‘ನಾನು ನಾನಾಗ ಬೇಕು...’ ಅಂದ್ರೆ ಏನರ್ಥ?
ಕ್ಯಾಲೆಂಡರ್ ಬದಲಾಗಿ ಇಂದಿಗೆ ಐದು ದಿವಸ! ಹೊಸವರ್ಷ ಮತ್ತು ಹೊಸವರ್ಷದ ಸಂಕಲ್ಪಗಳ ಬಗ್ಗೆ ಬೇಡಾದಷ್ಟು ಓದಿದ್ದಾಗಿದೆ... ಹೊಸವರ್ಷದಿಂದ ಬರೆಯೋದನ್ನು ಶುರುಮಾಡಬೇಕೆಂದು ತಂದಿಟ್ಟ ಡೈರಿ, ಅಣಕಿಸುತ್ತಿದೆ! ಇಂತಹ ಹೊತ್ತಿನಲ್ಲಿ ಗಗನಸಖಿ ನಿಮಗೆ ಏನೋ ಹೇಳಬೇಕೆಂದು ಬಂದಿದ್ದಾಳೆ; ಕೇಳಿಸಿಕೊಳ್ಳಿ...
ಈಗಂತೂ ಎಲ್ಲಿ ನೋಡಿದರೂ ಹೊಸ ವರ್ಷದ ಬಗ್ಗೆಯೇ ಲೇಖನಗಳು. ಯಾರನ್ನು ಮಾತನಾಡ್ಸಿದ್ರೂ ಅದೇ ವಿಷಯ. ಶುಭಾಶಯಗಳ ಎಕ್ಸ್ಚೇಂಜ್ ಬಿಡಿ ಅಭ್ಯಂತರವಿಲ್ಲದೆ ಎಷ್ಟು ಬೇಕಾದ್ರೂ ಯಾವಾಗ ಬೇಕಾದ್ರೂ ನಡೀಲಿ. ಆದ್ರೆ ಎಲ್ಲರೂ ತಾವು ಮಾಡಿಟ್ಟುಕೊಂಡಿರುವ ರೆಸೊಲ್ಯೂಶನ್‌ಗಳ ಬಗ್ಗೆ ಮಾತಾಡಿದ್ದೇ ಮಾತಾಡ್ತಿರ್ತಾರಲ್ಲಾ ಅದು ನನಗೆ ಸ್ವಲ್ಪ ವಿಚಿತ್ರ ಅನ್ನಿಸುತ್ತೆ.
ನಿಮಗೇ ಗೊತ್ತಲ್ಲ ಪ್ರತೀ ಡಿಸೆಂಬರ್ ಚಳೀಲಿ ಕೂತು ಬರಲಿರುವ ಕ್ಯಾಲೆಂಡರ್ ವರ್ಷಕ್ಕೆ ರೆಸೊಲ್ಯೂಷನ್ ಮಾಡಿಟ್ಟುಕೊಳ್ಳುವ ಪಾರ್ಟಿ ನಾನಲ್ಲ ಅಂತ. ಹಾಗಂತ ‘ಅಯ್ಯೋ ಇದೆಲ್ಲಾ ಮಾಮೂಲು’ ಅಂತ ಗೋಣು ತಿರುವಿ ರಗ್ಗಿನೊಳಗೆ ತೂರುವ ನಿರಾಶಾವಾದಿಯೂ ನಾನಲ್ಲ ಅಲ್ಲವಾ? ನನ್ನ ಅಭಿಪ್ರಾಯದಲ್ಲಿ ವರ್ಷದ ಕೊನೆಯಲ್ಲಿ ಕೂತು ವರ್ಷಕ್ಕಾಗಿ ಮಾಡಿಟ್ಟುಕೊಳ್ಳುವ ರೆಸೊಲ್ಯೂಷನ್‌ಗಳು illusion ಗಳಂತೆ ! ಅಂದುಕೊಳ್ಳುವುದು ಮಾಡಕ್ಕಾಗಲ್ಲ ಅಂತ ಪಕ್ಕಕ್ಕೆ ತಳ್ಳುವುದು.
ನಾನಂತು ಏನಾದ್ರು ಮಾಡ್ಲೇ ಬೇಕು ಅಂತ ಅಂದುಕೊಂಡ್ರೆ ಟೈಮ್‌ನ ಪರಿವೆಯೇಯಿಲ್ಲದೆ ಮಾಡೇತೀರ್ತೀನಿ. ಹಾಗಂದುಕೊಂಡು, ನೆನಪಿಗೆ ಬಾರದಷ್ಟು ವರ್ಷಗಳ ಹಿಂದೆಯೇ ಒಂದು ರೆಸೊಲ್ಯೂಷನ್ ಮಾಡಿಟ್ಟಿದ್ದೇನೆ. ಇನ್ನೂ ಅದನ್ನು ನಿಜ ಮಾಡಿಕೊಳ್ಳಲು ದಿನಗಳನ್ನು ವರ್ಷಗಳನ್ನು ಎಣಿಸುತ್ತಿದ್ದೇನೆ. ಅದು ಏನು ಅಂತ ಇವತ್ತು ನಿಮಗೆಲ್ಲ ಹೇಳಿಯೆ ಬಿಡ್ತೀನಿ.
‘ಮೊದಲೈದು ಬದುಕಿದ್ದೆ; ಅದೂ ತಿಳಿಯದೆ. . . ನಂತರದೈದು ಮತ್ತೈದು ಮಗದೈದು ಬದುಕಿದ್ದೆ; ಏಕೆ? ಯಾರಿಗೆ? ತಿಳಿಯಲು ತಾನೆ ಬೇಕಿತ್ತು ಯಾರಿಗೆ?. . . . ಮತ್ತೂ ಎರಡೈದು ಬದುಕಿದ್ದೆ; ತಿಳಿದು ಅವರಿಗೆ ಇವರಿಗೆ ನಾನು, ಅವರಿವರಲ್ಲಿ ನಾನೂ ಎಂದು! ಆ ಐದುಗಳು ಆರಾಗಿ ಏಳಾಗಲಿವೆ ಈಗಲೂ ಬದುಕುತ್ತಿದ್ದೇನೆ; ಯಾಕಾಗಿ?. . . ಉತ್ತರವೊಂದೇ, ಏಕಾಂಗಿ.
ಎಡಕಾಟ ತಡಕಾಟಗಳ ಆಟ-ಕಾಟಗಳ ತಾಕಲಾಟದಲ್ಲಿ ಇನ್ನೈದು... ಮೇಲೂ ಐದು ಕಳೆಯಬಹುದು; ಆದರಿನ್ನೂ ನಾನು ಬದುಕ ಬೇಡವೇ? ಬಾಳಬೇಡವೇ? ಅದಕಾಗಿ ವರುಷ ವರುಷಕೆ ನಾನು ನಾನಾಗಬೇಕೆಂಬ ಸ್ಲೋಗನ್ನು; ಹೊಸ ಹರುಷಕೆ.. . ನಾನೂ ಬದುಕಬೇಕೆಂಬ ಈ ರೆಸೊಲ್ಲ್ಯೂಷನ್ನು!’
ಹೀಗಂತ ಬರೆದಿಟ್ಟುಕೊಂಡಿದ್ದೇನೆ ನಾನು. ಪ್ರತೀ ವರ್ಷ ತೆಗೆದು ಓದುತ್ತೇನೆ. ಆರ್ಕಿಮಿಡೀಸ್‌ನ ‘ಯುರೇಕಾ’ ಫೀಲಿಂಗ್‌ನಲ್ಲಿ ಗೆಲುವಾಗಿ ಓಡಾಡ್ತೀನಿ. ಮತ್ತೆ ಮುಂದಿನ ವರ್ಷ ಇದೇ ರೆಸೊಲ್ಯೂಷನ್‌ಅನ್ನು ಅಷ್ಟೇ ಉತ್ಸಾಹದಿಂದ ಓದುತ್ತೀನಿ. ಸ್ವಲ್ಪ ಹುಚ್ಚುತನ ಅಂತೀರಾ? ಪರವಾಗಿಲ್ಲ ಬಿಡಿ. ಹಾಗಂತ ನೀವನ್ನದೆ ಇನ್ನ್ಯಾರನ್ನಬೇಕು ನನ್ನನ್ನು! ಆದರೆ ಒಂದಂತೂ ನಿಜ, ಆಕಾಶದಲ್ಲಿ ಕೊನೆ ನಕ್ಷತ್ರ ಇರೋತನಕ ಕನಸು ಕಾಣಬೇಕೆನ್ನುವವಳು ನಾನು. ಯಾವ ನೋವು ನಿರಾಸೆಯಲ್ಲೂ ‘ಪ್ರಸವ ವೈರಾಗ್ಯ philosophy ಯನ್ನು ಅಳವಡಿಸಿಕೊಳ್ಳುವವಳು ನಾನು. ನೀವುಗಳೂ ಹಾಗೇ ಅಂತ ನನಗೆ ಚೆನ್ನಾಗಿ ಗೊತ್ತು. ಅದಕ್ಕೆ ತಾನೆ ನಮ್ಮಿಬ್ಬರ ಗೆಳೆತನ ಹೀಗೆ ಬೆಳೆದದ್ದು?!
ನೀವುಗಳು ನನ್ನ ಹಾಗೇ ತಿಳಿಹುಚ್ಚುತನದ ನಾಲ್ಕಾರು ರೆಸೊಲ್ಯೂಷನ್ ಮಾಡಿಟ್ಟುಕೊಂಡಿರುತ್ತೀರ. ಪದೇ ಪದೇ ನೆನಪು ಮಾಡಿಕೊಳ್ಳಲು ಬಯಸುತ್ತಿರುತ್ತೀರ. ಅದನ್ನು ಕೈಗೂಡಿಸಿಕೊಳ್ಳಲು ಆಸೆ ಪಡಿತ್ತಿರುತ್ತೀರ, ಅಲ್ಲವಾ? ಆ ನಿಮ್ಮ ರೆಸೊಲ್ಯೂಷನ್‌ಗಳು ಏನೂ ಅಂತ ನನಗೆ ಬರೆದು ತಿಳಿಸಿ. ಅದರಲ್ಲಿರುವ similarities ಅನ್ನು ಗುರ್ತಿಸಿಕೊಂಡು ಒಟ್ಟಿಗೆ ನಗೋಣ. ಏನಂತೀರಿ?
ಅಂದ ಹಾಗೆ, ‘ನಾನು ನಾನಾಗ ಬೇಕು... ನಾನೂ ಬದುಕಬೇಕು. .’ ಹಾಗೆಂದರೆ ಅರ್ಥವೇನು ಅಂತ ಈ ವರ್ಷ ನಿಮಗೇನಾದರು ಗೊತ್ತಾದರೆ ನನಗೆ ಪ್ಲೀಸ್ ತಿಳಿಸಿ! ಬೇಕೆನಿಸಿದರೆ ಪ್ರತೀ ಕ್ಷಣವೂ ಹೊಸ ವರ್ಷದಷ್ಟೇ ಹೊಸತು ನನಗೆ. ಆದರೂ ನಿಮ್ಮೆಲ್ಲರಿಗೂ ಈ ವರ್ಷಕ್ಕೆ ನನ್ನ ಹಾರೈಕೆ ಏನು ಗೊತ್ತ ‘ಕಳೆದು ಹೋಯಿತು ಮತ್ತೊಂದು ವರ್ಷ; ಕಳೆದದ್ದು ಎಷ್ಟೋ ಕಳೆದುಹೋದದ್ದು ಎಷ್ಟೋ... ನಾವೆಷ್ಟು ಕಳೆದಿವಿ ನೀವಿಷ್ಟು ಕಳೆದಿರಿ; ಎಲ್ಲಾ ಲೆಕ್ಕವೂ ಅಳಿದು ಹೋಗಲಿ, ಉಳಿಯಲಿ ಮಾತ್ರ ಹರ್ಷ; ಮತ್ತೊಂದು ವರ್ಷ!












Click it and Unblock the Notifications