ಗಳಿಗೆ ಸರ್ಕಾರ ಕೊಡುತ್ತಿರುವ ಸೌಲಭ್ಯ ಬಡವರಿಗೆ ಕೊಡಲಾಗುತ್ತಿಲ್ಲ

Google Oneindia Kannada News

ಬೆಂಗಳೂರು, ಆ. 20: ರಾಜ್ಯದ ಕಡು ಬಡವರಿಗೆ ರಾಜ್ಯ ಸರ್ಕಾರ ತಿಂಗಳಿಗೆ ಕೊಡುವುದು ಏಳು ಕೆ.ಜಿ ಅಕ್ಕಿ ಮಾತ್ರ. ಅದೂ ಪಡಿತರ ಚೀಟಿ ಇದ್ದರೆ ಮಾತ್ರ. ಅನಾರೋಗ್ಯ ಬಂತು ಅಂದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗಲ್ಲ, ಸರಿಯಾಗಿ ಚಿಕಿತ್ಸೆಯೂ ಸಿಗಲ್ಲ. ಇದು ಬಡವರ ಬದುಕು. ಯಾವುದಾದರೂ ಅಪರಾಧ ಕೃತ್ಯ ಎಸಗಿ ಜೈಲಿಗೆ ಹೋಗುವವರಿಗೆ ಸರ್ಕಾರದಿಂದಲೇ ರಾಜಾಶ್ರಯ, ಒಂದು ಕಡ್ಡಿ ಅಲ್ಲಾಡಿಸದೇ ಕೂತಿದ್ದರೂ ಮೂರು ಹೊತ್ತು ಊಟ. ಜೀವ ಹೋಗುವ ಕಾಯಿಲೆ ಬಂದರೂ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಸೌಲಭ್ಯ !

ರಾಜಧಾನಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೆ ಅಕ್ರಮ ಚಟುವಟಿಕೆಗಳಿಗೆ ಸುದ್ದಿಯಾಗಿದೆ. ಇತ್ತೀಚೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಚಾಕು- ಚೂರಿ ಗಾಂಜಾ ವಶಪಡಿಸಿಕೊಂಡಿದ್ದರು. ಲ್ಯಾಪ್‌ಟಾಪ್, ಮೊಬೈಲ್ ಪೋನ್ ಕೂಡ ಜಪ್ತಿ ಮಾಡಿದ್ದರು. ಇಷ್ಟಾಗಿ ಹದಿನೈದು ದಿನ ಕಳೆಯುವಷ್ಟರಲ್ಲಿ ಆರೋಪಿಯೊಬ್ಬನ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ಕಲಾಪವನ್ನು ಜೈಲಿನಲ್ಲಿದ್ದ ಕೈದಿಗಳೇ ನೋಡಿ ಸಿಕ್ಕಿಬಿದ್ದಿದ್ದರು. ಇದೀಗ ಜೈಲಿನಲ್ಲಿದ್ದುಕೊಂಡೇ ಅಗ್ರಗಣ್ಯ ರೌಡಿ ಪಟಾಲಂ ಬೆಂಗಳೂರು ಪಾತಕ ಲೋಕವನ್ನು ಆಳುತ್ತಿದೆ. ಈ ಹಿನ್ನೆಲೆಯಲ್ಲಿ ಹದಿನೆಂಟು ರೌಡಿಗಳನ್ನು ಅನ್ಯ ಜೈಲುಗಳಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಆದೇಶದ ಹಿಂದೆ ಹಲವು ಕಾರಣಗಳಿರಬಹುದು. ಜೈಲಿನ ಅಸಲಿ ಚಿತ್ರಣವನ್ನು ಇಲ್ಲಿ ಒನ್ ಇಂಡಿಯಾ ಕನ್ನಡ ಇಲ್ಲಿ ವಿವರಿಸಿದೆ.

ಪರಪ್ಪನ ಅಗ್ರಹಾರ ಜೈಲು

ಪರಪ್ಪನ ಅಗ್ರಹಾರ ಜೈಲು

ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಜಜ್ಜಿತ ಬ್ಯಾರಕ್ ಗಳಿವೆ. ಹಾಗೂ ಶುದ್ಧ ಸೆಲ್ ಗಳಿವೆ. 2500 ಕ್ರಿಮಿನಲ್ ಗಳು ಕೇಂದ್ರ ಕಾರಾಗೃಹದಲ್ಲಿರಲು ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಪ್ರಸ್ತತ 4500 ರಿಂದ 5000 ಕೈದಿಗಳು ಇದ್ದಾರೆ. ಇದರಲ್ಲಿ ಶೇ. 50 ರಷ್ಟು ಮಂದಿ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಗಿ ನ್ಯಾಯಾಲಯದ ಶಿಕ್ಷೆ ಪೂರೈಸುತ್ತಿರುವ ಶಿಕ್ಷಾ ಬಂಧಿಗಳು. ಶೇ. 50 ರಷ್ಟು ಮಂದಿ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿ ಇನ್ನೂ ಪ್ರಕರಣ ಇತ್ಯರ್ಥವಾಗದೇ ವಿಚಾರಣೆ ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳು.

ಕ್ರಿಮಿನಲ್ ಗಳ ಪಾಲಿಗೆ ಇದು ಜೀವ ರಕ್ಷಕ

ಕ್ರಿಮಿನಲ್ ಗಳ ಪಾಲಿಗೆ ಇದು ಜೀವ ರಕ್ಷಕ

ಹೊರಗಿನ ಲೋಕಕ್ಕೆ ಜೈಲು ತಪ್ಪು ಮಾಡಿದವರು ಶಿಕ್ಷೆ ಅನುಭವಿಸುವ ಕೇಂದ್ರ. ಅದೇ ಜೈಲಿನಲ್ಲಿರುವ ಸಾಮಾನ್ಯ ಕೈದಿಗಳ ಪಾಲಿಗೆ ಬದುಕು ಕಲಿಸಿದ ದೇಗುಲ. ರೌಡಿಗಳ ಪಾಲಿಗೆ ಜೀವ ಕಾಪಾಡುವ ಅರಮನೆ. ಕೆಲ ಕ್ರಿಮಿನಲ್ ಗಳಿಗೆ ವ್ಯಾಪಾರ ಕೇಂದ್ರ. ಇದು ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರದ ವಸ್ತುಸ್ಥಿತಿ. ಜೈಲು ಹಾಗೂ ಶಿಕ್ಷೆ ಕೇವಲ ಸಾಮಾನ್ಯರಿಗೆ. ಹಣ ಇರುವರು, ದಾದಾಗಿರಿ ಮಾಡಿ ಜೈಲಿಗೆ ಹೋದವರ ಜೀವನ ಶೈಲಿಯೇ ಬೇರೆ. ಜೈಲು ಕಾರಾಗೃಹ ಅಧಿಕಾರಿಗಳ ಕೈಯಲ್ಲಿ ಇರಲ್ಲ. ದಾದಾಗಿರಿ ಹಿನ್ನೆಲೆಯುಳ್ಳವರ, ಶಿಕ್ಷಾ ಬಂಧಿಗಳ ಕೈ ಬೆರಳಿನಂತೆ ಜೈಲಿನ ಅಧಿಕಾರಿಗಳು ಕುಣಿಯುತ್ತಾರೆ ಎಂಬುದಕ್ಕೆ ಪುಷ್ಟೀಕರಿಸುವ ಅನೇಕ ಪ್ರಕರಣಗಳಿಗೆ ಪರಪ್ಪನ ಅಗ್ರಹಾರ ಕಾರಾಗೃಹವೇ ಸಾಕ್ಷಿಯಾಗಿದೆ.

ಕೈದಿಗೆ ದಿನಕ್ಕೆ100 ರೂ. ಊಟಕ್ಕಾಗಿ ವೆಚ್ಚ

ಕೈದಿಗೆ ದಿನಕ್ಕೆ100 ರೂ. ಊಟಕ್ಕಾಗಿ ವೆಚ್ಚ

ಯಾವುದೇ ಅಪರಾಧ ಕೃತ್ಯದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಅಥವಾ ಶಿಕ್ಷೆಗೆ ಗುರಿಯಾಗಿ ಅಪರಾಧಿ ಎಂದು ಸಾಬೀತಾಗಿ ಜೈಲು ಸೇರುವವರಿಗೆ ಸರ್ಕಾರ ಬಂಪರ್ ಸೌಲಭ್ಯ ಕಲ್ಪಿಸಿದೆ. ರಾಜ್ಯದಲ್ಲಿ ಒಬ್ಬ ಬಡವನಿಗೆ ತಿಂಗಳಿಗೆ ಏಳು ಕೆ.ಜಿ. ಅಕ್ಕಿ ನೀಡಲು ತಗಾದೆ ತೆಗೆಯುತ್ತಿದೆ. ಆರೆ, ಜೈಲಿನಲ್ಲಿರುವ ಕ್ರಿಮಿನಲ್ ಗಳ ವಿಚಾರಕ್ಕೆ ಬಂದರೆ ಒಂದು ದಿನವೂ ತಡ ಮಾಡುವಂತಿಲ್ಲ. ಒಬ್ಬ ಶಿಕ್ಷಾ ಬಂಧಿಗೆ ಶರ್ಟ್, ಚಡ್ಡಿ, ಜಂಖಾನ, ಟೋಪಿ, ಟವಲ್, ಎರಡು ಬೆಡ್ ಶೀಟ್, ಒಂದು ಕಂಬಳಿ, ಪಿಲ್ಲೋ, ತಟ್ಟೆ, ಬಟ್ಲು, ಚೆಂಬು, ಲೋಟಾ ನೀಡಲಾಗುತ್ತದೆ. ಬೆಳಗ್ಗೆ ತಿಂಡಿ ಕೊಡಲಾಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಡಯಟ್ ಫುಡ್ ನೀಡಲಾಗುತ್ತದೆ. ದಿನಕ್ಕೆ 150 ಗ್ರಾಂ ಅಕ್ಕಿ, 300 ಗ್ರಾಂ ರಾಗಿ ಹಿಟ್ಟು, 80 ಗ್ರಾಂ ದಾಲ್ ಸೇರಿದಂತೆ ಶುದ್ಧ ತರಕಾರಿ, ಕಾಫಿ, ಟೀ ಎಲ್ಲವನ್ನು ಕಡ್ಡಾಯವಾಗಿ ನೀಡಲಾಗುತ್ತದೆ. ಐದು ನಿಮಿಷವೂ ತಡವಾಗುವುದಿಲ್ಲ. ಜತೆಗೆ ವಾರಕ್ಕೊಮ್ಮೆ ಮಾಂಸದೂಟ ಕೊಡಲಾಗುತ್ತದೆ. ಮೊದಲು ಒಬ್ಬ ಕೈದಿಯ ಒಂದು ದಿನದ ಊಟಕ್ಕೆ ಕೇವಲ 40 ರೂಪಾಯಿ ವೆಚ್ಚವಾಗುತ್ತಿತ್ತು. ಈಗ ಪರಿಸ್ಥಸ್ಥಿತಿ ಬದಲಾಗಿದೆ. ಡಾ.ಜಿ. ಪರಮೇಶ್ವರ ಗೃಹ ಸಚಿವರಾದ ಬಳಿಕ ಗುಣಮಟ್ಟದ ಊಟ, ಸೌಲಭ್ಯ ಅವಕಾಶ ಕಲ್ಪಿಸಲಾಗಿದೆ ಎಂದು ಪರಪ್ಪನ ಅಗ್ರಹಾರ ಕಾರಾಗೃಹದ ನಿವೃತ್ತ ಅಧಿಕಾರಿ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಇಷ್ಟ ಬಂದ ಕೆಲಸ ಮಾಡಲು ಅವಕಾಶ

ಇಷ್ಟ ಬಂದ ಕೆಲಸ ಮಾಡಲು ಅವಕಾಶ

ಅಪರಾಧ ಕೃತ್ಯ ಎಸಗಿ ಶಿಕ್ಷೆಗೆ ಗುರಿಯಾಗುವ ಕೈದಿಗಳು ದಿನವೂ ದುಡಿದು ಆದಾಯಗಳಿಸಬಹುದು. ಕಾರಾಗೃಹದಲ್ಲಿ ಕೌಶಲ್ಯ ರಹಿತ, ಅರೆ ಕೌಶಲ್ಯ ಹಾಗೂ ಕೌಶಲ್ಯ ಎಂದು ಪರಿಗಣಿಸಿ ಕನಿಷ್ಠ 40 ರೂ. ನಿಂದ 60 ರೂ. ವರೆಗೂ ದಿನ ಗೂಲಿ ನೀಡಲಾಗುತ್ತದೆ. ಕೂಲಿ ಮಾಡಿದ ಕೈದಿಗೆ ಅರ್ಧ ಮೊತ್ತಕ್ಕೆ ಜೈಲಿನ ಟೋಕನ್ ನೀಡಲಾಗುತ್ತದೆ. ಟೋಕನ್ ಬಳಿಸಿ ಜೈಲಿನ ಕ್ಯಾಂಟೀನ್ ನಲ್ಲಿ ಬೇಕಾಗಿದ್ದನ್ನು ಖರೀದಿ ಮಾಡಬಹುದು. ಉಳಿದಿದ್ದನ್ನು ಕೈದಿಯ ಸಂಬಂಧಿಕರ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುತ್ತದೆ. ಟೀ, ಕಾಫಿ, ತಿನಿಸುಗಳನ್ನು ಜೈಲಿನಲ್ಲಿಯೇ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಕೈದಿಗಳು ಡೆತ್ ಆದ್ರೆ ಅಧಿಕಾರಿಗಳ ಕೆಲಸಕ್ಕೆ ಕುತ್ತು

ಕೈದಿಗಳು ಡೆತ್ ಆದ್ರೆ ಅಧಿಕಾರಿಗಳ ಕೆಲಸಕ್ಕೆ ಕುತ್ತು

ಸನ್ನಡತೆ ಹಾಗೂ ವಿಚಾರಣಾಧೀನ ಕೈದಿ ಅನಾರೋಗ್ಯಕ್ಕೆ ಒಳಗಾದರೆ ಜೈಲಿನ ಆಸ್ಪತ್ರೆಯಲ್ಲಿ ಉಚಿತವಾಗಿ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಪ್ರಮುಖ ಶಸ್ತ್ರ ಚಿಕಿತ್ಸೆಗೆ ಒಳಪಟ್ಟರೂ ಜೈಲು ಅಧಿಕಾರಿಗಳೇ ಸರ್ಕಾರಿ ವಾಹನದಲ್ಲಿ ಸೂಕ್ತ ಆಸ್ಪತ್ರೆಗೆ ಕರೆ ತಂದು ಶಸ್ತ್ರ ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಹೀಗಾಗಿ ಜೈಲಿನಲ್ಲಿರುವ ಕೈದಿಗಳು ಆರೋಗ್ಯದ ಬಗ್ಗೆಯಾಗಲೀ, ಊಟದ ಬಗ್ಗೆಯಾಗಲೀ ಚಿಂತೆ ಮಾಡುವ ಅಗತ್ಯವೇ ಇಲ್ಲ. ಇಂತಹ ಸುಸಜ್ಜಿತ ಸೌಲಭ್ಯವನ್ನು ಜೈಲಿನಲ್ಲಿರುವ ಕೈದಿಗಳಿಗೆ ಕಲ್ಪಿಸಲಾಗಿದೆ. ಕೈಯಲ್ಲಿ ಒಂದು ರೂಪಾಯಿ ಇಲ್ಲದಿದ್ದರೂ ಎಲ್ಲವನ್ನೂ ಸರ್ಕಾರವೇ ನೋಡಿಕೊಳ್ಳುತ್ತದೆ. ಅದೇ ವಿಕಲಚೇತನರಿಗೆ, ವಿಧವೆಯರಿಗೆ, ಹಿರಿಯ ನಾಗರಿಕರಿಗೆ ಸರ್ಕಾರ ಮಾಸಿಕ ಒಂದು ಸಾವಿರ ರೂ. ಕೊಡಲು ಸರ್ಕಾರ ನೂರು ಬಾರಿ ಚಿಂತಿಸುತ್ತದೆ. ಇನ್ನು ಅನಾರೋಗ್ಯಕ್ಕೆ ಒಳಗಾದರೆ ಅವರವರ ಹಣೇ ಬರಹ. ಬೆಡ್ ಸಿಕ್ಕಿಲ್ಲ, ಮೆಡಿಸಿನ್ ಸಿಕ್ಕಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಶಕ್ತಿ ಇಲ್ಲ ಹೀಗೆ ಸಮಸ್ಯೆಗಳು ನೂರಾರು. ಅದೇ ಕೈದಿಗಳಿಗೆ ಇಂಧನ ಸಮೇತ ಸರ್ಕಾರಿ ವಾಹನದಲ್ಲಿ ಕರೆದುಕೊಂಡು ಹೋಗಿ ಉತ್ತಮ ವೈದ್ಯರ ಬಳಿ ತೋರಿಸಿ ವಾಸಿ ಮಾಡಿಸಿಕೊಂಡು ಜೈಲು ಅಧಿಕಾರಿಗಳೇ ಕರೆದುಕೊಂಡು ಹೋಗಬೇಕು. ಇಷ್ಟಕ್ಕೆ ಜೈಲುಗಳು ಸೀಮಿತವಾಗಿಲ್ಲ.

ರೌಡಿಗಳ ದಾದಾಗಿರಿ ಕೇಂದ್ರ

ರೌಡಿಗಳ ದಾದಾಗಿರಿ ಕೇಂದ್ರ

ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದುಡ್ಡು ಇರುವರು, ರೌಡಿ ಹಿನ್ನೆಲೆಯುಳ್ಳವರು ಐಶಾರಾಮಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಜೈಲು ಅಧಿಕಾರಿಗಳನ್ನು ಹೆದರಿಸಿ ಸೌಲಭ್ಯ ಪಡೆಯುವ ಒಂದು ವರ್ಗವಿದ್ದರೆ, ಇನ್ನೊಂದು ವರ್ಗ ಜೈಲು ಅಧಿಕಾರಿಗಳಿಗೆ ಲಂಚ ಕೊಟ್ಟು ಬೇಕಾದ ಸೌಲಭ್ಯ ಪಡೆದುಕೊಳ್ಳುತ್ತದೆ. ಬೀಡಿ, ಸಿಗರೇಟ್, ಗಾಂಜಾ, ಮೊಬೈಲ್, ಸಿಮ್, ಗೂಗಲ್ ಪೇ, ವ ವಿಡಿಯೋ ಕಾಲ್ ಹೀಗೆ ಎಲ್ಲಾ ಸೌಲಭ್ಯಗಳು ಜೈಲಿನಲ್ಲಿ ಸಿಗುವಂತೆ ಮಾಡಿಕೊಂಡಿದ್ದಾರೆ. ನೂರು ಸಲ ಜೈಲಿನ ಮೇಲೆ ದಾಳಿ ನಡೆಸಿದರೂ ಅಲ್ಲಿನ ಚಟುವಟಿಕೆಗೆ ನಿಯಂತ್ರಣ ಬಿದ್ದಿಲ್ಲ.

ಬೆಂಗಳೂರು ಡಾನ್ ಗಳ ಸೇಫ್ ಗೇಮ್

ಬೆಂಗಳೂರು ಡಾನ್ ಗಳ ಸೇಫ್ ಗೇಮ್

ಇನ್ನು ಬೆಂಗಳೂರು ಪಾತಕ ಲೋಕದಲ್ಲಿ ಜೀವ ಭಯ ಇರುವ ರೌಡಿಗಳು ಪ್ರಾಣ ಉಳಿಸಿಕೊಳ್ಳಲು ಜೈಲು ಮೊರೆ ಹೋಗುತ್ತಾರೆ. ಜೈಲಿನಲ್ಲಿದ್ದೇ ಸಂಚು ರೂಪಿಸಿ ಹತ್ಯೆಗಳನ್ನು ಮಾಡುತ್ತಾರೆ. ಇತ್ತೀಚೆಗೆ ಜೈಲಿನಲ್ಲಿದ್ದ ಬೆಂಗಳೂರು ಪಾತಕ ಲೋಕದ ಕೆಲವು ರೌಡಿಗಳನ್ನು ಮುಗಿಸಿದ್ದೇ ವಿಲ್ಸನ್ ಗರ್ಡನ್ ನಾಗ ಎಂಬ ಆರೋಪವಿದೆ. ಹೊರಗೆ ಇದ್ದರೆ ಸಂಚು ರೂಪಿಸುವುದಕ್ಕೂ ಕಷ್ಟ. ರೂಪಸಿದರೂ ಪೊಲೀಸರಿಗೆ ಸಿಕ್ಕಿ ಬೀಳುವ ಭಯ. ಅದೇ ಜೈಲಿನಲ್ಲಿದ್ದುಕೊಂಡು ತಮ್ಮ ಸಹಚರರ ಮೂಲಕ ಅಪರಾಧ ಲೋಕವನ್ನು ಆಳ್ವಿಕೆ ಮಾಡಿದರೆ ಜೀವಕ್ಕೂ ಭಯವಿಲ್ಲ, ಹವಾ ನಿರ್ವಹಣೆ ಮಾಡಬಹುದು ಎಂಬ ಆಲೋಚನೆಯಿಂದ ಅನೇಕ ಪಾತಕಿಗಳು ಜೈಲನ್ನೇ ಅರಮನೆ ಮಾಡಿಕೊಂಡಿದ್ದಾರೆ. ಈ ಮೂಲಕ ಜೀವ ಉಳಿಸಿಕೊಂಡಿದ್ದಾರೆ.

ಯಾವ ತಂತ್ರಜ್ಞಾನ ಅಲ್ಲಿ ಕೆಲಸ ಮಾಡಲ್ಲ

ಯಾವ ತಂತ್ರಜ್ಞಾನ ಅಲ್ಲಿ ಕೆಲಸ ಮಾಡಲ್ಲ

ಬೆಂಗಳೂರು ಜೈಲಿನಲ್ಲಿ ಮೊಬೈಲ್ ಕಾರ್ಯ ನಿರ್ವಹಿಸಬಾರದು ಎಂದು ಜಾಮರ್ ಗಳನ್ನು ಹಾಕಿದ್ದಾರೆ. ವಿಚಿತ್ರ ಎಂದರೆ ಎಲ್ಲಾ ನೆಟ್ ವರ್ಕ್ ಸಿಮ್ ಗಳಿಗೆ ಈ ಜಾಮರ್ ಗಳು ಅನ್ವಯ ಆಗಲ್ಲ. ಇನ್ನು ಕೈಗೆ ಸಿಗುವಂತಹ ಜಾಗದಲ್ಲಿ ಜಾಮರ್ ಅಳವಡಿಸಿದ್ದರೆ ಬಿಸಿ ನೀರು ಸುರಿದು ಕಾರ್ಯ ಸ್ಥಗಿತ ಮಾಡುತ್ತಾರೆ. ಇನ್ನೂ ಕೆಲವರು ಜಾಮರ್ ಅನ್ನೇ ಜಾಮ್ ಮಾಡುವಂತಹ ತಂತ್ರಜ್ಞಾನ ಬಳಸುತ್ತಾರೆ. ಈಗಿನ ತಂತ್ರಜ್ಞಾನ ಬಳಸಿಕೊಂಡು ಅಂತರ್ಜಾಲ ಬಳಸಿ, ವಾಟ್ಸಪ್ ಕಾಲ್, ಫೇಸ್‌ ಬುಕ್, ಇ ಮೇಲ್ ಕೂಡ ಬಳಸುತ್ತಿದ್ದಾರೆ. ಹೊರ ಪ್ರಪಂಚಕ್ಕೆ ಜೈಲಾಗಿ ಕಾಣುತ್ತದೆ. ರಾಜ್ಯದಲ್ಲಿ ಜೈಲುಗಳು ಸಾಕಷ್ಟು ಸುಧಾರಣೆಯಾಗಬೇಕಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ನಿವೃತ್ತ ಜೈಲು ಅಧಿಕಾರಿ.

English summary
Inside Story of Parappana agrahara central prison :Do you know how much the government spends a day for a prison inmate?
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X