• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆಕ್ಸಿಕನ್‌ ಅಲೆ - ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆ

By Staff
|

Mexican Wave - what it is?ಹಂಗೇರಿ ದೇಶದ ಬುಡಾಪೆಸ್ಟ್‌ ವಿಶ್ವವಿದ್ಯಾಲಯದ ಪ್ರೊ। ಟೆಮಸ್‌ ವಿಸೆಕ್‌ ನೇತೃತ್ವದ ಒಂದು ತಂಡವು ಕ್ರೀಡಾಭಿಮಾನಿಗಳ ಮೆಕ್ಸಿಕನ್‌ ವೇವ್‌ ಪ್ರಕ್ರಿಯೆಯನ್ನು ಅಧ್ಯಯನ ಮಾಡಿ ಕೆಲ ವಿಚಾರಗಳನ್ನು ಕಂಡುಕೊಂಡಿದೆ. ಬೇರೆಬೇರೆ ಸ್ಟೇಡಿಯಮ್‌ಗಳಲ್ಲಿ 50000 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದ ಫುಟ್‌ಬಾಲ್‌ ಪಂದ್ಯಗಳ ವೇಳೆ ಕಂಡುಬಂದ 14 ಬೇರೆಬೇರೆ ಅಲೆಗಳ ವಿಡಿಯಾ ಚಿತ್ರಗಳನ್ನು ಅದು ಪರಾಮರ್ಶಿಸಿದೆ.

ಸ್ಟೇಡಿಯಮ್‌ನ ಸುತ್ತಕ್ಕೂ ಎಷ್ಟು ವೇಗದಲ್ಲಿ ಅಲೆ ಚಲಿಸುತ್ತದೆ, ಹೇಗೆ ಅದು ಹೆಚ್ಚಾಗಿ ಪ್ರದಕ್ಷಿಣಾಕಾರದಲ್ಲೇ ಇರುತ್ತದೆ, ಅಲೆಯನ್ನು ಎಬ್ಬಿಸಲು ಹೇಗೆ ಬರೀ ಕೈಬೆರಳೆಣಿಕೆಯಷ್ಟೇ ಸಂಖ್ಯೆಯ ಪ್ರೇಕ್ಷಕರು ಸಾಕಾಗುತ್ತಾರೆ ಆದರೆ ಕೊನೆಗೆ ಇಡೀ ಪ್ರೇಕ್ಷಕಗಣವನ್ನೇ ನಿರ್ದೇಶಿಸುವುದಕ್ಕೆ ಕಾರಣೀಭೂತರಾಗುತ್ತಾರೆ ಇತ್ಯಾದಿ ಕೂಲಂಕಷ ವಿವರಗಳನ್ನು ಸಂಗ್ರಹಿಸಿ ಫಲಿತಾಂಶಗಳನ್ನು ವಿಶ್ಲೇಷಿಸಿದೆ.

ಕೇವಲ ಮೆಕ್ಸಿಕನ್‌ ಅಲೆಯ ವಿಶ್ಲೇಷಣೆ ಸಂಶೋಧನೆಗಳಿಂದ ಉಪಯೋಗವಾದರೂ ಏನು ಎಂಬ ಪ್ರಶ್ನೆ ಮೂಡುವುದು ಸಹಜ. ಮೆಕ್ಸಿಕನ್‌ ಅಲೆ ಒಂದು ಮಾನವಸಹಜ ಪ್ರಕ್ರಿಯೆ ಅಷ್ಟೆ. ಆದರೆ ಅದರ ಗಣಿತರೂಪವನ್ನು (Mathematical model) ಪ್ರಕೃತಿಯಲ್ಲಿ ಕಂಡುಬರುವ ನಿಸರ್ಗನಿರ್ಮಿತ ‘ಅಲೆ ರೂಪದ ಚಲನೆ’ಯ ಅಧ್ಯಯನಕ್ಕೆ ಬಳಸಬಹುದಾಗಿದೆ.

ಅಮೆರಿಕದ ಕೆಲಭಾಗಗಳನ್ನು (ಮುಖ್ಯವಾಗಿ ದಕ್ಷಿಣಕ್ಯಾಲಿಫೊರ್ನಿಯಾ ಪ್ರದೇಶವನ್ನು) ಕಾಡುವ ‘ಕಾಡು ಬೆಂಕಿ’ ಅಂಥದೊಂದು ನೈಸರ್ಗಿಕ ಅಲೆ ಚಲನೆ. ಒಂದುಕಡೆ ಹುಟ್ಟಿಕೊಂಡ ಬೆಂಕಿ ಇತರೆಡೆಗೆ ಕ್ಷಿಪ್ರವಾಗಿ ಪಸರಿಸುವುದು (ಕಾಳ್ಗಿಚ್ಚಿನಂತೆ ಅಥವಾ wild fire ನಂತೆ ಎನ್ನುತ್ತಾರಲ್ಲ!?) ಮತ್ತು ಸ್ಟೇಡಿಯಮ್‌ನಲ್ಲಿ ಕ್ರೀಡಾಭಿಮಾನಿಗಳ ಅಲೆ ಚಲಿಸುವುದು ಹೆಚ್ಚುಕಡಿಮೆ ಒಂದೇ ರೀತಿಯಲ್ಲಿ ಎಂಬ ಅಂಶವನ್ನು ಬುಡಾಪೆಸ್ಟ್‌ನ ಬುದ್ಧಿವಂತ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

‘ಉದ್ರಿಕ್ತ ಪರಿಸ್ಥಿತಿ’ ಎಂಬ ಪದಪುಂಜವು ಹೆಚ್ಚಾಗಿ ಗಲಭೆ-ದೊಂಬಿಗಳಿಗೆ ಸಂಬಂಧಿ--ಸಿದ ವಾರ್ತೆಗಳಲ್ಲಿ ಇದ್ದೇ ಇರುವುದನ್ನು ನೀವು ಗಮನಿಸಿರಬಹುದು. ಈ ‘ಉದ್ರಿಕ್ತ ಪರಿಸ್ಥಿತಿ’ ಸಾಕಷ್ಟು ಶಕ್ತಿಯನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿರುತ್ತದೆ. ಕಾಳ್ಗಿಚ್ಚಿಗೆ ಕಾರಣವಾಗುವ ಒಣಮರಗಳು ಮತ್ತು ತರಗೆಲೆಗಳ ಪ್ರದೇಶವೂ ಒಂದು ರೀತಿಯಲ್ಲಿ ಉದ್ರಿಕ್ತಸ್ಥಿತಿಯಲ್ಲಿ ಇರುತ್ತದೆಂದು ಹೇಳಬಹುದು. ಅದಕ್ಕೆ ಸ್ವಲ್ಪೇಸ್ವಲ್ಪ ಪ್ರಚೋದನೆ (ಉದಾಹರಣೆಗೆ ಘರ್ಷಣೆಯಿಂದಾದ ಕಿಡಿ) ಸಿಕ್ಕರೂ ಸಾಕು ಆ ಪ್ರಚ್ಛನ್ನ ಶಕ್ತಿ ಪ್ರಕಟವಾಗುತ್ತದೆ. ಹಾಗೆಯೇ ಮಾನವಶರೀರದಲ್ಲಿ ಹೃದಯದ ಸುತ್ತಲಿನ ಸ್ನಾಯುಗಳು ಕೂಡ. ಈ ಸ್ನಾಯುಗಳಿಗೆ ಒಂದು ಸ್ವಲ್ಪ ಪ್ರಮಾಣದಲ್ಲಿ ವಿದ್ಯುತ್‌ಪ್ರೇರಣೆ ಸಿಕ್ಕರೂ ಸಾಕು ಅವು ಸಂಕುಚಿತ ಅಥವಾ ವಿಕಸಿತಗೊಳ್ಳುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಸ್ನಾಯುಗಳು ಅಪೇಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯಿಸದೆ ಇರಬಹುದು - ಅದೇ ಹೃದಯಸ್ತಂಭನದ ಪ್ರಾಣಾಂತಿಕ ಅಲೆ!

ಉದ್ರಿಕ್ತಪರಿಸ್ಥಿತಿ ಎದ್ದುಕಾಣಬೇಕಿದ್ದರೆ ಸುತ್ತಲೂ ಒಂದುರೀತಿಯ ಜಡತ್ವ/ನಿಷ್ಕಿೃಯತೆ (lull) ಇರಬೇಕು. Calm before storm ಎಂಬಂತೆ. ಮೆಕ್ಸಿಕನ್‌ ಅಲೆಯಲ್ಲಿ ಆಗೋದು ಅದೇ - ಆಟ ನೀರಸವಾಗಿ ಸಾಗುತ್ತಿರುವಾಗ, ಇಡೀ ಗ್ಯಾಲರಿಯಲ್ಲಿ ಔದಾಸೀನ್ಯದ ಛಾಯೆ ಮೂಡಿದಾಗ ಹಠಾತ್ತಾಗಿ ಹತ್ತಿಪ್ಪತ್ತು ಜನ ಒಮ್ಮೆ ಎದ್ದು ನಿಂತು ಹೋ ಎಂದು ಕಿರುಚಿ ಪಕ್ಕದವರನ್ನೂ ಉದ್ರೇಕಿಸಿದರೆ ಮುಗೀತು, ಹುಟ್ಟಿದ ಅಲೆ ಇಡೀ ಸ್ಟೇಡಿಯಮ್‌ಅನ್ನು ಕ್ರಮಿಸುತ್ತದೆ.

ಬೇಕಿದ್ದರೆ ಗಮನಿಸಿ, ಆಟದಲ್ಲಿ (ಅದು ಫ‚ುಟ್‌ಬಾಲ್‌ ಅಥವಾ ಕ್ರಿಕೆಟ್‌ ಯಾವುದೇ ಆಗಿರಲಿ) ಲವಲವಿಕೆ ಇಲ್ಲವಾದಾಗ, ತುದಿಗಾಲಲ್ಲಿ ನಿಂತು ನೋಡುವಂಥ ಕಾತುರದ ಕ್ಷಣಗಳು ಕಾಣದಾದಾಗಲೇ ಈ ಮೆಕ್ಸಿಕನ್‌ ಅಲೆ ಮತ್ತಿತರ ಮೋಜುಗಳು ಶುರುವಾಗೋದು. ತೀವ್ರ ಆಸಕ್ತಿಯ ಆಟ ನಡೆಯುತ್ತಿದ್ದದ್ದೇ ಆದರೆ, ಪ್ರೇಕ್ಷಕರು ಮೈಯೆಲ್ಲ ಕಣ್ಣಾಗಿ ಅದನ್ನೇ ನೋಡುತ್ತಿದ್ದದ್ದೇ ಆದರೆ, ಪಕ್ಕದವರು ಏನ್ಮಾಡ್ತಿದ್ದಾರೆಂದು ತಿಳಿಯುವ ಗೋಜಿಗೆ ಯಾರಾದರೂ ಯಾಕೆ ಹೋಗುತ್ತಾರೆ?

ಹಾಗಾಗಿ ಮೆಕ್ಸಿಕನ್‌ ಅಲೆಯ ಒಟ್ಟು ಸಾರಾಂಶವೆಂದರೆ - ಟಿಕೆಟ್‌ ಖರೀದಿಸಿ ಆಟ ನೋಡಲು ಹೋದ ಪ್ರೇಕ್ಷಕರಿಗೆ ‘ಪೈಸಾ ವಸೂಲ್‌’ ತೃಪ್ತಿ ಸಿಗದೆ ಇರುವುದು; ಬೋರ್‌ ಹೊಡೆಸುವ ಆಟದ ಮುಂದೆ ತಾವೇ ಏನಾದರೂ ಮನರಂಜನೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದು.

ಅದಕ್ಕೇ ಹೇಳಿದ್ದು, ಮೆಕ್ಸಕನ್‌ ಅಲೆ ಎಂದರೆ ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆ!

- srivathsajoshi@yahoo.com

ಪೂರಕ ಓದಿಗೆ

ಮೆಕ್ಸಿಕನ್‌ ಅಲೆಯ ಒಂದು ನಮೂನೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more