• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲರ ಮನೆ ದೋಸೆಯೂ ತೂತಾ? ಇಲ್ಲ, ಹಾಗೇನಿಲ್ಲ!

By Staff
|

ಗಾಣದೆತ್ತಿನಂತೆ ಬೆಳಗೂ ಬೈಗು ದುಡಿಯುತ್ತೇನೆ ನಿಜ. ನನ್ನ ಬೇಕು ಬೇಡುಗಳ ಪಟ್ಟಿ ಅವನ ಮುಂದಿಟ್ಟು ಅವನ ಶರ್ಟ್‌ ಜಗ್ಗಿಲ್ಲ ನಿಜ. ನನ್ನ ಆಸೆ, ಕಾಮನೆಗಳಿಗೆ ಅವನು ಸ್ಪಂದಿಸುತ್ತಿಲ್ಲ ಎಂದು ತಿಳಿದಿದ್ದೇನೆ ನಿಜ. ಆದರೆ ನಾನು ತಿಳಿದಿರುವುದೆಲ್ಲಾ ನಿಜವೇ? ಅವನು ನನ್ನ ಕನಸಿನ ರಾಜಕುಮಾರನಾಗಿ ಬಿಟ್ಟರೆ ನನಗೆ ಬದುಕಲು ಬರುವುದಿಲ್ಲ ಎನ್ನುವುದೂ ನಿಜತಾನೆ? ನಾನು ಹೀಗೇ ಇರಬೇಕು; ಅವನು ಹಾಗೇ ಇರಲಿ.

She smiles and continues to smile against all odds!‘ನಾನು ಅಷ್ಟ್ಹೊತ್ತಿಂದ ಹೇಳ್ತಾನೇ ಇದ್ದಿನಿ, ಸ್ವಲ್ಪಾನೂ ನಿಗಾನೇ ಇಲ್ಲ್ವಲ್ಲ . . . ಆ ದರಿದ್ರದ ಫುಟ್ಬಾಲು ಕ್ರಿಕೇಟ್‌ ಇದ್ದ್ಬಿಟ್ರೆ ಪ್ರಪಂಚಾನೆ ಆಗ್ಹೋಯ್ತು. . . .’ ನಾನು ಜೋರಾಗಿ ಕೂಗುತ್ತಲೇ ಇದ್ದೆ, ಅವನು ಸೋಫಾ ಮೇಲೆ ಸೊಟ್ಟಗೆ ಕೂತು ಟಿವಿಯಲ್ಲಿ ಕಣ್ಣು ಹೂತುಬಿಟ್ಟಿದ್ದ.

‘ಬೆಳ್ಳಿಗ್ಗೆಯಿಂದ ಮೂರು ಲೋಡ್‌ ಬಟ್ಟೆ ಒಗೆದು, ಒಣಗ್ಹಾಕಿ ಭುಜ ಬಿದ್ದ್ಹೋಗಿದೆ, ಕಡೇ ಪಕ್ಷ ಒಣಗಿರೋ ನಿನ್ನ ಬಟ್ಟೆನಾದ್ರೂ ತಂದಿಟ್ಕೋಬಾರ್ದಾ. . . ಕರೆಂಟ್‌ ಬೇರೆ ಬಂದು ಹೋಗಿ ಆಗ್ತಾ ಇದೆ ನಾಳಿನ ಬಟ್ಟೆಗಳ್ಯಾವ್ದೂ ಇಸ್ತ್ರೀ ಆಗಿಲ್ಲ ಸ್ವಲ್ಪ ಧೋಬಿ ಹತ್ರ ಹೋಗಿಬರಬಾರ್ದಾ?. . .’ ಉಹೂಂ ಯಾವುದಕ್ಕೂ ಸೊಲ್ಲೇ ಇಲ್ಲ! ಮೂತಿ ಊದಿಸಿಕೊಂಡೇ ಬಟ್ಟೆ ಮಡಚಿಟ್ಟು, ಅನ್ನಕ್ಕಿಟ್ಟೆ.

‘ಕುಕ್ಕರ್‌ ಎರಡು ಸರ್ತಿ ಕೂಗಿದ ಕೂಡ್ಲೆ ಆಫ್‌ ಮಾಡು, ನಾನು ಷೂ ಪಾಲಿಷ್‌ ಮಾಡ್ತಿರ್ತೀನಿ. . . . ’ ನನ್ನ ಪಾಡಿಗೆ ಅರುಚಿ ವೆರಾಂಡಾಕ್ಕೆ ಹೋದೆ. ಎರಡು ವಿಷಲ್‌ ಆಯ್ತು, ಮೂರಾಯ್ತು, ನಾಲ್ಕನೆಯದಕ್ಕೂ ಪ್ರೆಷರ್‌ ಏರುತ್ತಿತ್ತು. ‘ಥೂ, ಅನ್ನ ಎಲ್ಲ ಮಿಡ್ಡೆ ಆಯ್ತು. . . ಅದೇನ್‌ ಬುದ್ಧಿಪ್ಪಾ ನಿನಗೆ. . .’ ಎಂದು ಗೊಣಗಿಕೊಂಡೇ ಹೋಗಿ ಎಡಗೈಯಲ್ಲಿ ಒಲೆ ಆಫ್‌ ಮಾಡಿದೆ.

ಅಷ್ಟರಲ್ಲಿ ಎರಡನೆ ಕ್ಲಾಸ್‌ನ ಮಗಳು ಅಮ್ಮ ಈ division ಹೇಗ್ಮಾಡೋದು ಗೊತ್ತಾಗ್ತಾನೇ ಇಲ್ಲ ಅಂತ ಕೂಗಿದಳು. ‘ಹಾಳಾದ್ದು, ಇದಕ್ಕೆ ಲೆಕ್ಕ ಹೇಳಿಕೊಡೋದಕ್ಕೆ ಅನ್ಸತ್ತೆ ಎಮ್‌.ಎಸ್ಸಿ. ಮ್ಯಾತ್ಸ್‌ನಲ್ಲಿ ನನಗೆ ಗೋಲ್ಡ್‌ ಮೆಡಲ್‌ ಬೇರೆ ಕೇಡು.’ . ಅವನ ಕಡೆಗೆ ತಿರುಗಿ ‘ಅದೊಂದು ಸಣ್ಣ ಲೆಕ್ಕ ಹೇಳಿಕೊಡಕ್ಕಾಗಲ್ಲ್ವಾ. . . .’ ಕೊಂಕಿ ಮಗಳ ಹತ್ತಿರ ಹೊರಟವಳು ಒಂದಷ್ಟು ಹುರುಳಿಕಾಯಿ ತಂದು ಅವನ ಮುಂದಿರಿಸಿ ‘ಇನ್ನೇನ್‌ ಮಾಡ್ದೆ ಇದ್ದ್ರೂ... ಆ ದರಿದ್ರ ನೋಡ್ತಾ ಇದರ ನಾರಾದ್ರೂ ತೆಗಿ. . ’ ಅವನ ಮುಂದೆ ಕುಕ್ಕಿ ಮಗಳ ಲೆಕ್ಕಕ್ಕೆ ಹೋದೆ.

ವಾಪಸ್ಸು ಬಂದಾಗ, ತರಕಾರಿಗೆ ಅವನ ಕೈ ಶಾಖ ತಾಕದೆ ಹಾಗೆ fresh ಆಗಿ ಕುತಿತ್ತು. ‘ನನ್ನ ಹಣೆಬರಹ, ಎಲ್ಲ ನಾನೇ ಮಾಡ್ಕೊಬೇಕು. . . ಒಂದೂವರೆ ತಿಂಗ್ಳಿಂದ ಬ್ಯೂಟಿ ಪಾರ್ಲರ್‌ಗೆ ಹೋಗೋಕ್ಕೆ ಟೈಮೇ ಆಗ್ತಾಇಲ್ಲ. . .ಆ ವೀಣ ನೋಡು ಹದಿನೈದು ದಿನ್ಕೊಂಸಲಿ ಹೋಗಿ ಎಷ್ಟ್‌ smart ಆಗಿ ಬರ್ತಾಳೆ. . . ’ ಇನ್ನು ಏನೋ ಗೊಣಗುವಷ್ಟರಲ್ಲಿ ಇಳುಗೆಮಣೆಗೆ ಬೆರಳಿಟ್ಟೆ, ರಕ್ತ ಚಿಮ್ಮಿತು. . . ‘ಅಯ್ಯೊ ನನ್ನ್ಮುಖಕ್ಕೆ ಇದು ಬೇರೆ ಕೇಡು. . . ’ ಅಲ್ಲೇ ಸಾಂಬಾರ್‌ ಡಬ್ಬಿಯಿಂದ ಅರಿಶಿನ ತೆಗೆದು ಮೆತ್ತಿಕೊಂಡು ಊಟಕ್ಕೆ ಹಾಕಲು ಎದ್ದೆ.

ಮಾಮೂಲು, ಕಲೆಸಿ ತಟ್ಟೆಗೆ ಹಾಕಿ ಟೀವಿ ಮುಂದಿದ್ದವನ ಕೈಗೆ ಕುಕ್ಕಲು ಹೋದೆ, ಇದ್ದಕ್ಕಿದ್ದಂತೆ ಹಾವು ತುಳಿದವನಂತೆ oh my god ಎಂದು ಕಿರುಚಿಕೊಂಡು ಅವನೆದ್ದ, ಕೈ ತಾಕಿ ನೆಲದ ಮೇಲೆಲ್ಲ ಅನ್ನ ಹರಡಿತು. ‘ಅಯ್ಯೊ ಒಳ್ಳೆ ಮಕ್ಕಳ ತರಹ ಆಡ್ತೀಯಲ್ಲ, ಅವನ್ಯಾರೋ ಗೋಲ್‌ ಹೊಡ್ದ್ರೆ ನೀನ್ಯಾಕೊ ಹೀಗೆ ಆಡಬೇಕು?. . . ಈಗ್ತಾನೆ ನನ್ನ ಕೈ ಕುಯ್ತು. . . ಕ್ಲೀನ್‌ ಮಾಡಕ್ಕೆ ಎಷ್ಟು ಕಷ್ಟ ಗೊತ್ತಾ. . . ’ ಅವನು ಟೀವಿ ಒಳಗಿದ್ದ. . .ಸಾರಿಸೊ ಬಟ್ಟೆ ತಂದು ಕ್ಲೀನ್‌ ಮಾಡಿ ಮತ್ತೆ ಊಟ ಕೊಟ್ಟು ಕೈ ತೊಳೆಯುವಷ್ಟರಲ್ಲಿ ಹಾಲುಕ್ಕಿತು. . . ‘ಅಯ್ಯೋ ನನ್ನ ಕರ್ಮವೇ’ ಅಂದುಕೊಂಡೇ ಒಲೆ ಒರೆಸಿ. . ಅಡುಗೆಮನೆ ದೀಪ ಆರಿಸಿ ಈಚೆ ಬಂದ ಕೂಡಲೇ ನೆನಪಿಗೆ ಬಂತು ನಾಳೆ phone ಬಿಲ್‌ಗೆ ಲಾಸ್ಟ್‌ ಡೇಟ್‌.

ಮತ್ತೆ ಅವನ ಎದುರುನಿಂತು ‘ಈ ತಿಂಗಳಾದ್ರೂ ನೀನೇ ಬಿಲ್‌ ಕಟ್ಟಿಬಿಡಬಾರ್ದಾ? ನನಗೂ ಕ್ಯೂ ನಿಂತೂ ನಿಂತೂ ಸಾಕಾಗಿಹೋಗತ್ತೆ . . . ಏನ್‌ ಹೇಳಿದ್ರೂ ಟೈಮೇ ಆಗಲ್ಲಾ ಅಂತೀಯಾ. . .ಅರ್ಧ ಘಂಟೆಗೊಂದ್ಸಲಿ ನಾನು ಕೆಲ್ಸ ಮಾಡ್ತಿರ್ತೀನೋ ಮೈ ಬೆಳೆಸ್ಕೊಡು ಆರಾಮವಾಗಿ ಇರ್ತೀನೋ ಅಂತ ಚೆಕ್‌ ಮಾಡೋಕ್ಕೆ phone ಮಾಡ್ತಿಯಲ್ಲ, ಅದು ಕಟ್‌ ಮಾಡಿ ಟೈಂ ಮಾಡಿಕೊಂಡು ಬಿಲ್‌ ಕಟ್ಟಿ ಬಾ. . . ’ ಅವನು ಹಾಗೇ ಕುಳಿತಿದ್ದ ಆದರೆ ರೀಮೋಟ್‌ ಮಾತ್ರ ಚುಚ್ಚಿಸಿಕೊಳ್ಳುತ್ತಿತ್ತು. ನನಗೂ ಗೊತ್ತು ನಾನಿರುವವೆರೆಗೂ ಟೆಲಿಫೋನ್‌, ಕೆಇಬಿ ಆಫೀಸಿಗೆ ಅಲೆಯೋದು ತಪ್ಪುವುದಿಲ್ಲ ಅಂತ.

ಬೆಳಿಗ್ಗೇನೆ ಹಳೇ ಪೇಪರ್ನವನು ಬರ್ತಾನೆ ಈಗಲೇ ಹೊರಗಿಡದಿದ್ದರೆ ಗಡಿಬಿಡಿಯಾಗಿಬಿಡುತ್ತೆ. ರಕ್ತದ ಬೆರಳಿನಿಂದಲೇ ಪೇಪರ್‌ ರಾಶಿಯನ್ನು ಸುತ್ತಲಿಯಿಂದ ಬಿಗಿದು, ಹೊರಗಿಟ್ಟು ಬಂದು ಹಾಸಿಗೆಯ ಮೇಲೆ ಉರುಳಿಕೊಂಡೆ. ಮತ್ತೆ ನೆನಪಾಯ್ತು ನಾಳೆ ಅತ್ತೆ ಮಾವನ ರಿಟರ್ನ್‌ ಜರ್ನಿಗೆ ಟಿಕೆಟ್‌ ಬುಕ್‌ ಮಾಡಿಸಬೇಕೂಂತ. ಎಷ್ಟೋ ರಾತ್ರಿ ಇಷ್ಟೆಲ್ಲಾ ಕೆಲಸಗಳಿಂದ ಸುಸ್ತುಕಂಡಿದ್ದರೂ ಈ ಹತ್ತಿ ಹಾಸಿಗೆಯೂ ಒರಟು ಅನ್ನಿಸಿ ಇನ್ನೆನನ್ನೋ ನಾನೂ ಬಯಸಿದ್ದಿದೆ. . .ಆದರೂ ಏನು ಮಾಡೋದು. . .ಅಲ್ಲಾ ego ಗೂ ಹೆಣ್ಣು ಗಂಡು ಅಂತ ಇರುತ್ತಾ? ಥತ್‌, ಕತ್ತಿಗೊತ್ತುತ್ತಿದ್ದ ಮಾಂಗಲ್ಯ ಕಳಚಿ ದಿಂಬಿನ ಕೆಳಗಿಟ್ಟು...ಮಲಗಿದ್ದು ನೆನಪಿದೆ. . . ಎದ್ದಾಗ. . . ಬಾಗಿಲಿಗೆ ರಂಗೋಲಿ ಹಾಕುತ್ತಿದ್ದೆ!

*

ಅವನು ಆಫೀಸಿಗೆ ಹೋಗಿ ಎರಡು ಘಂಟೆಗಳಾಯ್ತು. . .ಇನ್ನು ಒಂದು ಬಾರಿಯೂ ಫೋನ್‌ ರಿಂಗಾಗಿಲ್ಲ! ಏನೋ ಕಸಿವಿಸಿ. . .ಪ್ರತೀ ಅರ್ಧ ಘಂಟೆಗೊಂದ್ಸಲಿ ರಿಸೀವರ್‌ ಎತ್ತಿ ಈ ಕೈಗಳಿಗೆ ಅಭ್ಯಾಸವಾಗಿಹೋಗಿದೆ. . . ಮದುವೆಯಾದಾಗಿನಿಂದ ಹೀಗಾಗುತ್ತಿರುವುದು ಇದೇ ಮೊದಲು. . ನಾನು ಬಾಣಂತನಕ್ಕೆ ಹೋಗಿದ್ದ ಮೂರೇ ತಿಂಗಳಲ್ಲಿ ಫೋನ್‌ ಬಿಲ್ಲು ಮೂರು ಸಾವಿರಾನೂ ದಾಟಿತ್ತು!

ಇವತ್ತು ಯಾಕೋ ಕೆಲಸ ಸಾಗುತ್ತಿಲ್ಲ. . . ಊಟದ ಟೈಂಗೆ ನಾನೇ ಫೋನ್‌ ಮಾಡಿದೆ ಅವನ ಮೊಬೈಲ್‌ ಆಫ್‌ ಆಗಿದೆ. . .ಹೂಂ, ಇದು ಮೊದಲೇ! ಯಾಕೊ ತುತ್ತು ಗಂಟಲಲ್ಲಿ ಇಳಿಯಲಿಲ್ಲ. . . ಬದುಕು, ಮಳೆಬಿಲ್ಲು ಯಾವುದೂ ನೋಡಲಾಗಲಿಲ್ಲ. . .ಆಫೀಸಿನ ಲ್ಯಾಂಡ್‌ ಲೈನ್‌ಗೇ ಫೋನ್‌ ಮಾಡಿದೆ. . . ‘ಸಾರ್‌, ಚೇಂಬರ್ನಲ್ಲಿ ಇಲ್ಲಾ’ ಉತ್ತರ ಬಂತು. . . . . ಸಣ್ಣಗೆ ತಲೆ ನೋವು. . . ಕಾಫಿಗೆ ನೀರಿಟ್ಟು, ಬಾಗಿಲಲ್ಲಿ ನಿಂತೆ. . .ಪಾತ್ರೆ ಸೀದ ವಾಸನೆ ಮೂಗಿಗೆ ಬಡಿದಾಗಲೇ ಎಚ್ಚರವಾಗಿದ್ದು. ಮಗಳು ಬಂದಳು. . . ಸಿಕ್ಕಿದ್ದು ತಿನ್ನಲು ಕೊಟ್ಟೆ, ಆಡಲು ಹೋದಳು. ಇಷ್ಟಾದರೂ ಫೋನ್‌ ಇಲ್ಲ. . .ದೇವರ ಮನೆಯ ತುಪ್ಪದ ಬತ್ತಿಯೂ ಆರುತ್ತಾ ಬಂತು.

ಚೊಚ್ಚಲ ಹೆರಿಗೆಯಲ್ಲಿ ನನ್ನ ಜೊತೆಯೇ ತಾನೂ ಕಣ್ಣೀರು ಹಾಕಿದ್ದ, ಮಗು ನೋಡುವ ಮೊದಲೇ ನನ್ನ ಬಳಿಗೆ ಬಂದು ಹೇಗಿದ್ದೀಯಾ ಎಂದು ವಿಚಾರಿಸಿ ನೆಮ್ಮದಿಯ ಉಸಿರುಬಿಟ್ಟು ಆಮೇಲೆ ತೊಟ್ಟಿಲ ಕಡೆಗೆ ನೋಡಿದ್ದ. . .ಈಗ್ಯಾಕೆ ಅದರ ನೆನಪು, ಅವನ ಒಂದು ಫೋನ್‌ ಬಂದರೆ ಸಾಕಾಗಿದೆ.

ಉಸಿರು ಸಿಕ್ಕಿ ಹಾಕಿಕೊಂಡ ಹಾಗೆ. . .ತುಟಿ ಒಣಗುತ್ತಿದೆ. . . ನೆನ್ನೆಯ ಹೈ ಬ್ಲಡ್‌ ಪ್ರೆಷರ್‌ ಎಲ್ಲ ಈಗ ಲೋ ಬಿಪಿಯಾಗಿದೆ. . . ಯಾಕೆ ಫೋನ್‌ ಇಲ್ಲ . . .ಗಡಿಯಾರದ ಸೆಲ್‌ ಮುಗಿದಿದ್ದರೂ ಅವನು ಬಂದ ಎಂದರೆ ಆಗ ಏಳುವರೇನೆ. . .ಆದರೀಗ ಎಂಟು ಮುಕ್ಕಾಲು. . . ಅಂತೂ ಕಾಲಿಂಗ್‌ ಬೆಲ್ಲಾಯಿತು. . ಅಬ್ಬ, ಉಸಿರು ಬಂತು ಬಾಗಿಲು ತೆಗೆದೆ. . ಮಾಮೂಲಿನಂತೆ ನಿಂತಿದ್ದ ಅವನನ್ನು ನೋಡಿ ಆ ಅಳು ಎಲ್ಲಿತ್ತೋ ನಾನು ಅವನನ್ನು ಜಗ್ಗಿದ ರಭಸಕ್ಕೆ ಬಾಗಿಲು ಧೊಪ್ಪೆಂದು ಆಟೊ ಲಾಕ್‌ಆಯಿತು! ಯಾಕೆ ಏನಾಯ್ತು? ತಣ್ಣಗೆ ಕೇಳಿದ. . .ಇನ್ನೇನು ಆಗಬೇಕಿತ್ತೊ ನಾ ಕಾಣೆ. . . ನಾನು ಅಳುತ್ತಿದ್ದೆ ಬಿಕ್ಕಿ ಬಿಕ್ಕಿ. . . ‘ ನಾನು ಪದೆ ಪದೆ ಫೋನ್‌ ಮಾಡಿದರೆ ನಿನಗೆ ಕೆಲಸಕ್ಕೆ ತೊಂದರೆಯಾಗುತ್ತೆ ಅಂತ ಫೋನ್‌ ಮಾಡ್ಲಿಲ್ಲ ಅಷ್ಟೆ. . .ಪಾಪ ನನ್ನಿಂದ ನಿನಗೇನೂ ಹೆಲ್ಪ್‌ ಕೂಡ ಇಲ್ಲ. . .ಅದಕ್ಕೆ. . . ’ ಅದೇನು ಹೇಳ ಬೇಕಿತ್ತೊ ಅವನಿಗೆ, ಅಲ್ಲೇ ತಡೆದೆ. . .ಆ ಕ್ಷಣದಲ್ಲಿ ಅವನು ಹೆಂಡತಿಯನ್ನು ಸಂತೈಸುವ ಗಂಡನಿಗಿಂತ, ಅಸಹಾಯಕತೆಯಿಂದ ನನ್ನ ಮಡಿಲಿಗೆ ಬಂದ ಮಗುವಾಗಿದ್ದ!

*

ಮಗಳೊಂದಿಗೆ ಮಗನಾಗಿ ಊಟಕ್ಕೆ ಇಬ್ಬರೂ ಬಂದರು. ‘ಒದ್ದೆ ಕಾಲಿನ ಗುರುತು ಮನೆಯೆಲ್ಲಾ ಮಾಡಿದ್ದಿರಲ್ಲ. . . ಟವೆಲ್‌ ಯಾಕೆ ನೆಲದಮೇಲಿದೆ. . .ನೀರಿನ ಲೋಟಾನಾದ್ರೂ ಇಟ್ಕೋಬಾರ್ದ. . .ಷೂಸ್‌ ಒಂದ್ಕಡೆ ಸಾಕ್ಸ್‌ ಒಂದ್ಕಡೆ ಬಿಸಾಹ್ಕಿದ್ದ್ರ್ದೆ ಹೇಗೆ. . . . ’ ನಾನು ಗೊಣಗುತ್ತಲೇ ಇದ್ದೆ, ಅಬ್ಬ ನಾನು ನಾರ್ಮಲ್‌ ಆಗಿದ್ದೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more