ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮೇಲ್ ಮಳೆ, ಫೀಮೇಲ್ ಮಳೆ ಯಾರಿಗೆ ಗೊತ್ತು?!

By Super
|
Google Oneindia Kannada News

Whos Rain it is? For whom it pours?
ಮುಂಗಾರು ಮಳೆ, ಹಿಂಗಾರು ಮಳೆ, ಆರಿದ್ರಾ ಮಳೆ, ಭರಣಿ ಮಳೆ, ಚಿತ್ತೆ ಮಳೆ, ಸ್ವಾತಿ ಮಳೆ, ಅಗ್ನಿ ಮಳೆ, ಬ್ರಹ್ಮ ಮಳೆ, ಪಕ್ಷ ಮಳೆ. . ..ಇವೆಲ್ಲಾ ಎಲ್ಲಾ ಪರಿಸರ ತಜ್ಞರಿಗೂ ಗೊತ್ತು. ಮಳೆ ಅಂದ್ರೆ ಮೋಡಗಳ ತಾಕಲಾಟದಿಂದ ಭೂಮಿಗಿಳ್ಯೋ ನೀರು. ಅದು ನನಗೂ ಗೊತ್ತು ನಿಮಗೂ ಗೊತ್ತು ಆದರೆ ಈ ಮೇಲ್ ಮಳೆ, ಫೀಮೇಲ್ ಮಳೆ ಯಾರಿಗೆ ಗೊತ್ತು?!

Mail rain or femail rain?ಹಿಂದಿನ ಮುಂದಿನ ಯಾವ ಮಳೆ ಋತುವೂ ಒಪ್ಪಲೇ ಬೇಕಾದಷ್ಟು ಅದ್ಭುತ ಬರಹಗಾರ ಆತ. ಲಾರಾ ದತ್ತ ಇರಲಿ ಲಾರಾ ಬುಷ್ ಇರಲಿ ಎಲ್ಲರೂ ಆ ಬರಹಗಾರನ ವಿಜ್ಞಾನದ ಮುಂದೆ ಒಂದೆ. ಅಲ್ಲ, ನನ್ಪಾಡಿಗೆ ನಾನಿದ್ದ್ರೆ ಮಳೆ ಮೇಲೋ? ಫೀಮೇಲೋ? ಅಂತ ಕೀಟಲೆ ಮಾಡಿ ನನ್ನ ಮೆದುಳನ್ನೇ ಅಲ್ಲಾಡಿಸಿಬಿಡಬೇಕಾ? ಮಳೆ ಅಳತೆ ಮಾಡೋ ಡಿಪಾರ್ಟ್ಮೆಂಟ್ನವರು ಏನಂತಾರೋ ಗೊತ್ತಿಲ್ಲ,

ನಾನಂತೂ ಹೇಳ್ತೀನಿ ಮಳೆಯಲ್ಲಿ ಮತ್ತೆರಡು ವಿಧಾನ ಇದೆ. ಅದು ಒಂದು ಮೇಲು ಇನ್ನೊಂದು ಫೀಮೇಲು! ಹೇ. . . . ."ಅರೆಹುಚ್ಚಿಯಾಗಿದ್ದ ಇವಳಿಗೆ ಪೂರ್ತಿ ತಲೆಕೆಟ್ಟಿದೆ" ಅಂದ್ಕೊಂಡಾದ್ರೂ ಸರಿ ಸ್ವಲ್ಪ ನನ್ನ ಮಾತು ಕೇಳ್ರೀ. . . . ಇದನೆಲ್ಲಾ ಈ ಸರ್ತಿ ನಿಮಗೆ ಹೇಳೋಕ್ಕೆ ಮುಂಚೆ ನನ್ನ ನಿದ್ದೆಗೆಡಿಸಿದ ಆ ಮಿಂಚುಳ್ಳಿ ರೈಟರ್‍ಗೇ ಹೇಳೋಣಾಂತಿದ್ದೆ. ಆದ್ರೆ ನನ್ನನ್ನು ಸಹಿಸಿಕೊಳ್ಳಕ್ಕೆ ನೀವಿದ್ದೀರಲ್ಲ ಅನ್ನಿಸ್ತು! ಈಗ ನನ್ನ ಮೊರೆತ. . ಕೊರೆತ. . . .

ಮೊದಲ ಮಳೆ ಹನಿಗಳ ಪಟ ಪಟ ಅವನಿಗೆ ಕೇಳಿಸೋದೇ ಇಲ್ಲ. ಬರ್ರೋ ಅಂತ ಶುರುವಾದ್ಮೇಲೇ ಟೀವಿ ಕಡೆಯಿಂದ ನಿಗ ಕಿಟಕಿ ಕಡೆ ಹೋಗುತ್ತೆ. ಮೊದಲ ಮಳೆಯೊಂದಿಗಿನ ಅವನ ಮೊದಲ ಮಾತು "ಮಳೆ ಬರ್ತಿದ್ಯಾ? .. . . . . ಲೇ, ಬಿಸಿ ಬಿಸಿ ಕಾಫೀ ಕೊಡ್ತೀಯಾ?". ಮಜ ಅಂದ್ರೆ, ಮೊದಲ ಮಳೆ ಹನಿ ಅವಳ ಕಿವಿಗಲ್ಲ ಮೂಗಿಗೆ ಬಡಿಯತ್ತೆ! ಆಹಾ, ಮೊದಲ ಮಳೆಯ ಸ್ಪರ್ಶಕ್ಕೆ ಅರಳಿ ನಿಂತ ಆ ಮಣ್ಣಿನ ವಾಸನೆ. . . .ಒಂದೇ ನಿಮಿಷ ಅಷ್ಟೆ. ಬಿಸಿಲ್ಮಚ್ಚಿನ ಮೇಲೆ ಒಣಗ್ಹಾಕಿರೊ ಬಟ್ಟೆ ನೆನಪಾಗುತ್ತೆ. ದಡಬಡ ಮೇಲಕ್ಕ್ಹೋಗ್ತಾಳೆ. ಸರಬರ ಕೆಳಗ್ಬಂದು ಎಲ್ಲಾ ಕಿಟಕಿಗಳನ್ನು ಮುಚ್ಚುತ್ತಾಳೆ. ಹಿತ್ತಲ್ಬಾಗ್ಲು ಹಾಕಿದ್ಯಾ ನೋಡ್ತಾಳೆ! ಕಾಫೀ ಕೂಗಿಗೆ ಉತ್ತರಿಸಲು ಅಡುಗೆ ಮನೆಗೆ ಹೋಗ್ತಾಳೆ.

ಅವನು ಸುತ್ತ ಹರಡಿರೋ ನ್ಯೂಸ್ ಪೇಪರ್, ಆಫೀಸ್ ಫೈಲ್ಸ್ ಮಧ್ಯೆ ಲೈಟರ್ ಹುಡುಕ್ತಾನೆ. ಅವಳು ದೊಡ್ಡ ವಾರ್ಡ್ರೋಬ್ ಮೇಲಿಟ್ಟಿರೊ ಮನೆಮಂದಿಗಳ ಸ್ವೆಟರ್‍ಕಂತೆಗೆ ಕೈಹಾಕ್ತಾಳೆ! ಅವನು ತನ್ನ ಕಟ್ಟೆ ಗೆಳೆಯ ಸುರೇಶಂಗೆ ಫೋನ್ ಮಾಡ್ತಾನೆ "ಕ್ಲಬ್‍ಗೆ ಬಾರೋ" ಅಂತಾನೆ. ಅವಳು ಅಮ್ಮನಿಗೆ ಫೋನ್ ಮಾಡಿ "ಅಮ್ಮ, ಮೆಣಸಿನ ಸಾರಿನ ಪುಡಿಗೆ ಜೀರಿಗೆ ಹಾಕ್ತೀವೋ ಇಲ್ಲ್ವೋ?" ಕನ್ಫರ್ಮ್ ಮಾಡಿಕೊಳ್ಳ್ತಾಳೆ. ಅವನು "ರಾತ್ರಿ ಊಟಕ್ಕೆ ಕಾಯ್ಬೇಡ" ಅಂತ್ಹೇಳಿ ಹೊರಗ್ಹೋಗ್ತಾನೆ. ಇವಳು ಮಕ್ಕಳ ಕೈಕಾಲು ತೊಳಿಸಲು boiler ಸ್ವಿಚ್ ಹಾಕ್ತಾಳೆ. ಅವನು ಎಲ್ಲಿಂದ್ಲೋ ಫೋನ್ ಮಾಡಿ "ಇವತ್ತು ಮಕ್ಕಳನ್ನು ಬೇಗ ಮಲಗಿಸ್ಬಿಡು" ಅಂತಾನೆ. ಇವಳೂ ನಗುತ್ತಾ "ಹೂಂ. . ." ಅಂತ ಉಲಿತಾಳೆ.

ಅಲ್ಲಿಗೆ ಮೇಲ್ ಮಳೆಗಾಲ ಮುಗಿಯುತ್ತೆ! ಆದರೆ ಈ ಫೀಮೇಲ್ ಮಳೆ ಹಾಗಲ್ಲ. . . .ಒಂತರಹಾ ಮಲ್ನಾಡಿನ ಮಳೆ ನೆನಪಿಗೆ ತರುತ್ತೆ! ಮಕ್ಕಳಿಗೆ ಬೆಚ್ಚಗೆ ಬಟ್ಟೆ ಹಾಕಿ " ಎಲ್ಲೂ ಹೋಗ್ಬೇಡಿ, ರೂಂ ಕಿಟಕಿಯಿಂದಾನೆ ಮಳೆ ನೋಡ್ತಿರಿ" ಅಂತ ತಾಕೀತು ಮಾಡಿ ಮಂಚದ ಮೇಲೆ ಮೈ ಚೆಲ್ಲಿದೊಡನೆ ನೆನಪಾಗುತ್ತೆ, ಫ್ರಾಕ್ ಮೇಲೆತ್ತಿ ಸಿಕ್ಕಿಸ್ಕೊಂಡು ಅಜ್ಜಿ ಮನೆ ಮುಂದಿನ ಸಣ್ಣ ಮೋರಿಲಿ ಹರೀತಿದ್ದ ನೀರಿಗೆ ಕಾಗದದ ದೋಣಿ ಮಾಡಿ ಬಿಡ್ತಿದ್ದದ್ದು. ದೋಣಿ ಸಾಗ್ತಾ ಸಾಗ್ತಾ. . . ಕಾಲೇಜಿನಲ್ಲಿ ಮೊದಲ ಬಾರಿ ಅವನನ್ನು ಭೇಟಿಯಾಗಿದ್ದು ಮೊದಲ ಮಳೆಯಲ್ಲೆ ಅಂದ್ಕೊಳ್ಳುತ್ತಾಳೆ. . ಹತ್ಹನ್ನೆರಡು ವರ್ಷಗಳ ಹಿಂದಿನ ಉಸಿರಿನ ಬಿಸಿ ಈಗಲೂ ತಾಕಿದಂತಾಗಿ ಪುಳಕಗೊಳ್ಳುತ್ತಾಳೆ! ಮಗ್ಗುಲಾಗ್ತಾಳೆ. . . .ಅಬ್ದುಲ್ ರಷೀದ್‍ನ ಕಥೆ ಪುಸ್ತಕ ಕೈಗ್‍ತೊಗೋತಾಳೆ. ಮತ್ತೆ ಸ್ವಲ್ಪ ಹೊತ್ತಿಗೆ ಟೀವಿ ಹಾಕ್ಕೋತಾಳೆ. ಡಿಸ್ಕವರಿ ಚ್ಯಾನಲ್‍ನಲ್ಲಿ ನೋಡೋ ಮಳೆಯಷ್ಟೇ ಆಸಕ್ತಿಯಿಂದ ಬಿಳಿಬಟ್ಟೆ ಹಾಕೊಂಡು ಮಳೆಲೀ ನೆನೆಯುವ ತನ್ನ ಫೇವರೇಟ್ ಹೀರೋಯಿನ್ ಹಾಡೂ ನೋಡ್ತಾಳೆ. . . . .ತಕ್ಷಣ ನಾಳೆ ಅರಳು ಸಂಡಿಗೆ ಕರೀಬೇಕು ಅಂದ್ಕೋತಾಳೆ!

ನೀರಲ್ಲಿ ಕಾಗದದ ದೋಣಿ ಸಾಗ್ತಾನೇ ಇರುತ್ತೆ. . . . .ಛತ್ರಿ ರಿಪೇರಿ ಮಾಡಿಸ್ಬೇಕು, ವಾಟರ್ಬರೀಸ್ ಕಾಂಪೌಂಡ್ ತಂದಿಟ್ಟ್ಕೋಬೇಕು, ಕಷಾಯಕ್ಕೆ ಕೊತ್ತಂಬರಿ ಬೀಜ ಬೇಕು, ಮಕ್ಕಳ ರೇನ್ ಕೋಟಿನ ಮುಗ್ಗಲು ವಾಸನೆ ಹೋಗೋ ಹಾಗೆ ಹರವಬೇಕು. . . . . .ಹೀಗೇ ಈ ಫೀಮೇಲ್ ಮಳೆ ಮೂರು ತಿಂಗಳಿಂದ ಹನ್ನೆರಡೂ ತಿಂಗಳೂ ಇರುತ್ತೆ!

ನನಗೆ ಮಳೆ ಅಂದ್ರೆ ಇನ್ನೊಂದು ನೆನಪಿಗೆ ಬರುತ್ತೆ. ಆದರೆ ಅದು ಮೇಲ್ ಮಳೆದಾ ಅಥವಾ ಫೀಮೇಲ್ ಮಳೆದಾ ಗೊತ್ತಾಗಲ್ಲ್ವೇ! ಅದು ನರ್ಗೀಸ್ ರಾಜ್‍ಕಪೂರ್ image ಅಂತೂ ಹೌದು. ಅವಳ ಕಣ್ಣು? ಅಲ್ಲ. ಅವನ ಪೆದ್ದು ಪೆದ್ದು ಮುಖ? ಅಲ್ಲ. ಮಳೆಯಲ್ಲಿ ತೊಯ್ದ ಅವಳ ಶಿಫಾನ್ ಸೀರೆ? ಅಲ್ಲ. ಏನುಗೊತ್ತಾ, ಅವಳು ಅಲ್ಲೇ ಕಾಣುವ ಮಕ್ಕಳ ಕಡೆಗೆ ತನ್ನ ತೋರು ಬೆರಳನ್ನು ತೋರಿಸ್ತಾಳಲ್ಲ ಅದು! ಆ ಬೆರಳಿನ ಭಾವ, ಭಂಗಿ! ಈಗ ನನಗೆ ನಾಲ್ಕು ಏಟು ಹೊಡೀಬೇಕು ಅಂತ ನಿಮಗೆ ಅನ್ನಿಸಿದರೆ ಬನ್ನಿ ನಾನಿಲ್ಲಿದ್ದೇನೆ! ಏನ್ಮಾಡೋದು ಹೇಳಿ? ಈ ಫೀಮೇಲ್ ಮಳೆನೇ ಹಾಗೆ ನಾನು ನೀವು ಇರಲೀ ಇಲ್ಲದಿರಲೀ ತನ್ನ ನಿಶಾನೆಯನ್ನು ಬಿಟ್ಟು, ಕಾಗದದ ದೋಣಿಯಂತೆ ಸಾಗುತ್ತಲೇ ಇರುತ್ತೆ!

English summary
Mail rain or femail rain? Gagana explores on women only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X