keyboard_backspace

ಬಿಜೆಪಿ ಸರ್ಕಾರದ ಎರಡು ವರ್ಷಗಳ ವೈಫಲ್ಯ ಬಿಚ್ಚಿಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ!

Google Oneindia Kannada News

ಬೆಂಗಳೂರು, ಜು. 29: ರಾಜ್ಯ ಬಿಜೆಪಿ ಸರ್ಕಾರ ಎರಡು ವರ್ಷಗಳ ಅವಧಿ ಪೂರೈಸುತ್ತಿದ್ದಂತೆಯೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲಾಗಿದೆ. ಜೊತೆಗೆ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರವಹಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ? ಎಂಬುದನನ್ನು ಜನರ ಮುಂದಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ ಜನರ ಮುಂದಿಟ್ಟಿದ್ದಾರೆ. ಆ ಮೂಲಕ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಎರಡು ವರ್ಷಗಳ ವೈಫಲ್ಯಗಳನ್ನು ಪಟ್ಟಿ ಮಾಡಿ, 'ಜನಪೀಡಕ ಸರ್ಕಾರ" ಎಂಬ ತಲೆಬರಹದ ಸಣ್ಣ ಪುಸ್ತಕ ಬಿಡುಗಡೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತಣಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸಿದ್ದಾರೆ. ಜೊತೆಗೆ ಎರಡು ವರ್ಷಗಳ ಸಂಭ್ರಮವನ್ನೂ ಆಚರಿಸಿದ್ದಾರೆ. ಕೊನೆಗೆ ರಾಜೀನಾಮೆಯನ್ನು ಕೊಟ್ಟಿದ್ದಾರೆ. ಅಭಿವೃದ್ಧಿ ಮಾಡಿದ್ದೇವೆ ಅಂತ ಹೇಳಿ ರಾಜೀನಾಮೆ ಕೊಟ್ಟಿದ್ದಾರೆ. ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ಶುಭಹಾರೈಸುತ್ತೇನೆ. ಆದರೆ ಬಿಜೆಪಿ ಸರ್ಕಾರ ಏನು ಮಾಡಿದೆ? ಕಳೆದ 2019ರ ಜುಲೈ 26 ರಂದು ಈ ಸರ್ಕಾರ ಹೇಗೆ ಅಧಿಕಾರಕ್ಕೆ ಬಂತು ಎಂಬುದು ಎಲ್ಲರಿಗೂ ಗೊತ್ತಿದೆ. ಆಪರೇಷನ್ ಕಮಲ ಮಾಡಿ ಕಾಂಗ್ರೆಸ್ ಪಕ್ಷದ 14, ಜೆಡಿಎಸ್ ಪಕ್ಷದ 3 ಶಾಸಕರನ್ನು ಕೊಂಡುಕೊಂಡು ಸರ್ಕಾರ ರಚನೆ ಮಾಡಲಾಗಿದೆ. ಬಿಜೆಪಿ ಸರ್ಕಾರಕ್ಕೆ ಯಾವುದೇ ಜನಾದೇಶವಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಕಾಂಗ್ರೆಸ್-ಜೆಡಿಎಸ್ ಶಾಸಕರುಗಳನ್ನು ಕುದುರೆ ವ್ಯಾಪಾರ ನಡೆಸಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷಗಳಾದವು. ಹುಟ್ಟುತ್ತಲೇ ಹುಣ್ಣಾಗಿದ್ದ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸುವುದರೊಳಗೆ "ಭ್ರಷ್ಟಾಚಾರಿ ಜನರ ಪಕ್ಷ" ಎಂದು ಮತ್ತೊಮ್ಮೆ ಸಾಭೀತಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಕರ್ನಾಟಕದಲ್ಲಿ ಸ್ವರ್ಗ ಸೃಷ್ಟಿಯಾಗುತ್ತದೆ ಎಂದು ಭ್ರಮೆ ಸೃಷ್ಟಿಸಿ ಅಧಿಕಾರಕ್ಕೇರಿದ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ನಾಡಿನ ಜನ ಭ್ರಮನಿರಸನಗೊಂಡು ಛೀಮಾರಿ ಹಾಕುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಭ್ರಷ್ಟಾಚಾರ ಮತ್ತು ಕಪ್ಪುಹಣದ ಮೂಲಕವೇ ರಚಿತವಾದ ಸರ್ಕಾರ ಎರಡು ವರ್ಷಗಳುದ್ದಕ್ಕೂ ಆಚರಿಸಿದ್ದು ದುರಾಡಳಿತ, ಅನೀತಿ ಮತ್ತು ಭ್ರಷ್ಟಾಚಾರವನ್ನೆ. ಭ್ರಷ್ಟಾಚಾರದ ನೆಪದಲ್ಲಿ ಮುಖ್ಯಮಂತ್ರಿ ಬದಲಾಗುವ ಮೂರು ದಿನದ ಮೊದಲು ಬಡವರ ಮಕ್ಕಳ ಪೌಷ್ಠಿಕಾಂಶ ಹೆಚ್ಚಿಸುವುದಕ್ಕಾಗಿ ಮೀಸಲಿಟ್ಟ ಮೊಟ್ಟೆಯ ಹಣವನ್ನೂ ಈ ಸರ್ಕಾರ ನುಂಗಿ ಹಾಕಿದೆ. ತಮ್ಮದೇ ಸರ್ಕಾರದ ಬಗ್ಗೆ ಬಿಜೆಪಿಯ ಸದಸ್ಯರುಗಳು, ಶಾಸಕರೇ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಹೊರಿಸುತ್ತಲೇ ಇದ್ದಾರೆ. ಹಲವು ಸಚಿವರುಗಳ ಹಗರಣಗಳ ಕುರಿತು ಜನ ಮತ್ತು ಇಲಾಖೆಯ ನೌಕರರೇ ನನಗೆ ಪತ್ರ ಬರೆದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

"ಈ ನಡುವೆ ಮುಖ್ಯಮಂತ್ರಿ ಒಬ್ಬರನ್ನು ಬದಲಾಯಿಸಿ ಸರ್ಕಾರದ ಘನತೆ ಉಳಿಸಿಕೊಳ್ಳಬಹುದು ಎನ್ನುವ ಬಿಜೆಪಿ ಹೈ ಕಮಾಂಡ್ ಭ್ರಮಿಸಿದಂತಿದೆ. ಈ ನಾಟಕ ನಾಡಿನ ಜನತೆಗೆ ಅರ್ಥ ಆಗಿದೆ. ಹಲವಾರು ಸಚಿವರುಗಳು, ಶಾಸಕರುಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ತಮ್ಮ ಮಾನ ಉಳಿಯಿತು ಎಂದು ಓಡಾಡಿಕೊಂಡಿದ್ದಾರೆ. ಪ್ರತೀ ಇಲಾಖೆಯ ಒಂದಲ್ಲಾ ಒಂದು ವೈಫಲ್ಯಗಳು, ಭ್ರಷ್ಟಾಚಾರಗಳು ಹೊರಗೆ ಬರುತ್ತಲೇ ಇವೆ" ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.

ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳ ಪಟ್ಟಿ!

ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳ ಪಟ್ಟಿ!

"ಕೋವಿಡ್ ಸೋಂಕು ಮತ್ತು ಕೋವಿಡ್ ಹೆಣಗಳ ಮೇಲೆಯೂ ಭ್ರಷ್ಟಾಚಾರ ನಡೆಸಿದ್ದು ಎರಡು ವರ್ಷಗಳ ಬೃಹತ್ ಸಾಧನೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, 'ಜನಪೀಡಕ ಸರ್ಕಾರ" ಕಿರುಹೊತ್ತಿಗೆಯಲ್ಲಿ ವಿವರಿಸಿದ್ದಾರೆ.

ಹಿಂದೆ ಗಣಿ ಹಗರಣ. ಈಗ ಭೂ ಸುಧಾರಣಾ ಕಾಯ್ದೆ. ಈ ಕಾಯ್ದೆಯಡಿ ಬಾಕಿ ಇದ್ದ ಹಳೆಯ ಕೇಸುಗಳನ್ನೂ ರದ್ದು ಮಾಡಿ ಕಾಯಿದೆಗೆ ತಿದ್ದುಪಡಿ ತಂದಿದೆ. ಇದು ಗಣಿ ಹಗರಣಕ್ಕಿಂತ ದೊಡ್ಡ ಹಗರಣವಾಗಿದೆ. ಲೇಔಟು ಮಧ್ಯದಲ್ಲಿರುವ ಸರ್ಕಾರಿ ಜಮೀನುಗಳನ್ನು ರಿಯಲ್ ಎಸ್ಟೇಟ್‌ದಾರರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಬಿಡಿಎ, ಕೆಐಎಡಿಬಿಗಳ ಡಿನೋಟಿಫಿಕೇಷನ್ ಮತ್ತು ಫೋರ್ಜರಿ ದಾಖಲೆಗಳ ಸೃಷ್ಟಿ ವಿಚಾರದಲ್ಲಿ ಸ್ವತಃ ಮಾಜಿ ಮುಖ್ಯಮಂತ್ರಿ ಹಾಗೂ ಇತರೆ ಕೆಲವು ಸಚಿವರು ಅನೇಕ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.

35 ಪರ್ಸೆಂಟ್ ಮೀರುತ್ತಿದೆ ಎಂದು ಭ್ರಷ್ಟಾಚಾರ

35 ಪರ್ಸೆಂಟ್ ಮೀರುತ್ತಿದೆ ಎಂದು ಭ್ರಷ್ಟಾಚಾರ

ನೀರಾವರಿ, ಇಂಧನ ಇಲಾಖೆಗಳ ಕಾಮಗಾರಿಗಳು ಹಾಗೂ ರಸ್ತೆ, ಚರಂಡಿ, ಕಟ್ಟಡ ನಿರ್ಮಾಣ ಮುಂತಾದ ಕಾಮಗಾರಿಗಳಲ್ಲಿ ಅಲ್ಪಾವಧಿ ಟೆಂಡರ್ ಗಳನ್ನು ಕರೆದು ಕಾರ್ಯಾದೇಶ ನೀಡುವ ಮೊದಲೆ 10 ಪರ್ಸೆಂಟ್ ಲಂಚ ಹೊಡೆಯುತ್ತಿದ್ದಾರೆ, ಲಂಚದ ಪ್ರಮಾಣ 35 ಪರ್ಸೆಂಟ್ ಮೀರುತ್ತಿದೆ ಎಂದು ಭ್ರಷ್ಟಾಚಾರದ ಕುರಿತು ಆಡಳಿತ ಪಕ್ಷದ ಸದಸ್ಯರುಗಳೆ ಆರೋಪಿಸುತ್ತಿದ್ದಾರೆ. ಬಿಎಂಪಿಯ ವೈಟ್ ಟಾಪಿಂಗ್ ಕಾಮಗಾರಿಗಳನ್ನು ನಮ್ಮ ಸರ್ಕಾರವಿದ್ದಾಗ ಒಂದು ಕಿ.ಮೀಗೆ 8 ರಿಂದ 10 ಕೋಟಿ ದರಕ್ಕೆ ನೀಡುತ್ತಿದ್ದೆವು. ಈಗ ಒಂದು ಕಿ.ಮೀ.ಗೆ 14 ಕೋಟಿ ರೂಪಾಯಿಗಳಿಗೆ ಏರಿಸಿಕೊಂಡಿದ್ದಾರೆ.

ಕೋವಿಡ್ ಮಕ್ಕಳ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎನ್ನುವ ಆತಂಕ ಕವಿದಿರುವಾಗಲೇ, ಮಕ್ಕಳ ಪೌಷ್ಠಿಕಾಂಶವನ್ನು ಹೆಚ್ಚಿಸುವ ಮೊಟ್ಟೆಗಳಿಗಾಗಿ ಮೀಸಲಿಟ್ಟ ಹಣವನ್ನೂ ತಿಂದು ಭ್ರಷ್ಟಾಚಾರದಲ್ಲಿ ಹೊಸ ದಾಖಲೆ ಬರೆದ ಸಚಿವರೂ ಈ ಸರ್ಕಾರದಲ್ಲಿದ್ದಾರೆ ಎಂದು ಪುಸ್ತಕದಲ್ಲಿ ಸಿದ್ದರಾಮಯ್ಯ ವಿವರಿಸಿದ್ದಾರೆ.

ಜನರನ್ನು ಬೀದಿಗಳಲ್ಲಿ ಕೊಂದ ಸರ್ಕಾರ

ಜನರನ್ನು ಬೀದಿಗಳಲ್ಲಿ ಕೊಂದ ಸರ್ಕಾರ

ಆಕ್ಸಿಜನ್ ಇಲ್ಲದೆ ಚಾಮರಾಜನಗರ, ಬೆಂಗಳೂರು, ಕಲ್ಬುರ್ಗಿ, ಕೋಲಾರ ಮುಂತಾದ ಕಡೆ ಜನ ಮರಣ ಹೊಂದಿದರು. ಆದರೆ ಕೇಂದ್ರ ಸರ್ಕಾರ "ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೊಬ್ಬರೂ ಮರಣ ಹೊಂದಿಲ್ಲ" ಎಂದು ಹೇಳುತ್ತಿದೆ. ಚಾಮರಾಜನಗರ ದುರಂತದ ಬಗ್ಗೆ, ಆಕ್ಸಿಜನ್ ಇಲ್ಲದೆ ಜನರು ಮರಣ ಹೊಂದುತ್ತಿರುವ ಬಗ್ಗೆ ದೇಶದ ನ್ಯಾಯಾಲಯಗಳು ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. ತಜ್ಞರುಗಳು 2020ರ ನವೆಂಬರ್ 30 ರಂದೆ ಎರಡನೆ ಅಲೆಯ ಕುರಿತು ವರದಿ ನೀಡಿದ್ದರು. ಆದರೆ ಸರ್ಕಾರ ಯಾವುದೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿಲ್ಲ. ಕ್ರಮ ಕೈಗೊಳ್ಳಲು ಕನಿಷ್ಠ 5 ತಿಂಗಳು ಕಾಲಾವಕಾಶವಿತ್ತು.

ವೆಂಟಿಲೇಟರುಗಳ ಖರೀದಿಯಲ್ಲೂ ಭ್ರಷ್ಟಾಚಾರ ನಡೆದು ವೆಂಟಿಲೇಟರುಗಳಲ್ಲಿ ಬಹುತೇಕ ಕಳಪೆಯಾಗಿದ್ದಕ್ಕೆ ಆಸ್ಪತ್ರೆಗೆ ವಿತರಿಸದೆ ಕರ್ನಾಟಕದಲ್ಲಿ 909 ವೆಂಟಿಲೇಟರುಗಳು ಗೋದಾಮುಗಳಲ್ಲೆ ಧೂಳಿಡಿಯುವಂತೆ ಮಾಡಿ ಅಸಂಖ್ಯಾತ ಜನ ವೆಂಟಿಲೇಟರುಗಳಿಲ್ಲದೆ ಸಾಯುವಂತಾಯಿತು. ರಾಜ್ಯದ ರೋಗಿಗಳು ಆಕ್ಸಿಜನ್‌ಗಾಗಿ ಬೀದಿ ಬೀದಿಗಳಲ್ಲಿ ಪರಿತಪಿಸುತ್ತಿದ್ದಾಗ, ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರವು ಕಿತ್ತುಕೊಂಡು ಬೇರೆ ಕಡೆ ಕೊಂಡು ಹೋದರು. ನಂತರ ರಾಜ್ಯದ ಗೌರವಾನ್ವಿತ ಉಚ್ಛನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳು ಛೀಮಾರಿ ಹಾಕಿದ ಮೇಲೆ 12 ನೂರು ಟನ್ ಆಕ್ಸಿಜನ್ ಅನ್ನು ರಾಜ್ಯಕ್ಕೆ ನೀಡಲಾಯಿತು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

ಮನೆಗೆ ಮಾರಿ ಊರಿಗೆ ಉಪಕಾರಿ ಪ್ರಧಾನಿ ಮೋದಿ!

ಮನೆಗೆ ಮಾರಿ ಊರಿಗೆ ಉಪಕಾರಿ ಪ್ರಧಾನಿ ಮೋದಿ!

ಪ್ರಧಾನಿ ಮೋದಿ ಅವರು ಕೋವಿಡ್ ಔಷಧಗಳ ಆಮದಿನ ಮೇಲೂ ಜಿಎಸ್‌ಟಿ ವಿಧಿಸಿದರು. ಜನ ತಮ್ಮವರ ಜೀವ ಉಳಿಸಿಕೊಳ್ಳಲು ಹೆಣ್ಣು ಮಕ್ಕಳ ತಾಳಿ-ಬಳೆಗಳನ್ನೂ ಒತ್ತೆ ಇಟ್ಟರು. ಶವಸಂಸ್ಕಾರಕ್ಕೂ ಜನ ಕನಿಷ್ಠ 50 ಸಾವಿರ ರೂ.ಗಳವರೆಗೂ ಖರ್ಚು ಮಾಡಬೇಕಾಯಿತು. ದೇಶದ ಮಕ್ಕಳಿಗೆ ಲಸಿಕೆ ಇಲ್ಲದಿದ್ದಾಗ ಹೊರ ದೇಶಗಳಿಗೆ ಕೇವಲ 3 ಡಾಲರ್‌ಗಳ ಬೆಲೆಗೆ ರಫ್ತು ಮಾಡಿ, ನಮ್ಮ ದೇಶದ ಜನರಿಗೆ 12 ನೂರು ರೂ.ಗಳ ವರೆಗೆ ಬೆಲೆ ನಿಗಧಿ ಪಡಿಸಲಾಗಿದೆ. ನಮ್ಮ ದೇಶದ ಪ್ರಧಾನಿಗಳು ಮನೆಗೆ ಮಾರಿ ಊರಿಗೆ ಉಪಕಾರಿ ಅಲ್ಲವೆ? ಎಂದು ಸಿದ್ದರಾಮಯ್ಯ ಅವರು ಪುಸ್ತಕದಲ್ಲಿ ಪ್ರಶ್ನಿಸಿದ್ದಾರೆ.

ಕೋವಿಡ್‌ನ 3ನೆ ಅಲೆಯ ಭೀತಿ ಜನರನ್ನು ಕಾಡುತ್ತಿದೆ. ಈಗಾಗಲೆ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮೂರನೆ ಅಲೆ ಪ್ರಾರಂಭವಾಗಿದೆಯೆಂದು ಹೇಳಲಾಗುತ್ತಿದೆ. ಆದರೆ ರಾಜ್ಯದಲ್ಲಿ ಜುಲೈ 20 ರವರೆಗೆ ಎರಡನೆ ಡೋಸ್ ಲಸಿಕೆ ನೀಡಿರುವುದು ಕೇವಲ 54,08,325 (ಶೇ 8.3)ಜನರಿಗೆ ಮಾತ್ರ. ದೇಶದಲ್ಲಿ 8,54,53,618 (ಶೇ. 6.28) ಜನರಿಗೆ ಮಾತ್ರ ಎರಡನೆ ಲಸಿಕೆ ನೀಡಲಾಗಿದೆ. ಪರಿಸ್ಥಿತಿ ಹೀಗಾದರೆ ಮೂರನೇ ಅಲೆಯಿಂದ ಜನರನ್ನು ರಕ್ಷಿಸುವುದು ಹೇಗೆ? ಎಂದು ವಿವರಿಸಲಾಗಿದೆ.

ತಿಂಗಳಿಗೆ ಸರಾಸರಿ 66 ಸಾವಿರ ಜನ ಮರಣ

ತಿಂಗಳಿಗೆ ಸರಾಸರಿ 66 ಸಾವಿರ ಜನ ಮರಣ

ಕೊರೋನ ನೈಸರ್ಗಿಕ ವಿಪತ್ತು ಇರಬಹುದು, ಅದನ್ನು ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾ ಶಕ್ತಿಯ ಮೂಲಕ ನಿಭಾಯಿಸಬಹುದಾಗಿತ್ತು. ಜಗತ್ತಿನ ಅನೇಕ ದೇಶಗಳು ಈ ಕೆಲಸವನ್ನು ಮಾಡಿದರು. ನಮ್ಮ ಅಕ್ಕ ಪಕ್ಕದ ಕೆಲವು ರಾಜ್ಯ ಸರ್ಕಾರಗಳು ಕರ್ನಾಟಕಕ್ಕಿಂತ ಅತ್ಯುತ್ತಮವಾಗಿ ನಿಭಾಯಿಸಿದರು. ಉದಾಹರಣೆಗೆ ಕೇರಳದಲ್ಲಿ 32.2 ಲಕ್ಷ ಜನರಿಗೆ ಕೋವಿಡ್ ಸೋಂಕು ತಗುಲಿತು. ಆದರೆ ಮರಣ ಹೊಂದಿದವರ ಸಂಖ್ಯೆ 15739 ಮಾತ್ರ. ಕರ್ನಾಟಕದಲ್ಲಿ 28.9 ಲಕ್ಷ ಜನರು ಕೋವಿಡ್ ಸೋಂಕಿಗೆ ತುತ್ತಾದರು. ಅವರಲ್ಲಿ ಸರ್ಕಾರಿ ಲೆಕ್ಕದ ಪ್ರಕಾರವೇ 36293 ಜನ ದಿನಾಂಕ 23.04.2021 ರವರೆಗೆ ಮರಣ ಹೊಂದಿದ್ದಾರೆ. ವಾಸ್ತವದಲ್ಲಿ ಇದರ 10 ಪಟ್ಟು ಹೆಚ್ಚು ಜನ ಮರಣ ಹೊಂದಿದ್ದಾರೆ. ನಮ್ಮ ರಾಜ್ಯದ ಹಿಂದಿನ ವರ್ಷಗಳ ಅಂಕಿ ಅಂಶಗಳನ್ನು ನೋಡಿದರೆ ತಿಂಗಳಿಗೆ ಸರಾಸರಿ 40 ಸಾವಿರ ಜನ ಮರಣ ಹೊಂದಿದ್ದಾರೆ. (ಇದರಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚಿರುತ್ತಿತ್ತು) ಆದರೆ ಈ ವರ್ಷ ಜನವರಿಯಿಂದ ಜೂನ್ ವರೆಗೆ 3,97,302 ಜನ ಮರಣ ಹೊಂದಿದ್ದಾರೆ. ತಿಂಗಳಿಗೆ ಸರಾಸರಿ 66 ಸಾವಿರ ಜನ ಮರಣ ಹೊಂದಿದ್ದಾರೆ ಅಂದಾಯಿತು. ಈ ಹೆಚ್ಚುವರಿ ಮರಣಗಳೆಲ್ಲ ಕೋವಿಡ್ ಮರಣಗಳೆಂಬುದರಲ್ಲಿ ಸಂದೇಹವಿಲ್ಲ ಎಂದು ಪುಸ್ತಕದಲ್ಲಿ ವಿವರಿಸಿದ್ದಾರೆ.

ಕೋವಿಡ್ ಪ್ಯಾಕೇಜ್-ಸರ್ಕಾರ ಖರ್ಚು ಮಾಡಿದ್ದು

ಕೋವಿಡ್ ಪ್ಯಾಕೇಜ್-ಸರ್ಕಾರ ಖರ್ಚು ಮಾಡಿದ್ದು

ಕಳೆದ ವರ್ಷ 3 ಹಂತಗಳಲ್ಲಿ ಕೋವಿಡ್ ಪ್ಯಾಕೇಜನ್ನು ಘೋಷಿಸಲಾಗಿತ್ತು. 2020ರಲ್ಲಿ ಎರಡು ಹಂತದಲ್ಲಿ 1772 ಕೋಟಿ ರೂ.ಗಳ ಪ್ಯಾಕೇಜ್ ಘೊಷಣೆ ಆಯಿತು. ಇದರಲ್ಲಿ ಮುಸುಕಿನ ಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂ.ಗಳಂತೆ 5 ನೂರು ಕೋಟಿ ರೂ. ಮತ್ತು 40,250 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಗಳಂತೆ 12.5 ಕೋಟಿ ರೂ. ಘೊಷಣೆಯಾಯಿತು. ಇದರಲ್ಲಿ ಕಟ್ಟಡ ಕಾರ್ಮಿಕರ 824 ಕೋಟಿ ರೂ.ಗಳನ್ನು ಕಳೆದರೆ ಉಳಿದದ್ದು 1460.52 ಕೋಟಿ ರೂ.ಗಳು ಮಾತ್ರ.

ಆದರೆ ಜನರಿಗೆ ತಲುಪಿದ್ದು ಕೇವಲ 8 ನೂರು ಕೋಟಿ ರೂ.ಗಳು ಮಾತ್ರ. ಮಡಿವಾಳರು, ಕ್ಷೌರಿಕರಿಗೆ, ಸವಿತಾ ಸಮಾಜದವರಿಗೆ, ಆಟೋ, ಟ್ಯಾಕ್ಸಿ ಚಾಳಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಹೂ-ಹಣ್ಣು-ತರಕಾರಿ ಬೆಳೆಗಾರರಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಆದರೆ ಈ ದುಡಿಯುವ ವರ್ಗಗಳ ಅರ್ಧದಷ್ಟು ಮಂದಿಗೂ ಪರಿಹಾರ ತಲುಪಲಿಲ್ಲ.

2021ರಲ್ಲಿ 1250 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಣೆ ಆಯಿತು. ಆದರೆ ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ-ಅಂಶ ಗಮನಿಸಿದರೆ ಪ್ಯಾಕೇಜ್ ಮೊತ್ತ 1111.82 ಕೋಟಿ ರೂ. ಮಾತ್ರ. ಬೀದಿ ಬದಿ ವ್ಯಾಪಾರಿಗಳು ಮತ್ತಿತರಿಗೆ 22 ಕೋಟಿ ರೂ., ಕೋವಿಡ್ ನಿಂದ ಮರಣ ಹೊಂದಿದದವರ ಕುಟುಂಬದ ಸದಸ್ಯರಿಗೆಂದು 250 ರಿಂದ 300 ಕೋಟಿ ರೂಪಾಯಿಗಳು ಇದಿಷ್ಟೆ ಈ ಬಾರಿಯ ಕೋವಿಡ್ ಪ್ಯಾಕೇಜು. ಕಟ್ಟಡ ಕಾರ್ಮಿಕರ ಪರಿಹಾರ ಕೈ ಬಿಟ್ಟರೆ ಉಳಿಯವುದು 612.82 ಕೋಟಿ ರೂ. ಮಾತ್ರ.

ಕೇಂದ್ರ ಸರ್ಕಾರದ ಮಾರಣಾಂತಿಕ ಕಾಯ್ದೆಗಳು

ಕೇಂದ್ರ ಸರ್ಕಾರದ ಮಾರಣಾಂತಿಕ ಕಾಯ್ದೆಗಳು

ಜನರು ಕೊರೊನಾ ಭೀತಿಯಲ್ಲಿ ನರಳುತ್ತಿರುವಾಗ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ, ಕೃಷಿ ಒಪ್ಪಂದ ಕಾಯ್ದೆ, ಎಪಿಎಂಸಿಗಳನ್ನು ನಿಷ್ಕ್ರೀಯಗೊಳಿಸುವ ಕಾಯ್ದೆ, ಅಗತ್ಯವಸ್ತುಗಳ ಕಾಯ್ದೆಯನ್ನು ನಿಷ್ಕ್ರೀಯಗೊಳಿಸುವ ಕಾಯ್ದೆ, ಜಾನುವಾರು ಹತ್ಯಾ ನಿಷೇಧ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದರು.

ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅನುದಾನಕ್ಕೆ ಕತ್ತರಿ ಬಿದ್ದಿದೆ. 2018-19ಕ್ಕಿಂತ 2020-21 ರಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ 2024.06 ಕೋಟಿಗಳನ್ನು, ಪರಿಶಿಷ್ಟ ವರ್ಗಗಳ ಇಲಾಖೆಗೆ 297.4 ಕೋಟಿಗಳನ್ನು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 944.88 ಕೋಟಿ ರೂ. ಗಳಷ್ಟು ಅನುದಾನವನ್ನು ಕಡಿಮೆ ಮಾಡಲಾಗಿದೆ.

ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಖರ್ಚುಮಾಡುವ ಶಾಸನಬದ್ಧವಾದ ಅನುದಾನಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. 2018ರಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ನಾನು 2.2 ಲಕ್ಷ ಕೋಟಿಗಳ ಬಜೆಟ್ ಮಂಡಿಸಿದ್ದೆ. ಅದರಲ್ಲಿ ಎಸ್ ಸಿಪಿ ಮತ್ತು ಟಿ ಎಸ್ ಪಿ ಯೋಜನೆಗಾಗಿ 29691.5 ಕೋಟಿ ರೂ.ಗಳನ್ನು ಮೀಸಲಿರಿಸಿದ್ದೆ. ಈ ವರ್ಷ(2021-22) ಯಡಿಯೂರಪ್ಪನವರು 2,46,207 ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದಾರೆ, ಆದರೆ ಈ ಯೋಜನೆಗೆ ನಿಗಧಿಗೊಳಿಸಿರುವ ಮೊತ್ತ 26,005 ಕೋಟಿ ರೂ. ಮಾತ್ರ.

ಬಡ ಜನರ ಸೂರಿನ ಕನಸಿಗೆ ನೀರು ಬಿಟ್ಟ ಸರ್ಕಾರ

ಬಡ ಜನರ ಸೂರಿನ ಕನಸಿಗೆ ನೀರು ಬಿಟ್ಟ ಸರ್ಕಾರ

ಬಡ ಜನರ ಮನೆಯ ಕನಸಿಗೂ ಈ ಸರ್ಕಾರ ಎಳ್ಳು ನೀರು ಬಿಟ್ಟಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರ ಎರಡು ವರ್ಷಗಳಲ್ಲಿ 2,05,627 (ಸರ್ಕಾರದ ಜಾಹಿರಾತಿನ ಪ್ರಕಾರ 2,22,583 ಲಕ್ಷ ಮನೆಗಳು) ಮನೆಗಳನ್ನು ನಿರ್ಮಿಸಿ ಕೇವಲ 3,619 ಕೋಟಿ ರೂ.ಗಳನ್ನು ವಿನಿಯೋಗಿಸಿದೆ. ಕಳೆದ ವರ್ಷ ಅತ್ಯಂತ ಕಳಪೆ ಸಾಧನೆ ಮಾಡಿದ ಇಲಾಖೆಗಳಲ್ಲಿ ವಸತಿ ಇಲಾಖೆಯೂ ಸೇರಿದೆ. ಬಜೆಟ್‌ನಲ್ಲಿ ವಸತಿ ಇಲಾಖೆಗೆ 4,334.14 ಕೋಟಿ ನಿಗಧಿಪಡಿಸಿದ್ದರು. ಆದರೆ ಬಿಡುಗಡೆ ಮಾಡಿದ್ದು ಕೇವಲ 2,355.96 ಕೋಟಿ ಮಾತ್ರ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಜನರ ಆಶೋತ್ತರಗಳಿಗೆ ಸ್ಪಂದಿಸಿ ಅತ್ಯಂತ ಹಿಂದುಳಿದಿದ್ದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಆರ್ಟಿಕಲ್ 371ಜೆ ವಿಶೇಷ ಸ್ಥಾನಮಾನ ನೀಡಿತ್ತು. ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವರ್ಷಕ್ಕೆ ಒಂದು ಸಾವಿರ ಕೋಟಿಯನ್ನೂ ನೀಡುತ್ತಿಲ್ಲ. ಒಂದೆ ಒಂದು ಉದ್ಯೋಗವನ್ನು ನೀಡಲಾಗಿಲ್ಲ. ಕೊರೋನಾ ನೆಪದಲ್ಲಿ ಈ ಭಾಗದ ಎಲ್ಲ ನೇಮಕಾತಿಗಳನ್ನು ನಿಲ್ಲಿಸುವಂತೆ ಆದೇಶ ಮಾಡಿದೆ.

ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮೋದಿಯವರು ಇದ್ದಬದ್ದ ಹುದ್ದೆಗಳನ್ನೆಲ್ಲ ನಾಶ ಮಾಡಿದರು. ಉದ್ಯೋಗ ಕೊಡಿ ಪ್ರಧಾನಿಗಳೆ ಎಂದರೆ ವಿದ್ಯಾವಂತ ಯುವಜನರಿಗೆ ಪಕೋಡ ಮಾರಿ ಎಂದರು. ಕರ್ನಾಟಕದಲ್ಲೂ ಎರಡು ವರ್ಷಗಳಿಂದ ಒಂದೆ ಒಂದು ಉದ್ಯೋಗವನ್ನು ಸೃಷ್ಟಿಸಲಾಗದ ದಿವಾಳಿ ಪರಿಸ್ಥಿತಿಗೆ ರಾಜ್ಯವನ್ನು ಕೊಂಡೊಯ್ಯಲಾಗಿದೆ.

ಕಳೆದೆರಡು ವರ್ಷಗಳಿಂದ ನಿರುದ್ಯೋಗದ ಪ್ರಮಾಣ ರಾಜ್ಯದ ಇತಿಹಾಸದಲ್ಲಿ ಯಾವ ಕಾಲದಲ್ಲೂ ಇಲ್ಲದಷ್ಟು ಪ್ರಮಾಣದಲ್ಲಿ ಬೆಳೆದು ನಿಂತಿದೆ. ನಮ್ಮ ಯುವತಿಯರು ಮುಖದ ಮೇಲೆ ನಿರಾಶೆಯ ಕಾರ್ಮೋಡಗಳನ್ನು ಹೊತ್ತುಕೊಂಡು ಓಡಾಡುತ್ತಿದ್ದಾರೆ. ಹಾಗಾಗಿ ಯುವ ಜನತೆಯ ಪಾಲಿಗೆ ಬಿಜೆಪಿ ಎಂದರೆ "ಭರವಸೆಗಳನ್ನು ಜಗಿದು ನುಂಗುವ ಪಕ್ಷ"ವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯ ಧ್ವಂಸಕರು

ಒಕ್ಕೂಟ ವ್ಯವಸ್ಥೆಯ ಧ್ವಂಸಕರು

ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ, ಪರಿಸರದ ವಿಚಾರದಲ್ಲಿ ನಾಡಿನ ಹಿತ ಕಾಯಲಿಲ್ಲ. ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ನಾಡ ಧ್ವಜ ಹಾರಿಸುವುದನ್ನು ಬಿಜೆಪಿಯವರು ವಿರೋಧಿಸಿದರು. ಕೇಂದ್ರದ 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿತು. ಅದರಿಂದಾಗಿ 39 ಸಾವಿರ ಕೋಟಿ ರೂ. ಗಳಷ್ಟು ಬರುತ್ತಿದ್ದ ತೆರಿಗೆ ಪಾಲಿನಲ್ಲಿ ಈ ವರ್ಷ ಸುಮಾರು 18 ಸಾವಿರ ಕೋಟಿ ಕಡಿಮೆಯಾಗಿದೆ ಎಂದು ಆರೋಪಿಸಲಾಗಿದೆ.

2021ರ ಮೇ ತಿಂಗಳ 14 ರಿಂದ 18 ರವರೆಗೆ ರಾಜ್ಯಕ್ಕೆ ಕಾಡಿದ ತೌಕ್ತೆ ಚಂಡ ಮಾರುತದಿಂದ ಕರಾವಳಿ ಜಿಲ್ಲೆಗಳು ತೀವ್ರ ನಷ್ಟವನ್ನು ಅನುಭವಿಸಿದ್ದವು. ಪ್ರಧಾನ ಮಂತ್ರಿಗಳು ತೀವ್ರ ಪ್ರವಾಹ ಪೀಡಿತವಾಗಿದ್ದ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳನ್ನು ಬಿಟ್ಟು ಗುಜರಾತಿಗೆ ಮಾತ್ರ ಭೇಟಿ ನೀಡಿ, ಆ ರಾಜ್ಯಕ್ಕೆ ಮಾತ್ರ ಪರಿಹಾರ ಘೋಷಿಸಿದರು. ಆ ಮೂಲಕ ಒಕ್ಕೂಟ ವ್ಯವಸ್ಥೆಗೆ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಾಹಿತಿ ಪ್ರಕಾರ ಮತ್ತೆ ರಾಜ್ಯವನ್ನು ಪ್ರವಾಹದ ಭೀತಿ ಕಾಡುತ್ತಿದೆ. ರಾಜ್ಯದ 45 ತಾಲ್ಲೂಕುಗಳು ಪ್ರವಾಹ ಪೀಡಿತವಾಗಿವೆ. ಪ್ರಾಥಮಿಕ ಅಂದಾಜು ಪ್ರಕಾರ 1.5 ಲಕ್ಷ ಎಕರೆ ಜಮೀನುಗಳ ಬೆಳೆಗಳು ಹಾನಿಯಾಗಿವೆ. ಸುಮಾರು 4 ರಿಂದ 5 ಸಾವಿರ ಸರ್ಕಾರಿ ಆಸ್ತಿ ಪಾಸ್ತಿಗಳು ಹಾಳಾಗಿವೆ. ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಹಾವೇರಿ ಜಿಲ್ಲೆಗಳ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ದಾವಣಗೆರೆ, ಹಾಸನ, ಬಾಗಲಕೋಟೆ ಜಿಲ್ಲೆಗಳಲ್ಲೂ ವ್ಯಾಪಕ ಹಾನಿಯಾಗಿವೆ. ಆದರೂ ರಾಜ್ಯ ಸರ್ಕಾರ ನಯಾಪೈಸೆ ಪರಿಹಾರ ನೀಡಿಲ್ಲ. 2019 ರಲ್ಲಿ ಬಿ.ಎಸ್. ಯಡಿಯೂರಪ್ಪ ರವರು ಮುಖ್ಯಮಂತ್ರಿಗಳಾದಾಗ ಸರ್ಕಾರ ಅಸ್ತಿತ್ವದಲ್ಲಿರಲಿಲ್ಲ, ಸಚಿವರುಗಳೂ ಇರಲಿಲ್ಲ. ಕಳೆದ ವರ್ಷ ಕೊರೋನಾ ಅವಧಿಯಲ್ಲಿ ಬಹಳ ಜನ ಸಚಿವರುಗಳು ಜಿಲ್ಲೆಗಳಿಗೆ ಭೇಟಿಯನ್ನು ನೀಡಿರಲಿಲ್ಲ. ಈ ವರ್ಷ ಮತ್ತೆ ಪ್ರವಾಹ ಬಂದಿದೆ. ಕಳೆದ ಅನೇಕ ದಿನಗಳಿಂದ ಮುಖ್ಯಮಂತ್ರಿ ಬದಲಾವಣೆಯಲ್ಲೇ ಕಾಲ ಕಳೆದರು. ಒಟ್ಟಾರೆ ಬಿ.ಜೆ.ಪಿ.ಗೆ ರಾಜ್ಯದ ಜನರ ಕುರಿತಂತೆ ಯಾವ ಕಾಳಜಿಯೂ ಇಲ್ಲ ಎಂದು ಪುಸ್ತಕದಲ್ಲಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಹೆಮ್ಮೆಯ ಬ್ಯಾಂಕುಗಳನ್ನು ಕೊಂದು ಹಾಕಿದ ಕೇಂದ್ರ

ಹೆಮ್ಮೆಯ ಬ್ಯಾಂಕುಗಳನ್ನು ಕೊಂದು ಹಾಕಿದ ಕೇಂದ್ರ

ಸುಮಾರು 8.5 ಲಕ್ಷ ಕೋಟಿ ರೂ.ಗಳಷ್ಟು ಆಸ್ತಿ ಹೊಂದಿದ್ದ ಕರಾವಳಿ ಜನಕಟ್ಟಿ ಬೆಳೆಸಿದ್ದ ಕಾರ್ಪೊರೇಶನ್, ಕೆನರಾ, ವಿಜಯಾ ಮತ್ತು ಸಿಂಡಿಕೇಟ್ ಬ್ಯಾಂಕುಗಳನ್ನು ಉತ್ತರದ ಬರೋಡ, ಯೂನಿಯನ್, ಪಂಜಾಬ್ ನ್ಯಾಶನಲ್ ಬ್ಯಾಂಕುಗಳ ಜತೆ ವಿಲೀನಗೊಳಿಸಿದರು. ಅವರನ್ನು ಬದುಕಿಸಲಿಕ್ಕಾಗಿ ನಮ್ಮ ಬ್ಯಾಂಕುಗಳನ್ನು ಮುಳುಗಿಸಿದರು. ರಾಜ್ಯ ಸರ್ಕಾರ ಪ್ರತಿಭಟನೆಯನ್ನೆ ಮಾಡದೆ ಒಪ್ಪಿಗೆ ನೀಡಿತು. ಇದರಿಂದ ಕನ್ನಡದ ಯುವಕರಿಗೆ ಬ್ಯಾಂಕಿಂಗ್ ಉದ್ಯೋಗಾವಕಾಶಗಳು ತಪ್ಪಿ ಹೋದವು.

ಜೊತೆಗೆ ಸದಾ ಚಟುವಟಿಕೆಯಲ್ಲಿರುವ ಮಲೆನಾಡಿನಲ್ಲಿ 2019ರ ಆಗಸ್ಟ್‌ನಿಂದ ಪ್ರತಿ ವರ್ಷ ಪ್ರವಾಹದೋಪಾದಿಯಲ್ಲಿ ಮಳೆ ಸುರಿದು ಬೆಟ್ಟಗಳು ಕುಸಿದು ಬೀಳುತ್ತಿವೆ. ಅಡಿಕೆ, ಕಾಫಿ, ಮೆಣಸಿಗೆ ಕೊಳೆರೋಗ ಕಾಡುತ್ತಿದೆ. ಅಡಿಕೆಯನ್ನು ಹಳದಿ ರೋಗ ಆಪೋಷನ ತೆಗದುಕೊಳ್ಳುತ್ತಿದೆ. ಅಡಿಕೆ, ಕಾಫಿ, ಮೆಣಸನ್ನು ನಂಬಿದ್ದ ಮಲೆನಾಡಿಗರು ಬಸವಳಿದು ಹೋಗಿದ್ದಾರೆ. ಮೆಣಸಿನ ಬೆಲೆ ಕೆಜಿಗೆ 750 ರೂಪಾಯಿಗಳಿಂದ 250 ರೂಗಳಿಗೆ ಕುಸಿದಿದೆ.

ಪ್ರಧಾನಿ ಮೋದಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರು ಪೈಪೋಟಿಗೆ ಬಿದ್ದಂತೆ ಸಾಲ ಮಾಡಿದ್ದಾರೆ. 2914ರ ಮಾರ್ಚ್ 31ಕ್ಕೆ 53.11 ಲಕ್ಷ ಕೋಟಿ ಇದ್ದ ದೇಶದ ಸಾಲ ಈ ವರ್ಷದ ಕಡೆಗೆ 135.87 ಲಕ್ಷ ಕೋಟಿ ರೂಗಳಿಗೆ ಏರಿಕೆಯಾಗುತ್ತಿದೆ. ಅಂದರೆ 6 ವರ್ಷಗಳಲ್ಲಿ ದೇಶದ ಸಾಲ 82.76 ಲಕ್ಷ ಕೋಟಿಗೂ ಹೆಚ್ಚು. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಿಂದ ಇಳಿದಾಗ ರಾಜ್ಯದ ಸಾಲ 2.42 ಲಕ್ಷ ಕೋಟಿ ರೂ. ಇತ್ತು. ಈ ವರ್ಷದ ಕಡೆಗೆ ರಾಜ್ಯದ ಸಾಲ ೪.೫೨ ಲಕ್ಷ ಕೋಟಿ ರೂ. ಗಳಾಗುತ್ತಿದೆ.

ಕೃಷಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ

ಕೃಷಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ

ಜನರ ಜೀವನಾಡಿಯಾದ ಕೃಷಿಯನ್ನು ಬಿಜೆಪಿ ಸಂಪೂರ್ಣ ನಿರ್ಲಕ್ಷಿಸುತ್ತಿದೆ. ಈ ಸರ್ಕಾರ ರಾಜ್ಯದ ರೈತರಿಗೆ ಸಮರ್ಪಕವಾದ ಬಿತ್ತನೆ ಬೀಜ, ರಸಗೊಬ್ಬರ, ಔಷಧ ನೀಡಲಾಗದ ಅತಿಗೆ ತಲುಪಿದೆ. ಈ ಬಾರಿ ರೈತರು ಮೆಣಸಿನ ಬೀಜಕ್ಕೆ , ಹೆಸರುಕಾಳಿಗೆ ಪ್ರತಿಭಟನೆ ನಡೆಸುವಂತಾಯಿತು. ಗೊಬ್ಬರದ ಬೆಲೆಯನ್ನು ಕ್ವಿಂಟಾಲಿಗೆ 1400 ರೂ. ಗಳಷ್ಟು ಏರಿಸಿ, ನಾವು ಪ್ರತಿಭಟನೆ ಮಾಡಿದ ಮೇಲೆ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆದರು.

ಸಬ್ ಕಾ ಸಾಥ್- ಸಬ್ ಕಾ ವಿಕಾಸ್ ಎನ್ನುವ ಪ್ರಧಾನಿ ಮೋದಿ ಅವರು ಮತ್ತು ಅವರ ಪಕ್ಷ ಮಾತೆತ್ತಿದರೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ದುಡಿಯುವ ಜನರನ್ನು ನಿರಂತರ ಅವಮಾನಿಸುತ್ತಲೆ ಇದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಕನಾಟಕದ ಮಾನವನ್ನು ಬೀದಿ ಪಾಲು ಮಾಡುವ ಕೆಲಸ ಮಾಡುತ್ತಲೆ ಇದ್ದಾರೆ. ಸದನದಲ್ಲೆ ಬ್ಲೂಫಿಲಂ ನೋಡಿ ಹಲವು ಮಂತ್ರಿಗಳು ರಾಜೀನಾಮೆ ಕೊಟ್ಟರು. ತನ್ನ ಗಳೆಯನ ಹೆಂಡತಿಯ ಅತ್ಯಾಚಾರ ಮಾಡಿದರು. ಹಲವಾರು ಜನ ಅಕ್ರಮ ಸಂಬಂಧಗಳ ಮೂಲಕ ಬೀದಿ ಮಾತಾದರು. ಕಳೆದೊಂದು ವರ್ಷದಿಂದ ಮತ್ತದೆ ಪುನರಾವರ್ತನೆಯಾಗುತ್ತಿದೆ. ಹಾಗಾಗಿ ಇದು ಬಿಜೆಪಿ ಅಲ್ಲ ಬ್ಲೂಜೆಪಿ ಎಂದು ಜನ ಆಡಿಕೊಳ್ಳುವಂತಾಗಿದೆ. ಬಿಜೆಪಿಯ ಹಲವಾರು ಜನ ಸಚಿವರುಗಳು, ಶಾಸಕರುಗಳು ಇಂದಿಗೂ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆಗಳನ್ನು ತಂದು ಓಡಾಡುತ್ತಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಕುಂಠಿತ

ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಕುಂಠಿತ

ಬೆಂಗಳೂರಿನ ಅಭಿವೃದ್ಧಿಗೆಂದು ತೆರಿಗೆ ವಸೂಲಿ, ತೆರಿಗೆ ಏರಿಕೆ ಪ್ರಕ್ರಿಯೆಗಳು ನಡೆಯುತ್ತಲೆ ಇವೆ. ಮೆಟ್ರೋ ಹೆಸರಲ್ಲಿ ಸಾವಿರಾರು ಮರಗಳನ್ನು ಕಡಿದುರುಳಿಸಲಾಗುತ್ತಿದೆ. ತುರಹಳ್ಳಿ ಅರಣ್ಯಕ್ಕೂ ಗರಗಸ ಹಾಕಿದ್ದಾರೆ. ಆದರೂ ನಮ್ಮ ಸರ್ಕಾರದ ಅವಧಿಯಲ್ಲಿ ಬೊಬ್ಬೆ ಹೊಡೆಯುತ್ತಿದ್ದ ಅನೇಕರು ಮೌನವಾಗಿದ್ದಾರೆ. ಸಬರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರವು ಅನುದಾನ ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿತು. ಇದಕ್ಕೆ ರಾಜ್ಯದ ಬಿಜೆಪಿ ಶೂರರೆಲ್ಲ ಸಂಭ್ರಮಿಸಿದ್ದು ಬಿಟ್ಟರೆ ಕೇಂದ್ರ ಸರ್ಕಾರ ಒಂದು ರೂಪಾಯಿ ಕೊಟ್ಟಿದ್ದನ್ನೂ ಕಾಣೆವು. ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳಿಗೆ ಬೇಕಾದ ಭೂಮಿಯ ಸ್ವಾಧೀನ ಕೆಲಸಗಳು ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿವೆ. ಒಟ್ಟಾರೆ ಕೇಂದ್ರ-ರಾಜ್ಯಗಳ ಬಿಜೆಪಿ ಸರ್ಕಾರಗಳು ರಾಹು-ಕೇತುಗಳಂತೆ ರಾಜ್ಯವನ್ನು ಬಾಧಿಸುತ್ತಿವೆ ಎಂದು ಸಿದ್ದರಾಮಯ್ಯ ಅವರು ಬೆಂಗಳೂರು ಅಭಿವೃದ್ಧಿ ಕುರಿತು ವಿವರಿಸಿದ್ದಾರೆ.

English summary
Leader of Opposition Siddaramaiah Released Janapidaka Sarkara Book on Karnataka BJP govt's last 2 year failures. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X