ಆಹ್.. ತಾಜ್!! ವಾಹ್.. ತಾಜ್!!
ಮಂಗಟ್ಟೆ ಅಥವಾ ಕೋಕಾನಕ್ಕಿ ಅಂತ ಒಂದು ಜಾತಿ ಹಕ್ಕಿ ಇದೆಯಂತೆ. ಅದರ ಹೆಣ್ಣು ಹಕ್ಕಿ ಮರದ ಪೊಟರೆಯೊಳಗೆ ಗೂಡು ಮಾಡಿ ಮೊಟ್ಟೆ ಇಡುತ್ತದೆಯಂತೆ.ಅದು ಕಾವು ಕೊಡಲು ಕುಳಿತ ನಂತರ ಗಂಡು ಹಕ್ಕಿ ಇನ್ನೇನೂ ಒಳಗೆ ಹೋಗದಂತೆ ಗೂಡಿನ ಸುತ್ತಾ ಬಲವಾದ ಒಂದು ತೆರೆಯನ್ನು ಹೊರಗಿನಿಂದ ನೇಯ್ದು ಹೆಣ್ಣು ಹಕ್ಕಿಯ ಕೊಕ್ಕು ಮಾತ್ರ ಹೊರಬರುವಂತೆ ಕಿಂಡಿ ಬಿಟ್ಟಿರುತ್ತದೆಯಂತೆ. ಗಂಡು ಹಕ್ಕಿ ತಂದುಕೊಡುವ ಆಹಾರವೇ ಹೆಣ್ಣು ಹಕ್ಕಿಗೆ ಆಧಾರವಂತೆ!
ಅದು ಅದ್ಭುತ ಅಲ್ಲದೆ ಇನ್ನೇನು? ಸ್ಟೀವನ್ ಲವ್‍ನಿಂದ ಹಿಡಿದು ರಾಮನಗರದ ರಾಮಣ್ಣಿಗೂ ಕವನ ಬರೆಯಲು ಪ್ರೇರೇಪಿಸಿದೆ ಅಂದ್ರೆ ಅದು ಅದ್ಭುತ ಅಲ್ಲದೆ ಮತ್ತಿನ್ನೇನು?! ಕಲ್ಲೇ ಆದರೂ ಥಳ ಥಳ ಅಂತ ಹೊಳೆಯುವ ನುಣುಪಾದ ಸ್ಪರ್ಶವಿರೋ ಮಹಲು ಅದ್ಭುತ ಬಿಟ್ಟು ಇನ್ನೇನ್ನಾಗೋಕ್ಕೆ ಸಾಧ್ಯ ಹೇಳಿ?!
ಆದರೆ ಪೆಂಗುತನ ಏನು ಗೊತ್ತಾ? ಬಿಡಬೀಸಾಗಿ ನಿಂತಿರೋ ಆ ಅದ್ಭುತವನ್ನು ಇನ್ನ್ಯಾರೊ ಅದ್ಭುತ ಅಂತ ಘೋಷಿಸಲೀ ಅಂತ ಕಾಯ್ತಾ ಕೂತಿರೋದು! ಇಲ್ಲಾಪ್ಪಾ ಇಲ್ಲ, ಅದ್ಭುತ. . .ಅದ್ಭುತ. . . ಅಂತ ಗೀಳಿಡ್ತಾ ನಿಮ್ಮನ್ನು ವೋಟು ಹಾಕಿ ಅಂತ ಕೇಳೋಕ್ಕೆ ಬಂದಿರೋ ರಾಜಕಾರಣಿ ನಾನಲ್ಲ! ಅದು ನಿಮ್ಮಿಷ್ಟ. ನಿಮಗೆ ಯಾವ ಅಂಕೆ, ಶಿಕ್ಷೆ?!
ಯಾಕೆ ಹೀಗೆಲ್ಲಾ ಹೇಳ್ದೇ ಅಂದ್ರೆ ಊರಲೆಲ್ಲಾ ತಾಜ್‍ಮಹಲಿನ ಬಗ್ಗೆ ಕಾವೇರಿದ ಚರ್ಚೆ ನಡಿತಿದೆಯಲ್ಲಾ ಅದಕ್ಕೆ ಅದನ್ನು ಮತ್ತೊಮ್ಮೆ ನೋಡಬೇಕು ಅನ್ನಿಸಿತು, ಸರಿ ನನ್ನಂತಹ ತಿರಗ್ಗಾಲಿ ತಿಪ್ಪಿಗೆ ಯಾವ ಅಡೆ ತಡೆ ಹೇಳಿ? ಹೊರಟೇಬಿಟ್ಟೆ! ಮೊದಲ ಬಾರಿ ಅದನ್ನು ನೋಡಿದಾಗ ಏನೂ ಅನ್ನಿಸಿರಲಿಲ್ಲ! ಎರಡನೆ ಬಾರಿ ನಮ್ಮ ಹಿಸ್ಟರಿ ಟೀಚರ್ ಮಾತ್ರ ನೆನಪಾಗಿದ್ದರು!
ಮುಂದಿನ ಸಲ ಹೋದಾಗ ‘ನನಗೂ ಒಬ್ಬ ಷಹಜಹಾನ್ ಸಿಕ್ಕಬಾರದೇ’ ಅನ್ನಿಸ್ತು. ಆದರೆ, ಈ ಬಾರಿ ಯಾಕೋ. . . . . . .ಪಕ್ಕದೂರಿನ ರಾಧೆ ಅದನ್ನು ‘glorified graveyard’ ಅಂದದ್ದು ನೆನಪಾಯ್ತು! ನನ್ನದು ಅತಿಯಾಯ್ತು ಅನ್ನಿಸುತ್ತಲ್ಲವಾ? ಅಲ್ಲ ಅಷ್ಟೊಂದು ಪ್ರೀತಿಮಾಡಿದ ಗಂಡು ತನ್ನ ಹೆಣ್ಣಿಗಾಗಿ ಪ್ರೇಮ ಸೌಧವನ್ನೇ ಕಟ್ಟಿಸಿದ್ದಾನೆ. ಈ ಭಾಗ್ಯ ಯಾರ್ಗಿರತ್ತೆ ಯಾರ್ಗಿರಲ್ಲ! ಅಂತಹದರಲ್ಲಿ ನನ್ನ ಚಾರುಪಾಯಿ ಬುದ್ಧಿ ತೋರಿಸ್ತೀನಿ ಅಂತೀರಾ? ಏನ್ಮಾಡ್ಲಿ ಹೇಳಿ? ನನ್ನ ಮನಸ್ಸೇ ಹಾಗೆ, ಥಾರ್ ಮರುಭೂಮಿ ತರಹ. ಪ್ರತೀ ಘಳಿಗೆಗೂ ಒಂದಿಷ್ಟಿಷ್ಟೇ ಅಗಲ ಆಗ್ತಾ ಹೋಗತ್ತೆ!
ಮಹಲಿಗೆ ಕಾಲಿಟ್ಟೊಡನೆ, ಕ್ಷುದ್ರ ಮೌನ ಢೋಂಗಿಯಾಗಿ ಮಲಗಿದೆ ಅನ್ನಿಸಿತು. ಅವಳು ನನ್ನ ಕೈಹಿಡಿದು ಎಳೆದಂತಾಯಿತು. ಅವನು ಆ ಹೋತದ ಗಡ್ಡದ ಸಂಧಿಯೊಳಗೇ ನಕ್ಕಂತಾಯಿತು! ಶಾಲೆಯಿಂದ ವಿ.ವಿ. ವರೆಗೂ ಬರೀ ಷಹಜಹಾನ್‍ನ ಚರಿತ್ರೆ ಓದಿದ್ದೇ ನೆನಪಾಯ್ತೇ ಹೊರತು, ಮುಮ್ತಾಜಳ ಬಗ್ಗೆ ಎಲ್ಲಿಯೊ ಓದಿದ, ಕೇಳಿದ ನೆನಪಾಗಲಿಲ್ಲ!
ಅವನೇನೋ ಅವಳನ್ನು ಸಮಾಧಿ ಮಾಡೂ ಪ್ರೀತ್ಸೋ ಅಷ್ಟು ಪ್ರೀತಿಸಿದ. ಆದರೆ ಅವಳು ಅವನನ್ನು ಹೇಗೆ ಪ್ರೀತಿಸಿದಳು? ಅವನ ಪ್ರೀತಿಯ ಎಗ್ಗುಸಿಗ್ಗಿಲ್ಲದ ಧಾರೆಯನ್ನು ಅವಳು ಹೇಗೆ ಭರಿಸಿದಳು? ಅದು ಇತ್ತೇ?. . . .ಇದು ಇತ್ತೇ?. . . ಹೀಗಿತ್ತೆ?. . . .ಹಾಗಿತ್ತೇ?. . . . .ಓಹ್, ಅಲ್ಲಿ ಅವಳ ಕ್ಲೋಸ್ ಫ್ರೆಂಡಾದ್ರೂ ಸಿಕ್ಕಿದ್ದಿದ್ರೆ ಕೇಳಬಹುದಿತ್ತು! ಷಹಜಹಾನ್ ಮಾತನಾಡದೆಯೂ ಜಗಜ್ಜಾಹಿರಾಗಿಬಿಟ್ಟ. ಆದರೆ ಅವಳು ಯಾಕೆ ಬಾಯಿಬಿಡಲೇ ಇಲ್ಲ? ಅಥವಾ ಅವಳು ಹೇಳಿದ್ದು ನಮಗ್ಯಾರಿಗೂ ಕೇಳಿಸದೆಯೇ ಗಾಳಿಯಲ್ಲಿ ಅಲೆಯಾಯಿತೋ ಹೇಗೆ? ಈಗ್ಯಾಕೆ ಅವಳು ತಣ್ಣಗೆ ಮಲಗಿರೋ ನೆಲದಲ್ಲಿ ನನ್ನ ಕಾಲು, ಮೈ, ಮನ ಕುಳಿಗುಡುತ್ತಿದೆ?!
ವಿಪರೀತ ಬಿಸಿಲಿತ್ತು. ಎದುರಿನಲ್ಲೇ ಯಮುನೆಯ ಕೊಚ್ಚೆ ಅಕ್ಕಪಕ್ಕದಲ್ಲೊಂದಿಷ್ಟು ಹಸಿರು. ಹೂವು. ಪಕ್ಕದಲ್ಲೇ ಕಾರ್ಗಪ್ಪು ಎಮ್ಮೆಯೊಡನೆ ಆಡುತ್ತಿದ್ದ ಒಂದಿಬ್ಬರು ಹೈದರು. ಚಂಡಮಾರುತದಂತೆ ಬೀಸುತ್ತಿದ್ದ ಗಾಳಿ. ಅದರ ಜೊತೆಗೇ ಹೋಗುತ್ತೇನೆ ಎಂದು ಹಟ ಮಾಡುತ್ತಿದ್ದ ನನ್ನ ಭುಜದ ಮೇಲಿನ ಶಾಲು. ಇವುಗಳ ಮಧ್ಯದಲ್ಲಿ ಮುಮ್ತಾಜಳ ಕಣ್ಣೊಳಗೆ ಕಣ್ಣು ನೆಟ್ಟ ನಾನು! ಅಷ್ಟರಲ್ಲಿ ಫೋಟೋ ತೆಗಿಸಿಕೊಳ್ಳಲು ಬುಲಾವ್ ಬಂತು. ರಾಜಕುಮಾರಿ ಡಯಾನ ಕುಳಿತು ಫೋಟೋ ತೆಗೆಸಿಕೊಂಡಿದ್ದ ಜಾಗದಲ್ಲೇ ನಾನು ಕೂತು ಪೋಸು ಕೊಡುವಾಗ ಇಡೀ ತಾಜ್‍ಮಹಲ್ ಒಂದು ಕಲ್ಲ್ಬೆಂಚಾಗಿ ಕಂಡಿತು ನನಗೆ! ಅಷ್ಟಾದರೂ ನನ್ನೊಳಗೇ ಇರುವ ಒಬ್ಬ ಗೆಳತಿ ಒಮ್ಮೆ ತಾಜ್‍ಮಹಲನ್ನು ‘hopelessly awesome’ ಅಂದಿದ್ದು ನೆನಪಾಯ್ತು! ಆಹ್.. . .ತಾಜ್! ವಾಹ್. . . .ತಾಜ್! ಅಂದುಕೊಂಡು ನಿಮ್ಮ ಬಳಿ ಬಂದೆ.
ಅದ್ಸರಿ,ಈ ತಾಜ್‍ಮಹಲ್‍ಗೂ ನಾನ್ಹೇಳಿರೋ ಆ ಹಕ್ಕಿ-ಪಿಕ್ಕಿ ಕಥೆಗೂ ಏನ್ಸಂಬಂಧ ಅಂತ ಕೇಳ್ತಿದ್ದೀರಾ? ಅಯ್ಯೋ ಅದು ನನಗೊತ್ತಿದ್ದಿದ್ರ್ ನಿಮ್ಮ್ಹತ್ರ ಯಾಕೆ ಕಟಿಪಿಟಿ ಮಾಡ್ತಿದ್ದೆ?! ಯಾವುದೋ ಪುಸ್ತಕದಲ್ಲಿ ಓದಿದೆ, ನಿಮಗೂ ಹೇಳಬೇಕು ಅನ್ನಿಸ್ತು, ಹೇಳಿದೆ ಅಷ್ಟೆ!












Click it and Unblock the Notifications