Get Updates
Get notified of breaking news, exclusive insights, and must-see stories!

ಪ್ರಾಮಿಸ್‌ ಮಾಡಿದ್ರೆ ಮಾತ್ರ ನಾನ್‌ ಈ ವಿಷ್ಯಾ ಹೇಳ್ತೀನಿ!

Can you see what I see
ಕಂಡೋರ ಪತ್ರ, ಅದರಲ್ಲೂ ಪ್ರೇಮ ಪತ್ರಗಳ ಓದೋದು ತಪ್ಪು ಅಂತ ನಮಗೆಲ್ಲರಿಗೂ ಚೆನ್ನಾಗಿ ಗೊತ್ತು, ಆದರೆ ಹಾಳಾದ್ದು ಎಂಥದ್ದೋ ಒಂದು ರೀತಿಯ ಕುತೂಹಲ! ಮೊನ್ನೆ ಹೀಗೆ ಒಂದು ಲವ್‌ಲೆಟರ್‌ ನನ್‌ ಕಣ್ಣಿಗೆ ಬಿತ್ತು. ಅದರ ಬಗ್ಗೆ ನಿಮಗೆ ಹೇಳ್ದೆಯಿದ್ರೇ, ಬೆಳಗ್ಗೆ ತಿಂದ ತಿಂಡಿ ಜೀರ್ಣವಾಗೋದಾದ್ರೂ ಹೇಗೆ? ಅವಳು ಆ ಲವ್‌ಲೆಟರ್‌ನಲ್ಲಿ ಏನೇನ್‌ ಬರ್ದೀದಾಳೆ? ಯಾರಿಗೆ ಬರ್ದೀದಾಳೆ ಅಂತಾ ನಿಮಗಷ್ಟೇ ಹೇಳ್ತಾಯಿದ್ದೇನೆ... ಬೇರೆ ಯಾರಿಗೂ ಹೇಳ್ಬೇಡೀ.....

ಗಗನ ಸಖಿ

ಒಂದ್ವಾರ ಹತ್ತ್‌ದಿನಗಳ ಹಿಂದೆ ಸುಗುಣಳ ಮನೆಗೆ ಹೋಗಿದ್ದೆ. ನಿಮಗೇ ಗೊತ್ತಲ್ಲ ಅವಳದು ಅನ್ವರ್ಥ ನಾಮ ಅಂತ! ಕಾಲೇಜ್‌ ದಿನಗಳಲ್ಲಿ ನಾವೆಲ್ಲ ಬಂಕ್‌ ಮಾಡಿ ಫಸ್ಟ್‌ ಡೇ ಫಸ್ಟ್‌ ಷೋ ಅಂತ ಮಜ ಮಾಡ್ತಿದ್ದ್ರೆ ಆ ಕುಡುಮಿ ಮೂರ್ಹೊತ್ತು ಲೈಬ್ರರಿಯಲ್ಲೇ ಕನ್ನಡಕದ ಸ್ಕೂೃಟೈಟ್‌ ಮಾಡ್ಕೋತಾ ಕೂತಿರ್ತಿದ್ಲು! ಆಗೇನಾಯ್ತು ಅನ್ನೋದಲ್ಲ ಇವತ್ತಿನ ವಿಷಯ, ಈಗೇನಾಗ್ತಿದೆ ಅನ್ನೋದು!

ಅವಳ್ಮನೆಲೀ ಒಂದು ಚಂದದ ಲೈಬ್ರರಿ ಇದೆ. ನೀವ್‌ಗಳು ಸಿಗೋವರೆಗೂ ಓದ್ತಾ ಕೂತಿರೋಣ ಅಂತ ಅವಳ ಹತ್ರದಿಂದ ಒಂದ್ಬುಕ್ಕ್‌ ತೆಗೆದ್ಕೊಂಡ್‌ ಬಂದೆ. ಅದರಲ್ಲೇನ್ಸಿಕ್ತು ಗೊತ್ತಾ?. . . . . . ಅನುಮಾನವೇ ಇಲ್ಲ, ಇದು ಅವಳದೇ handwriting, ಅವಳದ್ದೇ ಬರವಣಿಗೆ ಶೈಲಿ, ಆದರೆ ಯಾರಿಗೆ ಬರೆದಿದ್ದಾಳೆ ಅಂತಾನೆ ಗೊತ್ತಾಗ್ತಿಲ್ಲ. . . conclusionಗೆ ಮುಂಚೆ ಓದಿ ಹೇಳ್ಬಿಡ್ತೀನಿ ಇರಿ.

''ನಾನು ಪ್ರೀತಿಸಿದವನಿಗೆ, ಪ್ರೀತಿಯಲ್ಲಿ ಯಾರೊಬ್ಬರೂ ಇರುವುದಿಲ್ಲ ಇರುವುದಾದರೆ ಅದು ಪ್ರೀತಿಮಾತ್ರ! ಅದರಲ್ಲಿ ಎಲ್ಲಿಯವರೆಗೂ ನನ್ನ ನಿನ್ನ ಯಾನ? ನನ್ನಲ್ಲಿನ ನಿನ್ನ ಪ್ರೀತಿಯ ಕಲ್ಪನೆಯವರೆಗೂ. . . ಮಗಳಾಗಿ, ಮಡದಿಯಾಗಿ, ಸೊಸೆಯಾಗಿ, ಅಕ್ಕ ತಂಗಿಯಾಗಿ ಎಷ್ಟೊಂದು ಭರಿಸಿದೆ; ಆದರೆ ಹೆಣ್ಣಾಗಿ ನಿನ್ನನ್ನು ಧಕ್ಕಿಸಿಕೊಳ್ಳಲ್ಲಿಲ್ಲವೇಕೆ? ಅದೇ ಪ್ರೀತಿಯ ಕಲ್ಪನೆ. .

ಅಂದು ನಿನ್ನ ನೋಡಿದ್ದು. . . ನೋಡಿದ್ದು ಮಾತ್ರ; ಅಂದೇ ನಿನ್ನ ನೋಡಿದ್ದು, ಆದರೆ ಇಂದಿನವರೆಗೂ ನೆನಪಿನ ಕಾಲು ದಾರಿಯಲ್ಲಿ ಮರೆವಿನ ಹುಲ್ಲು ಹುಟ್ಟಲೇ ಇಲ್ಲ. ಅದು ನಿನ್ನ ಕಣ್ಣಿನ ಮಾಂತ್ರಿಕ ಸೆಳೆತ. ಹೃದಯದ ಹಣೆಗೆ ನೀನೇ ಮುತ್ತಿಟ್ಟ ಅನುಭವ! ಗಂಧ ಗಾಳಿಯ ತಂಪು ಕಿವಿಯಲ್ಲೇನೋ ಪಿಸು ಮಾತಿನಂತೆ ಉಲಿದು ಬಿಸಿಯೇರಿದಾಗ ನಾಭಿಯಲ್ಲೊಂದು ಸಣ್ಣ ಛಳುಕು; ಸೂರ್ಯ ಕಿರಣದಂತೆ ನನ್ನನ್ನು ಕೂಡುತ್ತಾ ನನ್ನಲ್ಲೇ ಆಡುತ್ತಾ ಅಧರಗಳಿಗೆ ಭಾವನೆಯ ಚುಂಬನವನ್ನಿತ್ತಾಗ ನೀನೇ ನೆತ್ತಿ ಆಘ್ರಾಣಿಸಿದ ಭಾವ.

ನಿನ್ನ ನೋಟ ನಿನ್ನ ಮಾತು ನಿನ್ನ ಸ್ಪರ್ಶ ಎಲ್ಲವೂ ನನ್ನವೇ, ನನ್ನಲೇ ಹುಟ್ಟಿ ನನ್ನಲ್ಲೇ ಬೆಳೆದು ನನ್ನಲ್ಲೇ ನಿಂತು ನ್ನನ್ನನೇ ಬೆಳೆಸುತ್ತಿವೆ. ಬೆಳ್ಳಿ ಕೂದಲ ತೆರೆಯಲ್ಲಿ, ಕಣ್ಮಂಜಾಗಿ ಕಿವಿ ನಂಜಾಗಿ ಜೋಲು ಬಿದ್ದ ತೊಗಲಿನ ದೇಹಕ್ಕೆ ಊರುಗೋಲೇ ಆಧಾರವಾದಾಗ ನನ್ನ ಆತ್ಮಕ್ಕೆ ನಿನ್ನ ಪ್ರೀತಿಯ ಕಲ್ಪನೆಯೊಂದೇ ಗತಿ. ಮುಪ್ಪು ಈ ದೇಹಕ್ಕೆ ಸಂಗಾತಿ. ನೀನು ನನ್ನ ಆತ್ಮ ಸಂಗಾತಿ. ಆತ್ಮಕ್ಕೆ ಎಳೆತನದ ಅರಿವಿಲ್ಲ, ಮುದಿತನದ ಹಂಗಿಲ್ಲ. ಇರುವುದಾದರೆ ಅದು ಪ್ರೀತಿಯ ಕಲ್ಪನೆ ಮಾತ್ರ. ದೂರದಿಂದ ಹತ್ತೆ ಹೆಜ್ಜೆ ಶಬ್ದ. ನೀನೇ ಬಂದೆಯೆಂದು ಮನ. . . ಎಲ್ಲವೂ ಸ್ತಬ್ದ. . . ! ನೀನು ಬಂದೇ ಬಂದೆ. . . ಯಾಕಿರಬಾರದು? ಅಷ್ಟಕ್ಕೂ ಇದು ನನ್ನಲ್ಲಿರುವ ನಿನ್ನ ಪ್ರೀತಿಯ ಕಲ್ಪನೆ ತಾನೆ? ನನ್ನೆದುರು ನನಗರಿವಿಲ್ಲದಂತೆ, ನನ್ನನ್ನೇ ನನಗಿರಿಸದಂತೆ ನಿನ್ನದಾಗಿಸಿಕೊಂಡ ಪರಿ ಅದಾವ ಪ್ರೀತಿಯದ್ದು?

ನನ್ನ ಕಣ್ಣುಗಳಿಗೆ ನೀನು ಕನಸು ಹಚ್ಚಿದ್ದು ಎಷ್ಟು ಬಾರಿ? ಮನಸ್ಸಿಗೆ ಸ್ವವಿಶ್ವಾಸದ ಬಣ್ಣ ಬಳಿದದ್ದೂ ನೀನೇ ತಾನೆ? ಎಡವಿದಾಗ ಹರವಾದ ಎದೆಯ ಮೇಲೆ ತಲೆ ನೇವರಿಸಿದ್ದೂ ನೀನೇ ಅದೆಷ್ಟು ಬಾರಿ. ನ್ಯಾಯ-ಅನ್ಯಾಯದ ಹೋರಾಟದ ಹಾದಿಗೆ ನೀನೇ ಅದೆಷ್ಟು ಬಾರಿ ನನ್ನ ಕೈ ಹಿಡಿದು ಕರೆದೊಯ್ದಿಲ್ಲ? ಯಾವೊಂದು ಸೊಲ್ಲೂ ಇಲ್ಲದೇ ಮೆಲ್ಲನೆ ಬಾಳ ಬಾಂದಳದ ಕಿಟಕಿ ತೆರೆದದ್ದೂ ನೀನೇ ತಾನೆ? ನೀನು ಈ ಬಾಳನೌಕೆಯನ್ನು ಪ್ರೀತಿ ಆಕಾಶಕ್ಕೆ ತೆರೆಯುತ್ತಿರುವೆಯಲ್ಲಾ ಅಷ್ಟು ಸಾಲದೇ? ಪ್ರೀತಿಗೆ ಪ್ರೀತಿಸುವವನ ಅಗತ್ಯವಾದರೂ ಏನು? ಅದೇನು ನಿಂತ ನೆಲೆಯೇ? ಅದೊಂದು ಜೀವಂತ ಸೆಲೆ. ಮದುವೆ-ಗೆಳೆತನ ಹೆಸರಿನ ಹಂಗೇಕೆ ನನ್ನ ನಿನ್ನ ಸಂಬಂಧಕ್ಕೆ, ಅರ್ಥವಿದ್ದರೆ ಮಾತ್ರ ಸಾಲದೇ? ಪ್ರೀತಿಯ ಕಲ್ಪನೆಯೊಂದೇ ನಡುವೆ ಇರಲು ಆಗದೆ?

ಇರಬೇಕು ಎನ್ನುವುದೆಲ್ಲ ಇದೆಯಲ್ಲವೇ. . . ಆದರೂ ಏಕೆ ಪ್ರೀತಿಸುತ್ತೇನೆ ನಿನ್ನನ್ನು? ಉಹುಂ, ಆ ಹುಡುಕಾಟದ ಗೊಡವೆಯೇ ಬೇಡ ನನಗೆ. ಏಕೆ ಪ್ರೀತಿ ಮಾಡಬಾರದು ನಿನ್ನನ್ನು? ನಿನ್ನ ಪ್ರೀತಿಯ ಕಲ್ಪನೆಯನ್ನು? ಇಷ್ಟಕ್ಕೂ ಪ್ರೀತಿಸುವುದಕ್ಕೆ ನಾನು ಯಾರು-ನೀನು ಯಾರು? ಪ್ರೀತಿಯಲ್ಲಿ ಯಾರೊಬ್ಬರೂ ಇರುವುದಿಲ್ಲ ಇರುವುದಾದರೆ ಅದು ಪ್ರೀತಿಮಾತ್ರ!""

ಯಾರದ್ದೋ ಪ್ರೇಮಪತ್ರ, ಕದ್ದು ಓದಿ ಸ್ವಲ್ಪ ಮಜ ತೊಗೊಳೋಣ ಅಂತ ಕಡ್ಲೆಪುರಿ ಇಟ್ಕೊಂಡು ಮಾತು ಶುರು ಮಾಡಿದ್ರೆ, ಈಗ ಮನಸ್ಸು ನೆಂದ ಅಕ್ಕಿ ತರಹ ಅನ್ನಿಸುತ್ತಿದೆ ಅಲ್ಲವಾ?! ಅಲ್ಲ, ಇದನ್ನು ಅವಳು ಯಾರಿಗೆ ಬರೆದಿದ್ದಾಳೆ ಅಂತ? ಆ ದಿನಗಳಲ್ಲಿ ಇದ್ದಿರಬಹುದಾದ ಪ್ರೇಮಿಗೆ? ಅಯ್ಯೋ, ಆಗ ಪ್ರೀತಿ ಎಲ್ಲಿಂದ ಬರುತ್ತೆ. . . ಬರೀ infatuation. ತನ್ನ ಗಂಡನಿಗೇ ಬರೆದಿದ್ದಾಳಾ? ಇಲ್ಲ ಇಲ್ಲ No Chance ಹಾಗಾದ್ರೆ, ಭವಿಷ್ಯದ ಪ್ರೇಮಿ? ಹೀಗೂ ಇರುತ್ತಾ? ಪ್ರೀತಿಯ ಕಲ್ಪನೆ ಏನೋ ನನ್ನ ನಿಲುವಿಗೆ ಸಿಕ್ಕಿದ್ದು ಆದರೆ ಪ್ರೇಮಿಯ ಕಲ್ಪನೆ. . . .ಅದನ್ನು ನೀವೇ ಹೇಳಬೇಕು! ಪ್ರತೀ ಮುಖಕ್ಕೂ ಒಂದು ಬೆನ್ನು ಇದ್ದೇಇರುತ್ತಲ್ವಾ?!

ಅಂದಹಾಗೆ ನಿಮಗೆ ಹೇಳಿದ್ನಾ ರಾಗಿಣಿ ಅವಳ ಅತ್ತೆಗೆ ಮದುವೆ ಮಾಡಿಸೋ ಯೋಚನೆ ಮಾಡ್ತಿದ್ದಾಳೆ ಅಂತ. ಸೋದರತ್ತೆಗೆ ಅಲ್ಲಾರೀ ಅವಳ Mother-In-Lawಗೆ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+