ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವುದು ಏಕವಚನ? ಯಾವುದು ಬಹುವಚನ?

By Staff
|
Google Oneindia Kannada News


ವಿಚಿತ್ರಾನ್ನದಲ್ಲಿ ಇತ್ತೀಚೆಗೆ ವಚನ ಗೊಂದಲಗಳ ಬಗ್ಗೆ ಚರ್ಚೆ ನಡೆದಿದೆ. ಆ ಚರ್ಚೆ ಇಲ್ಲಿ ಮುಂದುವರೆದಿದೆ. ಹೊಸ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸಿವೆ.

ಹಿಂದಿಯ ‘ಆನಂದ್‌’ ಎಂಬ ಚಿರನೂತನ ಚಿತ್ರದಲ್ಲಿ ರಾಜೇಶ್‌ಖನ್ನಾ ಅಮಿತಾಭ್‌ ಬಚ್ಚನ್‌ನ ಬಳಿ ಹೇಳ್ತಾನೆ: ‘ಜಿಂದಗೀ ಛೋಟೀ ಹೈ, ಕ್ಯೂ ನ ಹಮ್‌ ಆಪ್‌ ಸೇ ತುಮ್‌ ಪೇ ಉತರ್‌ಜಾಯೇ?’ ಅಂತ. ಬಹುವಚನ ಅಷ್ಟೂ ಭಾರಿಯೇ, ಏಕವಚನದಲ್ಲಿ ಮಾತ್ರವೇ ಸಲಿಗೆ ಸಾಧ್ಯವೇ ಅನ್ನುವ ಸಂಶಯ ಆಗ ನನಗೆ ಬಂದಿತ್ತು.

ಬಹುವಚನದಲ್ಲಿ ಮಾತಾಡುತ್ತಿದ್ದರೆ ನಾನೊಬ್ಬ ಘನತೆವೆತ್ತ ವ್ಯಕ್ತಿ ಅನ್ನುವ ಪೋಸನ್ನು ಸುಲಭವಾಗಿ ರಕ್ಷಿಸಿಕೊಳ್ಳಬಹುದು ಅನ್ನುವುದಂತೂ ಗೊತ್ತಾಗಿದೆ. ಯಾಕೆಂದರೆ ಬಹುವಚನಯೋಗ್ಯರೊಂದಿಗೆ ಕೀಟಲೆಯಾಗಿ, ಪೋಲಿಯಾಗಿ ಯಾವತ್ತೂ ಮಾತಾಡಲಾಗುವುದಿಲ್ಲ; ತಂತಾನೇ ಅವರಿಗೆ ನಮ್ಮ ಮೇಲೆ ಗೌರವ ಬಂದುಬಿಡುತ್ತದೆ. ಆದರೆ ಈ ಭಾವನೆಯನ್ನು ಗಳಿಸಿಕೊಳ್ಳುವುದು ಎಷ್ಟು ಸುಲಭವೋ ಉಳಿಸಿಕೊಳ್ಳುವುದು ಅಷ್ಟೇ ಕಷ್ಟ, ಅಲ್ವಾ?

ಏಕವಚನದ ಸ್ನೇಹಿತರು ಸಿಕ್ಕಿದಾಗ ನಮ್ಮ ಸ್ವಭಾವ ಪೂರ್ತಿಯಾಗಿ ‘ಅಭಿವ್ಯಕ್ತ’ಗೊಳ್ಳುತ್ತದೆ. ಆದರೆ ಇತ್ತೀಚಿನ ‘ಮುಂಗಾರುಮಳೆ’ ಸಿನೆಮಾದಲ್ಲಿ ಗಮನಿಸಿದ್ದೇನೆ - ನಾಯಕ ಕೊನೆಯವರೆಗೂ ನಾಯಕಿಯನ್ನು ‘ರೀ’, ‘ನೀವು, ತಾವು’ ಅಂತಲೇ ಕರೆಯುತ್ತಿದ್ದ. ಬಹುಶಃ ಅವರು ಕೊನೆಗೂ ಒಂದಾಗುವುದಿಲ್ಲವಾದ್ದರಿಂದ ಭವಿಷ್ಯದಲ್ಲಿ ಅವರ ಭೇಟಿಯನ್ನು ದೃಷ್ಟಿಯಲ್ಲಿಟ್ಟು ಹಾಗೆ ಹೇಳಿಸಿದರೋ ಏನೋ.

ಕುಮಾರವ್ಯಾಸ - ಕಾಳಿದಾಸರಿಗೆ, ಗಾಂಧಿಗೆ ಬುದ್ಧ-ನಿಗೆ ಏಕವಚನವನ್ನು ಬಳಸುವ ನಾವು ಸಮಕಾಲೀನ ಮತ್ತು ನಿಕಟಪೂರ್ವ ಕಾಲದವರನ್ನು ಬಹುವಚನದಲ್ಲಿ ಸಂಬೋಧಿಸುವುವಂತೆಯೇ ಇನ್ನೊಂದು ಗಮ್ಮತ್ತು ನೋಡಿದ್ದೀರಾ? ಸಿನೆಮಾದ ನಾಯಕ ಬಂದ, ಹೋದ ಅನ್ನುವ ನಾವು ಆ ಪಾತ್ರವನ್ನು ವಹಿಸಿದ ನಟರ ವಿಷಯಕ್ಕೆ ಬರುವಾಗ, ‘ಸಂಜನಾರನ್ನು ಗಣೇಶ್‌ ‘ರೀ’, ‘ನೀವು’ ಎಂದು ಕರೆಯುತ್ತಾರೆ...’ ಎಂದು ಬಹುವಚನವನ್ನೇ ಬಳಸುತ್ತೇವೆ. ಅದೇ ಪರಭಾಷಾ ನಟರ ಬಗ್ಗೆ ಬರೆಯುವಾಗ ರಿಷಿಕಪೂರನ ಸಿನೆಮಾಗಳಲ್ಲಿ ಅವನಿಗೆ ಚಾಕೊಲೇಟ್‌ ಹೀರೊ ಇಮೇಜೇ ಇರೋದು... ಎನ್ನುತ್ತೇವೆ!

ಯಾವ ಭಾಷೆಯಲ್ಲೂ ಇಲ್ಲದ ಚಂದವೊಂದು ಕನ್ನಡಕ್ಕಿದೆ. ಬನ್ನಂಜೆ ಗೋವಿಂದಾಚಾರ್ಯರು ಯಾವಾಗಲೂ ಇದನ್ನು ಹೇಳುತ್ತಿರುತ್ತಾರೆ - ‘ದೇವರು ದೊಡ್ಡವನು’ ಎಂಬ ಪ್ರಯೋಗ. ದೇವರಿಗೆ ಗೌರವ ಕೊಡುವ ನಿಟ್ಟಿನಲ್ಲಿ ‘ದೇವರು’ ಎಂದು ಬಳಸಿದ ನಾವು ಆತನನ್ನು ಆತ್ಮೀಯನನ್ನಾಗಿಸುವ ಸಲುವಾಗಿ ‘ದೊಡ್ಡವನು’ ಎಂದುಬಿಡುತ್ತೇವೆ. ‘ದೇವರೇ, ನೀನೇ ಕಾಪಾಡಪ್ಪಾ...’ ಮುಂತಾದ ಪ್ರಯೋಗಗಳನ್ನು ಯಾವ ವ್ಯಾಕರಣದ ಚೌಕಟ್ಟಿನಲ್ಲಿ ಕೂರಿಸಲು ಸಾಧ್ಯ? ‘ಯೋಗಾತ್‌ ರೂಢಿ ಃ ಗರೀಯಸೀ’ ಅನ್ನುವುದು ಇಂಥದ್ದೇ ವಿಷಯಗಳಿಗೆ.

ಹಿಂದಿಯಲ್ಲಿ ಮಕ್ಕಳಿಗೆ ‘ಆಪ್‌’ ಅನ್ನುತ್ತಾರೆ ನಿಜ. ನಮ್ಮ ಅಜ್ಜ ಕೂಡ ಹಾಗೆಯೇ ಹೇಳುತ್ತಿದ್ದರಂತೆ; ಎಷ್ಟೇ ಚಿಕ್ಕವರಿಗೂ, ಕೆಲಸದವರಿಗೂ ಬಹುವಚನದಲ್ಲೇ ಕರೆಯುತ್ತಿದ್ದರು ಅಂತ ಅಪ್ಪ ಒಮ್ಮೆ ಹೇಳಿದ್ದರು. ಈಗಲೂ ಹಳ್ಳಿಕಡೆ ಕೆಲವರಿಗೆ ಆ ಅಭ್ಯಾಸವಿದೆ - ‘ಬಾಲೇ, ಇಡೆ ಬಲೆಮ್ಮಾ, ತಿನ್ಲೆಮ್ಮಾ’ (ಮಗೂ, ಇಲ್ಲಿ ಬನ್ನಿ ಅಮ್ಮಾ, ತಿನ್ನಿಯಮ್ಮಾ) ಅಂತ ಅಕ್ಕರೆಯಿಂದ ಕರೆಯುವುದನ್ನು ಕೇಳಿದ್ದೇನೆ.

ನಮ್ಮ ಕಂಪೆನಿಯಲ್ಲಿ ‘ಕನ್ನಡ ಕಲಿ’ ಅನ್ನುವ ಕಾರ್ಯಕ್ರಮವೊಂದಿದೆ. ಹೊರರಾಜ್ಯಗಳಿಂದ ಬಂದವರಿಗೆ ಕನ್ನಡ ಕಲಿಸುವ ಒಂದು ಸಣ್ಣ ಹೆಜ್ಜೆ ಅದು. ಅದರಲ್ಲಿ ಮಾತ್ರ ನಾವು ಏಕವಚನವನ್ನು ಪೂರ್ತಿಯಾಗಿ ಬಹಿಷ್ಕರಿಸಿದ್ದೇವೆ. ‘ನಮ್ಮ ಡಿಪಾರ್ಟ್‌ಮೆಂಟ್‌ ಹೆಡ್‌ ಬಂದನು, ಹೋದನು, ಇಲ್ಲಿ ಬಾ, ಹೋಗು’ ಅನ್ನುವ ಭಯಾನಕ ಪ್ರಯೋಗಗಳು, ಜೊತೆಗೆ ಹೊರಗೆ ರಿಕ್ಷಾ, ಅಂಗಡಿಗಳಲ್ಲೂ ಏಕವಚನವೇ ಬಳಸಿದರೆ ಅವರಿಗಾಗುವ ತೊಂದರೆಗಳನ್ನು ತಪ್ಪಿಸುವುದು ಇವೆಲ್ಲ ಒಂದು ಕಾರಣ. ಇನ್ನೊಂದು ಒಂದುವರೆ ತಿಂಗಳಲ್ಲಿ ಒಂದು ಗುಂಪಿಗೆ ತರಗತಿ ಮುಗಿಸಬೇಕಾದ ಅನಿವಾರ್ಯತೆ (ಹೆಚ್ಚಾದರೆ ಅವರೇ ಬರುವುದನ್ನು ನಿಲ್ಲಿಸುತ್ತಾರೆ).

ಬ್ಯಾಕ್ಟೀರಿಯಮ್‌ - ಬ್ಯಾಕ್ಟೀರಿಯಾ - ಬ್ಯಾಕ್ಟೀರಿಯಗಳು ಇದೇ ಥರ ಕನ್ನಡದಲ್ಲೂ ಪ್ರಯೋಗವಿದೆ ಗಮನಿಸಿದ್ದೀರಾ? ಸ್ವಾಮಿಗಳವರು, ಮಂತ್ರಿಮಹೋದಯರುಗಳು, ನಾವುಗಳು, ನೀವುಗಳು ಇತ್ಯಾದಿ ಬಳಸುತ್ತಾರೆ. ಆದರೆ ಇವು ಕೃತಕವಾಗಿ ಕಾಣುತ್ತವೆ ಅಷ್ಟೆ! ರಾಜಕಾರಣಿಗಳ ಭಾಷಣಕ್ಕೋ, ಸ್ವಾಮಿಗಳ ಪ್ರವಚನಕ್ಕೋ ಸರಿ, ದೈನಂದಿನ ಮಾತುಕತೆಗಲ್ಲ. ಏನಂತೀರಿ?

ಸಂಸ್ಕೃತದಲ್ಲಿ ಹೆಚ್ಚುವರಿಯಾಗಿರುವ (ಅಥವಾ ಇತರ ಭಾಷೆಗಳಲ್ಲಿ ಕಡಿಮೆ‘ವರಿ’ಯಾದ) ದ್ವಿವಚನವನ್ನು ಗಮನಿಸಬೇಕು ನೀವು. ಅದೊಂದು ಹೆಚ್ಚಿರಲಿಕ್ಕೆ ಹೋಗಿ ಮೂರು ಸರ್ವನಾಮ ಮತ್ತು ಮೂರು ಕಾಲಗಳಲ್ಲಾಗುವ ರೂಪವನ್ನು ಸಾವಿರಾರು ಧಾತುಗಳಿಗೆ ಬಾಯಿಪಾಠ ಮಾಡಬೇಕಾದ ಹೆಚ್ಚಿನ ವರಿ ಸಂಸ್ಕೃತ ವಿದ್ಯಾರ್ಥಿಗಳಿಗೆ. ಗೌರವಕ್ಕೂ ಬೇರೆಯೇ ಶಬ್ದವನ್ನು ಬಳಸುವ ಇನ್ನೊಂದು ಸೊಬಗು ಸಂಸ್ಕೃತಕ್ಕಿದೆ.

‘ಭವಾನ್‌, ಭವಂತೌ, ಭವಂತಃ’ ಅನ್ನುವುದು ಅದು. ಕನ್ನಡದ ನೀವು ಇದಕ್ಕೆ ಸಮನಲ್ಲ. ಬಹುಶ: ಇದನ್ನು ರೂಪಿಸಲೆಂದೇ ಕನ್ನಡದಲ್ಲಿ ‘ನೀವುಗಳು’ ಅಂತ ಬಂದಿರಬಹುದು. ಆದರೆ ನೀವುಗಳ ಬಹುವಚನ ಏನಾಗಬಹುದು? ದೇವರಿಗೇ ಗೊತ್ತು. ನನ್ನ ಸ್ನೇಹಿತ ಬಳಗದಲ್ಲಿ ನಿತ್ಯದ ಇ-ಹರಟೆ ಮಾಡುವಾಗ ಕೊನೆಯಲ್ಲಿ ‘ನಿಮ್ಮಗಳ’ ಅಂತ ವಿರಮಿಸುವ ಅಭ್ಯಾಸವಿದೆ ನಮಗೆ. ಅಲ್ಲಿ ‘ನಿಮ್‌ ಮಗಳ’ ಅನ್ನುವ ಕೊಂಕನ್ನು ಬೇಕೆಂದೇ ತುರುಕಿಸುವುದೊಂದು ಮೋಜು ನಮಗೆ.

ಬಹುವಚನದಲ್ಲಿ ವ್ಯಕ್ತಿಗಳಿಗೆ ‘ಗಳು’ ಪ್ರಯೋಗ (ಜೋಶಿಗಳೇ, ಮೂರ್ತಿಗಳೇ, ಕಣವಿಗಳೇ... ಇತ್ಯಾದಿ) ನೋಡಿದ್ದೀರಾ? ‘ಅಡಿಗ’ ಅನ್ನುವ ಕುಲನಾಮಕ್ಕೆ ಊರಿನ ಕಡೆ ಬಹುವಚನ ರೂಪ ‘ಅಡಿಗರು’ ಅಂತ ಆಗುವುದಿಲ್ಲ ಬದಲಿಗೆ ‘ಅಡಿಗಳು’ ಅಂತಿದೆ. ಇದು ಯಾಕೆ ಅಂತ ಸಣ್ಣಂದಿನಿಂದಲೂ, ಆ ಪ್ರಯೋಗ ಕೇಳಿದಾಗಿನಿಂದಲೂ ಯೋಚಿಸುತ್ತಿದ್ದೆ; ಗೋಕರ್ಣದಲ್ಲಿ ದೇವಸ್ಥಾನ ಪೂಜೆಯವರಿಗೆ ‘ಅಡಿ’ ಅನ್ನುವ ಉಪನಾಮ ನೋಡಿದಾಗ ಇದಕ್ಕೆ ಉತ್ತರ ಸಿಕ್ಕಿತು. ಅಡಿ + ಗಳು ಅಂತ ಇದನ್ನು ಬಿಡಿಸಬೇಕು ಅಂತ. ಬನ್ನಂಜೆಯವರೂ ಪ್ರವಚನವೊಂದರಲ್ಲಿ ‘ಶ್ರೀಪಾದರು’ ಅಂತ ಸ್ವಾಮಿಗಳಿಗೆ ಬಳಸುವ ಶಬ್ದದ ಕನ್ನಡರೂಪವೇ ಈ ‘ಅಡಿ’ಗಳು ಅಂತ ತಿಳಿಸಿದ್ದನ್ನು ಕೇಳಿದಾಗ ಪೂರ್ತಿಯಾಗಿ ಅರಿವಾಯಿತು.

ಏಕ ಹಾಗೂ ಬಹುವಚನ ವಿಚಾರ ನಿಜಕ್ಕೂ ವಿಸ್ಮಯ ತರುವಂಥದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X